October 14, 2024

Hampi times

Kannada News Portal from Vijayanagara

40 ಕಿ.ಮೀ ಉದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ : DC ಎಂ.ಎಸ್.ದಿವಾಕರ್

 

https://youtu.be/NHc6OMSu0K4?si=SI_K4goOPEgwo6h2

 

 

ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಹಂಪಿ ಟೈಮ್ಸ್ ಹೊಸಪೇಟೆ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳುತ್ತಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೇಳಿದರು.‌

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆಪ್ಟೆಂಬರ್ 13ರಂದು ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದ ಏಕತೆ, ಸದೃಢತೆ, ಸಾಮರಸ್ಯ ಸಾರುವ ಸಂಕೇತವಾಗಿ ಮಾನವ ಸರಪಳಿ ರೂಪಿಸುವ ಮೂಲಕ ಬೃಹತ್ ಸಂವಿಧಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ನಡೆಯಲಿರುವ ಈ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮವು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿದ್ದು, ಡಿಬಿ ಡ್ಯಾಂ

ಹತ್ತಿರದ ಗಣೇಶ ಗುಡಿಯ ಬಳಿಯ ಮೊದಲನೇ ಸೇತುವೆಯಿಂದ ಅರಂಭವಾಗಿ ಹೊಸಪೇಟೆ ನಗರದ ಮೂಲಕ ಭುವನಹಳ್ಳಿಯವರೆಗೆ ಸುಮಾರು 40 ಕಿ.ಮೀ ಉದ್ದ ನಡೆಯಲಿದೆ. ಈ ಮಾನವ ಸರಪಳಿ ರಚನೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಬೇಕಿದೆ. ಇದಕ್ಕಾಗಿ ಪ್ರೌಢಶಾಲೆ, ಹಾಸ್ಟೆಲ್ ಮತ್ತು ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ, ಎನ್.ಆರ್.ಎಲ್.ಎಂ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಜಿಲ್ಲೆಯ ಎನ್.ಜಿ.ಓ.ಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಾನವ ಸರಪಳಿಯ ಯಶಸ್ವಿ ನಿರ್ವಹಣೆಗಾಗಿ ಪ್ರತಿ 100 ಮೀಟರ್ ಗೆ ಒಬ್ಬರನ್ನು ಸೆಕ್ಟರ್ ಅಧಿಕಾರಿಗಳಾಗಿ, ಅದೇ ರೀತಿ ತಾಲ್ಲೂಕ ಮಟ್ಟದ ಅಧಿಕಾರಿಗಳನ್ನು ಪ್ರತಿ 1 ಕಿ.ಮೀ.ಗೆ ಒಬ್ಬರಂತೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ 3 ಕಿ.ಮೀ.ಗೆ ಒಬ್ಬರಂತೆ ನೋಡಲು ಅಧಿಕಾರಿಗಳಾಗಿ ನೇಮಕಮಾಡಲಾಗಿದೆ. ಮಕ್ಕಳಿಗೆ ಸುರಕ್ಷಿತವಾಗಿ ಕರೆತರಲು ಶಾಲಾ ವಾಹನಗಳ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅಗತ್ಯ ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಬಿಸ್ಕೇಟ್ ವಿತರಿಸಲಾಗುವುದು ಎಂದರು.

ನಿಗದಿತ ವೇಳಾ ಪಟ್ಟಿಯಂತೆ ಸೆ.15ರ ಬೆಳಿಗ್ಗೆ 09:30 ರಿಂದ 09:37 ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವುದು. 09:37 ರಿಂದ 09:40 ನಾಡಗೀತೆ, 09:40 ರಿಂದ 09:55 ರವರೆಗೆ ಮುಖ್ಯ ಅತಿಥಿಗಳಿಂದ ಭಾಷಣ. 09:55 ರಿಂದ 09:57 ರವರೆಗೆ ಸಂವಿಧಾನ ಪ್ರಸ್ತಾವನೆ ಓದುವುದು. 9.57 ರಿಂದ 9:59 ರವರೆಗೆ ಮಾನವ ಸರಪಳಿಯಲ್ಲಿ ಕೈ-ಕೈ ಹಿಡಿದು ನಿಲ್ಲುವುದು ಬೆಳಿಗ್ಗೆ 10 ಗಂಟೆಗೆ ಮಾನವ ಸರಪಳಿಯಲ್ಲಿಯೇ ಎರಡೂ ಕೈಗಳನ್ನು ಮೇಲೆತ್ತಿ “ಜೈ ಹಿಂದ್, ಜೈ ಕರ್ನಾಟಕ” ಘೋಷಣೆ ಕೂಗುವುದು.

ಈ ಎಲ್ಲಾ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯಲಿವೆ. ಹೊಸಪೇಟೆ ನಗರದ ಡಾ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಪ್ರಸ್ತಾವನೆ ಓದುವ ಕಾರ್ಯಕ್ರಮ ಅಯೋಜಿಸಲಾಗಿದೆ‌. ಕಾರ್ಯಕ್ರಮದ ಎಲ್ಲಾ ಚಿತ್ರೀಕರಣವು ಡ್ರೋನ್ ಕ್ಯಾಮರಾ ಮೂಲಕ ನಡೆಯಲಿದೆ. ಭಾರತ ಸಂವಿಧಾನದ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಶಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್. ಸೇರಿದಂತೆ ಮತ್ತಿತರರಿದ್ದರು.

 

 

ಜಾಹೀರಾತು
error: Content is protected !!