December 8, 2024

Hampi times

Kannada News Portal from Vijayanagara

ಭರವಸೆ, ವಿಶ್ವಾಸ ಹುಟ್ಟಿಸುವ ಹಬ್ಬ ದೀಪಾವಳಿ :ವೀಣಾ ಹೇಮಂತ್ ಗೌಡ ಪಾಟೀಲ್

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ತಮಸೋಮ ಜ್ಯೋತಿರ್ಗಮಯ

“ಅಸತೋಮಾ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ”

ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುತ್ವದಿಂದ ಅಮರತ್ವದೆಡೆಗೆ ನಮ್ಮನ್ನು ಕೊಂಡೊಯ್ಯುವ ಜ್ಯೋತಿ ಸ್ವರೂಪಕ್ಕೆ ನಮಸ್ಕಾರಗಳು.

ಮನುಷ್ಯ ಜೀವನದ ಏಕತಾನತೆಯನ್ನು ಕಳೆಯುವ ಆಚರಣೆಗಳೇ ಹಬ್ಬಗಳು, ಆ ಹಬ್ಬಗಳ ಆಚರಣೆಯಲ್ಲಿರುವ ವೈವಿಧ್ಯತೆಗಳು, ಹಬ್ಬದ ಹಿಂದಿರುವ ಆಶಯಗಳು, ನಮ್ಮಲ್ಲಿ ಹೊಸ ಹುರುಪನ್ನು, ಭರವಸೆಯನ್ನು ತುಂಬುತ್ತವೆ.ಭಾರತೀಯ ಜೀವನ ಪದ್ಧತಿಯಲ್ಲಂತೂ ಹಬ್ಬಗಳು ತುಸು ಹೆಚ್ಚೇ.
ಬಹುಶಃ ಜಗತ್ತು ಕಂಡು ಕೇಳರಿಯದಷ್ಟು ಧರ್ಮಗಳು, ಜಾತಿಗಳು, ಉಪಜಾತಿಗಳು ನಮ್ಮ ಭರತ ಖಂಡದಲ್ಲಿವೆ. ಹೀಗಾಗಿ ಆಯಾ ಧರ್ಮದ, ಜಾತಿಯ ನಂಬಿಕೆಯ ಆಚರಣೆಗಳು ಕಾಲಕ್ರಮೇಣ ಹಬ್ಬದ ರೂಪವನ್ನು ಕಂಡುಕೊಂಡಿವೆ.

ರಾಮನು ಸ್ವರ್ಣಲಂಕೆಯಲ್ಲಿ ರಾಕ್ಷಸೇಂದ್ರ ರಾವಣನನ್ನು ಕೊಂದು, ಆತನ ಸಹೋದರ ವಿಭೀಷಣನಿಗೆ ಪಟ್ಟ ಕಟ್ಟಿ, ಅಯೋಧ್ಯೆಯೆಡೆಗೆ ಪ್ರಯಾಣ ಬೆಳೆಸಿದ. ಕಾರ್ತಿಕದ ಆ ಕತ್ತಲಿನಲ್ಲಿ ರಾಮನ ಸ್ವಾಗತಕ್ಕಾಗಿ ಇಡೀ ಅಯೋಧ್ಯಾ ರಾಜ್ಯವೇ ದೀಪವನ್ನು ಹಚ್ಚಿ ಸ್ವಾಗತ ಕೋರಿತು. ಅದರ ಸವಿ ನೆನಪಿನ ದಿನವೇ ದೀಪಾವಳಿ. ದೀಪಾವಳಿ ಹಬ್ಬವು ದುಷ್ಟದಮನ ಮತ್ತು ಶಿಷ್ಟರಕ್ಷಣೆಯ ಪ್ರತೀಕವಾಗಿ ಆಚರಿಸಲ್ಪಡುವ ಹಬ್ಬ.

