https://youtu.be/NHc6OMSu0K4?si=SI_K4goOPEgwo6h2
“ಮೂಲ ನಕ್ಷತ್ರದಲ್ಲಿ ನಡೆಯುವ ರಥೋತ್ಸವ”.
ಲೀಲಾವತಿ ವಿಜಯಕುಮಾರ
ಅಂಕಸಮುದ್ರ
ಮಾಘ ಮಾಸದಿಂದ ಎಲ್ಲೆಲ್ಲೋ ಜಾತ್ರೆ-ರಥೋತ್ಸವದ ಸಂಭ್ರಮ-ಸಡಗರ. ಊರಿಗೆ ಊರೇ ಸುಣ್ಣ ಬಣ್ಣದಿಂದ ಸಿಂಗರಿಸಿಕೊಳ್ಳುವುದು. ಹೊಸಬಟ್ಟೆಗಳ ಖರೀದಿ, ಮನೆಗೆ ಆಹಾರದ ದಿನಸಿಗಳ ಖರೀದಿಯ ನಡುವೆ, ನೆಂಟರನ್ನು ರಥೋತ್ಸವಕ್ಕೆ ಆಹ್ವಾನಿಸುವುದು. ಸಿಹಿ ತಿನಿಸುಗಳನ್ನು ಮಾಡಿಡುವ ಗಡಿಬಿಡಿ. ಒಂದೆಡೆ ವ್ಯಾಪಾರಿಗಳ ಲೆಕ್ಕಾಚಾರ, ಇನ್ನೊಂದೆಡೆ ಖರ್ಚಿನ ನಡುವೆ ಹೇಗೆ ಉಳಿತಾಯ ಮಾಡಬಹುದು? ಎಂಬ ಲೆಕ್ಕಾಚಾರ. ಇದೆಲ್ಲಾ ಪ್ರತೀ ವರ್ಷವೂ ಇದ್ದದ್ದೇ ಎನ್ನುವಿರಾ!!??
ಪ್ರತಿ ಊರಿನ ರಥೋತ್ಸವವೂ ವಿಭಿನ್ನ ಹಿನ್ನೆಲೆ
ವಿಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಡೆಯುವ, ಸ್ಥಳೀಯತೆಯನ್ನು ಬಿಂಬಿಸಿ, ಅಲ್ಲಿನ ಪ್ರಮುಖ ದೇವತೆ, ಗುರುವಿನ ಆರಾಧನೆಯೇ ಆಗಿರುವುದು. ಈಗ ನಾವು ರಥೋತ್ಸವದಕ್ಕೆ ಹೋಗುತ್ತಿರುವುದು, ನಮ್ಮ ವಿಜಯನಗರ ಜಿಲ್ಲೆಯ ಅತಿದೊಡ್ಡ ರಥೋತ್ಸವ, ಆರಾಧ್ಯ ದೇವರಾದ, “ಶ್ರೀಗುರು ಕೊಟ್ಟೂರೇಶ್ವರ”ನ ರಥೋತ್ಸವದ ಬಗ್ಗೆ. ಅದಕ್ಕೂ ಮಿಗಿಲಾಗಿ, ರಥೋತ್ಸವದ ಸಮಯ ಮತ್ತು ಕಾರ್ತಿಕ ಸಮಯದಲ್ಲಿ ಭಕ್ತರ ಹೋಗುವ ಪಾದಯಾತ್ರೆಯ ಬಗ್ಗೆ.
“ಶ್ರೀ ಗುರುಬಸವ”,”ಗುರುಬಸವ ರಾಜೇಂದ್ರ”,”ಕೊಟ್ಟೂರೇಶ್ಚರ” ಎಂದು ವಿವಿಧ ನಾಮಾಧೇಯಗಳಿದ್ದರೂ, ಎಲ್ಲರೂ ಕರೆಯಲಿಚ್ಛಿಸುವುದು “ಕೊಟ್ರಯ್ಯಾ”ಎಂದೇ. ಕೊಟ್ಟೂರಿಗೆ ಹೋಗುವುದಕ್ಕೂ,”ಕೊಟ್ರಯ್ಯಗೆ ಹೋಗಿ ಬರ್ತೇನೆ” ಎಂದೇ ಹೇಳುವ ವಾಡಿಕೆ. ಭಕ್ತ ಪ್ರಿಯ ಗುರುಬಸವರಾಜೇಂದ್ರನು, “ಭಕ್ತರು ಕೇಳಿದ್ದು ಕೊಟ್ಟು ಕೊಟ್ಟೂ ಕೊಟ್ಟೂರೇಶ್ವರರೇ ಆಗಿದ್ದಾರೆ”.
