https://youtu.be/NHc6OMSu0K4?si=SI_K4goOPEgwo6h2
- ವೀಣಾ ಹೇಮಂತ್ ಗೌಡ ಪಾಟೀಲ್,
ಅನಾಥಾಲಯವೊಂದರಲ್ಲಿ ಓದುತ್ತಿರುವ ನಿಯತಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ, ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಇಡೀ ದೇಶಕ್ಕೆ ಮೊದಲಿಗಳಾಗಿ ನಗರದ ಅತ್ಯಂತ ಪ್ರತಿಷ್ಠಿತ ಶಾಲೆಗೆ ಆಯ್ಕೆಯಾದಳು. ವಿದೇಶಿ ಕಾರುಗಳಲ್ಲಿ ಆ ಶಾಲೆಗೆ ಬರುತ್ತಿದ್ದ ಇತರ ವಿದ್ಯಾರ್ಥಿಗಳು ಈಕೆಯ ಬುದ್ಧಿಮತ್ತೆಯನ್ನು ಕಂಡು ವಿಸ್ಮಿತರಾದರು. ಈಕೆಯ ಜೊತೆಗೆ ಆಕೆಯ ಇನ್ನೋರ್ವ ಸ್ನೇಹಿತ ಆಕಾಶ್ ಕೂಡ ಅದೇ ಶಾಲೆಗೆ ಆಯ್ಕೆಯಾಗಿದ್ದ.
ಮೊದಲ ತರಗತಿಯಲ್ಲಿಯೇ ಚವಿ ಎಂಬ ಶ್ರೀಮಂತ ಹುಡುಗಿಗೆ ಲೆಕ್ಕವನ್ನು ಬಿಡಿಸಲು ಸಹಾಯ ಮಾಡಿದ ನಿಯತಿಯನ್ನು ತನ್ನ ಮನೆಗೆ ಕರೆದೊಯ್ದ ಚವಿ ತನಗೆ ಓದಿನಲ್ಲಿ ಸಹಾಯ ಮಾಡಲು ಕೇಳುತ್ತಾಳೆ. ಕನಿಷ್ಠ 80 ಪರ್ಸೆಂಟ್ ಅಂಕಗಳನ್ನು ಪಡೆದು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯುವ ಮಹತ್ವಕಾಂಕ್ಷೆ ಆಕೆ ಮತ್ತು ಆಕೆಯ ತಂದೆಯದ್ದು. ಪರೀಕ್ಷೆಗಳಲ್ಲಿ ನಿಯತಿ ಆಕೆಗೆ ಸಹಾಯ ಮಾಡುವ ಮೂಲಕ ಆಕೆ 91 ಶೇಕಡ ಅಂಕಗಳನ್ನು ಗಳಿಸುತ್ತಾಳೆ. ಮೊದಮೊದಲು ಸಣ್ಣಪುಟ್ಟ ಅವಶ್ಯಕತೆಗಳಿಗೆ ಅನಾಥಾಲಯದ ಮಕ್ಕಳ ಜೊತೆ ಪಾರ್ಟಿ ಮಾಡಲು ದುಡ್ಡಿಗಾಗಿ ಒಂದಿಬ್ಬರಿಗೆ ಪರೀಕ್ಷೆಗಳಲ್ಲಿ ಈ ರೀತಿಯ ಸಹಾಯ ಮಾಡಿದ್ದಳು ನಿಯತಿ. ಇದೀಗ ಸ್ನೇಹವನ್ನು ಉಳಿಸಿಕೊಳ್ಳಲು ಭಿಡೆಗೆ ಬಿದ್ದು ಆಕೆ ಚವಿಗೆ ಸಹಾಯ ಮಾಡಿರುತ್ತಾಳೆ ಚವಿ. ಮತ್ತು ಆಕೆಯ ಸ್ನೇಹಿತರು ನಿಯತಿಗೆ ಧನ ಸಹಾಯ ಮಾಡುತ್ತಾರೆ.
ಇತ್ತ ಹೆಚ್ಚಿನ ಅಂಕಗಳನ್ನು ಗಳಿಸಿದ ಆಕಾಶ ಮತ್ತು ನಿಯತಿ ಇಬ್ಬರಿಗೂ ಶಾಲೆಯ ಪ್ರಿನ್ಸಿಪಾಲ್ ಕರೆದು ಆಕ್ಸ ಫರ್ಡ್ ಯುನಿವರ್ಸಿಟಿಯ ಸ್ಕಾಲರ್ಶಿಪ್ ಪರೀಕ್ಷೆಗೆ ತಯಾರಾಗಲು ಹೇಳುತ್ತಾರೆ.
