March 15, 2025

Hampi times

Kannada News Portal from Vijayanagara

ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ

 

https://youtu.be/NHc6OMSu0K4?si=SI_K4goOPEgwo6h2

 

ಹೊಸಪೇಟೆ ಪಟ್ಟಣದ 250 ಹಾಸಿಗೆ ಆಸ್ಪತ್ರೆಯನ್ನು 400 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸುವ ರೂ.15 ಕೋಟಿಗಳ ಬೃಹತ್ ಕಾಮಗಾರಿಗೆ ಮಂಡಳಿಯಿಂದ ಮಂಜೂರಾತಿ ದೊರಕಿದೆ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಜಿಲ್ಲಾಧಿಕಾರಿಗಳಿಂದ ರಾಷ್ಟ್ರ ಧ್ವಜಾರೋಹಣ

ಹಂಪಿ ಟೈಮ್ಸ್ ಹೊಸಪೇಟೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ವಿಜಯನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹೊಸಪೇಟೆ ನಗರಸಭೆ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 17ರಂದು ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿರುವ 405 ಅಡಿ ಎತ್ತರದ ಧ್ವಜ ಸ್ತಂಭದ ಧ್ವಜಾರೋಹಣ, ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಕಲ್ಯಾಣ-ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ‍್ಯಗೊಂಡು 77 ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯಲ್ಲಿ ನಾನು ಹರ್ಷದಿಂದ ಪಾಲ್ಗೋಂಡಿದ್ದೇನೆ. ಭವ್ಯ ಪರಂಪರೆ ಹೊಂದಿರುವ ಭಾರತ ಹತ್ತಾರು ಕಾರಣಗಳಿಗಾಗಿ ಪರಕೀಯರ ಆಡಳಿತಕ್ಕೆ ಒಳಗಾಗಿತ್ತು. ಇದರ ಪರಿಣಾಮವಾಗಿ ಈ ನಾಡಿನ ಜನ ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ್ದು ಈಗ ಚರಿತ್ರೆಯ ಭಾಗವಾಗಿ ಹೋಗಿದೆ. ಭಾರತ ದೇಶವನ್ನು ಬ್ರಿಟೀಷರ ಬಿಗಿ ಮುಷ್ಟಿಯಿಂದ ಬಿಡಿಸಿಕೊಳ್ಳಲು ಸುದೀರ್ಘ ಹೋರಾಟವನ್ನೇ ಭಾರತೀಯರು ಮಾಡಿದ್ದು, ಅಂತಿಮವಾಗಿ 1947ರ ಆಗಸ್ಟ್ 15 ರಂದು ಸ್ವಾತಂತ್ರ‍್ಯ ಗಳಿಸಿಕೊಂಡಿದ್ದು, ತಮೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ವಿಜಯನಗರ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಪ್ರದೇಶಗಳು ಸ್ವಾತಂತ್ರವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು ಎಂದರು.

ರಾಷ್ಟ್ರಕ್ಕೆ 1947 ರ ಆಗಸ್ಟ್ 15ರಂದು ಸ್ವಾತಂತ್ರ‍್ಯ ದೊರೆತರೂ ಹೈದ್ರಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ‍್ಯ ದೊರೆತಿರಲಿಲ್ಲ. ಸ್ವತಂತ್ರ ರಾಷ್ಟ್ರಕಟ್ಟುವ ಬಯಕೆಯಿಂದ ಹೈದ್ರಾಬಾದ್ ನಿಜಾಮರು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಳ್ಳದೇ ಸ್ವತಂತ್ರವಾಗಿರಲು ಬಯಸಿ ಹೈದ್ರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದರು. ಇದರಿಂದಾಗಿ ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದ್ರಾಬಾದ್ ಸಂಸ್ಥಾನದ ಜನರು ಮತ್ತು ಸ್ವಾಮಿ ರಮಾನಂದ ತೀರ್ಥರು ಸೇರಿ ಅಹಿಂಸಾತ್ಮಕ ಚಳುವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿಯನ್ನು ಹತ್ತಿಕ್ಕಲು ಹೈದ್ರಾಬಾದ್ ನಿಜಾಮನು ಖಾಸಿಂ ರಜನಿ ಎಂಬುವವನ ನೇತೃತ್ವದಲ್ಲಿ ರಜಾಕಾರ ದಾಳಿಯನ್ನು ಆರಂಭಿಸಿದರು. ನಿರಂತರವಾಗಿ ಶೋಷಣೆ ಮಾಡುತ್ತಿದ್ದರು, ಇದರ ಪರಿಣಾಮವಾಗಿ ಈ ಭಾಗದ ಜನರು ಅಭಿವೃಕ್ತಿ ಸ್ವಾತಂತ್ರ‍್ಯ, ಪತ್ರಿಕಾ ಸ್ವಾತಂತ್ರ‍್ಯ, ಮೂಲಭೂತ ಹಕ್ಕುಗಳು ಜನರ ಪಾಲಿಗೆ ಇರಲೇ ಇಲ್ಲ. ಈ ಪ್ರದೇಶವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಪ್ರಗತಿ ಶೂನ್ಯದ ಕಡೆಗೆ ಹೆಜ್ಜೆ ಇಡುವಂತಾಯಿತು, ಸ್ವಾಮಿ ರಾಮಾನಂದ ತೀರ್ಥರು, ಡಾ.ಮೇಲುಕೋಟೆಯವರು ಕಲಬುರಗಿಯ ಅನಿರುದ್ದ ದೇಸಾಯಿ, ಯಾದಗಿರಿಯ ಕೋಲೂರು ಮಲ್ಲಪ್ಪ ಹಾಗೂ ಚಿತಾಪುರದ ಬಸಪ್ಪ ಸಜ್ಜನ್ ಶೆಟ್ಟರ್, ಕಾರಟಗಿಯ ಬೆಣಕಲ್ ಭೀಮಸೇನರಾಯ್, ಆಳಂದದ ಎ.ಬಿ.ಪಾಟೀಲ್, ಕನಕಗಿರಿಯ ಜಯತೀರ್ಥ, ರಾಜ ಪುರೋಹಿತ್ ಮುಂತಾದವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ವಿಮೋಚನೆಗೆ ಹೋರಾಟಗಳು ಪ್ರಾರಂಭಗೊAಡವು ಎಂದು ತಿಳಿಸಿದರು.

