https://youtu.be/NHc6OMSu0K4?si=SI_K4goOPEgwo6h2
ಶೈಕ್ಷಣಿಕ ಪ್ರಗತಿಗಾಗಿ ಅಕ್ಷರ ಆವಿಷ್ಕಾರ
ಹಂಪಿ ಟೈಮ್ಸ್ ಹೊಸಪೇಟೆ
ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಗುಣಾತ್ಮಕ ಶಿಕ್ಷಣ ನೀಡಲು ಪ್ರಮುಖ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಅರ್ಹ 872 ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನಿಂದ 1ನೇ ತರಗತಿಯಿಂದಲೆ ಮಕ್ಕಳಿಗೆ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳನ್ನು ಪ್ರಾರಂಭಿಸಲು ಆದೇಶಿಸಿದೆ ಎಂದು ಶಾಲಾ ಶಿಕ್ಷ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ ಎಸ್. ಅವರು ತಿಳಿಸಿದ್ದಾರೆ.
ಬೀದರ-97, ಬಳ್ಳಾರಿ-119, ಕಲಬುರಗಿ-165, ಕೊಪ್ಪಳ-109, ರಾಯಚೂರು-176, ವಿಜಯನಗರ-134 ಹಾಗೂ ಯಾದಗಿರಿ-72 ಸೇರಿ ಒಟ್ಟಾರೆ 872 ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಯಿಂದ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತದೆ. ಅಲ್ಲದೆ ಪ್ರದೇಶದ 7 ಜಿಲ್ಲೆಗಳ ಆಯ್ದ 872 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳನ್ನು ಪ್ರಾರಂಭಕ್ಕೆ ಶಾಲಾ ಹಂತದಲ್ಲಿಯೆ ನಿಯಮಾನುಸಾರ ಅತಿಥಿ ಶಿಕ್ಷಕರ ನೇಮಕಾತಿ ಸಹ ನಡೆಯಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿರುವ ಶಾಲೆಗಳ ಸಂಖ್ಯೆ ನೋಡಿದಾಗ ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು 1,291 ಶಾಲೆಗಳಿದ್ದರೆ, ಕಲಬುರಗಿ ವಿಭಾಗದಲ್ಲಿ ಅತೀ ಕಡಿಮೆ 418 ಶಾಲೆಗಳಿವೆ. ಉಳಿದಂತೆ ಮೈಸೂರು, ಧಾರವಾಡ ವಿಭಾಗದಲ್ಲಿ ಕ್ರಮವಾಗಿ 871 ಮತ್ತು 503 ಶಾಲೆಗಳಿವೆ. ಇಲ್ಲಿ ಪ್ರತಿ 1 ಲಕ್ಷ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ನೋಡಿದಾಗ ಮೈಸೂರು-139, ಬೆಂಗಳೂರು-129, ಧಾರವಾಡ-36 ಕಲಬುರಗಿ-33 ಶಾಲೆಗಳಿವೆ ಎಂದು ಅವರು ಅಂಕಿ ಸಂಖ್ಯೆ ಮಾಹಿತಿ ನೀಡಿದರು.