25 ಜನ ಮಕ್ಕಳ ಬದಲಾಗಿ 50 ಮಕ್ಕಳನ್ನು ಅನಾಥಾಶ್ರಮದಲ್ಲಿ ಇಟ್ಟುಕೊಂಡಿದ್ದ ಅನಾಥಾಶ್ರಮದ ದಂಪತಿಗಳಿಗೆ ಉಂಟಾದ ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ನಿಯತಿಯು ಚವಿ ಮತ್ತು ಆಕೆಯ ಸ್ನೇಹಿತರಿಗೆ ಸಹಾಯ ಮಾಡುವುದಾಗಿ ಒಪ್ಪಿಕೊಂಡಳು. ಎರಡನೇ ಮತ್ತು ಮೂರನೇ ಟರ್ಮ್ ನ ಪರೀಕ್ಷೆಗಳಲ್ಲಿ ಸಹಾಯ ಮಾಡಿದಳು. ಆದರೆ ಚಿಕ್ಕಂದಿನಿಂದ ಜವಿ ಮತ್ತು ಆಕೆಯ ಸ್ನೇಹಿತರ ಶೈಕ್ಷಣಿಕ ಪ್ರಗತಿಯನ್ನು ಬಲ್ಲ ಶಿಕ್ಷಕರು ಕೊಂಚ ಅನುಮಾನಗೊಂಡು ಮೂರನೇ ಬಾರಿ ಎರಡೆರಡು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ನೀಡಿದರು. ತನ್ನ ಪ್ರಶ್ನೆಪತ್ರಿಕೆಯನ್ನು ಪೂರೈಸಿದ ನಿಯತಿ ಶಿಕ್ಷಕರ ಕಣ್ತಪ್ಪಿಸಿ ಕವಿಯ ಪ್ರಶ್ನೆ ಪತ್ರಿಕೆಯನ್ನು ಬಿಡಿಸುತ್ತಾಳೆ. ಇದು ಆಕಾಶ್ನ ಗಮನಕ್ಕೆ ಬಂದು ಆತ ಪ್ರಿನ್ಸಿಪಾಲರಿಗೆ ಈ ವಿಷಯದ ಕುರಿತು ದೂರು ನೀಡುತ್ತಾನೆ.ಆಕೆ ಓದುತ್ತಿದ್ದ ಕಾಲೇಜಿನ ಪ್ರಿನ್ಸಿಪಾಲ್ ಆಕೆಗೆ ಆಕ್ಸ್ಫರ್ಡ್ ಗೆ ಹೋಗುವ ಪ್ರವೇಶ ಪರೀಕ್ಷೆ ಬರೆಯಲು ಇದ್ದ ಅವಕಾಶವನ್ನು ನಿರಾಕರಿಸುವ ಮೂಲಕ ಆಕೆಯನ್ನು ಶಿಕ್ಷೆ ವಿಧಿಸುತ್ತಾರೆ. ಈ ವಿದ್ಯಮಾನಗಳಿಂದ ಆಕೆಯನ್ನು ಸಾಕುತ್ತಿದ್ದ ಅನಾಥಾಶ್ರಮದ ಮಾಲೀಕರು ಕೋಪಗೊಂಡರಲ್ಲದೇ ಮುಂದೆ ಈ ರೀತಿಯ ತಪ್ಪೆಸಗದಂತೆ ತಾಕೀತು ಮಾಡಿದರು.