ಸ್ವಾಮಿ ರಮಾನಂದ ತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ “ಕ್ವೀಟ್ ಕಾಲೇಜು ಆ್ಯಕ್ಟ್ ನವ್” ಕರೆಗೆ ಸಾವಿರಾರು ಕಾಲೇಜು ಹಾಗೂ ಶಾಲಾ ವಿಧ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬಲ ತುಂಬಿದರು, ಇಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಅನ್ನದಾನಯ್ಯ ಪುರಾಣಿಕ, ಪ್ರಭುರಾಜ ಪಾಟೀಲ್, ಶಿವಮೂರ್ತಿಸ್ವಾಮಿ ಅಳವಂಡಿ, ಡಾ. ಚುರ್ಚಿಹಾಳ್ಮಠ, ಭೀಮಜ್ಜ, ಕೊರ್ಲಹಳ್ಳಿ ಶ್ರೀನಿವಾಸಚಾರಿ, ಕಟಾಪುರದ ಹನುಮಂತರಾವ್, ಕಿಸಾನ್ ರಾವ್ ದೇಸಾಯಿ, ಶೇಷಪ್ಪ ಪತ್ತಾರ್, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ ಔದೋಜಿ, ಮುಂತಾದವರು ಹೈದ್ರಾಬಾದ್ ಕರ್ನಾಟಕ ಭಾಗದ ವಿಮೋಚನೆಗೆ ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಹೋರಾಡಿದರು. ಅಲ್ಲದೇ ಅಕ್ಕಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟಿ ಗುರುಬಸವ್ವ ಹಾಗೂ ಸೀತಮ್ಮ ಬಡಿಗೇರ ಮುಂತಾದ ಮಹಿಳಾ ಮುಖಂಡರು ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಘೋಷಣೆ ಕೂಗುತ್ತಾ ಈ ಭಾಗದ ಜನರಲ್ಲಿ ಧೈರ್ಯ ತುಂಬಿದರು. ವಿದ್ಯಾರ್ಥಿ ಮುಖಂಡರುಗಳಾದ ಮಠಮಾರಿ ನಾಗಪ್ಪ, ಚಂದ್ರಯ್ಯ, ಶರಭಯ್ಯ ಬಸವಣ್ಣ ಮುಂತಾದವರು ಕಲ್ಯಾಣ ಕರ್ನಾಟಕ ವಿಮೋಚನೆಗೆ ಹೋರಾಡಿದರು. ಅಲ್ಲದೇ ಕಲಬುರಗಿ ಆರ್ಯ ಸಮಾಜ ಚಳುವಳಿ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಹೋರಾಟಕ್ಕೆ ಇಳಿದು ರಜಾಕಾರರ ದಬ್ಬಾಳಿಕೆಯನ್ನು ಧಿಕ್ಕರಿಸಿ ಸ್ವಾತಂತ್ರ‍್ಯವನ್ನು ಪಡೆಯುವಲ್ಲಿ ಯಶಸ್ವಿಯಾದರು, ಇವರನ್ನೆಲ್ಲಾ ನಾವು ಇಂದು ಸ್ಮರಿಸಬೇಕಾಗಿದೆ.  ಬ್ರಿಟೀಷರ ಕುಮ್ಮಕ್ಕುನಿಂದ ಹೈದ್ರಾಬಾದ್ ಪ್ರಾಂತ್ಯವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರ ವಿರುದ್ದ ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರು, 1948 ರ ಸೆಪ್ಟೆಂಬರ್ 13 ರಂದು ದಿಟ್ಟತನದಿಂದ ಭಾರತದ ಸೇನೆಯ ಮುಖಂಡ ಜನರಲ್ ಚೌದ್ರಿ ನೇತೃತ್ವದಲ್ಲಿ ಕೈಗೊಂಡ ಪೊಲೀಸ್ ಕಾರ್ಯಚರಣೆಯಲ್ಲಿ ಹೈದ್ರಾಬಾದ್ ನಿಜಾಮರು ಶರಣಾಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆ ಗೊಳ್ಳಲು ಒಪ್ಪಿಕೊಂಡರು. ಇದರ ಪರಿಣಾಮವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ, ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿ ವಿಶ್ವವೇ ನಿಬ್ಬೇರಗಾಗುವಂತಹ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಬುನಾದಿ ಹಾಕಿದ ಈ ಪವಿತ್ರ ಭೂಮಿ 1948 ರ ಸೆಪ್ಟೆಂಬರ್ 17 ರಂದು ರಾಜ್ಯದ ಇತರ ಭಾಗಗಳಂತೆ ಸ್ವಾತಂತ್ರ‍್ಯವಾಗಿ ಉಸಿರಾಡಲು ಸಾಧ್ಯವಾಯಿತು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಹಿತ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿ ಕಾಯ್ದೆ 371 (ಜೆ) ಜಾರಿಗೆ ತರಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸಾಧ್ಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 07 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ. 