ಕೊಟ್ಟೂರಿನ ಇತಿಹಾಸ:- ವಿಜಯನಗರ ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರವಾದ, ಕೊಟ್ಟೂರು ವಿದ್ಯಾಸಂಸ್ಥೆಗಳಿಂದ & ಉಚಿತ ಶಿಕ್ಷಣ, ಸಂಸ್ಕೃತ ಪಾಠಶಾಲೆ ಇರುವ,ಈ ಊರು ಮೊದಲು, ಶ್ರೇಷ್ಠಪುರವಾಗಿ, “ಶಿಖಾಪುರ”ವಾಗಿದ್ದ ಊರು. ಕಾಲಕ್ರಮೇಣ,”ಪಂಚಗಣಾದೀಶ್ವರ”ಲ್ಲಿ ಒಬ್ಬರಾದ,”ಗುರುಬಸವೇಶ್ವರ”ರು ಇಲ್ಲಿ ನೆಲೆನಿಂತು, ಭಕ್ತರ ಸಂಕಷ್ಟಗಳನ್ನು ಪರಿಹರಿಸಿ, ಪ್ರೀತಿಯಿಂದ ಭಕ್ತಿಯಿಂದ ಬೇಡಿದನ್ನು ದಯಪಾಲಿಸಿದ್ದರಿಂದ,”ಕೊಟ್ಟೂರು”ಆಯಿ
ಉಳಿದ ಪಂಚಗಣಾದೀಶರೆಂದರೆ,
೧.ಹರಪನಹಳ್ಳಿಯ ಕೆಂಪಯ್ಯ,
೨.ದಾವಣಗೆರೆ ಜೆಲ್ಲೆಯ ಅರಸಿಕರೆಯ ಕೋಲಶಾಂತೇಶ್ವರ,
೩.ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ,
೪.ಕೂಲಹಳ್ಳಿಯ ಮದ್ದಾನಸ್ವಾಮಿ,
೫.ಮತ್ತು ಕೊಟ್ಟೂರಿನ ಗುರುಬಸವೇಶ್ವರು.
ಇವರು ಸಂಚರಿಸುತ್ತಾ, ಸಮಾಜದಲ್ಲಿ ಮನೆ ಮಾಡಿದ್ದ, ಡಾಂಭಿಕತೆಯನ್ನು ಹೋಗಲಾಡಿಸುತ್ತಾ, ಜನರಲ್ಲಿದ್ದ ಅಜ್ಞಾನದ ಅಂಧಕಾರವನ್ನು ತೊಡೆದುಹಾಕಲು ಶ್ರಮಿಸಿದ ಶರಣರು. ಅಲ್ಲಲ್ಲಿ ನೆಲೆನಿಂತು, ಆಯಾ ಭಾಗದಲ್ಲಿನ ಆರಾಧ್ಯ ಗುರುಗಳಾದರು, ದೇವರಾದರು. ಕೊಟ್ಟೂರಿನ ಪ್ರಮುಖ ೫ ಗುರುಬಸವನ ಸನ್ನಿಧಿಯ, ದೇವಾಲಯಗಳನ್ನು ಕಾಣುತ್ತೇವೆ. ಇವೆಲ್ಲಾ,”ಕೊಟ್ರಯ್ಯನ ಮಠ”ಗಳೇ. ಇಲ್ಲಿ ನಮ್ಮ ಮಠ ಎಂದರೆ ಗುಡಿ, ದೇವಾಲಯ ಎಂದರ್ಥ.
೧.ಮೂರ್ಕಲ್ಲು ಮಠ- “ಲಿಂಗರೂಪಿ ಘನ ಶಿವಯೋಗಿ”ಯೇ ಇರುವ,”ಈ ದೇವಸ್ಥಾನವು ಅನನ್ಯ. ಜೊತೆಗೆ ನಿರ್ಮಾಣವನ್ನು ಹೊರಗಿನಿಂದ ನೋಡಿದರೆ ೩ ಸ್ತರದಲ್ಲಿ ಮೂರ್ರ್ಮೂರು ದೊಡ್ಡ ಕಲ್ಲೇ ಕಾಣಿಸುವುದು. ಹಾಗಾಗಿ ಮೂರ್ಕಲ್ಲು ಮಠ ಎಂಬ ಹೆಸರು.
