September 14, 2024

Hampi times

Kannada News Portal from Vijayanagara

ಭಾರತೀಯ ನೃತ್ಯ ಕಲೆಯ ರಾಯಭಾರಿ ದಂಪತಿಗಳು ಗುರು ಹರಿ ಮತ್ತು ಚೇತನ ಹರಿ.

https://youtu.be/NHc6OMSu0K4?si=SI_K4goOPEgwo6h2

 

 

 

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಎಂಬ ಊರಿನಿಂದ ವಲಸೆ ಬಂದ ಸಂಪ್ರದಾಯಸ್ತ ಕೂಡು ಕುಟುಂಬದ ಕುಡಿ ನಮ್ಮ ಇಂದಿನ ಕಥಾನಾಯಕ ಗುರು ಹರಿ. “ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ” ಎಂಬ ಮಾತಿನಂತೆ ಕಲಾ ಸಾಧಕ ಗುರು ಹರಿ ಅವರ ಕಲಾಸಾಂಗತ್ಯ ಮತ್ತು ಜೀವನಯಾನಕ್ಕೆ ಜೊತೆಯಾಗಿದ್ದು ಚೇತನ ಎಂಬ ಕಲೋಪಾಸಕಿ.

ದಂಡೆ ಸುಬ್ಬರಾಮಿ ರೆಡ್ಡಿ ಮತ್ತು ರಮಣಮ್ಮ ದಂಪತಿಗಳ ಆರು ಜನ ಮಕ್ಕಳಲ್ಲಿ ಮೂರು ಜನ ಅಕ್ಕಂದಿರು, ಓರ್ವ ಅಣ್ಣನ ನಂತರ ಹುಟ್ಟಿದ ಹರಿ ಅವರು ಓರ್ವ ತಮ್ಮ ಮತ್ತು ತಂಗಿಯನ್ನು ಹೊಂದಿದ್ದರು.ತಂದೆಯವರಿಗೆ ಬೆಂಗಳೂರಿನ
ಹೆಚ್ಎಎಲ್ ನಲ್ಲಿ ಉದ್ಯೋಗ ದೊರೆತ ಕಾರಣ ಇಡೀ ಕುಟುಂಬ ಬೆಂಗಳೂರಿನ ಜಯನಗರ ಬಡಾವಣೆಗೆ ಸ್ಥಳಾಂತರಗೊಂಡಿತು.

ತಂದೆಯವರು ಸಾಯಂಕಾಲ ಕೆಲಸಕ್ಕೆ ಹೋಗುತ್ತಿದ್ದುದರಿಂದ ಬಿಡುವಾಗಿರುತ್ತಿದ್ದ ಅವರ ತಾಯಿ ರಮಣಮ್ಮ ತಮ್ಮೆಲ್ಲ ಮಕ್ಕಳನ್ನು ಹತ್ತಿರದ ಶಿವ ಬಾಲಯೋಗಿ ಸ್ವಾಮೀಜಿಯವರ ಆಶ್ರಮಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ ಪ್ರತಿದಿನ ಪೂಜೆ, ಪ್ರವಚನ, ಪುರಾಣ, ಪುಣ್ಯ ಕಥೆಗಳ ಶ್ರವಣಗಳು ನಡೆಯುತ್ತಿದ್ದು ಇದು ಮಕ್ಕಳಲ್ಲಿ ಧಾರ್ಮಿಕ ಮನೋಭಾವವನ್ನು ಉಂಟು ಮಾಡಿತ್ತು. ಆಶ್ರಮದಲ್ಲಿ ನಡೆಯುವ ಮಹಾ ಮಂಗಳಾರತಿಯ ಸಮಯದಲ್ಲಿ ಬಾಲಕ ಹರಿ ಗಂಟೆ ಜಾಗಟೆಗಳ ಸದ್ದಿಗೆ ರೋಮಾಂಚನಗೊಳ್ಳುತ್ತಿದ್ದು ಆತನ ಕಾಲುಗಳು ತನ್ನಂತಾನೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದವು. ಕುಟುಂಬದ ಎಲ್ಲ ಸದಸ್ಯರು ಆಗಾಗ ಶ್ರೀಶೈಲ, ಧರ್ಮಸ್ಥಳ ತಿರುಪತಿಗೆ ದೈವ ದರ್ಶನಕ್ಕೆ ಹೋಗುತ್ತಿದ್ದರು.

