https://youtu.be/NHc6OMSu0K4?si=SI_K4goOPEgwo6h2
ಯುಗಾದಿಯ ವಿಶೇಷ ಪಾನಕ ನೀರ್ ಬೇವು
– ಲೀಲಾವತಿ ವಿಜಯಕುಮಾರ ಹ.ಬೊ.ಹಳ್ಳಿ
ಯುಗಾದಿ ಊಟಕ್ಕೆ ಹೋಳಿಗೆ, ಶ್ಯಾವಿಗೆ ಪಾಯಸ ವಿಶೇಷವಾದಂತೆ, ಪಾಡ್ಯದಂದು ಮಾಡುವ “ನೀರ್ ಬೇವು” ಸಹ, ತಯಾರಿಸಲೇ ಬೇಕಾದ ವಿಶೇಷ ಪಾನಕ. ’ಬೇವು ಬೆಲ್ಲ’ದಂತೆಯೇ ಕಡ್ಡಾಯ ಇದು.
ಆಂಧ್ರದಲ್ಲಿ, ಮಾವಿನಕಾಯಿ, ಉಪ್ಪು, ಬೆಲ್ಲ, ಬೇವಿನ ಸೊಪ್ಪು, ಚೂರು ಖಾರ ಸೇರಿಸಿ, ಮಾಡುವ”ಯುಗಾದಿ ಪಚಡಿ” ಇರಬಹುದು, ಅಥವಾ ಹುರಿಗಡಲೆ, ಬೆಲ್ಲ, ಬೇವಿನ ಹೂ ಅಥವಾ ಬೇವಿನೆಲೆಯೊಂದಿಗೆ ಮಾಡುವ ’ಬೇವುಬೆಲ್ಲ’, ಜೊತೆಗೆ, ಈಗ ನಾನು ತಯಾರಿಸಲು ಹೊರಟಿರುವ, “ಬೇವು ಅಥವಾ ನೀರ್ ಬೇವು”, ಯುಗಾದಿಯ ವಿಶೇಷ ಪಾನಕನೇ ಹೌದು. ಹೊಸ ಗಡಿಗೆಯಲ್ಲಿ(ದಿನವಿಡಿ ತಂಪಾಗಿರುವುದು ಎಂಬ ಕಾರಣದಿಂದ) ಯುಗಾದಿ ಪಾಡ್ಯದಂದು, ಶ್ಯಾವಿಗೆ ಪಾಯಸದೊಂದಿಗೆ ಕಡ್ಡಾಯವಾಗಿ ತಯಾರಿಸುವ, “ನೀರು ಬೇವು” ಇದ್ದರೆ ಮಾತ್ರವೇ ಹಬ್ಬ ಪರಿಪೂರ್ಣತೆ, ನಮ್ಮ ಊರಿನ ಭಾಗದಲ್ಲಿ. ಕರುನಾಡಿನ ಬೇರೆ ಬೇರೆ ಜಿಲ್ಲೆಯಲ್ಲಿ, ವಿವಿಧ ರೀತಿಯಲ್ಲಿ ನೀರ್ ಬೇವು ತಯಾರಿಸುವರು. ನಾನೀಗ ನಮ್ಮ ಊರಲ್ಲಿ ತಯಾರಿಸುವಂತೆ ಹೇಳಿದ್ದೇನೆ
ಬನ್ನಿ ಹಾಗಾದರೆ, ” ನೀರು ಬೇವು” ತಯಾರಿಸೋಣ:-
ಬೇಕಾಗುವ ಸಾಮಗ್ರಿಗಳು:-
(ಕಣ್ಣಂದಾಜಿನಲ್ಲಿ ಸಹ ಅಳತೆ ತೆಗೆದುಕೊಳ್ಳಬಹುದು )
ಒಂದು ಪಾತ್ರೆ ಅಥವಾ ಮಡಿಕೆಯಲ್ಲಿ ಮುಕ್ಕಾಲು ಭಾಗ ನೀರು
೧.ನೆನೆಸಿ ರಸ ತೆಗೆದ ಹುಣಸೆ ರಸ ಒಂದು ಬಟ್ಟಲು,
೨.ಒಂದು ಒಟ್ಟಲು ತುರಿದ ಗಿಟ್ಟುಗ ಕೊಬ್ಬರಿ
೩.ಬೆಲ್ಲ- ನೀರುಬೇವಿನ ರುಚಿಗೆ ತಕ್ಕಂತೆ
೪. ಮುಷ್ಠಿ ಕಲ್ಲುಸಕ್ಕರೆ, ೫. ಹನ್ನೆರಡು ಗೋಡಂಬಿ
೬. ಹನ್ನೆರಡು ಬಾದಾಮಿ, ೭. ಗೇರು/ಕೇರು ಬೀಜ
೮. ಒಣದಾಕ್ಷಿ, ೯. ಚಮಚ ಗಸಗಸೆ
೧೦. ಏಲಕ್ಕಿ ಕಾಯಿ, ೧೧. ಲವಂಗ
೧೨. ಜಾಜಿಕಾಯಿ, ೧೩. ಮಾವಿನಕಾಯಿ ಸ್ವಲ್ಪ
೧೪. ಚಮಚ ಹುರಿಗಡಲೆ ಹಿಟ್ಟು
೧೫.ಒಂದೆರಡು ಬಾಳೆಹಣ್ಣು, ೧೬.ಒಂದು ಬಟ್ಟಲು ದ್ರಾಕ್ಷಿ
೧೮.ಬೇವಿನ ಹೂ ಸ್ವಲ್ಪ, ೧೯. ಎಳೆನೀರು
೨೦. ತುರಿದ ಮಾವಿನಕಾಯಿ ಚಿಕ್ಕ ಬಟ್ಟಲು.
