https://youtu.be/NHc6OMSu0K4?si=SI_K4goOPEgwo6h2
ಮಮ್ಮಲ ಮರಗುತ್ತಿರುವ ರೈತರು | ಭರ್ತಿಯಾದ ಬೆನ್ನಲ್ಲೆ ಬರಿದಾಗುತ್ತಿರುವ ಡ್ಯಾಂ!
ಹಂಪಿ ಟೈಮ್ಸ್ ಹೊಸಪೇಟೆ
ತುಂಗಭದ್ರಾ ಜಲಾಶಯದ ಒಡಲು ಆ.9ರಂದು ರಾತ್ರಿ ಸಂಪೂರ್ಣ ಭರ್ತಿಯಾಗಿತ್ತು. ರೈತರು ಬೆಳೆಯುವ ಎರಡನೆ ಬೆಳೆಗೆ ಮತ್ತು ಬೇಸಿಗೆಯಲ್ಲೂ ಕುಡಿಯುವ ನೀರಿಗೂ ಬರವಿಲ್ಲ ಎಂಬ ವಿಶ್ವಾಸದಲ್ಲಿದ್ದ ರೈತರು ಮತ್ತು ಜಲಾಶಯವನ್ನೆ ಅವಲಂಬಿಸಿದ ಮೂರು ರಾಜ್ಯಗಳ ಲಕ್ಷಾಂತರ ಜನರಿಗೆ ಮತ್ತು ಜನಪ್ರತಿನಿದಿಗಳಿಗೆ ಜಲಾಶಯದ ಕ್ರಸ್ಟ್‌ಗೇಟೋಂದರ ಕೊಂಡಿ ಕಳಚಿರುವುದು ಬರಸಿಡಿಲು ಬಡಿದಂತಾಗಿದೆ.
ಟಿಬಿಡ್ಯಾಂನ 19ನೇ ಕ್ರಸ್ಟ್‌ಗೇಟ್‌ನ ಲಿಂಕ್ ಶನಿವಾರ ತಡರಾತ್ರಿ ತುಂಡಾಗಿದೆ. ಒಳಹರಿವಿನ ಪ್ರಮಾಣವೂ ನಿರಂತರವಾಗಿರುವುದರಿಂದ ಗೇಟ್ ಮೂಲಕ ನದಿಗೆ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಶಾಸಕ ಎಚ್.ಆರ್.ಗವಿಯಪ್ಪ ಮತ್ತು ಎಸ್ಪಿ ಶ್ರೀಹರಿಬಾಬು, ಡಿಸಿ ಎಂ.ಎಸ್.ದಿವಾಕರ ಮತ್ತು ಕೊಪ್ಪಳದ ಶಾಸಕ ಹಿಟ್ನಾಳ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಸುದ್ದಿ ತಿಳಿಯುತ್ತಿದ್ದಂತೆ ಡ್ಯಾಂಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಕ್ರಸ್ಟ್ ಗೇಟ್‌ನ ಲಿಂಕ್ ಕಟ್ ಆಗಿದೆ. ಡ್ಯಾಂ ಭರ್ತಿಯಾಗಿದ್ದು, ನೀರಿನ ಒಳಹರಿವು ಇರುವುದರಿಂದ ಕ್ರಸ್ಟ್ ಗೇಟ್ ಲಿಂಕ್ ಸರಿಪಡಿಸುವುದು ಕಷ್ಟ. ಕ್ರಸ್ಟ್ ಗೇಟ್ ದುರಸ್ಥಿ ಹಾಗೂ ನಿರ್ವಹಣೆಗೆ ತಜ್ಞರ ಅಭಿಪ್ರಾಯ ಪ್ರಮುಖ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಗೇಟಿನ ಮೂಲಕ ನದಿಗೆ ನೀರು ಬಿಡುವುದರಿಂದ ಡ್ಯಾಂ ಗೇಟ್‌ಗೆ ಮತ್ತಷ್ಟು ಒತ್ತಡ ಬೀಳಬಹುದು. ನೀರಿನ ರಭಸ ನಿಯಂತ್ರಣಕ್ಕಾಗಿ ಡ್ಯಾಂನ 30 ಗೇಟ್‌ಗಳನ್ನು ತೆರೆಯುವುದು ಅನಿವಾರ್ಯ ಎಂದು ತಿಳಿದ ಬಳಿಕ ಜಲಾಶಯದಿಂದ 30 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಬಿಡಲಾಗುತ್ತಿದೆ
ಟಿಬಿಡ್ಯಾಂ ವೀಕ್ಷಣೆಗೆ ಬ್ರೇಕ್!: ಜಿಲಾಶಯದ ಕ್ರಸ್ಟ್‌ಗೇಟೊಂದರ ಕೊಂಡಿ ಕಳಚಿದ್ದರಿಂದ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ತದಲ್ಲಿ ದಿಡೀರ್ ಸಭೆ ನಡೆಯಲಿದೆ. ಸಂಸದ ಇ.ತುಕಾರಂ, ಶಾಸಕ ಎಚ್ ಆರ್ ಗವಿಯಪ್ಪ ಸೇರಿದಂತೆ ಇತರರು ಡಿಸಿಎಂ ಬರುವಿಕೆಗೆ ಕಾಯುತ್ತಿದ್ದಾರೆ. ಹಾಗಾಗಿ ಭಾನುವಾರ ಟಿಬಿಡ್ಯಾಂ ವೀಕ್ಷಿಸಲು ಬಂದ ಪ್ರವಾಸಿಗರಿಗೆ ಪೊಲೀಸರು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಪ್ರವೇಶ ನಿರಾಕರಿಸಿ ಒಳ ಬಿಡದೆ ಹಿಮ್ಮೆಟ್ಟುತ್ತಿದ್ದಾರೆ.