ಒಳ್ಳೆಯ ರಂಗ ಕಲಾವಿದರು ಆಗಿದ್ದ ಅವರ ತಂದೆ, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದರಲ್ಲದೆ ಕನ್ನಡ, ತೆಲುಗು, ಮಲಯಾಳಂ,ತಮಿಳು ಮತ್ತು ಸಂಸ್ಕೃತ ಭಾಷಾ ಪರಿಣತರಾಗಿದ್ದರು. ಮನೆಯಲ್ಲಿ ಕೈದೋಟ, ಹಸು ಸಾಕಣೆ, ಧಾರ್ಮಿಕ ಕಾರ್ಯಕ್ರಮಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿದ್ದ ಸುಬ್ಬರಾಮಿ ರೆಡ್ಡಿ ಮತ್ತು ರಮಣಮ್ಮ ದಂಪತಿಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದರು.

ತಾಯಿಯೊಂದಿಗೆ ಸಂಗೀತ ಮತ್ತು ನೃತ್ಯ ಕಲೆಗಳನ್ನು ಒಳಗೊಂಡ ಶಂಕರಾಭರಣಂ, ಸಾಗರಸಂಗಮಂ, ಸ್ವರ್ಣ ಕಮಲ ಮತ್ತು ಭಕ್ತ ಸಿರಿಯಾಳದಂತಹ ಚಿತ್ರಗಳನ್ನು ಸಿನಿಮಾ ಥಿಯೇಟರ್ಗಳಲ್ಲಿ ನೋಡಿದ ಬಾಲಕ ಹರಿ ನೃತ್ಯದಡೆಗೆ ಆಕರ್ಷಿತನಾದನು.ಮುಂದೆ ಭರತನಾಟ್ಯ, ಕುಚಿಪುಡಿ, ಯಕ್ಷಗಾನ ಮತ್ತು ಕಥಕ್ ನೃತ್ಯಗಳಲ್ಲಿ ಪರಿಣತಿಯನ್ನು ಸಾಧಿಸಿದ ಹರಿ ಅದೆಂತ ಎಡರು ತೊಡರುಗಳು ಬಂದರೂ ಅಚಲ ಶ್ರದ್ಧೆ ಮತ್ತು ಬದ್ಧತೆಯಿಂದ ನೃತ್ಯ ಉಪಾಸನೆಯಲ್ಲಿ ತೊಡಗಿದರು.ಕಲಿಯುವ ಸಮಯದಲ್ಲಿ ಸಂಪೂರ್ಣ ನಿಷ್ಠೆಯನ್ನು ನೃತ್ಯಕ್ಕೆ ಮೀಸಲಾಗಿಟ್ಟ ಪರಿಣಾಮವಾಗಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರಾಗಿ ರೂಪುಗೊಂಡರು.

