July 17, 2025

Hampi times

Kannada News Portal from Vijayanagara

ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ಕಣ್ತುಂಬಿಕೊಳ್ಳಿ ಬನ್ನಿ : ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಗಜಾಶಾಲೆ ಆವರಣದಲ್ಲಿ ಏಳು ದಿನ ಸಾಮ್ರಾಜ್ಯದ ಗತವೈಭವದ ಪರಿಚಯ | 25ನೇ ಬಾರಿ ಶ್ರೀಕೃಷ್ಣದೇವರಾಯ ಪಾತ್ರದಲ್ಲಿ ಚಂದ್ರಶೇಖರ ಶಾಸ್ತ್ರಿ
ಫೆ.2 ರಿಂದ 8ವರೆಗೆ ರಾತ್ರಿ 7ರಿಂದ ಪ್ರಾರಂಭ | ನಟ ವಿಷ್ಣುವರ್ಧನ ಸೇರಿದಂತೆ ಅನೇಕ ಸಿನಿ ತಾರೆಯರ ಇಂಪಾದ ಹಿನ್ನೆಲೆ ಧ್ವನಿಯಲ್ಲಿ ಮೊಳಗಲಿದೆ

ಬಸಾಪುರ ಬಸವರಾಜ್
ಹಂಪಿ ಟೈಮ್ಸ್ ಹೊಸಪೇಟೆ
ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಇಂದಿನ ಜನತೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಮೂಲಕ ಉಣಬಡಿಸಿದರೆ ಮಾತ್ರ ಹಂಪಿ ಉತ್ಸವ ಅರ್ಥಪೂರ್ಣ ಎನ್ನುವಷ್ಟರ ಮಟ್ಟಿಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಈ ಭಾಗದ ಜನರ ಮೇಲೆ ಪ್ರಭಾವ ಬೀರಿದೆ. ಈ ಬಾರಿ ಬರಗಾಲ ಹಿನ್ನೆಲೆಯಲ್ಲಿ ಉತ್ಸವದ ದಿನಾಂಕ ತಡವಾಗಿ ಘೋಷಣೆಯಾಗಿದ್ದರೂ, ಅನೇಕ ತಾಂತ್ರಿಕ ತೊಡಕುಗಳ ನಡುವೆಯೂ ಜಿಲ್ಲಾಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜನೆಗೆ ಮುಂದಾಗಿರುವುದು ಕಲಾವಿದರು ಮತ್ತು ಪ್ರೇಕ್ಷಕರಿಗೆ ಸಂತಸವನ್ನುಂಟು ಮಾಡಿದೆ.

ಧ್ವನಿ ಮತ್ತು ಬೆಳಕಿನ ವೈಶಿಷ್ಟ್ಯ
ವಿಶ್ವವಿಖ್ಯಾತ ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಧ್ವನಿ ಮತ್ತು ಬೆಳಕಿನಲ್ಲಿ ಪ್ರದರ್ಶಿಸಲಾಗುತ್ತದೆ. 125 ಕಲಾವಿದರು, ಜೀವಂತ ಆನೆ, ಕುದುರೆಯನ್ನು ಬಳಸಿಕೊಂಡು ನೈಜ ಪ್ರದರ್ಶನದೊಂದಿಗೆ ವಿಜಯನಗರ ಸಾಮ್ರಾಜ್ಯದ ಉಗಮ, ಉತ್ತುಂಗದ ಸ್ಥಿತಿ ಹಾಗೂ ಅವನತಿಯನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಾರೆ.
ಮೂರು ದಿನಗಳ ಹಂಪಿ ಉತ್ಸವ ಮುಗಿದರೂ, ನಿರಂತರ ೭ ದಿನಗಳ ಕಾಲ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ. ಇಲ್ಲಿನ ಆನೆಲಾಯದ ಪ್ರಾಂಗಣದಲ್ಲಿ ಸುಮಾರು 10 ರಿಂದ 12 ಕಿರು ವೇದಿಕೆಗಳಲ್ಲಿ ನೂರಕ್ಕೂ ಅಧಿಕ ಕಲಾವಿದರು ಪ್ರತ್ಯೇಕ ಸನ್ನಿವೇಶಗಳಿಗೆ ಜೀವ ತುಂಬುವರು. ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕ, ರಥಬೀದಿಯಲ್ಲಿ ವಜ್ರವೈಡೂರ್ಯಗಳ ಸಂತೆಯ ಸನ್ನಿವೇಶಗಳು ಕಣ್ಣಿಗೆ ಹಬ್ಬ. ಹಂಪಿ ಉತ್ಸವದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಿಸಲೆಂದೇ ಪ್ರತಿ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ ವಿಜಯನಗರ ಸಾಮ್ರಾಜ್ಯದ ವೈಭವನ್ನು ಕಣ್ತುಂಬಿಕೊಳ್ಳುವುದು ಇಲ್ಲಿನ ವಿಶೇಷ.