೨.ತೊಟ್ಟಿಲು ಮಠ- ಬಾಲ ಶಿವಯೋಗಿ ರೂಪಿಯಾಗಿದ್ದಾನೆ. ಗರ್ಭಗುಡಿಯಲ್ಲಿ ತೊಟ್ಟಿಲಿದ್ದು, ಹೊಸದಾಗಿ ಮದುವೆಯಾದ ದಂಪತಿಗಳಿಗೆ, ಮಕ್ಕಳ ಅಪೇಕ್ಷೆ ಇರುವ ದಂಪತಿಗಳಿಂದ, ನಿರ್ಧಿಷ್ಟ ಸಮಯದಲ್ಲಿ ಪೂಜೆ ಮಾಡಿಸಿ, ಮಡಿಲು ತುಂಬುವರು. ಖಂಡಿತಾ ಮಕ್ಕಳನ್ನು ಕೊಡುವನು ಕೊಟ್ರಯ್ಯ.
೩.ಹಿರೇ ಮಠ ಅಥವಾ ದರ್ಬಾರ್ ಮಠ.
ಗುರುಬಸವನ ಗುಡಿಯಲ್ಲಿ, ಪ್ರಮುಖ ಮಠ.
ಇಲ್ಲಿಯೇ ಕೊಟ್ಟೂರೇಶ್ವರರು ನೆಲೆನಿಂತು, ಭಕ್ತರನ್ನು ಹರಸುತ್ತಿದ್ದರು. ಇದು ಮೊದಲು ವೀರಭದ್ರೇಶ್ವರರ ದೇವಾಲಯವಾಗಿದ್ದು. ನಂತರ ಗುರುಬಸವರು ಅಲ್ಲಿಗೆ ಬಂದು,” ತಾವು ಇಲ್ಲಿ ಇರುತ್ತೇವೆ, ನೀವು ಕ ಆಯಿತು. ಇಂದಿಗೂ,ಇಲ್ಲಿ ವೀರಭದ್ರೇಶ್ವರ ಮೂರ್ತಿಯನ್ನು, ಶಿವಲಿಂಗದ ಹಿಂಬಾಗದಲ್ಲಿ ನೋಡುತ್ತೇವೆ. ಆದರೆ ಅದರ ದರ್ಶನ ಯಾರಿಗೂ ಲಭಿಸಲು ಸಾಧ್ಯವಿಲ್ಲ.
೪.ಗಚ್ಚಿನ ಮಠ.
ಪ್ರಾಚೀನತೆಯ ಬಿಂಬವೇ ಆಗಿರುವ ದೇವಸ್ಥಾನ ಅಥ್ವಾ ಮಠ. ವಿವಿಧ ಕೆತ್ತನೆಯಿರುವ ಗುಡಿ.ಪೂರ್ವ ದಿಕ್ಕಿನ ಪ್ರಮುಖ ದ್ವಾರಬಾಗಿಲನ್ನು ಹೊಂದಿ, ಎದುರಿಗೆ ಬಸವಣ್ಣ ಇದೆ. ಪಶ್ಚಿಮಕ್ಕೆ ಬಿಟ್ಟು, ಉಳಿದ ೩ಕಡೆ ಹೆಬ್ಬಾಗಿಲಿರುವುದು ವಿಶೇಷ. ವಿವಿಧ ಬಗೆಯ ಕಂಬಗಳು, ವಿಶೇಷ ಮೆಟ್ಟಿಲುಗಳು ಪ್ರಾಚೀನತೆಯನ್ನು ಬಿಂಬಿಸುವುದು. ಇಲ್ಲಿ ಕುಳಿತರೆ ಏನೋ ಪ್ರಶಾಂತ ಭಾವ ಆವರಿಸುವುದು. ಈ ಗಚ್ಚಿನ ಮಠದಲ್ಲಿಯೇ, ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ದು, ಗರ್ಭಗುಡಿಯ ಕೆಳಗಿನ ಆವರಣದಲ್ಲಿ ಸಮಾಧಿ ಸ್ಥಳವನ್ನು ನೋಡುತ್ತೇವೆ. ಭಾವೈಕ್ಯತೆಯ ಸಂಕೇತವಾದ ಇಲ್ಲಿ,”ರಾಜಾ ಅಕ್ಬರ್ ನೀಡಿದ ಅತಿದೊಡ್ಡ ಮಣಿಮಂಚವಿದೆ. ಅಲ್ಲಿ ಮಂಚ & ಗಾದಿಯನ್ನು ನೀಡಿದ ವಿವರಗಳನ್ನು, ಇಸ್ವಿ, ಕಾಣುತ್ತೇವೆ. ವರ್ಷವೂ ಸವೆದ ಗಾದಿಯನ್ನು ಬದಲಾಯಿಸುವುದು ಸತ್ಯ.