-: ನೀರು ಬೇವು ತಯಾರಿಸುವ ವಿಧಾನ:-
ಮೊದಲು ಪಾತ್ರೆಯ ನೀರಿಗೆ ಬೆಲ್ಲ ಹಾಕಿ ಕರಗಲು ಬಿಡಬೇಕು.
ಗಸಗಸೆ ಬೆಚ್ಚಗೆ ಮಾಡಬೇಕು. ನಂತರ ಮೇಲೆ ತಿಳಿಸಿದ ಕೊಬ್ಬರಿ, ಗೋಡಂಬಿ, ಬಾದಾಮಿ, ಗೇರು ಬೀಜ, ಬಿಸಿಮಾಡಿದ ಗಸಗಸೆ, ಏಲಕ್ಕಿ, ಲವಂಗ, ಚೂರು ಜಾಜಿಕಾಯಿ, ಈ ಎಲ್ಲಾ ದಿನಸಿಗಳನ್ನು ಒರಳು ಕಲ್ಲು ಅಥವಾ ಮಿಕ್ಸಿಯಲ್ಲಿ ಸಣ್ಣಗೆ ಮಾಡಿಕೊಳ್ಳಬೇಕು. ಈ ಎಲ್ಲಾ ಸಾಮಾಗ್ರಿಗಳು, ಬೆಲ್ಲ ಹಾಕಿಟ್ಟ ನೀರಿಗೆ ಜಾಸ್ತಿ ಆಗುವುದು ಎನಿಸಿದರೆ, ಸ್ವಲ್ಪ ಎತ್ತಿಡುವುದು. ನಂತರ ಸ್ವಲ್ಪ ನೀರು ಹಾಕಿ ರುಬ್ಬಿ, ಬೆಲ್ಲ ನೆನೆಯಲ್ಲಿಟ್ಟ ನೀರಿಗೆ ಹಾಕಿ, ಸೌಟಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಅದಕ್ಕೆ ಹಿಂಡಿಟ್ಟಿಕೊಂಡಿದ್ದ ಬಟ್ಟಲು ಹುಣಸೆ ರಸ, ಸಣ್ಣಗೆ ಕತ್ತರಿಸಿದ ಒಣ ದ್ರಾಕ್ಷಿ ಹಾಕಿ ಕಲಕಬೇಕು.ಎಳೆನೀರು ಸಹ ’ನೀರ್ ಬೇವಿ’ಗೆ ಹಾಕುವರು. ನಂತರ ಒಂದೆರಡು ಚಮಚ ಹುರಿಗಡಲೆ ಹಿಟ್ಟನ್ನು ಸ್ವಲ್ಪ ಥಿಕ್ನೆಸ್ ಗಾಗಿ, ನೀರಲ್ಲಿ ಕಲಕಿ ಸೇರಿಸಿಬೇಕು. ನಂತರ ತುರಿದ ಮಾವು, ಮುಖ್ಯವಾಗಿ ಬೇವಿನ ಹೂ ಸೇರಿಸಬೇಕು.ಈ ’ನೀರ್ ಬೇವು’ ತೀರಾ ಮಂದವಾಗಿ ಇರಬಾರದು, ತೀರಾ ನೀರು ನೀರಾಗಿ ಇರಬಾರದು. ಒಂದು ಸರಿಯಾದ ಹದದಲ್ಲಿರಬೇಕು. ನಂತರ ಚಿಟಿಕಿ ಉಪ್ಪು ಸೇರಿಸಿದರೆ, ’ನೀರ್ ಬೇವು ’ ತಯಾರಾಗುವುದು. ಈ ನೀರು ಬೇವಿಗೆ, ಬೆಲ್ಲ ಮತ್ತು ಹುಣಸೆ ಹುಳಿ ಹೆಚ್ಚು ಬೇಕಾಗುವುದು. ಯುಗಾದಿ ಪಾಡ್ಯದಂದು, ಪೂಜೆ, ನೈವೇದ್ಯದ ನಂತರ, ಅಕ್ಕಪಕ್ಕದ ಮನೆಗೆ ’ನೀರ್ ಬೇವು’ ವಿನಿಮಯವಾಗುವುದು. ಪ್ರತಿ ಮನೆಯ ಕೈ ರುಚಿಯೂ ವಿಭಿನ್ನವೆ. ಅಂದು ಮನೆಗೆ ಯಾರೇ ಅತಿಥಿಗಳು ಬಂದರೂ,’ ನೀರ್ ಬೇವಿನ’ ಆತಿಥ್ಯ. ಪಾಡ್ಯದಂದು ಊಟಕ್ಕಿಂತ ಈ ಪಾನಕದ ಸೇವನೆಯೇ ಹೆಚ್ಚಿರುವುದು. ಬೇಸಿಗೆಯ ಬೇಗೆಗೆ, ಆರೋಗ್ಯಕ್ಕೆ ಪೂರಕವಾದ, ಎಲ್ಲಾ ರಸಗಳಿಂದ ಕೂಡಿದ, ಈ ’ನೀರ್ ಬೇವು’ ಮನಸ್ಸು ಮತ್ತು ಶರೀರವನ್ನು ತಂಪಾಗಿಸುವುದು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