ರೈತರಲ್ಲಿ ಹೆಚ್ಚಿದ ಆತಂಕ: ನದಿಗೆ ನೀರು ಪೋಲಾಗುತ್ತಿರುವುದನ್ನು ಕಂಡ ಜನರು ಮಮ್ಮಲ ಮರಗುತಿದ್ದಾರೆ. ಕುಡಿಯುವ ಹನಿ ನೀರಿಗೂ ಜನರು ಹೋರಾಟ ಮಾಡುವಂತಾಗಿದೆ. ಜಲಾಶಯ ಭರ್ತಿಯಾಗಿದೆ ಎಂಬ ಖುಷಿ ಕ್ಷಣಾರ್ಧದಲ್ಲೆ ಮಾಯವಾಗಿದೆ. ಡ್ಯಾಂ ನೀರು ಪೋಲಾಗುವುದರಿಂದ ವಿದ್ಯುತ್ ಉತ್ಪಾದನೆಗೂ ತೊಡಕಾಗಲಿದೆ. ನೀರು ನಿಯಂತ್ರಣವಿಲ್ಲದೆ ಹೊರ ಹೋಗುವುದರಿಂದ ನದಿ ತೀರದ ಪ್ರದೇಶಗಳಲ್ಲಿ ಬಾಧೆ ಉಂಟಾಗಬಹುದು. ನದಿಪಾತ್ರದ ಪಶುಪಕ್ಷಿಗಳು ಮತ್ತು ಸಸ್ಯಗಳಿಗೆ ಹಾನಿ ಎದುರಾಗುವ ಸಾಧ್ಯತೆಗಳಿವೆ. ಕೃಷಿ ಕ್ಷೇತ್ರಕ್ಕೆ ನೀರಿನ ಸರಬರಾಜುವಿನಲ್ಲೂ ತೊಂದರೆ ಎದುರಾಗಬಹುದು. ಅನ್ನದಾತನ ಬೆಳೆಗಳಿಗೆ ನೀರು ದೊರಕದೆ ರೈತರು ಸಂಕಷ್ಟಕ್ಕೆ ಸಿಲುಕಬಹುದು. ಭವಿಷ್ಯದಲ್ಲಿ ಅಂತರ್ಜಲಮಟ್ಟ ಕುಸಿಯಲೂಬಹುದು ಹೀಗೆ ಸಾಲು ಸಾಲು ಸಮಸ್ಯೆಗಳು ಎದುರಾಗಬಹುದಾಗಿದ್ದು ಸಂಬಂಧಿಸಿದವರು ಶೀಘ್ರವೆ ಜಲ ಸಂಪತ್ತು ರಕ್ಷಣೆ, ನಿರ್ವಹಣೆಗೆ ತುರ್ತು ಕ್ರಮಗಳನ್ನ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಸೂಚನೆ: ಕ್ರಸ್ಟ್ ಗೇಟ್ ಪರಿಶೀಲನೆಗಾಗಿ ತಜ್ಞರ ತಂಡ ಡ್ಯಾಂಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ನದಿಗೆ 55 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಆತಂಕಪಡಬೇಕಾಗಿಲ್ಲ. ತಜ್ಞರ ಮಾಹಿತಿ ಆಧಿರಿಸಿ ಹೆಚ್ಚುವರಿ ನೀರು ಬಿಡಲಾಗುವುದು. ಈ ಹಿಂದ 1,80,000 ಕ್ಯುಸೆಕ್ ನೀರು ನದಿಗೆ ಬಿಟ್ಟಾಗಲೂ ನದಿಪಾತ್ರದ ಜನರಿಗೆ ಯಾವುದೇ ತೊಂದರೆ ಆಗಿರುವುದಿಲ್ಲ. ಕ್ರಸ್ಟ್ ಗೇಟ್‌ನ್ನು ಪರಿಶೀಲಿಸಿ ಶೀಘ್ರ ರಿಪೇರಿ ಮಾಡಲು ತಜ್ಞರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದ್ದಾರೆ.
More Stories
40 ಕಿ.ಮೀ ಉದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ : DC ಎಂ.ಎಸ್.ದಿವಾಕರ್
ಎಸ್.ಸಿ., ಎಸ್.ಟಿ ಕಲ್ಯಾಣ ಸಮಿತಿ ಸಭೆಗೆ ಸ್ಪಷ್ಟವಾಗಿ ಮಾಹಿತಿ ಒದಗಿಸಿ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ15 ಶಿಕ್ಷಕರು ಆಯ್ಕೆ