ದೀಪಗಳ ಹಬ್ಬ ದೀಪಾವಳಿ. ಅಜ್ಞಾನವನ್ನು ಕಳೆಯುವ ಜ್ಞಾನ ಜ್ಯೋತಿ ಬೆಳಗಿಸುವ ಹಬ್ಬ ದೀಪಾವಳಿ. ತಮಸೋಮ ಜ್ಯೋತಿರ್ಗಮಯ ಅಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ. ದೀಪಾವಳಿ ಹಬ್ಬವು ವರ್ಷದ ಅತಿ ದೊಡ್ಡ ಹಬ್ಬವಾಗಿದೆ. ಹಿಂದುಗಳು, ಸಿಕ್ಕರು ಮತ್ತು ಜೈನರು ಈ ಹಬ್ಬವನ್ನು ಆಚರಿಸುತ್ತಾರೆ. ಜಾಗತೀಕರಣದ ಈ ಘಳಿಗೆಯಲ್ಲಿ ಇಡೀ ಪ್ರಪಂಚದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಮತ್ತು ಮರುದಿನ ಬಲಿಪಾಡ್ಯಮಿಯಂದು ಸರಸ್ವತಿ ಪೂಜೆಯ ಮೂಲಕ ಸಾಂಕೇತಿಕವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಗ್ರಾಮೀಣ ಭಾಗದಲ್ಲಂತೂ ದೀಪಾವಳಿ ಹಬ್ಬದ ಸಡಗರ ಇನ್ನೂ ಹೆಚ್ಚು. ದಸರೆಯ ನಂತರ ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಹಚ್ಚಿಸಿ ಮನೆಯನ್ನು ಸಿಂಗರಿಸುತ್ತಾರೆ. ಬಗೆ ಬಗೆಯ ದೀಪದ ಸರಗಳನ್ನು ತಂದು ಮನೆಯನ್ನು ಅಲಂಕರಿಸುತ್ತಾರೆ. ಮನೆ ಮಂದಿಗೆಲ್ಲಾ ಹಬ್ಬದ ಬಟ್ಟೆ, ಸ್ವಲ್ಪ ಅನುಕೂಲ ಹೆಚ್ಚೇ ಇದ್ದರೆ ಚಿನ್ನದ ಒಡವೆ, ವಾಹನ ಮತ್ತು ಗೃಹೋಪಯೋಗಿ ಸಾಮಾನುಗಳನ್ನು ಹಬ್ಬದ ಸಮಯದಲ್ಲಿ ಖರೀದಿಸುತ್ತಾರೆ. ಈ ಸಮಯದಲ್ಲಿ ಅಂಗಡಿಕಾರರೂ ಅಷ್ಟೇ …ಬಗೆ ಬಗೆಯ ಆಮಿಷಗಳನ್ನು, ರಿಯಾಯಿತಿ ದರಗಳನ್ನು ಜನರ ಮುಂದಿಟ್ಟು ಭರ್ಜರಿ ವ್ಯಾಪಾರ ನಡೆಸುತ್ತಾರೆ. ಮಾರುಕಟ್ಟೆಯ ಸಮೀಕ್ಷೆಯ ಪ್ರಕಾರ ಇಡೀ ವರ್ಷದ ವ್ಯಾಪಾರ ವಹಿವಾಟು ನಡೆಯುವಷ್ಟೇ ಭರ್ಜರಿ ವ್ಯಾಪಾರ ವಹಿವಾಟು ದೀಪಾವಳಿಯ ಆ 15 ದಿನಗಳ ಸಮಯದಲ್ಲಿ ನಡೆಯುತ್ತದೆ. ಎಲ್ಲ ವ್ಯಾಪಾರಸ್ಥರು, ಫ್ಯಾಕ್ಟರಿಗಳ ಮಾಲಕರು ದೊಡ್ಡ ದೊಡ್ಡ ವ್ಯಾಪಾರಿ ಸಂಸ್ಥೆಗಳು ತಮ್ಮ ನೌಕರರಿಗೆ ಒಂದು ತಿಂಗಳ ಬೋನಸ್ ಹಣವನ್ನು ನೀಡುವುದು ಕೂಡ ದೀಪಾವಳಿಯ ಸಮಯದಲ್ಲಿಯೇ. ಒಂದಿಡೀ ವರ್ಷದ ಸಂತಸವನ್ನು ಒಮ್ಮೆಲೆ ಮನೆಗೆ ತರುವುದೆಂದರೆ ಅದು ದೀಪಾವಳಿಯಲ್ಲಿ ಮಾತ್ರ.