November 7, 2024

Hampi times

Kannada News Portal from Vijayanagara

ನಾ- ಸತ್ತಿಲ್ಲ ನಾಟಕ ಪ್ರದರ್ಶನ, ರಂಗ ಕಲೆಗೆ ಸಾವಿಲ್ಲ, ಕಲೆಗೆ ಜೀವ ತುಂಬಿದ ಕಲಾವಿದರು

 

https://youtu.be/NHc6OMSu0K4?si=SI_K4goOPEgwo6h2

 

 

ಇಲಕಲ್: ರಂಗ ಕಲೆಯೂ ಕೂಡಾ ನಾ ಸತ್ತಿಲ್ಲವೆಂದೇ ಸಾರುತ್ತದೆ. ರಂಗ ಕಲೆಗೆ ಸಾವಿಲ್ಲ. ಅದು ಸದಾ ನಿರಂತರ ಎಂದು ಗುಭ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ವಿಜಯಪುರದ ಎಲ್.ಬಿ.ಶೇಖ ಮಾಸ್ತರ ಹೇಳಿದರು.

ನಗರದ ಅನುಭವ ಮಂಟಪ ಆವರಣದಲ್ಲಿ ಶನಿವಾರ ಹೊಸಪೇಟೆಯ ಕನ್ನಡ ಕಲಾ ಸಂಘ ಟಿ ಬಿ ಡ್ಯಾಂ ತಂಡದಿಂದ ಪ್ರದರ್ಶನಗೊಂಡ “ನಾ ಸತ್ತಿಲ್ಲ” ಎಂಬ ಕನ್ನಡ ನಾಟಕ ಪ್ರದರ್ಶನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಂಗಕಲೆಯ ತವರೂರಾದ ಇಲಕಲ್ ನಲ್ಲಿ ಈ ನಾಟಕ ಪ್ರದರ್ಶನ ಆಯೋಜಿಸಿದ ರಂಗ ಕಲಾವಿದ, ರಂಗ ಸಂಘಟಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಮಹಾಂತೇಶ್ ಗಜೇಂದ್ರಗಡ ಅವರ ರಂಗ ಸೇವೆ ಶ್ಲಾಘನೀಯ ಎಂದರು.

ಒಬ್ಬ ವ್ಯಕ್ತಿಯು, ನಿಜವಾಗಿಯೂ ತಾನು ಸತ್ತಿಲ್ಲವಾದರೂ, ಜೀವಂತ ಇದ್ದೇನೆ ಎಂದು ಸಾದರಪಡಿಸುವುದು ಒಂದೆಡೆಯಾದರೆ, ಕಾನೂನು ಧರ್ಮ ಶಾಸ್ತ್ರದ ಆಧಾರದ ಮೇಲೆ ಸತ್ತಿದ್ದಾನೆಂದು ಪ್ರತಿವಾದಿಸುವುದು ಇನ್ನೊಂದೆಡೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಮೊಕದ್ದಮೆಯನ್ನು ನಾಟಕ ರೂಪದಲ್ಲಿ ಅತ್ಯಂತ ಕುತೂಹಲಕಾರಿಯಾಗಿ ಕಾನೂನು, ಸಾಕ್ಷಿ, ಪುರಾವೆ, ಧರ್ಮಶಾಸ್ತ್ರಗಳ ತೊಡಕುಗಳಲ್ಲಿ ತರ್ಕಬದ್ಧವಾಗಿ ಡಾ. ಕೃಷ್ಣ ಕೋಲಾರ ಕುಲಕರ್ಣಿ ಅವರು ರಚಿಸಿದ ” ನಾ ಸತ್ತಿಲ್ಲ” ನಾಟಕವನ್ನು ಹೊಸಪೇಟೆಯ ’ಕನ್ನಡ ಕಲಾ ಸಂಘ ಟಿ ಬಿ ಡ್ಯಾಂ’ ತಂಡವು ಮನೋಜ್ಞವಾಗಿ ಪ್ರದರ್ಶಿಸಿತು.

ಪ್ರತಿವಾದಿ ವಕೀಲ ಭಂಢೆರಾವ ಪಾತ್ರ ವಹಿಸಿದ ಚಂದ್ರಶೇಖರ ಅವರ ಮಾತನಾಡುವ ಶೈಲಿ ಆಕರ್ಷಣೀಯವಾಗಿತ್ತು. ಅಲ್ಲದೇ ಪ್ರತಿವಾದಿ ಪರ ಸಾಕ್ಷಿಯಾದ ಪ್ರಚಂಡಾಚಾರ ಪಾತ್ರ ವಹಿಸಿದ ಶ್ರೀಕೃಷ್ಣ ಕುಲಕರ್ಣಿ ಅವರು ಶಾಸ್ತ್ರದ ಆಧಾರದಮೇಲೆ ತರ್ಕಬದ್ಧ ಉತ್ತರ ಕೊಡುವುದು ಪ್ರೇಕ್ಷಕ ಮೆಚ್ಚುಗೆ ಪಡೆಯಿತು. ವಾದಿ ಸತ್ಯವಂತರಾಗಿ ಶಿವಾನಂದ ಮತ್ತು ಅವರ ಪರ ವಕೀಲರಾದ ಡಾ. ರಾಜು ಕುಲಕರ್ಣಿ ಅವರ ಅಭಿನಯ ಗಮನ ಸೆಳೆಯಿತು. ಪ್ರತಿವಾದಿ ಧನ್ವಂತರಾವ ಗಂಭೀರತೆ ಪಾತ್ರಕ್ಕೆ ತಕ್ಕದಾಗಿತ್ತು. ನ್ಯಾಯಾಧೀಶರಾಗಿ ಹನುಮಂತ ಪೂಜಾರ, ಸಾಕ್ಷಿದಾರ ಬೀರಪ್ಪನಾಗಿ ಜಗದೀಶ್ ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ಇನ್ನು ಸಹ ವಕೀಲರಾಗಿ ಈಶ್ವರ, ನಾಗರಾಜಾಚಾರ್ಯ, ಹಾಗೂ ನ್ಯಾಯಾಲಯ ಸಿಬ್ಬಂಧಿಯಾಗಿ ಜಾನ್, ಅಭಿಷೇಕ, ರಾಜಗೋಪಾಲ ಅವರುಗಳು ಸಮರ್ಪಕವಾಗಿ ಅಭಿನಯಿಸಿದರು.

ಪ್ರಸಾಧನ ಶ್ರೀನಿವಾಸ ಜೋಷಿ, ತಾಂತ್ರಿಕತೆ ಡಾ. ರಾಜು ಕುಲಕರ್ಣಿ, ಬೆಳಕು ಮಂಜುನಾಥ ಅವರದಾಗಿದ್ದರೆ,
ವಿನ್ಯಾಸ ಮತ್ತು ನಿರ್ದೇಶನ ಜವಾಬ್ದಾರಿ ಶ್ರೀ ಶ್ರೀಕೃಷ್ಣ ಕುಲಕರ್ಣಿ ಅವರದಾಗಿತ್ತು. ಒಟ್ಟಾರೆಯಾಗಿ ಈ ಪ್ರದರ್ಶನ ಇಲಕಲ್ ನಗರ ಪ್ರೇಕ್ಷಕರ ಮನಸ್ಸನ್ನು ಗೆದ್ದಿತು.

 

 

ಜಾಹೀರಾತು
error: Content is protected !!