೫.ಮರಿ ಕೊಟ್ಟೂರೇಶ್ವರನ ಗುಡಿ.
ಎಲ್ಲವೂ ದೇವಾಲಯಗಳು, ಪ್ರಾಚೀನ ಶೈಲಿಯಲ್ಲಿರುವ, ಕಲ್ಲಿನಿಂದ ನಿರ್ಮಿತವಾದ ದೇವಸ್ಥಾನಗಳು.ಕೆತ್ತನಾ ಶೈಲಿಯೂ ಪುರಾತನತೆಯ ಬಿಂಬ. ಗರ್ಭಗುಡಿಯ ಹೊರಗೆ, ಎತ್ತರವಾದ ಸುತ್ತಲೂ ಇರುವ ಜಗುಲಿಯಂತಹ ಕಟ್ಟೆ. ನಡುವೆ ಖಾಲಿ ಜಾಗ.ದೊಡ್ಡ ದೊಡ್ಡ ಕೆತ್ತನೆಯ ಕಂಬಗಳು.ಮೇಲ್ಚಾವಣಿಯಲ್ಲೂ ವಿವಿಧ ಬಗೆಯ ವಿನ್ಯಾಸ,ಹೂಗಳ ಕೆತ್ತನೆ ನೋಡುತ್ತೇವೆ.
“ಕೊಟ್ಟೂರಿಗೆ ಪಾದಯಾತ್ರೆ”
ಪ್ರತಿವರ್ಷ ಮಾಘಮಾಸ, ಕೃಷ್ಣಪಕ್ಷದ ಮೂಲಾನಕ್ಷತ್ರದ ದಿನದಂದು ರಥೋತ್ಸವ ನಡೆಯುವುದು. ಈ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು, ನಾಡಿನ ನಾನಾ ಭಾಗದಿಂದ, ಪಕ್ಕದ ರಾಜ್ಯ ಅಷ್ಟೇ ಏಕೇ!? ವಿದೇಶದಲ್ಲಿ ನೆಲೆ ಇರುವ ಭಕ್ತರಲ್ಲಿ ಹಲವರು ತಮ್ಮ ಇಷ್ಟಾರ್ಥ ಸಿದ್ಧಿಗೆ ಪಾದಯಾತ್ರೆಯ ಮೂಲಕ ಕೊಟ್ಟೂರಿಗೆ ಬರುವರು. ವಾರದಿಂದಲೇ ದೂರದೂರಿಂದ ಆಗಮಿಸುವ ಪಾದಯಾತ್ರೆಗಳಿಗೆ ಸೂಕ್ತ ವ್ಯವಸ್ಥೆ, ವೈದ್ಯಕೀಯ,ವಸತಿ,ಊಟೋಪಚಾರ ವ್ಯವಸ್ಥೆ ಕಲ್ಪಿಸುವ ರೀತಿ ಅನನ್ಯ.
“ಭಾವುಕತೆ”,”ಭಕ್ತಿ-ಭಾವ”,”ಹರ್ಷ”,”
ಶಿವಮೊಗ್ಗ, ಚಿಕ್ಕಮಗಳೂರು,ದಾವಣಗೆರೆಯಿಂದ ಬರುವ ಭಕ್ತರು ದಾವಣಗೆರೆಯಿಂದ ಪಾದಯಾತ್ರೆ ಆರಂಬಿಸಿ, ಸಾಕೆನಿಸಿದಾಗ ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಂಡು, ಹತ್ತಿರ ಹತ್ತಿರ ೧೦೦ಕಿ.ಮಿ.ನಷ್ಟು ನಡೆಯುವರು. ಎಲ್ಲರಿಗೂ ಅಲ್ಲಲ್ಲಿ ಊಟೋಪಚಾರ, ವಿಶ್ರಾಂತಿಗೆ ವ್ಯವಸ್ಥೆ ಇರುವುದು. ಉಜ್ಜಿನಿ, ಜಗಳೂರು,ಚಿತ್ರದುರ್ಗದಿಂದಲೂ, ನೂರಾರು ಕಿ.ಮೀಗಳಷ್ಟು ಪಾದಯಾತ್ರೆ ಇದೆ.
