December 5, 2024

Hampi times

Kannada News Portal from Vijayanagara

ಬಸವ ತತ್ವ ಮನೆ-ಮನೆಗೆ ತಲುಪಲಿ: ಡಾ.ಕೆ.ರವೀಂದ್ರನಾಥ

 

https://youtu.be/NHc6OMSu0K4?si=SI_K4goOPEgwo6h2

ಸಾಂಸ್ಕೃತಿಕ ನಾಯಕ ಬಸವಣ್ಣ : ಬಸವ ಭಕ್ತರಿಗೆ ಸಂತಸ

ಹಂಪಿ ಟೈಮ್ಸ್ ಹೊಸಪೇಟೆ:
ಸರ್ಕಾರ ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬೆನ್ನಲ್ಲೆ ಸಮಾಜದ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀ ಜಗಜ್ಯೋತಿ ಅಶ್ವರೂಢ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಅಭಿನಂದನೆ ತಿಳಿಸಿದರು.

ಕನ್ನಡ ವಿವಿಯ ಡಾ.ಕೆ.ರವೀಂದ್ರನಾಥ ಮಾತನಾಡಿ, ಸಾಮಾಜಿಕ ನ್ಯಾಯದ ಮೊದಲ ಹರಿಕಾರ, ವಿಶ್ವಗುರು ಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯನವರು ಘೋಷಿಸಿರುವುದು ಬಸವ ಭಕ್ತರಿಗೆ, ಅನುಯಾಯಿಗಳಿಗೆ ಸಂತಸ ತಂದಿದೆ. ಸಮ ಸಮಾಜ ನಿರ್ಮಾಣ, ಮಹಿಳೆಯರಿಗೂ ಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ವಚನ ಸಾಹಿತ್ಯದ ಮೂಲಕ ಅರಿವು ಮೂಡಿಸಿದ ಮಹಾಶರಣ ಬಸವಣ್ಣ. ಅವರ ವಚನಗಳು ಇಂದು, ಎಂದೆಂದಿಗೂ ಸರ್ವರಿಗೂ ಅರಿವು ಹೆಚ್ಚಿಸುವ ಜ್ಞಾನ ಭಂಡಾರವಾಗಿವೆ. ಬಸವಣ್ಣನವರ ವಚನಗಳನ್ನು ಓದಿ ಅರ್ಥೈಸಿಕೊಂಡರೆ, ಸಮಾಜದಲ್ಲಿನ ಅಂಧತ್ವ, ಮೌಢ್ಯಾಚರಣೆ, ತಾರತಮ್ಯ ಹೋಗಲಾಡಿಸಲು ಸಾಧ್ಯ. ಬಸವಣ್ಣನವರ ವಚನ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ಸಮ ಸಮಾಜಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಸಮಾಜದ ಹಿರಿಯ ಮುಖಂಡ ಸಾಲಿಸಿದ್ದಯ್ಯಸ್ವಾಮಿ ಮಾತನಾಡಿ, ೯೦೦ ವರ್ಷಗಳ ನಂತರವೂ ಬಸವಣ್ಣನವರ ಚಿಂತನೆಗಳ ಜೀವಂತವಾಗಿವೆ ಎನ್ನುವುದಕ್ಕೆ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದೇ ಸಾಕ್ಷಿ. ರಾಜ್ಯದಲ್ಲಿ ಬಸವ ತತ್ವದಂತೆ ಜೀವನ ರೂಪಿಸಿಕೊಂಡರೆ ಕರ್ನಾಟಕವು ಕಲ್ಯಾಣ ಕರ್ನಾಟಕವಾಗಲಿದೆ. ಬಸವಣ್ಣ ಸರ್ವ ಸಮಾಜದವರನ್ನು, ಮಹಿಳೆಯರನ್ನು ತನಗಿಂತ ಹಿರಿಯರೆಂದು ಭಾವಿಸಿ, ನುಡಿದಂತೆ ನಡೆದ ಮಹಾದಾರ್ಶನಿಕರು. ಅವರಿವರೆನ್ನದೆ ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳ್ಗೆಗೆ ಮುಂದಾಗಬೇಕು ಎಂದರು.

ಸಮಾಜದ ಮಖಂಡರಾದ ಡಾ.ಮಹಾಬಲೇಶ್ವರ ರೆಡ್ಡಿ, ಉಪನ್ಯಾಸಕ ಬಸವರಾಜ, ಬಸವಕಿರಣ, ಕಾಶಿನಾಥಯ್ಯ, ಚಂದ್ರಶೇಖರ, ಮಧುರಚನ್ನಶಾಸ್ತ್ರಿ ಇತರರು ಮಾತನಾಡಿದರು. ಸಮಾಜದ ಬಿ.ಜಿ.ಈಶ್ವರಪ್ಪ, ರೇವಣಸಿದ್ದಪ್ಪ, ಮಾನಳ್ಳಿ ಬಸವರಾಜ, ಅಂಬನಗೌಡ, ಮಲ್ಲೇಶಪ್ಪ, ಕಾಶಿನಾಥ, ಸೋದವಿರೂಪಾಕ್ಷ ಗೌಡ, ಜಂಗಮಣಿ ಇತರರು ಇದ್ದರು.

 

 

ಜಾಹೀರಾತು
error: Content is protected !!