ಕಲಾವಿದರ ಬಾಳಿನಲ್ಲಿ ಸವಾಲುಗಳು ಕೂಡ ಬಹಳ. ಅವರ ಬದುಕು ಏರು ಇಳಿತಗಳ ಹಾದಿಯಲ್ಲಿ ಸಾಗುವ ರೋಲರ್ ಕೋಸ್ಟರ್ ನಂತೆ.
ಹರಿ 2000ನೇ ಇಸವಿಯಲ್ಲಿ ಹಾಡು ಮತ್ತು ನೃತ್ಯವೊಂದರ ರೆಕಾರ್ಡಿಂಗ್ನಲ್ಲಿ ನಿರತರಾಗಿದ್ದಾಗಲೇ ಅವರ ತಂದೆ ನಿಧನರಾದ ಸುದ್ದಿ ಅವರನ್ನು ತಲುಪಿತು.ತಂದೆ ಇನ್ನಿಲ್ಲವಾದ ಸುದ್ದಿಯನ್ನು ಕೇಳಿಯೂ ತಮ್ಮ ರೆಕಾರ್ಡಿಂಗ್ ಕೆಲಸವನ್ನು ಪೂರೈಸಿ, ತಂದೆಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದು ಅವರು ಕಲೆಗೆ ನೀಡುವ ಗೌರವಾಭಿಮಾನ ಮತ್ತು ವೃತ್ತಿಯೆಡೆಗಿನ ಬದ್ಧತೆಯನ್ನು ತೋರುತ್ತದೆ. ತಂದೆಯ ಅಂತ್ಯ ಸಂಸ್ಕಾರದ ಮರುದಿನವೇ ಅವರು ಈಗಾಗಲೇ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿ ತನ್ನ ತಂದೆಗೆ ಶ್ರದ್ಧಾಂಜಲಿ ಅರ್ಪಿಸಿ, ಮಗನಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು.

ಅವರ ಸಹ ಕಲಾವಿದೆಯಾಗಿ ಚೇತನ 1999 ರಲ್ಲಿ ಜತೆಗೂಡಿದರು. ನೃತ್ಯವನ್ನು ಆರಾಧಿಸುವ ಇವರಿಬ್ಬರ ಜೋಡಿಯು ಇವರ ನೃತ್ಯಗುರುವಾದ ಶ್ರೀಮತಿ ಉಷಾ ವೆಂಕಟರಮನ್ ಅವರ ನೃತ್ಯ ನಿರ್ದೇಶನದಲ್ಲಿ ಮುಖ್ಯ ನೃತ್ಯಪಟುಗಳಾಗಿ ಅತ್ಯಂತ ಕಲಾತ್ಮಕವಾಗಿ ಮತ್ತು ಚೈತನ್ಯಾತ್ಮಕವಾಗಿ ನೂರಾರು ಪ್ರದರ್ಶನಗಳನ್ನು ನೀಡಿದರು. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ನ ಸಹಭಾಗಿತ್ವದಲ್ಲಿ ಮಲೇಶಿಯಾ, ಥೈಲ್ಯಾಂಡ್, ಸಿಂಗಾಪುರ್, ಇಂಡೋನೇಷಿಯ ದೇಶಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ನೀಡಿದ ಇವರ ತಂಡ ನಂತರ ದುಬೈನ ಅರಸನ ಆಹ್ವಾನದ ಮೇರೆಗೆ ಬುರ್ಜ್ ಅಲ್ ಅರಬ್ ನಲ್ಲಿ ಮತ್ತು ಇಂಗ್ಲೆಂಡಿನ ಕನ್ನಡ ಬಳಗದ ಆಹ್ವಾನದ ಮೇರೆಗೆ ಅಲ್ಲಿಯೂ ನೃತ್ಯ ಪ್ರದರ್ಶನವನ್ನು ನೀಡಿದರು. ಈ ಸರಣಿ ಕಾರ್ಯಕ್ರಮಗಳ ನಡುವಲ್ಲಿಯೇ ಕೆಲವೇ ದಿನಗಳ ಬಿಡುವನ್ನು ಪಡೆದುಕೊಂಡ ಹರಿ ಮತ್ತು ಚೇತನ ಜೋಡಿಯು ಫೆಬ್ರುವರಿ 8, 2007ರಲ್ಲಿ ಭಾರತಕ್ಕೆ ಮರಳಿ ತಮ್ಮ ಪಾಲಕರು ತಮ್ಮಿಬ್ಬರ ವಿವಾಹಕ್ಕೆ ನಿಶ್ಚಯಿಸಿದ ಮುಹೂರ್ತದಲ್ಲಿ ಮದುವೆಯಾಗಿ ಮತ್ತೆ ನೃತ್ಯ ಪ್ರದರ್ಶನಕ್ಕೆ ವಿದೇಶಕ್ಕೆ ಹೊರಟದ್ದು ಕಲಾರಾಧನೆಯೇ ಅವರ ಬಾಳಿನ ಮೂಲ ಧ್ಯೇಯವಾಗಿತ್ತು ಎಂಬುದಕ್ಕೆ ನಿದರ್ಶನವಾಗಿದೆ.