ಇನ್ನು ನಮ್ಮೂರ ಭಾಗದಿಂದ ೪೦ ರಿಂದ ೫೦ಕಿ.ಮೀ.ನಡೆಯಬೇಕು. ಪಾದಯಾತ್ರೆಯ ಪ್ರತೀ ದಾರಿಯಲ್ಲೂ, ಪಾದಯಾತ್ರಿಗಳ ಸೇವೆಗೆ ಸ್ವಯಂ ಸೇವಕರಿದ್ದು, ಪಾದಯಾತ್ರೆಗಳಿಗೆ ನೀರು, ಆಹಾರ, ಔಷಧಿ ಇತ್ಯಾದಿ ಆವಶ್ಯಕತೆಗಳನ್ನು ಪೂರೈಸುವರು. ಪಾದಯಾತ್ರೆಗೆ ಸಮಯ, ಮನೆಯಲ್ಲಿ ಆಶಿರ್ವಾದ ಪಡೆದು,ಊರ ಶಿವಾಲಯದಿಂದ ಆರಂಭಿಸುವಾಗ, “ಚೆನ್ನಾಗಿ ಹೋಗಿ ಬನ್ನಿ”ಎನ್ನುತ್ತಾ ಕಳಿಸಿಕೊಡುವ ದೃಶ್ಯ ಕಾಣುತ್ತೇವೆ.
ಕೊಟ್ಟೂರು ತಲುಪಿ, ಕೊಟ್ಟೂರೇಶ್ವರರ ದರ್ಶನ ಪಡೆಯುವವರೆಗೂ, ಬರಿಗಾಲಲ್ಲಿ ನಡೆಯುತ್ತಲೇ ಇರಬೇಕು. ತೀರಾ ಆಗದವರಿಗೆ, ಅಲ್ಲಲ್ಲಿ ಬೀಡು ಬಿಟ್ಟ ವೈದ್ಯಕೀಯ ತಂಡ ಸಾಕ್ಸ್ನಗಳನ್ನು, ಮಾತ್ರೆಯನ್ನು ಕೊಡುವರು. ದಾರಿಯುದ್ದಕ್ಕೂ ತಂಡದಂತೆ ಸ್ವಯಂ ಸೇವಕರಿದ್ದು, ಜೊತೆಗೆ ದಾರಿಯಲ್ಲಿ ಇರುವ ಅನೇಕ ಊರಗಳ ಭಕ್ತರು ಹಣ್ಣು, ಟೀ-ಬಿಸ್ಕಿಟ್, ಉಪ್ಪಿಟ್ಟು, ಕೇಸರಿಬಾತು, ಅವಲಕ್ಕಿಯಂತಹ ತಿಂಡಿಗಳನ್ನು ಪಾದಯಾತ್ರಿಗಳಿಗೆ ಕೊಡುತ್ತಾ, ಪಾದಯಾತ್ರಿಗಳಲ್ಲಿ ಸ್ವಯಂ ದೇವರನ್ನು ಕಾಣುತ್ತಾರೆ. ಒಂದ್ವೇಳೆ ಹಾಗೆಯೇ ಮುಂದು-ಮುಂದು ಹೋಗ್ತಾ ಇದ್ದರೆ, “ದಯವಿಟ್ಟು ನಾವು ಮಾಡಿದ್ದನ್ನು ಸೇವಿಸಿ. ಹಾಗೆಯೇ ಹೋಗಬೇಡಿ” ಅಂತ ಬೇಡಿಕೊಳ್ಳುವರು. ಪ್ರತೀ ಹೆಜ್ಜೆಗೊಂದು ಇರುವ, ಈ ಸ್ವಯಂ ಸೇವಕರಂತಿರುವ, ಸೇವಕ ಭಕ್ತರ ಪ್ರಸಾದ, ಹಣ್ಣುಗಳನ್ನು ತಿನ್ನುತ್ತಾ ಮೆಲ್ಲಗೆ ಸಾಗುತ್ತಿದ್ದರೆ “ಕೊಟ್ಟೂರು ತಲುಪುವುದೆಂತು!?ಎನಿಸಿದರೂ,”ಸ್ವಲ್ಪ ಹೊತ್ತು ನಿಲ್ಲೋಣ” ಎನಿಸಿ, ಅಲ್ಲಿಯೇ ನಿಲ್ಲುವುದು. ಕೂರಲು ಆಗಲ್ಲ.