https://youtu.be/NHc6OMSu0K4?si=SI_K4goOPEgwo6h2
ಅಧಿಕಾರಿಗಳ, ಜನಪ್ರತಿನಿಧಿಗಳ ತಾತ್ಸಾರದಿಂದ ಮುಗಿಯದ ಪೈಪ್‌ಲೈನ್ | ಎರಡು ದಶಕಗಳಿಂದ ತಪ್ಪದ ಟ್ಯಾಂಕರ್ ನೀರು ಪೂರೈಕೆ
ಹಂಪಿ ಟೈಮ್ಸ್ ಹೊಸಪೇಟೆ
ಶತಮಾನದ ಸಂಭ್ರಮ ಕಂಡ ಹೊಸಪೇಟೆ ನಗರಸಭೆಯು ನಗರದ 35 ವಾರ್ಡ್‌ಗಳ ಜನರಿಗೆ ಇಂದಿಗೂ ಸಮರ್ಪಕ ಕುಡಿಯುವ ನೀರು ಒದಗಿಸುವಲ್ಲಿ ಎಡವಿದೆ. ಈವರೆಗೂ ಆಡಳಿತ ನಡೆಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನೀರಿನ ಸಮಸ್ಯೆಗಳು ಜೀವಂತವಾಗಿವೆ ಎಂಬುದಕ್ಕೆ ಭಾನುವಾರ ನೀರಿಗಾಗಿ ಹಾಲಿ-ಮಾಜಿ ಶಾಸಕರ ನಡುವೆ ನಡೆದ ಹಗ್ಗ ಜಗ್ಗಾಟವೇ ಸಾಕ್ಷಿಯಾಗಿದ್ದು, ಜನಪ್ರತಿನಿಧಿಗಳ ಸ್ವಪ್ರತಿಷ್ಠೆಯ ಹೋರಾಟದ ನಡುವೆ ಜನಸಾಮಾನ್ಯರು ನಿತ್ಯ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ನಗರಸಭೆ ವ್ಯಾಪ್ತಿಯ ಚಿತ್ತವಾಡ್ಗಿ ಪ್ರದೇಶದಲ್ಲಿರುವ ಶುದ್ಧನೀರು ಸಂಸ್ಕರಣದ ಘಟಕದಿಂದ ವಿಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಮತ್ತು ನೀರಿನ ಬೇಡಿಕೆ ಇರುವ ಕಡೆ ಮಾಜಿ ಸಚಿವ ಆನಂದಸಿಂಗ್ ಅವರು ತಮ್ಮ ಸ್ವಂತ ನೀರಿನ ಟ್ಯಾಂಕರ್‌ಗಳ ಮೂಲಕ ಕಳೆದೆರಡು ದಶಕಗಳಿಂದ ಉಚಿತವಾಗಿ ನೀರು ಕಳಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಮಾಜಿ ಶಾಸಕರ ಖಾಸಗಿ ವಾಹನದ ಮೂಲಕ ಗ್ರಾಮದ ಜನರಿಗೆ ನೀರು ಪೂರೈಸಿ, ಅಧಿಕಾರವಿಲ್ಲದಿದ್ದರೂ ನೀರು ಪೂರೈಸುತ್ತಿದ್ದಾರೆ ಎಂಬ ವೀಡಿಯೊವೊಂದು ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ಕುಪಿತಗೊಂಡವರು ಕೂಡಲೇ ನಗರಸಭೆ ಅಧಿಕಾರಿಗಳಿಗೆ ಖಾಸಗಿ ವಾಹನಗಳಿಗೆ ನಗರಸಭೆಯ ನೀರು ನೀಡದಂತೆ ಮೌಖಿಕ ಆದೇಶ ರವಾನಿಸಿದ್ದಾರೆ. ಮೌಖಿಕ ಆದೇಶ ಪಾಲನೆಗೆ ಮುಂದಾದ ಪೌರಾಯುಕ್ತರನ್ನು ನಗರಸಭೆ ಅಧ್ಯಕ್ಷರು, ಸದಸ್ಯರು ಮತ್ತು ಮಾಜಿ ಶಾಸಕ ಆನಂದಸಿಂಗ್ ತರಾಟೆಗೆ ತೆಗೆದುಕೊಂಡರು.
ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಎರಡು ದಶಕಗಳಿಂದ ನೀರು ಪೂರೈಸುತ್ತಾ ಬಂದಿದ್ದೇವೆ. ದಿಢೀರನೆ ನೀರು ಕೊಡುವುದಿಲ್ಲ ಎನ್ನುವುದೇಕೆ? ನಾವೇನು ಹೊಲ, ತೋಟಕ್ಕೆ ಬಳಸುತ್ತೇವೆಯೋ? ಜನರಿಗೆ ತಲುಪಿಸುತ್ತಿದ್ದೇವೆ ಎಂದು ಮಾಜಿ ಶಾಸಕ ಆನಂದಸಿಂಗ್ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು.
ಸರ್ಕಾರದ ನಿಯಮಗಳನ್ನು ಪಾಲಿಸಬೇಕೋ, ಹಾಲಿ-ಮಾಜಿ ಜನಪ್ರತಿನಿಧಿಗಳ ಮೌಖಿಕ ಮಾತುಗಳನ್ನು ಪಾಲಿಸಬೇಕೋ ಎಂಬುದು ತಿಳಿಯದಂತಾದ ಪೌರಾಯುಕ್ತ ಚಂದ್ರಪ್ಪ ಅವರು, ಖಾಸಗಿ ವಾಹನಗಳ ಮೂಲಕ ನೀರನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಿಗೆ ನೀರು ಕೊಡುವುದಿಲ್ಲ. ನಗರಸಭೆ ವಾಹನಗಳಿಂದಲೇ ನೀರು ಪೂರೈಸುತ್ತೇವೆ ಎಂದು ಪೌರಾಯುಕ್ತರು ಮಾಜಿ ಶಾಸಕ ಆನಂದಸಿಂಗ್ ಅವರಿಗೆ ಹೇಳುತ್ತಿದ್ದಂತೆ, ಸದಸ್ಯರು, ಮಾಜಿ ಶಾಸಕರು ಮತ್ತು ಬೆಂಬಲಿಗರು ಅಧಿಕಾರಿ ಹೇಳಿಕೆ ವಿರುದ್ಧ ದಿಕ್ಕಾರ ಕೂಗಿದರು.
ಸ್ಥಳದಲ್ಲೇ ಮಾಜಿ ಸಚಿವ ಆನಂದಸಿಂಗ್ ಅವರು ಶಾಸಕ ಗವಿಯಪ್ಪನವರಿಗೆ ಫೋನ್ ಮಾಡಿ ಮಾತನಾಡಿದಾಗ, ಗವಿಯಪ್ಪನವರ ಏರುಧ್ವನಿಗಳು ಆನಂದಸಿಂಗ್ ಅವರನ್ನು ಕೆರಳಿಸಿದವು. ಪ್ರಜಾಪ್ರುಭತ್ವದಲ್ಲಿ ನ್ಯಾಯ ಕೇಳುವ ಹಕ್ಕು ಎಲ್ಲರಿಗೂ ಇದೆ. ನೀರು ಕೊಡುವುದಿಲ್ಲ ಎಂದರೆ ಬಿಡುವುದಿಲ್ಲ. ನನ್ನ ಮನೆಯನ್ನು ಜಿಂದಾಲ್ ನವರು ಕಟ್ಟಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಸಚಿವರ ಮುಂದೆ ಹೇಳಿದ್ದೀರಿ, ಸಾಯಿಬಾಬ ಮೇಲೆ ನೀವು ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡುವೆ ಎಂದು ಕೆಲ ನಿಮಿಷ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಖಾಸಗಿ ವಾಹನಗಳಿಗೆ ನೀರು ಕೊಡುವುದಿಲ್ಲ ಎಂಬ ಶಾಸಕ ಗವಿಯಪ್ಪನವರ ಮಾತನ್ನು ವಿರೋಧಿಸಿ ಬೀದಿಯಲ್ಲಿ ಕುಳಿತು ನೀರಿಗಾಗಿ ಪ್ರತಿಭಟನೆ ನಡೆಸಿದರು. ಅಧಿಕಾರವಿದ್ದ ನಗರಸಭೆ ಸದಸ್ಯರು ನಗರಸಭೆ ಸಭಾಂಗಣದಲ್ಲೇ ಪೌರಾಯುಕ್ತರಿಗೆ ನಿರ್ದೇಶನ ನೀಡುವ ಮೂಲಕ ಅಧಿಕಾರ ಚಲಾಯಿಸುವ ಬದಲು ಅಧಿಕಾರವುಳ್ಳವರೇ ಬೀದಿಗಿಳಿದು ನಡೆಸಿದ ಹೋರಾಟ ಹೈಡ್ರಾಮವೆನಿಸಿತು.