ಅದೇ ರೀತಿ ಇತ್ತೀಚಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಅವಲೋಕಿಸಿದಾಗ, ಮೊದಲ 10 ಸ್ಥಾನಗಳು ಧಾರವಾಡ ವಿಭಾಗದ ಶಿರಸಿ, ಕಾರವಾರ ಹೊರತುಪಡಿಸಿದರೆ ಉಳಿದವೆಲ್ಲ ಬೆಂಗಳೂರು, ಮೈಸೂರು ವಿಭಾಗದ ಜಿಲ್ಲೆಗಳಿವೆ. ಅಗ್ರ 10 ಜಿಲ್ಲೆಗಳಲ್ಲಿ ಪ್ರತಿ 1 ಲಕ್ಷ ಮಕ್ಕಳಿಗೆ ಕನಿಷ್ಠ 100 ರಿಂದ ಗರಿಷ್ಠ 200 ಶಾಲೆಗಳಿದ್ದು, ಪ್ರತಿ ಶಾಲೆ ಮೇಲೆ ಅವಲಂಭಿತ ಮಕ್ಕಳ ಸಂಖ್ಯೆ 600 ರಿಂದ 700 ರಷ್ಟಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಕಡೆ ದೃಷ್ಟಿ ಹಾಯಿಸಿದಾಗ ಪ್ರತಿ 1 ಲಕ್ಷ ಮಕ್ಕಳಿಗೆ 40ಕ್ಕಿಂತ ಕಡಿಮೆ ಶಾಲೆಗಳಿದ್ದು, ಪ್ರತಿ ಶಾಲೆ ಮೇಲೆ ಅವಲಂಭಿತ ಮಕ್ಕಳ ಸಂಖ್ಯೆ 2 ರಿಂದ 4 ಸಾವಿರ ಎಂಬುದು ಗಮನಾರ್ಹ. ಶಾಲೆ ಕಡಿಮೆ ಮಕ್ಕಳ ಹೆಚ್ಚು ಎಂದಾಗ ಸಹಜವಾಗಿಯೆ ಕಲ್ಯಾಣ ಕರ್ನಾಟಕ ವಿಭಾಗದ ಮಕ್ಕಳು ಆಂಗ್ಲ ಬೋಧನೆ ಕೊರತೆಯಿಂದ ಫಲಿತಾಂಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರು, ಮೈಸೂರು ವಿಭಾಗವು ಅತಿ ಹೆಚ್ಚು ದ್ವಿಭಾಷಾ ಬೋಧನೆ ಶಾಲೆ ಹೊಂದಿರುವುದರಿಂದ ಅಲ್ಲಿ ಉತ್ತಮ ಫಲಿತಾಂಶ ಕಾಣಲಾಗುತ್ತಿದೆ. ಇದೀಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ದ್ವಿಭಾಷಾ ಶಾಲೆ ಹೆಚ್ಚಾದಲ್ಲಿ ಮಕ್ಕಳಿಗೆ ಸಮಾನ ಅವಕಾಶ, ಕಲಿಕೆ ನೀಡಿದಂತಾಗುತ್ತದೆ. ಇದರಿಂದ ಈ ಭಾಗದ ಫಲಿತಾಂಶದಲ್ಲಿಯೂ ಸುಧಾರಣೆಯಾಗಲಿದೆ ಎಂದು ಡಾ.ಆಕಾಶ ಎಸ್. ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
“ಅಕ್ಷರ ಆವಿಷ್ಕಾರ” ಸಹಕಾರಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರ ಕನಸಿನ ಯೋಜನೆ “ಅಕ್ಷರ ಆವಿಷ್ಕಾರ” ಕಾರ್ಯಕ್ರಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ದ್ವಿಭಾಷಾ ಬೋಧನೆ ಪದ್ದತಿಗೆ ನೀರೆರೆದು ಪೋಷಿಸಲಿದೆ. ಇದರಿಂದ ಶೈಕ್ಷಣಿಕವಾಗಿ ಹಿಂದುಳಿದ ಕಲಬುರಗಿ ಪ್ರದೇಶದ ಗ್ರಾಮೀಣ ಭಾಗದ ಬಡ ಮಕ್ಕಳು ಮಾತೃ ಭಾಷೆ ಕನ್ನಡದ ಜೊತೆ ಆಂಗ್ಲ ಕಲಿಕೆಯ ಸೌಲಭ್ಯ ಪಡೆಯಲಿದ್ದಾರೆ.
More Stories
ಕಾಂಗ್ರೆಸ್ ಅನ್ನಪೂರ್ಣಮ್ಮಗೆ ಗೆಲುವು ನಿಶ್ಚಿತ : ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಅಭಿಮತ
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