https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ವಿದ್ಯಾರ್ಥಿಗಳು ಸತತ ಪರಿಶ್ರಮ, ಸ್ಪಷ್ಟ ಗುರಿ ಸಾಧಿಸುವ ಛಲ ಹೊಂದಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಅಧ್ಯಕ್ಷರಾದ ಷ.ಬ್ರ. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಟಿ ಎಂ ಎ ಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಪಿಯು ಕಾಲೇಜಿನಲ್ಲಿ ದಿನಾಂಕ: 24-02-2024 ರಂದು ನಡೆದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸೋಲುಗಳಿಂದ ಮನುಷ್ಯ ಹೆಚ್ಚು ಪಾಠ ಕಲಿಯುತ್ತಾನೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪರಿಶ್ರಮ, ಸ್ಪಷ್ಟ ಗುರಿ, ಸಾಧಿಸುವ ಛಲ, ಪ್ರಾಮಾಣಿಕ ಪ್ರಯತ್ನ, ಗುರುಗಳ ಸಮರ್ಪಕ ಮಾರ್ಗದರ್ಶನ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಶಿಕ್ಷಣ ಇಂದು ವ್ಯಾಪಾರಿಕರಣವಾಗುತ್ತಿದೆ. ಆದರೆ ಟಿ ಎಂ ಎ ಇ ಸಂಸ್ಥೆಗಳು ಸೇವಾ ಮನೋಭಾವನೆಯಿಂದ ಶಿಕ್ಷಣ ನೀಡುತ್ತಾ ಬರುತ್ತಿವೆ. ಮಧ್ಯ ಕರ್ನಾಟಕ ಭಾಗದಲ್ಲಿ ಟಿ ಎಂ ಎ ಇ ಸಂಸ್ಥೆ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿವೆ.
ಹೊಸಪೇಟೆಯ ಟಿಎಂಎಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ತನ್ನದೇ ಆದ ವಿಶಿಷ್ಟ ಸಾಧನೆಯನ್ನು ಮಾಡಿದೆ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರ ಮಾರ್ಗದರ್ಶನ ಪ್ರೋತ್ಸಾಹ ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ಶ್ಲಾಘಿಸಿದರು.
ಟಿ ಎಂ ಎ ಇ ಸಂಸ್ಥೆಯ ಉಪ ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಸ್ಥಾಪಕರು ಆದ ಶ್ರೀ ಟಿ.ಎಂ. ವಿಜಯಕುಮಾರ್ ಅವರು ಮಾತನಾಡಿ, ಹೊಸಪೇಟೆ ಭಾಗದಲ್ಲಿ ಗುಣಾತ್ಮಕ ಹಾಗೂ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಿಯು ಕಾಲೇಜನ್ನು ಆರಂಭಿಸಲಾಗಿದೆ. ಎಲ್ಲ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಮೂರೇ ವರ್ಷಗಳಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿದೆ. ನೀಟ್, ಜೆಇಇ, ಕೆ ಸಿ ಟಿ, ಸಿಎ, ಸಿ ಎಸ್, ಸಿಎಂಎ ಗಳಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಕಾಲೇಜು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಅಧ್ಯಕ್ಷರಾದ ಶ್ರೀ ಎಂ. ಕೆ. ರವೀಂದ್ರ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿ. ಎಸ್. ದಯಾನಂದ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಆಡಳಿತ ಮಂಡಳಿ ಸಹಕಾರ, ಎಲ್ಲ ಉಪನ್ಯಾಸಕರ ಪರಿಶ್ರಮ, ವಿದ್ಯಾರ್ಥಿಗಳ ಸತತ ಪ್ರಯತ್ನ ಟಿ ಎಂ ಎ ಎಸ್ ಅಕಾಡೆಮಿ ಪಿಯು ಕಾಲೇಜು ಅಭೂತಪೂರ್ವ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು. ನಮ್ಮ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ಪ್ರೊ. ವಿ ಎಸ್ ದಯಾನಂದ ಕುಮಾರ್, ಕಾಲೇಜಿನ ಶಿಕ್ಷಣ ಸಂಯೋಜಕರಾದ ಶ್ರೀ ಪಿ.ವಿ ಶೇಷ ಸಾಯಿ, ಪ್ರೋ-ಎಡ್ಜ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಯಾದ್ ಅಹಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 2022-23 ಸಾಲಿನ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ 2024 ನೇ ಸಾಲಿನ ಜೆಇಇ, ಸಿಎ, ಸಿ ಎಸ್, ಸಿಎಂಎ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ಆಡಳಿತ ಮಂಡಳಿ ಪರವಾಗಿ ಷ.ಬ್ರ. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರನ್ನು ವಿಶೇಷವಾಗಿ ಗೌರವಿಸಲಾಯಿತು.
ರೋಜ್ ಬಡ್ ಶಾಲೆಯ ನಿರ್ದೇಶಕಿ ಶ್ರೀಮತಿ ಟಿ ಎಂ ಉಷಾ ದೇವಿ ಅವರು ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಅನಿಸಿಕೆ ಹಂಚಿಕೊಂಡರು. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಮೀರಾ ಕೆ ಪ್ರಾರ್ಥಿಸಿದಳು. ಉಪನ್ಯಾಸಕರಾದ ಕೊಟ್ರೇಶ್ ಸಿ ಮತ್ತು ಶ್ರೀರಂಗನಾಥಾಚಾರ್ಯ, ಶ್ರೀ ಸಂಗೀತ ಶಿಕ್ಷಕ ಮಹೇಶ್ ವಾದ್ಯ ಸಹಕಾರ ನೀಡಿದರು. ಶ್ರೀಮತಿ ಸ್ಟೆಲ್ಲಾ ಏಂಜೆಲ್ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ವರುಣ್, ಶ್ರೀಮತಿ ಸಿಂಧೂ ನಿರ್ವಹಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂಗಮೇಶ್ ಗಣಿ ಮತ್ತು ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜ್ಯೋತಿ ಎಂ ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸೌಮ್ಯ ಸೂರಿಮಠ ವಂದಿಸಿದರು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