December 5, 2024

Hampi times

Kannada News Portal from Vijayanagara

ಇಂದಿರಾ ನಗರದ ದುಸ್ಥಿತಿ ಕಂಡು ರಾಷ್ಟ್ರೀಯ  ಆಯೋಗದ ಅಧ್ಯಕ್ಷ ತೀವ್ರ ಅಸಮಾಧಾನ

 

https://youtu.be/NHc6OMSu0K4?si=SI_K4goOPEgwo6h2

ಸಫಾಯಿ ಕರ್ಮಚಾರಿ ರಾಷ್ಟ್ರೀಯ  ಆಯೋಗದ ಅಧ್ಯಕ್ಷರಿಂದ ಕ್ಷೇತ್ರ ಭೇಟಿ
ಹಂಪಿ ಟೈಮ್ಸ್ ಹೊಸಪೇಟೆ
ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲು ಜೂನ್ 14ರಂದು ವಿಜಯನಗರ ಜಿಲ್ಲೆಯ ಪ್ರವಾಸದಲ್ಲಿದ್ದ ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದ ಎಂ.ವೆಂಕಟೇಶನ್ ಅವರು ಪೂರ್ವ ನಿಗದಿಯಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಪೂರ್ವದಲ್ಲಿ ಹೊಸಪೇಟೆ ನಗರದಲ್ಲಿ ಕ್ಷೇತ್ರ ಭೇಟಿ ನಡೆಸಿದರು.
ಮೊದಲಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಹತ್ತಿರದ ಇಂದಿರಾ ನಗರಕ್ಕೆ ಭೇಟಿ ನೀಡಿದರು. ಅಲ್ಲಿನ ನಿವಾಸಿಗಳ ಮನವಿಯಂತೆ ಸಣ್ಣ ಕಾಲುವೆಯೊಂದರ ಈಗಿನ ಸ್ಥಿತಿಗತಿಯ ಪರಿಶೀಲನೆಗೆ ಮುಂದಾದರು. ಆ ಕಾಲುವೆ ನೋಡಲು ಅಧ್ಯಕ್ಷರು ಇಕ್ಕಟ್ಟಾದ ಸಂದಿಯಲ್ಲಿ ನಡೆದು ಹೋದರು. ಆ ಕಾಲೋನಿಯಲ್ಲಿ ಸಾಲಾಗಿರುವ ಮನೆಗಳು ಆ ಮನೆಗಳಿಗೆ ಅಂಟಿಕೊಂಡಿದ್ದ ಆ ಇಕ್ಕಟ್ಟಾದ ಕಾಲುವೆಯನ್ನು ವೀಕ್ಷಿಸಿದರು. ಮಳೆ ಬಂದ ವೇಳೆಯಲ್ಲಿ ಈ ಇಕ್ಕಟ್ಟಾದ ಕಾಲುವೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆಯಾಗುತ್ತಿದೆ. ನೀರು ಶೌಚಾಲಯಕ್ಕು ಹರಿದು ಶೌಚ ಮಾಡುವುದು ಕಷ್ಟವಾಗುತ್ತಿದೆ ಎಂದು ಅಲ್ಲಿನ ಮಹಿಳೆಯರು ಒಬ್ಬೊಬ್ಬರಾಗಿ ತಮ್ಮ ಅಳಲನ್ನು ತೋಡಿಕೊಂಡರು.

ಅಧ್ಯಕ್ಷರು ಇದೆ ವೇಳೆ ಆ ಕಾಲುವೆ ಮೇಲೆ ಏರಿ ಅಲ್ಲಿನ ಸ್ಥಿತಿಗತಿಯ ವೀಕ್ಷಣೆ ನಡೆಸಿದರು. ಮನೆಯೊಳಗೆ ನೀರು ನುಗಿದ್ದನ್ನು ಕಂಡರು.  ಅಧ್ಯಕ್ಷರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮನೋಹರ ಮತ್ತು ನಗರಸಭೆಯ ಪೌರಾಯುಕ್ತರಾದ ಚಂದ್ರಪ್ಪ ಅವರೊಂದಿಗೆ ಚರ್ಚಿಸಿದರು. ಬಳಿಕ ಇಂದಿರಾ ನಗರದ ಕೆಲವೆಡೆ ಒಳಚರಂಡಿ ನೀರು ತುಂಬಿ ಅದು ರಸ್ತೆಯ ಮೇಲೆ ಹರಿಯುತ್ತಿರುವುದನ್ನು ಸಹ ವೀಕ್ಷಿಸಿದರು. ಈ ಕಾಲೋನಿಯ ಅವ್ಯವಸ್ಥೆಯನ್ನು ನೋಡಿ ಸುಮ್ಮನಿದ್ದೀರಾ ಎಂದು ಪೌರಾಯುಕ್ತರಿಗೆ ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಕೂಡಲೇ ಸರಿಪಡಿಸಬೇಕು ಎಂದು ಅಧ್ಯಕ್ಷರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದಿರಾ ನಗರದ ಭೇಟಿಯ ನಂತರ ಅಧ್ಯಕ್ಷರು ಗಾಂಧಿ ಕಾಲೋನಿಗೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ., ಸಹಾಯಕ ಆಯುಕ್ತರಾದ ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲಿಂ ಪಾಷಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದ್ದೀನ್, ನಗರಸಭೆಯ ಸಹಾಯಕ ಅಭಿಯಂತರರಾದ ಆರತಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಲತಾ ಸೇರಿದಂತೆ ಇನ್ನೀತರರು ಇದ್ದರು.

 

 

ಜಾಹೀರಾತು
error: Content is protected !!