ದೀಪಾವಳಿಯನ್ನು ಮೂರ್ನಾಲ್ಕು ದಿನಗಳವರೆಗೆ ಆಚರಿಸುತ್ತಾರೆ. ಅಮಾವಾಸ್ಯೆಗೆ ಎರಡು ದಿನ ಮುಂಚೆ ತ್ರಯೋದಶಿಯ ದಿನ ನೀರು ತುಂಬುವ ಹಬ್ಬ. ಆ ದಿನ ಮನೆಯ ಎಲ್ಲಾ ನೀರು ತುಂಬಿಸುವ ಸಣ್ಣ ದೊಡ್ಡ ಪಾತ್ರೆಗಳನ್ನು ಹುಣಸೆಹಣ್ಣು ಹಾಕಿ ತಿಕ್ಕಿ ಲಕ ಲಕ ಎನ್ನುವಂತೆ ತೊಳೆದು ನೀರನ್ನು ತುಂಬಿಸಿ ಸಾಂಕೇತಿಕವಾಗಿ ದೇವರ ಜಗಲಿಯ ಮೇಲೆ ತುಂಬಿದ ನೀರಿನ ತಂಬಿಗೆಯನ್ನು ಇಟ್ಟು ಪೂಜಿಸುತ್ತಾರೆ. ಇನ್ನೂ ಕೆಲವೆಡೆ ಆ ದಿನ ನಸುಕಿನಲ್ಲಿಯೇ ಮನೆಯ ಎಲ್ಲಾ ಹಿರಿ ಕಿರಿಯರನ್ನು ಎಬ್ಬಿಸಿ ಅವರಿಗೆ ತಲೆ ಮತ್ತು ದೇಹಕ್ಕೆಲ್ಲಾ ಎಣ್ಣೆಯನ್ನು ಹಚ್ಚಿ ಬಿಸಿನೀರಿನ ಅಭ್ಯಂಗ ಸ್ನಾನ ಮಾಡಿಸಿ ಹೊಸ ಬಟ್ಟೆಯನ್ನು ಧರಿಸಲು ನೀಡಿ, ನಂತರ ಮಣೆಯ ಮೇಲೆ ಕೂರಿಸಿ ತಿಲಕವನ್ನು ಹಚ್ಚಿ, ಕಂಕಣ ಕಟ್ಟಿ, ಆರತಿಯನ್ನು ಮಾಡಿ ಸಿಹಿಯನ್ನು ತಿನ್ನಿಸುತ್ತಾರೆ. ಹೀಗೆ ಎಣ್ಣೆ ಸ್ನಾನ ಮಾಡಿಸಿಕೊಂಡ ಮಕ್ಕಳು ಚಳಿಗಾಲದ ಆ ಚುಮು ಚುಮು ನಸುಕಿನಲ್ಲಿ ಹಿರಿಯರ ಕಣ್ಗಾವಲಿನಲ್ಲಿ ಪಟಾಕಿಗಳನ್ನು ಹಾರಿಸುತ್ತಾರೆ. ಹೆಂಗಳೆಯರು ಅಡುಗೆ ಮನೆ ಸೇರಿ ಹಬ್ಬದ ಅಡುಗೆ ಮಾಡಿದರೆ, ಮನೆಯ ಪುರುಷರು ಹೊಲಗದ್ದೆಗಳಲ್ಲಿ ತಿರುಗಾಡಿ ಪೂಜೆಗೆ ಬೇಕಾಗುವ ಬಾಳೆಲೆಯ ಕಂಬಗಳು, ಮಾವಿನ ತೋರಣದ ಎಲೆಗಳು, ಹೂವುಗಳು, ವೀಳ್ಯ ದೆಲೆ,ಹಣ್ಣುಗಳು ಹೀಗೆ ತಮ್ಮ ನಿಲುಕಿನಲ್ಲಿರುವ ಎಲ್ಲಾ ವಸ್ತುಗಳನ್ನು ತರುತ್ತಾರೆ. ಸ್ವಲ್ಪ ದೊಡ್ಡ ಊರುಗಳಲ್ಲಾದರೆ ಇವೆಲ್ಲವೂ ಮಾರುಕಟ್ಟೆಯಲ್ಲಿ ಲಭ್ಯವಾಗುವುದರಿಂದ ತಮ್ಮ ಶಕ್ತ್ಯಾನುಸಾರ ಖರೀದಿಸುತ್ತಾರೆ. ಮಧ್ಯಾಹ್ನ ಹಬ್ಬದ ಅಡುಗೆ ಸವಿದು ಗಡದ್ದಾಗಿ ನಿದ್ದೆ ಮಾಡುವರು. ಮನೆ ಮನೆಯಲ್ಲೂ ನೆಂಟರಿಷ್ಟರು, ಮಾತು, ಹರಟೆ, ತಮಾಷೆಗೆ ಕೊರತೆಯೇ ಇಲ್ಲ. ಈ ತ್ರಯೋದಶಿಯ ದಿನವನ್ನು ಉತ್ತರ ಭಾರತದಲ್ಲಿ ಧನತೆರೇಸ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಈ ದಿನದಂದು ಏನನ್ನೇ ಖರೀದಿಸಿದರೂ ಅದು ಅಕ್ಷಯವಾಗುತ್ತದೆ ಎಂಬ ಬಲವಾದ ನಂಬಿಕೆ.

