March 15, 2025

Hampi times

Kannada News Portal from Vijayanagara

ಶ್ರೀ ಹುಲಿಗೆಮ್ಮ ದೇವಿ ರೈಲ್ವೆ ನಿಲ್ದಾಣ ನಾಮಕರಣಕ್ಕೆ ಒತ್ತಾಯ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ:
ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಮುನಿರಾಬಾದ್ ರೈಲ್ವೆ ನಿಲ್ದಾಣಕ್ಕೆ ಶ್ರೀ ಹುಲಿಗೆಮ್ಮದೇವಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿ ಸೋಮವಾರ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಅವರಿಗೆ ಮನವಿ ಸಲ್ಲಿಸಿದರು.

ಅಮೃತ್‌ಭಾರತ್ ರೈಲ್ವೆ ನಿಲ್ದಾಣ ಯೋಜನೆ ಅಡಿಯಲ್ಲಿ ಮುನಿರಾಬಾದ್ ರೈಲ್ವೆ ನಿಲ್ದಾಣವು ಸಹ ಸೇರಿಸಲಾಗಿದ್ದು ಅದರ ನವೀಕರಣ ಹಾಗೂ ಇಲ್ಲಿಯ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಎಲ್.ಸಿ.ಗೇಟ್ ನಂ:೭೯, ರೈಲ್ವೆ ಮೇಲ್‌ಸೇತುವೆ ನಿರ್ಮಾಣಕ್ಕಾಗಿ ಶಂಕುಸ್ಥಾಪನೆಗಾಗಿ ಮುನಿರಾಬಾದ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು.

ಹುಲಿಗೆಮ್ಮ ದೇವಿ ದೇವಸ್ಥಾನವು ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ – ಯಾತ್ರಾ ಕೇಂದ್ರವಾಗಿದೆ. ತುಂಗಭದ್ರ ನದಿಯ ದಂಡೆಯ ಮೇಲೆ ಪ್ರತಿಷ್ಠಾಪನೆಯಾಗಿರುವ ದೇವಸ್ಥಾನವು ಅತ್ಯಂತ ಪ್ರಾಚೀನ ಶಕ್ತಿಕೇಂದ್ರವಾಗಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದೆ. ಈ ಭಾಗದಲ್ಲಿ ಆರ್ಥಿಕ ವಾಣಿಜ್ಯ ಚಟುವಟಿಕೆಗಳು ಬೆಳವಣಿಗೆಯಾಗುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧಿಕ ಆಧಾಯ ತಂದುಕೊಡುವಲ್ಲಿ ಹುಲಿಗೆಮ್ಮ ದೇವಸ್ಥಾನ ಅಪಾರ ಕೊಡುಗೆ ನೀಡುತ್ತದೆ. ಈ ಗ್ರಾಮದ ಆಡಳಿತ ವ್ಯವಸ್ಥೆ ಹುಲಿಗಿ ಎಂಬ ಹೆಸರಿನಲ್ಲೆ ನಡೆಯುತ್ತಿದ್ದು, ಇಲ್ಲಿರುವ ರೈಲ್ವೆ ನಿಲ್ದಾಣ ಪ್ರದೇಶವು ಸಹ ಹುಲಿಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿದೆ. ಇಷ್ಟೆಲ್ಲಾ ಚಾರಿತ್ರಿಕ ಬೌಗೋಳಿಕ ಆಡಳಿತಾತ್ಮಕ ವಾಸ್ತವಾಂಶಗಳಿರುವಾಗ ರೈಲ್ವೆ ನಿಲ್ದಾಣಕ್ಕೆ ಮಾತ್ರ ಮುನಿರಾಬಾದ್ ಎಂಬ ಹೆಸರಿನಿಂದ ಕರೆಯುವುದು ಸೂಕ್ತವಲ್ಲ. ದೇಶದಲ್ಲಿ ಅನೇಕ ನಗರ ಗ್ರಾಮಗಳ ಹೆಸರನ್ನು ಆ ಪ್ರದೇಶದ ಚಾರಿತ್ರಿಕ ಭೌಗೋಳಿಕ ಹಿನ್ನಲೆಗಳನ್ನು ಮಾನದಂಡವಾಗಿಟ್ಟುಕೊಂಡು ನಿರ್ಧರಿಸಲಾಗುತ್ತದೆ. ಮುನಿರಾಬಾದ್ ಎಂಬ ಹೆಸರನ್ನು ಬದಲಿಸಿ ಹುಲಿಗೆಮ್ಮ ದೇವಿ ಎಂದು ಮರುನಾಮಕರಣ ಮಾಡಲು ಆಗ್ರಹಿಸಿದರು.

ಹುಲಿಗಿ (ಹಿಟ್ನಾಳ್) ಬೂದುಗುಂಪಾ ನಡುವೆ ನೂತನವಾಗಿ ಬೈಪಾಸ್ ರೈಲ್ವೆ ಮಾರ್ಗ ನಿರ್ಮಾಣ ಮತ್ತು ಗಂಗಾವತಿ-ಸಿಂಧನೂರು ತಾಲೂಕುಗಳಿಂದ ಹೊಸಪೇಟೆ-ದಾವಣಗೆರೆ-ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳಿಗೆ ತ್ವರಿತವಾಗಿ ಸಂಪರ್ಕ ಕಲ್ಪಿಸಲು ಬೈಪಾಸ್ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಈ ಬೈಪಾಸ್ ಮಾರ್ಗ ನಿರ್ಮಾಣದಿಂದ ಗಿಣಿಗೇರಾದಲ್ಲಿ ರೈಲು ಇಂಜಿನ್ ರಿವರ್ಸ್ ಮಾಡುವ ತೊಂದರೆ ತಪ್ಪಿದಂತಾಗುತ್ತದೆ ಹಾಗೂ ಬೂದುಗುಂಪಾದಿಂದ ನೇರ ಸಂಪರ್ಕ ದೊರೆತು ಸುಗಮ ಸಂಚಾರಕ್ಕೆ ಅವಕಾಶ ದೊರಕಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವೈ.ಯಮುನೇಶ್, ಮಹೇಶ್‌ಕುಡತಿನಿ, ಉಮಾಮಹೇಶ್ವರ್, ಕೌತಾಳ್ ವಿಶ್ವನಾಥ ಹಾಗೂ ಇತರೆ ಪದಾಧಿಕಾರಿಗಳು ಭಾಗವಹಿಸಿ ಮನವಿ ಸಲ್ಲಿಸಿದರು.

 

 

ಜಾಹೀರಾತು
error: Content is protected !!