ಶ್ರೀಲಂಕಾದಲ್ಲಿಯೂ ಹಲವಾರು ಬಾರಿ ನೃತ್ಯ ಪ್ರದರ್ಶಿಸಿದ ಈ ದಂಪತಿಗಳು ಮಲಯಾಳಂನಲ್ಲಿ ಖ್ಯಾತ ನಿರ್ದೇಶಕ ಲೆನಿನ್ ರಾಜೇಂದ್ರ ನಿರ್ದೇಶಿಸಿದ ಚಿತ್ರ ‘ಮಕರ ಮಾನ್ಯ”ದಲ್ಲಿ ನಟಿಸಿದ್ದು ಅವರ ಬಾಳಿನ ಮತ್ತೊಂದು ಮೈಲಿಗಲ್ಲು.

2009ರಲ್ಲಿ ಸೌದಿ ಅರೇಬಿಯಾದ ದಮ್ಮಂಗೆ ನೃತ್ಯ ಪ್ರದರ್ಶನಕ್ಕೆಂದು ಅಧಿಕೃತವಾಗಿ ಆಹ್ವಾನಿಸಲ್ಪಟ್ಟ ಮೊಟ್ಟ ಮೊದಲ ಕಥಕ್ ನೃತ್ಯ ಕಲಾವಿದ ದಂಪತಿಗಳು ಇವರಾಗಿದ್ದರು.

ಚೇತನ ಅವರು ಗರ್ಭವತಿಯಾಗಿದ್ದಾಗ್ಯ್ಯೂ ಕೂಡ ಸುಮಾರು ಆರು ತಿಂಗಳವರೆಗೆ ಹತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ವಿದೇಶದಲ್ಲಿ ನೀಡಿದ್ದರು. 2010 ಜೂನ್ 28ರಂದು ಜಾನವಿ ಎಂಬ ಮುದ್ದಾದ ಹೆಣ್ಣು ಕೂಸನ್ನು ಈ ದಂಪತಿಗಳು ಪಡೆದರು.
ಮಗುವಿಗೆ ಮೂರು ತಿಂಗಳಾಗಿದ್ದಾಗಲೇ ತಮ್ಮ ತಂಡದ ಹತ್ತು ಜನ ಸಹಕಲಾಾವಿದರೊಡನೆ ಅಮೆರಿಕಾದ ವಾಶಿಂಗ್ಟನ್ ಡಿ.ಸಿ ಗೆ ತೆರಳಿದ ದಂಪತಿಗಳು ಐ.ಸಿ.ಸಿ.ಆರ್‌.ನ ಸಹಯೋಗದೊಂದಿಗೆ ಕೆನಡಾದ ಒಟ್ಟಾವ ಮತ್ತು ವಿನಿ ಪೆಗ್ ಗಳಲ್ಲಿ ಭಾರತೀಯ ಸಾಂಸ್ಕೃತಿಕ ರಾಯಭಾರಿಗಳಾಗಿ ಈ ದಂಪತಿಗಳು ತಮ್ಮ ತಂಡದೊಂದಿಗೆ ನೃತ್ಯ ಪ್ರದರ್ಶನ ಮಾಡಿದರು.