ಮರುದಿನ ಮುಂಜಾನೆ ಹಿರಿಯರ ಹಬ್ಬ. ಅಷ್ಟೇನೂ ವಿದ್ಯಾವಂತರಲ್ಲದ ಕಾಲದಿಂದಲೂ, ತಿಥಿ, ದಿನಗಳನ್ನು ನೆನಪಿಟ್ಟುಕೊಳ್ಳಲಾಗದ ನಮ್ಮ ಜನರು ಹಬ್ಬ-ಹುಣ್ಣಿಮೆಗಳಲ್ಲಿ, ಮದುವೆಗಳಲ್ಲಿ ಗತಿಸಿಹೋದ ಹಿರಿಯರನ್ನು ಕಳಶಗಳಲ್ಲಿ ಆಹ್ವಾನಿಸಿ, ಬಟ್ಟೆ ಬರೆಗಳನ್ನು ಏರಿಸಿ, ಪೂಜಿಸಿ, ಅವರಿಗಿಷ್ಟವಾದ ಅಡುಗೆ ತಯಾರಿಸಿ ಅವರಿಗೆ ಎಡೆ ಇರಿಸಿ ಆ ಗತಿಸಿ ಹೋದ ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ತನ್ಮೂಲಕ ಅವರ ಹಾರೈಕೆಯನ್ನು ಪಡೆದೆವು ಎಂಬ ತೃಪ್ತ ಭಾವ ಹೊಂದುವ ದಿನವೇ ಈ ಹಿರಿಯರ ಹಬ್ಬ. ಇಂದು ಕೂಡ ಮನೆಯ ಎಲ್ಲಾ ಹಿರಿಕಿರಿಯ ಸದಸ್ಯರು ಗತಿಸಿ ಹೋದ ಹಿರಿಯರ ಫೋಟೋಗಳನ್ನು, ಅವರು ಬಳಸುತ್ತಿದ್ದ ವಸ್ತುಗಳನ್ನು ಹೊಸ ಬಟ್ಟೆಗಳನ್ನು ಅವರಿಗೆ ಏರಿಸಿ ಪೂಜಿಸುತ್ತಾರೆ. ಅಂದು ಕೂಡ ಹೋಳಿಗೆಯ ಅಡುಗೆ ಮಾಡಿ ಎಡೆ ಹಾಕಿ ತಾವು ಕೂಡ ಊಟ ಮಾಡುತ್ತಾರೆ.