ಪ್ರಿನ್ಸಟನ್ ಕಾಲೇಜಿನ ಆಕೆಯ ಸ್ನೇಹಿತರೆಲ್ಲ ಸೇರಿ ನಿಯತಿ ಮತ್ತು ಆಕಾಶಗೆ ವಿದೇಶದಲ್ಲಿ ಪರೀಕ್ಷೆ ಬರೆಯಲು ತಾವು ಹಣ ಸಹಾಯ ಮಾಡುವುದಾಗಿಯೂ ಬದಲಾಗಿ ತಮ್ಮ ಪರೀಕ್ಷೆಗೆ ಸಹಾಯ ಮಾಡಲು ಕೇಳಿಕೊಂಡರು. ಈಗಾಗಲೇ ಇವರ ಕೃತಕ ಜಾಲದಲ್ಲಿ ಆಕಾಶ್ ಕೂಡ ಸಿಕ್ಕಿಬಿದ್ದು ಪರೀಕ್ಷೆ ಬರೆಯಲಾಗದೆ ಹೋಗಿದ್ದ. ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ಕಾಲಾವಧಿ ಇರುವುದನ್ನು ತಮಗೆ ಅನುಕೂಲಕರವಾಗಿ ಭಾವಿಸಿ ಆಕಾಶ್ ಮತ್ತು ನಿಯತಿ ಆಸ್ಟ್ರೇಲಿಯಾದಲ್ಲಿ ಪರೀಕ್ಷೆ ಬರೆದರು. ಒಟ್ಟು ಮೂರು ಪರೀಕ್ಷೆಗಳನ್ನು ಬರೆಯಬೇಕಾದ ಆ ಸಂದರ್ಭದಲ್ಲಿ ಪರೀಕ್ಷಾ ಹಾಲ್ ಪ್ರವೇಶಿಸುವ ಮುನ್ನ ಅಲ್ಲಿಯೇ ಇದ್ದ ಟಾಯ್ಲೆಟ್ನೊಳಗೆ ತಮ್ಮ ಮೊಬೈಲ್ ಫೋನನ್ನು ಬಚ್ಚಿಟ್ಟು ತಮ್ಮ ಪರೀಕ್ಷೆ ಬರೆದು ಪೂರೈಸಿದ ಕೂಡಲೇ ಓಡುತ್ತಾ ಮತ್ತೆ ಟಾಯ್ಲೆಟ್ ಗೆ ಬಂದು ತಾವು ಬರೆದ ಉತ್ತರಗಳನ್ನು ಸಾಂಕೇತಿಕವಾಗಿ ಹಾಕಲು ಪ್ರಯತ್ನಿಸಿದರು. ಆದರೆ ಇವರ ಚರ್ಯೆಯಿಂದ ಅನುಮಾನಗೊಂಡ ಪರೀಕ್ಷಾ ಹಾಲ್ ನ ಮೇಲ್ವಿಚಾರಕರು ಆಕಾಶ್ ನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ಮರುದಿನ ಬಿಡುಗಡೆ ಮಾಡಿದರೆ, ನಿಯತಿಯನ್ನು ಸಂಪೂರ್ಣ ನಗ್ನಗೊಳಿಸಿ ಪರೀಕ್ಷೆ ಮಾಡಿದರು. ಇದರಿಂದ ಮಾನಸಿಕವಾಗಿ ಅತ್ಯಂತ ಕುಸಿದು ಹೋದ ನಿಯತಿ ಮರಳಿ ಭಾರತಕ್ಕೆ ಬಂದಳು. ಆಕೆಯನ್ನು ಅದೆಷ್ಟೇ ಚವಿ ಮತ್ತು ಸ್ನೇಹಿತರು ಮಾತನಾಡಿಸಲು ಬಂದರೂ ನಿಯತಿ ಅವರತ್ತ ತಿರುಗಿಯೂ ನೋಡದೆ ಅನಾಥಾಶ್ರಮವನ್ನು ಸೇರಿದಳು. ಏನೊಂದೂ ಮಾತನಾಡದೆ ಮೌನವಾಗುಳಿದ ನಿಯತಿ ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ಕಲಿಯಲು ಆಯ್ಕೆಯಾದ ಪತ್ರ ಇಡೀ ಅನಾಥಾಶ್ರಮದ ಮಕ್ಕಳಲ್ಲಿ ಸಂತಸದ ಕಲರವವನ್ನು ಎಬ್ಬಿಸಿತು.