2012ರಲ್ಲಿ ಅವರು ನೃತ್ಯ ಪ್ರದರ್ಶನಕ್ಕೆ ಫ್ರಾನ್ಸ್ ದೇಶಕ್ಕೆ ತೆರಳಿದಾಗ ತಾಯಿ ರಮಣಮ್ಮನವರು ವಿಯೋಗ ಹೊಂದಿದರು. ಕಾರ್ಯಕ್ರಮವನ್ನು ಬಿಟ್ಟು ಬರಲಾರದ ಸಂದಿಗ್ಧತೆಯಲ್ಲಿದ್ದ ಹರಿ ನೃತ್ಯಕ್ಕೆ ಬೇಕಾದ ಉಡುಗೆ ಮತ್ತು ಪರಿಕರಗಳನ್ನು ತೊಟ್ಟು ವೇದಿಕೆಯ ಮೇಲೆ ಬಂದಾಗ ಅವರ ತಾಯಿಯ ಚೈತನ್ಯವೇ ಅವರೊಂದಿಗೆ ನೃತ್ಯದಲ್ಲಿ ಲೀನವಾದಂತೆ ಭಾಸವಾಯಿತು. ಇಂದಿಗೂ ಸಹ ತಮ್ಮೆಲ್ಲ ಬೆಳವಣಿಗೆಗೆ ಕಾರಣವಾಗಿರುವುದು ತಮ್ಮ ತಂದೆ ತಾಯಿ ಎಂದು ಹೇಳುವ ಹರಿ ಅವರ ಕುಟುಂಬದ ಸುಮಾರು ಎಂಟು ಜನ ನೃತ್ಯ ಕಲಾವಿದರಾಗಿದ್ದಾರೆ ಎಂಬುದು ಅವರಿಗೆ ಹೆಮ್ಮೆಯ ವಿಷಯ.

2013ರಲ್ಲಿ ನೆದರ್ಲ್ಯಾಂಡ್ ನಲ್ಲಿನ ಗಾಂಧೀಸಂ ಸೆಂಟರ್ನಲ್ಲಿ ಐಸಿಸಿಆರ್ ಮತ್ತು ಭಾರತೀಯ ವಿದೇಶಾಂಗ ಇಲಾಖೆಯ ಆಯೋಗದಲ್ಲಿ ಕಥಕ್ ನೃತ್ಯ ಶಿಕ್ಷಕ ಮತ್ತು ಪ್ರದರ್ಶಕರಾಗಿ ಆಯ್ಕೆಯಾದ ಹರಿ ಅವರ ಕಲಾಯಾನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು.

 

ದಂಪತಿಗಳಿಬ್ಬರೂ ಹೇಗ್ ನ ಕೊರ್ಜೋ ಥಿಯೇಟರ್ ನಲ್ಲಿ ಲಿಯೋ ಸ್ಪೆರ್ಕಸೆಲ್ ಅವರ ಸಮರ್ಥ ನಿರ್ದೇಶನದಲ್ಲಿ ಸ್ಥಾನಿಕ ಕಲಾವಿದರಾಗಿ ಕಾರ್ಯನಿರ್ವಹಿಸಿದರು.ಇವರಿಬ್ಬರ ಜಂಟಿ ಆ ಯೋಜನೆಯಲ್ಲಿ ತುಂಬಿದ ಗೃಹ ಪ್ರದರ್ಶನಗಳು ನಡೆಯುತ್ತಿದ್ದವು. ಇಶಾ,ಮಾಯಾ, ಕ್ಲೌಡ್ ಮೆಸೆಂಜರ್, ಆಯುಷ್ ಸತ್ಯಾಗ್ರಹ ಮುಂತಾದ ನೃತ್ಯ ರೂಪಕಗಳು ಪ್ರದರ್ಶಿತವಾಗಿದ್ದು ಇಲ್ಲಿಯೇ.
ವಿವಿಧ ವಾದ್ಯಗಳ ಸಿಂಫೋನಿ ಆರ್ಕೆಸ್ಟ್ರಾಗೆ ಕ್ಲಾಸಿಕ್ ಫೆಸ್ಟಿವಲ್ ನಲ್ಲಿ ಹೆಜ್ಜೆ ಹಾಕಿದ್ದು ಒಂದು ಅಭೂತಪೂರ್ವ ಅನುಭವ ಎಂದು ಅವರು ಹೇಳುತ್ತಾರೆ.

