https://youtu.be/NHc6OMSu0K4?si=SI_K4goOPEgwo6h2
ಎಂಎಸ್‌ಪಿಎಲ್ ಸಿಎಸ್ಸಾರ್ ವಿಭಾಗದ ಉಪಾಧ್ಯಕ್ಷ ಎಚ್.ಕೆ.ರಮೇಶ್ ಹೇಳಿಕೆ | ಆ.24 ರಿಂದ 26ವರೆಗೆ | ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಉದ್ಘಾಟಿಸಲಿದ್ದಾರೆ
ಹಂಪಿ ಟೈಮ್ಸ್ ಹೊಸಪೇಟೆ
ಹೊಸಪೇಟೆಯ ಎಂ.ಎಸ್.ಪಿ.ಎಲ್. ಲಿಮಿಟೆಡ್ ಹಾಗೂ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಜೈಪುರ ಸಹಯೋಗದಲ್ಲಿ ಆ.24,25 ಮತ್ತು 26 ರಂದು ಹೊಸಪೇಟೆ ನೆಹರೂ ಕಾಲೊನಿಯಲ್ಲಿರುವ ಸಹಕಾರಿ ಕಲ್ಯಾಣಮಂಟಪದಲ್ಲಿ ಮೂರು ದಿನ ಉಚಿತ ಜೈಪುರ ಕೃತಕ ಕಾಲು ಜೋಡಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಯಾವುದೇ ರೀತಿಯ ಕಾಲಿನ ಅಂಗವಿಕಲತೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಎಂ.ಎಸ್.ಪಿ.ಎಲ್. ಸಮಾಜ ಸೇವಾ ವಿಭಾಗದ ಉಪಾಧ್ಯಕ್ಷ ಎಚ್ ಕೆ ರಮೇಶ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ನಾನಾ ಕಾರಣಗಳಿಂದ ಕಾಲಿನ ಅಂಗವೈಕಲ್ಯಕ್ಕೀಡಾದವರು ಸಂಸ್ಥೆಯಿಂದ 10 ವರ್ಷಗಳಿಂದ ಆಯೋಜಿಸುತ್ತಿರುವ ಉಚಿತ ಜೈಪುರ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ನಾನಾ ಭಾಗಗಳಿಂದ ಆಗಮಿಸಿ ಪ್ರಯೋಜನ ಪಡೆದಿದ್ದಾರೆ. ಅನೇಕರು ಮತ್ತೊಬ್ಬರ ಮೇಲೆ ಅವಲಂಬನೆಯಾಗದೇ ಸ್ವಾವಲಂಬಿ ಜೀವನ ನಡೆಸಲೆಂದು ಎಂಎಸ್‌ಪಿಎಲ್ ಸಂಸ್ಥೆ ಕಳೆದ 10 ವರ್ಷಗಳಿಂದ ಈ ಶಿಬಿರವನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಉತ್ತರ ಕರ್ನಾಟಕದ ವಿವಿಧ ಜೆಲ್ಲೆಗಳಿಂದ ಮತ್ತು ಆಂಧ್ರದ ಅನಂತಪುರ, ಕರ್ನೂಲ್, ಕಡಪ ಜಿಲ್ಲೆಗಳಿಂದ ಕಾಲು ಜೋಡಣೆಗಾಗಿ ಆಗಮಿಸುತ್ತಾರೆ.
ಹುಟ್ಟಿನಿಂದ ಕಾಲಿನ ಅಂಗವಿಕಲತೆ, ಪೋಲಿಯೋ ಪೀಡಿತರು, ಆಕಸ್ಮಿಕ ಅಪಘಾತದಿಂದ ಕಾಲು ಕಳೆದುಕೊಂಡವರು ಸೇರಿದಂತೆ ಯಾವುದೇ ರೀತಿಯ ಕಾಲಿನ ಅಂಗವೈಕಲ್ಯತೆ ಹೊಂದಿದವರು ಶಿಬಿರದಲ್ಲಿ ಭಾಗವಹಿಸಿ ಉಚಿತವಾಗಿ ಪ್ರಯೋಜನ ಪಡೆಯಬಹುದಾಗಿದೆ. ಈಗಾಗಲೇ ಸಂಸ್ಥೆವತಿಯಿಂದ 2357ಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. 1155 ಜನರಿಗೆ ಕೃತಕ ಕಾಲು ಜೋಡಣೆ, 709 ಕ್ಯಾಲಿಪರ್ಸ್, 44 ವಾಕರ್, 72 ಕೈಗೋಲು, 253 ಜನರಿಗೆ ಊರುಗೋಲು, 38 ಜನರಿಗೆ ಗಾಲಿ ಕುರ್ಚಿ, 38 ಜನರಿಗೆ ಕೈಚಾಲಿತ ಸೈಕಲ್ ಹಾಗೂ 48 ಜನರಿಗೆ ಲಘು ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ. ಶಿಬಿರದ ಪ್ರಯೋಜನ ಪಡೆದವರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ.
ಆಸಕ್ತರು ಮೊ: 9902500250 (ಬಿ.ಎಂ.ನಾಗರಾಜ), 9449135837 (ಎಸ್.ಎಂ.ಶಂಭುಲಿಂಗಯ್ಯ) ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು.
” ಆ.24 ರಂದು ಬೆಳಿಗ್ಗೆ 11 ಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಉದ್ಘಾಟಿಸಲಿದ್ದಾರೆ. 16 ಜನ ತಂತ್ರಜ್ಞರು, 10ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸ್ಥಳದಲ್ಲೆ ಅವರ ಕಾಲಿನ ಅಳತೆ ಪಡೆದು, ಸಿದ್ಧಪಡಿಸಲಾಗುತ್ತದೆ. ಬೆಳಿಗ್ಗೆ ಬಂದವರಿಗೆ ಸಂಜೆಯೊಳಗೆ ಮತ್ತು ಮಧ್ಯಾಹ್ನ ನಂತರ ಬಂದವರಿಗೆ ಮರುದಿನ ಬೆಳಿಗ್ಗೆ ಕೃತಕ ಕಾಲು ಜೋಡಣೆ ಮಾಡಲಾಗುತ್ತದೆ. ಕಾಲು ಜೋಡಣೆಗೆ ಬಂದವರಿಗೆ ಉಚಿತ ವಸತಿ, ಊಟ ಸೌಲಭ್ಯ ಕಲ್ಪಿಸಲಾಗುತ್ತದೆ. ಶಿಬಿರದಲ್ಲಿ ಈಗಾಗಲೇ 150 ಜನರು ಹೆಸರು ನೋಂದಾಯಿಸಿದ್ದಾರೆ. 200ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ.”
– ಎಚ್.ಕೆ.ರಮೇಶ, ಉಪಾಧ್ಯಕ್ಷರು, ಸಮಾಜ ಸೇವಾ ವಿಭಾಗ, ಎಂ.ಎಸ್.ಪಿ.ಎಲ್.
More Stories
40 ಕಿ.ಮೀ ಉದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ : DC ಎಂ.ಎಸ್.ದಿವಾಕರ್
ಎಸ್.ಸಿ., ಎಸ್.ಟಿ ಕಲ್ಯಾಣ ಸಮಿತಿ ಸಭೆಗೆ ಸ್ಪಷ್ಟವಾಗಿ ಮಾಹಿತಿ ಒದಗಿಸಿ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ15 ಶಿಕ್ಷಕರು ಆಯ್ಕೆ