ಇನ್ನೇನು ಕೆಲವೇ ದಿನಗಳಲ್ಲಿ ಓದಲು ವಿದೇಶಕ್ಕೆ ಹಾರಲಿದ್ದ ನಿಯತಿ ತನ್ನನ್ನು ಸಾಕಿದ ಅನಾಥಾಶ್ರಮದ ಪಾಲಕರ ಮುಂದೆ ತಾನು ಮಾಡಿದ ತಪ್ಪನ್ನು ಮತ್ತು ಅದು ತನ್ನ ಮೇಲೆ ಬೀರಿದ ಪರಿಣಾಮವನ್ನು ಹೇಳಿ ಕ್ಷಮೆ ಕೇಳಿದಳು. ಇನ್ನು ಮುಂದೆ ಹೀಗಾಗದಂತೆ ತನ್ನನ್ನು ತಾನು ಸಂಭಾಳಿಸಿಕೊಳ್ಳುವ ಭರವಸೆಯನ್ನು ನೀಡಿದಳು. ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ ಅನಾಥಾಶ್ರಮದ ಪಾಲಕರು ಆಕೆಯನ್ನು ತಬ್ಬಿಕೊಂಡು ಸಮಾಧಾನ ಮಾಡಿದರು. ಅದಾದ ಒಂದೆರಡು ದಿನಗಳಲ್ಲಿ ಸ್ನೇಹಿತ ಆಕಾಶ್ ಆಕೆಯನ್ನು ಬಂದು ಭೇಟಿಯಾಗಿ ತಾನು ಮಾಡಿದ ತಪ್ಪಿನ ಅರಿವು ತನಗೆ ಆಗಿರುವುದಾಗಿಯೂ ಇನ್ನು ಮುಂದೆ ಹಾಗೆ ಮಾಡುವುದಿಲ್ಲ,ಮುಂದಿನ ವರ್ಷ ಮತ್ತೊಮ್ಮೆ ಪ್ರಯತ್ನಿಸುವುದಾಗಿ ಹೇಳಿದನು. ನಂತರ ತನ್ನ ಓದನ್ನು ಮುಂದುವರಿಸಲು ಪಾಲಕರನ್ನು ಬೀಳ್ಕೊಂಡ ನಿಯತಿ ವಿದೇಶಕ್ಕೆ ಪ್ರಯಾಣ ಬೆಳೆಸಿದಳು.
ಇದು ನಾನು ಇತ್ತೀಚೆಗೆ ನೋಡಿದ ಫರ್ರೇ ಎಂಬ ಚಲನಚಿತ್ರದ ಕಥೆ…. ಫರ್ರೇ ಎಂದರೆ ಕಾಪಿ ಚೀಟಿ ಎಂದರ್ಥ. ಕ್ಷಣಿಕ ಆಸೆಗೆ ಬಲಿಯಾಗಿ ಪ್ರತಿಭಾವಂತ ಮಕ್ಕಳು ಶ್ರೀಮಂತ ಮಕ್ಕಳ ಜಾಲದಲ್ಲಿ ಸಿಲುಕಿದಾಗ ಅನುಭವಿಸುವ ತಾತ್ಕಾಲಿಕ ಸಂತೋಷಗಳನ್ನು ಬಹಳಷ್ಟು ತೊಂದರೆಗಳನ್ನು, ಈ ಚಲನಚಿತ್ರ ಕಣ್ಣಿಗೆ ಕಟ್ಟುವ ಹಾಗೆ ತೋರಿದೆ.
ತಪ್ಪು ಮಾಡೋದು ಸಹಜವಾದರೂ, ತಿದ್ದಿ ನಡೆಯುವುದು ಮನುಷ್ಯನ ಲಕ್ಷಣ. ಹದಿಹರೆಯದ ಹುಮ್ಮಸ್ಸಿನಲ್ಲಿ, ಇಲ್ಲಸಲ್ಲದ ತಪ್ಪುಗಳಿಗೆ ಕೈ ಹಾಕಿದಾಗ ಬದುಕು ಪಡೆದುಕೊಳ್ಳುವ ಅನಾಹುತಕಾರಿ ತಿರುವುಗಳು ನಮ್ಮನ್ನು ಶಾಶ್ವತವಾಗಿ ನಮ್ಮ ಗುರಿಯಿಂದ ವಿಮುಖಗೊಳಿಸಬಹುದು. ಎಲ್ಲರೂ ನಿಯತಿಯಷ್ಟು ಅದೃಷ್ಟವಂತರಾಗಿರುವುದಿಲ್ಲ. ಈ ನಿಷ್ಠುರ ಸತ್ಯ ‘ಫರ್ರೆ’ ಎಂಬ ಹಿಂದಿ ಚಲನಚಿತ್ರದಲ್ಲಿ ಅನಾವರಣಗೊಂಡಿದೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