ಕಾರಣ ಅಷ್ಟು ದೂರ ನಡೆದೂ, ಕೂತರೆ ಎದ್ದೇಳಲೂ ಆಗದ ಪರಿಸ್ಥಿತಿ ಇರುವ ಕಾರಣ, ನಿಲ್ಲಬೇಕು. ಜೊತೆಗೆ ನಡೆದು ನಡೆದೂ, ಹೆಜ್ಜೆ ಕಾಲೂರದ ಸ್ಥಿತಿಯಾಗಿ, ಓರೆಯಾಗಿ ಹೆಜ್ಜೆ ಇಟ್ಟಾಗ, ಇಲ್ಲವೇ ಹಗುರವಾಗಿ ಪಾದ ಊರದೇ ನಡೆಯುತ್ತಿರುವುದನ್ನು ನೋಡುವ, ಸ್ವಯಂ ಸೇವಕ ತಂಡಗಳಲ್ಲಿನ ಅನೇಕ ಸಹೋದರರು,”ತಂಗಿ ಸರಿಯಾಗಿ ಹೆಜ್ಜೆ ಊರಿ.ಗಟ್ಟಿಯಾಗಿ ಹೆಜ್ಜೆ ಊರಿ ನಡೆಯಿರಿ. ಇಲ್ಲವಾದರೆ, ನಡೆಯಲಾಗದು, ಜಾಸ್ತಿ ನೋವಾಗುವುದು”ಎಂದು ತಿಳಿ ಹೇಳುವರು. ಇದು ನನಗೂ ಆದ ಅನುಭವವೇ ಆಗಿದೆ.
ಪಾದಯಾತ್ರೆ ವಿಶೇಷತೆ:-
ಪಾದಯಾತ್ರೆಗೆ ವಯೋಬೇಧವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು, ಬೆನ್ನು ಬಾಗಿದ ವಯಸ್ಸಾದವರೂ ಬರುವರು. ಕೆಲವರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬರುವರು. ೩೦-೪೦. ಕಿ.ಮಿ.ಇರುವ ಊರಿಂದ ಬರುವ ಗರ್ಭಿಣಿಯರೂ ಇದ್ದಾರೆ. ಅನನ್ಯ ಪ್ರೀತಿ ತುಂಬಿದ ಭಕ್ತಿಯ ಮುಂದೆ, ಯಾವುದೂ ಸಮವಲ್ಲ. ಪಾದಯಾತ್ರೆ ಮಾಡುವಾಗ, ಒಂದೂರಿಂದ ಗುಂಪಾಗಿ ಸಾಗುವ ತಂಡ, ನಂತರ ಚದುರಿದರೂ ಸಹ, ಭಯ ಪಡಬೇಕಾಗಿಲ್ಲ. ರಾತ್ರಿ ಹೊತ್ತು ನಡೆಯುತ್ತಿದ್ದರೂ, ರಸ್ತೆಯಲ್ಲೆ ಪಾದಯಾತ್ರಿಗಳಿಂದ ತುಂಬಿರುವುದು. ಯಾವುದೇ ಊರವರಿರಲಿ, ಸಹೋದರ- ಸಹೋದರಿಯಾಗಿ,”ಹೆದರಬೇಡಿ,ನಾವೆಲ್ಲಾ ಇದ್ದೀವಲ್ವಾ”ಎಂದು, ಮಾತನಾಡಿಸುತ್ತಾ ಜೊತೆಗೆ ಸಾಗುವರು. ಇಪ್ಪತ್ತು ವರ್ಷಗಳಿಂದಲೂ, ಅಥವಾ ಸತತವಾಗಿ ವರ್ಷವೂ ಪಾದಯಾತ್ರೆ ಮಾಡುವವರಿದ್ದಾರೆ. ಇಂತಿಷ್ಟು ವರ್ಷ ಪಾತ್ರೆಯಾತ್ರೆ ಬರುತ್ತೇನೆಂದು ಬೇಡಿಕೊಂಡು, ವರ್ಷವರ್ಷವೂ ಪಾದಯಾತ್ರೆ ಆರಂಭ ಮಾಡುವ ಹೊಸಯಾತ್ರಿಗಳಿದ್ದಾರೆ. ತಾಳ ಬಾರಿಸುತ್ತಾ, ಭಜನೆ ಮಾಡುತ್ತಾ , ಗಾನ ಸೇವೆ ಮಾಡುತ್ತಾ ಬರುವವರೂ ಅನೇಕರು. ಕೊಟ್ಟೂರೇಶ್ವರರಿಗೆ,ವಿವಿಧ “ಬಹುಪರಾಕು” ಹೇಳುತ್ತಾ ನಡೆದರೆ ಆಯಾಸವೆಲ್ಲಿ,!?