ಪೌರಾಯುಕ್ತರು ಮಾತನಾಡಿ, ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳಿಗೆ ನೀರು ಕೊಡುವುದಿಲ್ಲ. ಈಗಾಗಲೇ ಕೆಲ ಖಾಸಗಿ ಟ್ಯಾಂಕರ್‌ಗಳನ್ನು ಟೆಂಡರ್ ಮೂಲಕ ಪಡೆದಿದ್ದು, ಅವುಗಳ ಮೂಲಕ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಕಳಿಸುತ್ತೇವೆ. ದಿನಕ್ಕೆ ಒಟ್ಟು 38 ಟ್ಯಾಂಕ್ ನೀರು ಪೂರೈಸಲಾಗುತ್ತಿದೆ. ಇನ್ನೂ ಹೆಚ್ಚು ಅಗತ್ಯವೆನಿಸಿದರೆ ಮತ್ತಷ್ಟು ಟೆಂಡರ್ ಮೂಲಕ ಟ್ಯಾಂಕರ್ ಪಡೆದು ನೀರು ಪೂರೈಸುತ್ತೇವೆ ಎಂದರು. ಕೊನೆಗೆ ಆನಂದಸಿಂಗ್ ಅವರ ಟ್ಯಾಂಕರ್‌ಗಳಿಗೆ ನೀರು ಬಿಟ್ಟಿದ್ದರಿಂದ ಮಾಜಿ ಶಾಸಕ, ಸದಸ್ಯರು ಪ್ರತಿಭಟನೆ ಕೈಬಿಟ್ಟರು.
ಜನರ ಒತ್ತಾಯ:
ನಗರದ ಮನೆ ಮನೆಗೆ ನೀರು ಪೂರೈಸಲೆಂದೇ ಈಗಾಗಲೇ ಕೋಟ್ಯಾಂತರ ರೂ ವೆಚ್ಚದಲ್ಲಿ 24/7 ನೀರು ಪೂರೈಸಲು ಪೈಪ್ ಲೈನ್ ಮಾಡಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಬೇಕಾಬಿಟ್ಟಿ ಕಾಮಗಾರಿಗಳಿಂದಾಗಿ ಜನರ ತೆರಿಗೆ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತೆ ಖರ್ಚು ಮಾಡುತ್ತಲಿದ್ದಾರೆ. ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಿದರೆ ಟ್ಯಾಂಕರ್‌ಗಳ ಕಿತ್ತಾಟವೂ ಇಲ್ಲದಂತಾಗುತ್ತದೆ. ಇಂದಿಗೂ ಅಸಮರ್ಪಕ ಪೈಪ್‌ಲೈನ್ ಮೂಲಕ ಕುಡಿಯುವ ನೀರನ್ನು ಪೂರೈಸಿ, ಜನರ ಜೀವದ ಜೊತೆ ಆಡುವ ಚೆಲ್ಲಾಟಕ್ಕೆ ಕೊನೆಇಲ್ಲದಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಟ್ಯಾಂಕರ್ ನೀರು ಪೂರೈಕೆಗಿಂತ ಪೈಪ್‌ಲೈನ್ ಮೂಲಕ ಮನೆ ಮನೆಗೆ ನೀರು ಪೂರೈಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