ಕಳೆದ ವರ್ಷಗಳಲ್ಲಿ ಕಮರೊಟ್ಟು ಭಾಗ-2.ವೇದ ಮತ್ತು ಯುದ್ಧ ಕಾಂಡ ಚಿತ್ರಗಳಲ್ಲಿ ಪಾತ್ರನಿರ್ವಹಿಸಿರುವ ಚೇತನ ನಟನೆ ಮತ್ತು ನರ್ತನ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ.

ಬಾಲಿ ಯಾತ್ರ, ಸತ್ಯಾಗ್ರಹ, ಶಾಕುಂತಲಂ ನಂತಹ ನೃತ್ಯ ನಾಟಕಗಳಲ್ಲದೆ ರಾಮಾಯಣ,ಕೃಷ್ಣಾಂಜಲಿ, ಶಿವಾಂಜಲಿ, ದೇವಿ, ಫೋಕ್ ರಿದಮ್ಸ್ ಆಫ್ ಇಂಡಿಯಾ ಎಂಬ ಹಲವಾರು ನೃತ್ಯ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಜಗತ್ತಿನ ಗಮನವನ್ನು ಭಾರತದ ಸಾಂಸ್ಕೃತಿಕ ಜಗತ್ತಿನತ್ತ ತಿರುಗಿಸಿದ ಖ್ಯಾತಿ ಈ ದಂಪತಿಗಳದು.

2022 ರಲ್ಲಿ ಚೆನ್ನೈನಲ್ಲಿ ನಡೆದ ಫಿಡೆ 44ನೇ ಚೆಸ್ ಚಾಂಪಿಯನ್ಶಿಪ್ ನಲ್ಲಿ ತಮ್ಮ ತಂಡದ ಒಟ್ಟು 58 ಕಲಾವಿದ ( ಚೈತನ್ಯ ಡ್ಯಾನ್ಸ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಿದ ಗದುಗಿನ ಸುಧಾ ಇನಾಮ್ ದಾರ್ ಸೇರಿದಂತೆ) ರನ್ನೊಳಗೊಂಡ ಸುಮಾರು 300ಕ್ಕೂ ಹೆಚ್ಚು ಆಯ್ದ ಕಲಾವಿದರ ಎಂಟು ತಂಡಗಳನ್ನು ರಚಿಸಿ ಭಾರತೀಯ ನೃತ್ಯದ ವಿವಿಧ ಪ್ರಕಾರಗಳನ್ನು ತಲಾ ಮೂರು ನಿಮಿಷಗಳ ಕಾಲ ಪ್ರದರ್ಶಿಸಿ ಅಂತಿಮವಾಗಿ ಎರಡು ನಿಮಿಷ ಎಲ್ಲಾ ಮುನ್ನೂರು ಕಲಾವಿದರು ಒಟ್ಟಾಗಿ ನೃತ್ಯ ಮಾಡುವ
ಮೂಲಕ ಸಮಾರಂಭಕ್ಕೆ ಅದ್ಭುತವಾದ ಮೆರುಗು ತಂದರು.

ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಕರ್ನಾಟಕ ಪ್ರಶಸ್ತಿ, ಶ್ರೀಲಂಕಾದ ರಾಷ್ಟ್ರೀಯ ಶಾಂತಿ ಪುರಸ್ಕಾರ ಪ್ರಶಸ್ತಿ, ನಾಟ್ಯ ಲಕ್ಷಣ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಭಾರತೀಯ ಸಾಂಸ್ಕೃತಿಕ ಕಲೆಯ ಪ್ರತೀಕವಾಗಿ ಜಾಗತಿಕವಾಗಿ ಗುರುತಿಸಲ್ಪಡುವ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಭಾರತೀಯ ಕಲೆ ಮತ್ತು ಸಂಸ್ಕೃತಿಯ ಕುರಿತಾದ ಹಲವಾರು ನೃತ್ಯಕ್ಕೆ ಸಂಬಂಧಪಟ್ಟ ಡಾಕ್ಯುಮೆಂಟರಿಗಳಲ್ಲಿ ಇವರು ಕಾರ್ಯ ನಿರ್ವಹಿಸಿದ್ದು ನೃತ್ಯ ಪರಂಪರೆಯ ಗಟ್ಟಿ ಬುನಾದಿಗೆ ಕಾರಣವಾಗಿದ್ದಾರೆ.

ಈ ದಂಪತಿಗಳ ನೃತ್ಯ ಪರಂಪರೆಯನ್ನು ಅವರ ಮಗಳು ಜಾನವಿ ಅಲ್ಲದೆ ಗುರು ಹರಿಯವರ ಒಡಹುಟ್ಟಿದವರ ಮಕ್ಕಳಾದ ಶಿರೀಶ,ವರುಣಿ, ಶಿವಾನಿ, ದಿಯಾ ಮತ್ತು ಮಹೇಶ್ ಸೇರಿದಂತೆ ಕುಟುಂಬದ ಒಟ್ಟು ಎಂಟು ಜನ ಕಲಾವಿದರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜಶಸ್ವಿ,ನಿಧಿಕಾ ಮುಂತಾದ ವಿದ್ಯಾರ್ಥಿಗಳು ಕೂಡ ಗುರುಗಳು ತೋರಿದ ಹಾದಿಯಲ್ಲಿ ಸಾಗುತ್ತಿದ್ದಾರೆ.

“ನೂಪುರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಟ್ರಸ್ಟ”ನ್ನು ನಡೆಸುತ್ತಿರುವ ಈ ದಂಪತಿಗಳು ಪ್ರತಿ ವರ್ಷವೂ ನೃತ್ಯ ಮಹೋತ್ಸವವನ್ನು ಕೇಂದ್ರ ಸರ್ಕಾರದ ಸಾಂಸ್ಕೃತಿಕ ಸಚಿವಾಲಯದ ಸಹಯೋಗದೊಂದಿಗೆ ನಡೆಸುತ್ತಿದ್ದು ಇತ್ತೀಚೆಗೆ ನಡೆದ
‘ನೂಪುರ ನೃತ್ಯೋತ್ಸವ’ದ ದಿವ್ಯ ಸಾನಿಧ್ಯವನ್ನು ದಯಾನಂದ ಸರಸ್ವತಿ ಸ್ವಾಮೀಜಿ ಅವರು ವಹಿಸಿದ್ದು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ್ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೀಪವನ್ನು ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಭರತನಾಟ್ಯ ಕಲಾವಿದರಾದ ಕಲಾ ರತ್ನ ಸತ್ಯನಾರಾಯಣ ರಾಜು ಅವರು ನೂಪುರ್ ನೃತ್ಯೋತ್ಸವದಲ್ಲಿ ರಾಮಾಯಣದ ಹಲವಾರು ಪಾತ್ರಗಳನ್ನು ತಮ್ಮ ಅಭಿನಯ ನೃತ್ಯದ ಮೂಲಕ ಸುಮಾರು ಒಂದುವರೆ ಗಂಟೆಗಳ ಕಾಲ ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ರಾಮಾಯಣ ಕಾಲಘಟ್ಟಕ್ಕೆ ಕರೆದೊಯ್ದು ರಸದೌತಣವನ್ನು ಪಡಿಸಿದರು.