ಪಾದಯಾತ್ರೆಯ ವೈಭವವನ್ನು ಅತಿ ಹೆಚ್ಚಾಗಿ ಕಾಣಬೇಕಾದರೆ, ಹ.ಬೊ.ಹಳ್ಳಿ& ಮತ್ತದರ ಸುತ್ತಲಿನ ಹಳ್ಳಿಗಳು -ಕೊಟ್ಟೂರು ದಾರಿಯಲ್ಲಿ ಸಾಗಿ ನೋಡಬೇಕು.”ಕೊಟ್ಟೂರೇಶ್ಚರರೇ ಮುಂದೆ ನಿಂತು,ಈ ಎಲ್ಲಾ ಸೇವೆಗಳನ್ನು ಎಲ್ಲವನ್ನೂ ಮಾಡಿಸುತ್ತಾ, ನೋಡುತ್ತಿದ್ದಾರೆ”ಎಂದೆನಿಸುವುದು. ಹೆಜ್ಜೆ ಹೆಜ್ಜೆಗೂ ಸೇವಾರ್ಥಿಗಳೇ ಇರುವುದು ಸಾರ್ಥಕ ಎನಿಸುವುದು.
“ಸಂಕಲ್ಪಸಿ,ನಂಬಿಕೆ ಇಟ್ಟು,ನಂಬಿ ನಡೆಯುತ್ತಿದ್ದರೆ,ಖಂಡಿತಾ ಸುಸ್ತಾಗುವುದಿಲ್ಲ”. “ಪಾದಯಾತ್ರೆ ಮುಗಿಸಿ,ಕೊಟ್ಟೂರೇಶ್ವರರ ದರ್ಶನ ಮಾಡುವಾಗ,ನಿಜಕ್ಕೂ ಕಣ್ಣೀರೇ ಬಂದಿರುವುದು. ಭಾವ ತೀವ್ರತೆಗೆ ಒಳಗಾಗಿರುವುದು ಮನಸ್ಸು”. ಅದು ಎಲ್ಲವೂ ಪರಮಾತ್ಮನಾದ ನಿನಗೆ ಅರ್ಪಣೆ, ನೀನಿಲ್ಲದೇ ಯಾವುದೂ ಇಲ್ಲ”ಎಂಬ ಸಮರ್ಪಣಾ ಭಾವದಿಂದ, ಶರಣಾಗತಿಯೇ ಆಗಿರುವೆವು.
ದಾರಿಯಲ್ಲಿ ಮದ್ಯಾರಾತ್ರಿ ಎರಡು ಗಂಟೆಯಿಂದಲೇ ಸಿಗುವ ಕೊಟ್ಟೂರ ಅಕ್ಕಪಕ್ಕದ ಊರವರು, ಕೈಯಲ್ಲಿ ಬಿಂದಿಗೆ, ದೇವರ ನೈವೇದ್ಯ, ಪೂಜಾ ಸಾಮಾಗ್ರಿಯಿಂದ, ನಡೆದು ಬರುತ್ತಿರುತ್ತಾರೆ. ತೇರುಗಾಲಿಗೆ ನೀರು ಹಾಕಿ, ಪೂಜಿಸುವ ಸಂಪ್ರದಾಯ ನಮ್ಮ ಭಾಗದಲ್ಲಿ.
“ರಥೋತ್ಸವ”
“ಮೂಲ ನಕ್ಷತ್ರದಲ್ಲಿ ನಡೆಯುವ ರಥೋತ್ಸವ”.