ಪ್ರದರ್ಶನಕ್ಕಿದೆ ದಶಕಗಳ ಹಿನ್ನೆಲೆ
ನಾಡಿನ ಐತಿಹ್ಯವನ್ನು ಪರಿಚಯಿಸುವ ಉದ್ದೇಶದಿಂದ ಸರ್ಕಾರ 1970ರಲ್ಲಿ ಮೊದಲ ಬಾರಿಗೆ ಕಮಲ ಮಹಲ್‌ನಲ್ಲಿ ಉತ್ಸವವನ್ನು ಆಯೋಜಿಸಲಾಗಿತ್ತು. ಆದರೆ, ಎಂ.ಪಿ.ಪ್ರಕಾಶ್ ಅವರು ಮುತುವರ್ಜಿ ವಹಿಸಿದ್ದರಿಂದ 1996 ರಿಂದ ಹಂಪಿ ಉತ್ಸವದಲ್ಲಿ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಪ್ರದರ್ಶನ ಆರಂಭಿಸಿದರು. ಅಂದಿನಿಂದ ನಿರಂತರವಾಗಿದ್ದು, ಬರ, ನೆರೆ, ಕೋವಿಡ್ ಕಾರಣದಿಂದ ಉತ್ಸವ ರದ್ದಾಗಿದ್ದು, ತರಾತುರಿಯಲ್ಲಿ ಉತ್ಸವ ಆಯೋಜಿಸಿದಾಗ ಮಾತ್ರ ದ್ವನಿ ಮತ್ತು ಬೆಳಕಿನ ಕಾರ್ಯಕ್ರಮ ರದ್ದಾಗಿದೆ. ಅಲ್ಲದೇ, ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ನಾಟಕ ಅಕಾಡೆಮಿಯಿಂದ ಅನುಮತಿ ಪಡೆದಾಗ ಮಾತ್ರ, ಅದಕ್ಕೆ ಅಗತ್ಯವಿರುವ ಬೆಳಕು, ಧ್ವನಿ ಸಂಯೋಜಿತ ತಂತ್ರಜ್ಞಾನದ ಪರಿಕರಗಳನ್ನು ಒದಗಿಸಲಾಗುತ್ತದೆ. ಹೀಗಾಗಿ ಉತ್ಸವಕ್ಕೂ ಒಂದು ತಿಂಗಳ ಮುನ್ನ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಕಡ್ಡಾಯ. ಇಷ್ಟೆಲ್ಲಾ ಷರತ್ತುಗಳ ನಡುವೆಯೂ ಈಬಾರಿ ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿ ಮಾಡಬೇಕೆಂಬ ಉತ್ಸುಕತೆಯಿಂದ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ಈಗಾಗಲೆ ಕಲಾವಿದರ ಆಯ್ಕೆ ಪೂರ್ಣಗೊಂಡಿದೆ. ಏಳುದಿನಗಳ ನಡೆಯುತ್ತಿದ್ದ ರಿಹರ್ಸಲ್ ತರಬೇತಿ ಈ ಬಾರಿ ಆರು ದಿನಕ್ಕಿಳಿದಿದೆ. ಈಗಾಗಲೇ ಕೇಂದ್ರ ಸರ್ಕಾರದ ನಾಟಕ ಅಕಾಡೆಮಿಯಿಂದ ದೆಹಲಿ, ಹೈದರಾಬಾದ್, ಚೆನ್ನೈ, ಪುಣೆ ಹಾಗೂ ಬೆಂಗಳೂರು ಕೇಂದ್ರಗಳಿಂದ ತಂತ್ರಜ್ಞರು ಪರಿಕರಗಳೊಂದಿಗೆ ಬಂದಿಳಿದಿದ್ದು, ಅಕಾಡೆಮಿಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ.ರವೀಂದ್ರ ನೇತೃತ್ವದಲ್ಲಿ ಸಿದ್ಧತೆ ಜೋರಾಗಿ ನಡೆದಿದೆ. ಧ್ವನಿ ಬೆಳಕು ಈ ಬಾರಿ ಇದೆಯೋ ಇಲ್ಲವೋ ಎಂಬ ಆತಂಕವನ್ನು ಜಿಲ್ಲಾಡಳಿತ ದೂರಾಗಿಸಿದ್ದು, ಆಕರ್ಷಕ ಧ್ವನಿ ಬೆಳಕಿನ ಮೂಲಕ ಇತಿಹಾಸ ಉಣಬಡಿಸಲಿದೆ.

ಹಂಪಿ ಉತ್ಸವಕ್ಕೆ ಬೆಂಗಳೂರು, ದೆಹಲಿ, ಪುಣೆ, ಹೈದರಾಬಾದ ಹಾಗೂ ಚನ್ನೈ ವಿಭಾಗದ ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯದ ತಾಂತ್ರಿಕ ಪರಿಣಿತರ ತಂಡ ಸಿದ್ದತೆಯಲ್ಲಿ ತೊಡಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಸೌಭಾಗ್ಯ.
– ಎಸ್.ಜಿ. ರವೀಂದ್ರ, ಹೆಚ್ಚುವರಿ ಮಹಾನಿರ್ದೇಶಕರು, ಕೇಂದ್ರ ಸಂವಹನ ಇಲಾಖೆ, ಬೆಂಗಳೂರು

ವಿಜಯನಗರ ಸಾಮ್ರಾಜ್ಯದ ಸಾಮ್ರಾಜ್ಯದ ಉದಯ, ಆಡಳಿತ, ಸಂಸ್ಕಾರ, ಐಕ್ಯತೆ, ಕಲೆ, ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ವ್ಯಾಪಾರ, ಸಾಮ್ರಾಜ್ಯದ ವಿಸ್ತಾರ, ಮತ್ತು ಅವನತಿಯ ಹಿನ್ನೋಟವನ್ನು ಸಾರುವ ಧ್ವನಿ ಬೆಳಕು ಕಾರ್ಯಕ್ರಮವನ್ನು ಎರಡೂವರೆ ಗಂಟೆಗಳಲ್ಲಿ ಕಣ್ತುಂಬಿಕೊಳ್ಳುವ ಸದಾವಕಾಶ ಒದಗಿಸಲಾಗಿದ್ದು, ಪ್ರತಿಯೊಬ್ಬರೂ ವೀಕ್ಷಿಸಿ ಇತಿಹಾಸ ತಿಳಿದುಕೊಳ್ಳಬೇಕು.
– ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿಗಳು.

 

ಜಾಹೀರಾತು
error: Content is protected !!