ನಂತರ ಗುರು ಹರಿಯವರು ಮತ್ತು ಅವರ ಪತ್ನಿ ಚೇತನ ಮತ್ತು ತಂಡದ ವಿವಿಧ ಸದಸ್ಯರಿಂದ
ಭಕ್ತಿ ನೃತ್ಯ ತರಂಗ ಎಂಬ ಒಂದು ಗಂಟೆಯ ಕಥಕ್ ನೃತ್ಯ ಕಾರ್ಯಕ್ರಮದಲ್ಲಿ ಶಿರಿಷಾ ಅವರಿಂದ ಸರಸ್ವತಿ ವಂದನ, ಪ್ರಸ್ತುತ ಅಮೆರಿಕದಲ್ಲಿ ವಾಸವಾಗಿ ನೃತ್ಯ ತರಗತಿಗಳನ್ನು ಹೇಳಿಕೊಡುತ್ತಿರುವ ಶಶಿಷ್ಯೆ ನಿಧಿಕ ನೊಂದಿಗೆ ಗುರು ಹರಿಯವರ ತಂದೆ ತಾಯಿಯ ಸ್ಮರಣಾರ್ಥವಾಗಿ ಲಿಂಗಾಷ್ಟಕಮ್ ಎಂಬ ನೃತ್ಯ ರೂಪಕವನ್ನು, ಸೂರ್ಯ ಅಷ್ಟಕ , ಹತ್ತು ಮಾತ್ರೆಗಳ ಜಪತಾಳ ಮತ್ತು ಅಂತಿಮವಾಗಿ ಕೃಷ್ಣನನ್ನು ಕುರಿತ ತಾಂಡವ ನೃತ್ಯ ಪ್ರದರ್ಶನಗಳು ಜರುಗಿದವು.

ಭರತನಾಟ್ಯ ಕಲಾವಿದರಾದ ಸತ್ಯನಾರಾಯಣ ರಾಜು ಮತ್ತು ಶುಭ ಧನಂಜಯ ಅವರಿಗೆ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

ತಮ್ಮ ಜೀವಮಾನ ಸಾಧನೆಯ ಎಲ್ಲಾ ಹಣವನ್ನು ಕಥಕ್ ಗ್ರಾಮವನ್ನು ಕಟ್ಟಬೇಕೆಂಬ ಕನಸಿಗೆ ಐಎಂಎಫ್ ಎಂಬ ಹಣಕಾಸು ನಿರ್ವಹಣಾ ಸಂಸ್ಥೆಯಲ್ಲಿ ಈ ದಂಪತಿಗಳು ಹೂಡಿದ್ದರು. 2019ರಲ್ಲಿ ಐಎಂಎಫ್ ಮಾಲೀಕನಾದ ಮನ್ಸೂರ್ ಖಾನ್ ಎಲ್ಲ ಹಣವನ್ನು ಲಪಟಾಯಿಸಿ ಓಡಿ ಹೋದ ಪರಿಣಾಮವಾಗಿ ಸುಮಾರು 89 ಲಕ್ಷ ಹಣವನ್ನು ದಂಪತಿಗಳು ಕಳೆದುಕೊಂಡಿದ್ದು ಅವರ ಕಥಕ್ ಗ್ರಾಮದ ಕನಸು ಅಪೂರ್ಣಗೊಂಡಿದೆ. ಭರವಸೆಯನ್ನು ಕಳೆದುಕೊಳ್ಳದ ಈ ದಂಪತಿಗಳು ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳ ಆರ್ಥಿಕ ಸಹಯೋಗದಲ್ಲಿ ಕಥಕ್ ಗ್ರಾಮವನ್ನು ಕಟ್ಟಬೇಕೆಂಬ
ಮಹದಾಸೆಯನ್ನು ಹೊಂದಿದ್ದು ಅವರ ಆಸೆ ಈಡೇರಲಿ….. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ‘ಕಥಕ್ ಗ್ರಾಮ’ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ,ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಈ ದಂಪತಿಗಳ ಕಲಾಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸುವ.

 ಲೇಖಕರು: ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

 

 

ಜಾಹೀರಾತು
error: Content is protected !!