ತಿಂಗಳುಗಳ ಹಿಂದೆಯೇ,ರಥೋತ್ಸವದ ಕೈಂಕರ್ಯಳು ನಡೆಯುತ್ತಿದ್ದರೂ, ಮುಖ್ಯವಾಗಿ ಹಿಂದಿನ ದಿನ ಬೆಳ್ಳಿಯ ರಥೋತ್ಸವವದಲ್ಲಿ ವೃಷಭ ವಾಹನೋತ್ಸವವಿರುವುದು. ಮಾಘ ಮಾಸದ ಕೃಷ್ಣ ಪಕ್ಷದ ಮೂಲಾ ನಕ್ಷತ್ರದ ದಿನದ ಸಾಯಂಕಾಲ, ನಕ್ಷತ್ರ ಕೂಡಿದಾಗ, ಆ ಊರಿನ, ೫ ದಿನ ಸತತವಾಗಿ ಉಪಾವಾಸವಿದ್ದ, ಒಂದು ಸಮುದಾಯದ ಮಹಿಳೆಯಿಂದ ಆರತಿಯಾದ ನಂತರವೇ ರಥೋತ್ಸವ ನಡೆಯುವುದು. ಅಂದು ಒಂದು ಹಸು ಈಯುವುವುದು.(ಕರು ಹಾಕುವುದು)ಅದರ ಗಿಣ್ಣು ದೇವರಿಗೆ ಅರ್ಪಣೆಯಾಗಲೇಬೇಕು. ಇದು ವರ್ಷವೂ ನಡೆವ ಸತ್ಯ. ನಂತರ ತೇರು ಅದಾಗಿಯೇ ೫ ಹೆಜ್ಜೆ ಉರುಳಿದ ಮೇಲೆಯೇ , ರಥವನ್ನು ಎಳೆಯುವರು ಇದು ಅನಾದಿಯಾಗಿ ನಡೆದುಬಂದ ಪದ್ದತಿ. ಇಂದಿಗೂ ತೇರಿನ ಸಮಯ,ಈ ಎಲ್ಲಾ ನಿಯಮಗಳು ನಡೆದ ನಂತರವೇ ರಥೋತ್ಸವ ಸಾಗುವುದು.
ಅಷ್ಟಾವರಣಗಳಾದ ,”ಮಹೇಶ”,”ಗುರು”,”ಭಕ್ತ”, “ಜಂಗಮ”,”ಪ್ರಸಾದಿ(ಪಾದೋದಕ)”,”ಪ್ರಾ
“ಶರಣ”,ಐಕ್ಯ”ಗಳನ್ನು,”ಕೊಟ್ಟೂರಿನ ಪಾದಯಾತ್ರೆಯಲ್ಲಿ ನಾವು ಅನುಭವಿಸಿಯೇ ಅನುಭವಿಸುತ್ತೇವೆ.
“ಐಕ್ಯ”ಎಂಬುದು ನಿಲುಕದ್ದು. ಅದನ್ನು ದೈವೀ ಭಾವನೆಯಲ್ಲಿ ಮನಸ್ಸನ್ನು ಐಕ್ಯಗೊಳಿಸಿಕೊಳ್ಳಬೇಕಷ್ಟೇ. ನಮ್ಮ ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ, ಕೊಟ್ರೇಶ, ಕೊಟ್ರಮ್ಮ, ಗುರುಬಸವರಾಜ,ಹೆಸರಿನವರು ಇದ್ದೇ ಇರುವರು.ನಾಮಕರಣದಲ್ಲಿ ಪ್ರತಿ ಮಗುವಿನ ಮೊದಲ ಹೆಸರೇ,”ಕೊಟ್ರಮ್ಮ, ಕೊಟ್ರೇಶ, ಕೊಟ್ರಗೌಡ, ಗುರುಬಸಮ್ಮ,ಗುರುಬಸವ ರಾಜೇಂದ್ರ ಹೀಗೆಯೇ ಇರುವುದು.
ಅಂದಹಾಗೆ ,ಇದೇ ೪ನೇ ಮಾರ್ಚ್ ೨೦೨೪ರಂದೇ ತೇರಿದೆ. ಇಷ್ಟೊತ್ತಿಗಾಗಲೇ ಸಾವಿರಾರು ಪಾದಯಾತ್ರಿಗಳು ಬಂದು ತಲುಪಿರುವರು. ಇನ್ನೂ ಸಾವಿರಾರು ಪಾದಯಾತ್ರಿಗಳು ಬರುತ್ತಲೇ ಇರುತ್ತಾರೆ, ರಥದ ಸಮಯದವರೆಗೂ…..
ಬನ್ನಿ, ಶರಣರ ಭೂಮಿ, ಭಕ್ತಿ- ಭಾವಗಳ ಸಂಗಮವಾದ, ಸಾಧುಗಳು ಓಡಾಡಿದ ಕೊಟ್ಟೂರಿನ ಮಣ್ಣಲ್ಲಿ ಓಡಾಡಿ, ಕೊಟ್ಟೂರೇಶ್ವರರ ದರ್ಶನ ಪಡೆದು ಪುನೀತರಾಗೋಣ.
“ಕೊಟ್ಟೂರು ದೊರೆಯೇ ನಿನಗಾರು ಸರಿಯೇ!!
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