80 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ಶೇ. 8 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಂತೆ ಅಂದಿನ ಸರ್ಕಾರ ದಿನಾಂಕ 06/11/2013 ರಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಿದ್ದು, ಇದು ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೂ ಸೇರಿದಂತೆ, ಎಲ್ಲಾ ಭಾಗಗಳ ಮೂಲಭೂತ ಸೌಕರ್ಯ, ಆರೋಗ್ಯ, ಸಾಮಾಜಿಕ, ರಸ್ತೆ ಸಂಪರ್ಕ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಇನ್ನೀತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಅನುದಾನವನ್ನು ಮೀಸಲಿರಿಸಲಾಗಿದೆ. ಈದರನ್ವಯ 2024-25 ನೇ ಸಾಲಿನ ಮ್ಯಾಕ್ರೋ ಯೋಜನೆಯಡಿಯಲ್ಲಿ ಹೊಸಪೇಟೆ ಪಟ್ಟಣದ 250 ಹಾಸಿಗೆ ಆಸ್ಪತ್ರೆಯನ್ನು 400 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸುವ ರೂ.15 ಕೋಟಿಗಳ ಬೃಹತ್ ಕಾಮಗಾರಿಗೆ ಮಂಡಳಿಯಿಂದ ಮಂಜೂರಾತಿ ದೊರಕಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗವಾದ ವಿಜಯನಗರ ಜಿಲ್ಲೆಯ ಅಭಿವೃದ್ದಿಗಾಗಿ ನಾವೇಲ್ಲರೂ ಒಟ್ಟಾಗಿ ದುಡಿಯಬೇಕೆಂದು ಪಣತೋಡುತ್ತಾ ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸುವುದೆಂಬ ಧೃಡ ವಿಶ್ವಾಸದೊಂದಿಗೆ ಎಲ್ಲರಿಗೂ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಹಿಟ್ನಾಳನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಬಸವರಾಜ ಟಿ.ಹೆಚ್ ಅವರು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷರಾದ ರೂಪೇಶ್ ಕುಮಾರ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಷಾ, ಜಿಲ್ಲಾ ಪೊಲೀಸ್ ವಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ಅಪರ ಜಿಲ್ಲಾಧಿಕಾರಿಗಳಾದ ಇ.ಬಾಲಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು: ಪರೇಡ್ ಕಮಾಂಡರ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷದಳ, ಎನ್.ಸಿ.ಸಿ., ಗೈಡ್ಸ್, ಸೇವಾದಳ, ವಿವಿಧ ಶಾಲೆಗಳು ಒಳಗೊಂಡAತೆ ಒಟ್ಟು 08 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಮಕ್ರಮಗಳು ನಡೆದವು. ಕೆ.ಬಸವರಾಜ ಮತ್ತು ನಾಗರಾಜ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

 

 

ಜಾಹೀರಾತು
error: Content is protected !!