ಇನ್ನು ಅಮಾವಾಸ್ಯೆಯ ದಿನ ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸಿ, ಆರಾಧಿಸುವ ದಿನ. ಆ ದಿನ ಪೂರ್ವಾಹ್ನದ ವೇಳೆ ಪೂಜೆಯ ನಿಯಮವಿರುವವರು ತಮ್ಮ ತಮ್ಮ ಮನೆಗಳಲ್ಲಿ ನಿಶ್ಚಿತವಾದ ಜಾಗಗಳಲ್ಲಿ ಮಹಾಲಕ್ಷ್ಮಿಯ ವಿಗ್ರಹವನ್ನು ಫೋಟೋವನ್ನು ಇಟ್ಟು ಅದರ ಮುಂದೆ ಶಾಸ್ತ್ರೋಕ್ತವಾಗಿ ಕಳಶಸ್ಥಾಪನೆ ಮಾಡಿ ಗಣಪತಿ ಪೂಜೆ, ಸಂಕಲ್ಪ, ಮಹಾಲಕ್ಷ್ಮಿ ಪೂಜೆ ಮಾಡಿ ಹೋಳಿಗೆ ಪಾಯಸಗಳ (ಗೋಧಿ ಹುಗ್ಗಿಯ), ಕೋಸಂಬರಿ, ಬದನೆಕಾಯಿ ಇಲ್ಲವೇ ಹೀರೇಕಾಯಿ ಪಲ್ಯ ಅನ್ನ ತುಪ್ಪ ಸಾರು ಹೀಗೆ ಹಲವಾರು ಭಕ್ಷಗಳ ನೈವೇದ್ಯವನ್ನು ಅರ್ಪಿಸುತ್ತಾರೆ. ಜೀವನ ಚೆನ್ನಾಗಿ ಸುಖಮಯವಾಗಿ ಸಮೃದ್ಧಿಯಿಂದ ಸಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡು, ಮಹಾ ಮಂಗಳಾರತಿ ಮಾಡಿ, ಕಾಯಿ ಒಡೆದು ನೈವೇದ್ಯ ಮಾಡುತ್ತಾರೆ. ನಂತರ ತಮ್ಮ ನೆಂಟರಿಷ್ಟರೊಂದಿಗೆ ಹಬ್ಬದ ಊಟ ಸವಿಯುತ್ತಾರೆ. ಆದರೆ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯನ್ನು ರಾತ್ರಿಯ ಸಮಯದಲ್ಲಿ ಮಾಡುತ್ತಾರೆ. ಇಡೀ ಊರು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕೃತವಾಗಿ, ಮಣ್ಣಿನ ಹಣತೆಯ ಸಾಲಾಗಿಟ್ಟ ದೀಪಗಳ ಜಗಮಗಿಸುವ ಕಾಂತಿ ಮೈಮನಗಳನ್ನು ಪುಳಕಿತಗೊಳಿಸುತ್ತದೆ. ಪ್ರತಿ ಅಂಗಡಿಯಲ್ಲಿಯೂ ಪೂಜೆಯ ನಂತರ ಮಂಡಕ್ಕಿ ಡಾಣಿ ಕೊಬ್ಬರಿಯ ಚೂರು ಮತ್ತು ಸಿಹಿಯನ್ನು ಹಂಚುತ್ತಾರೆ. ಮನೆಗಳಲ್ಲಿ ಪೂಜೆ ಮುಗಿಸಿದ ಜನ ತಮಗೆ ಆಹ್ವಾನವಿತ್ತ ಅಂಗಡಿ, ಮುಂಗಟ್ಟುಗಳ ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ದೇವರಿಗೆ ನಮಸ್ಕರಿಸಿ ತಾಂಬೂಲ ಪಡೆಯುತ್ತಾರೆ. ಇನ್ನು ಕೆಲವರು ತಮ್ಮ ಮನೆಯ ಎಲ್ಲಾ ವಾಹನಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸುತ್ತಾರೆ. ಮನೆಗಳು ಅಂಗಡಿಗಳು ಸರ್ವಾಲಂಕೃತವಾಗಿ ಸಜ್ಜಾಗಿರುತ್ತವಷ್ಟೇ. ಪೂಜೆಯ ನಂತರ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ

ಈ ದಿನವೇ ನರಕಾಸುರನ ಸಂಹಾರವಾದ ದಿನ. ನರಕಾಸುರನ ಸಂಹಾರ ಮಾಡಿದ ಜ್ಞಾಪಕಾರ್ಥವಾಗಿ ಮನೆಯ ಸುತ್ತಲೂ,ದೀಪಗಳನ್ನು ಹೊತ್ತಿಸಿಟ್ಟು ಪಟಾಕಿ ಹಚ್ಚಿ ಬಗೆ ಬಗೆಯ ಹೂಬಾಣಗಳನ್ನು ಬಿಟ್ಟು ರಂಗುರಂಗಿನ ದೀಪಾವಳಿಯನ್ನು ಆಚರಿಸುತ್ತಾರೆ.
ನಾಲ್ಕನೆಯ ದಿನವೇ ಪಾಡ್ಯ. ಇದನ್ನು ಬಲಿಪಾಡ್ಯಮಿ ಎಂದು ಕೂಡ ಕರೆಯುತ್ತಾರೆ. ಪುರಾಣ ಕಥೆಗಳ ಪ್ರಕಾರ ಈ ದಿನ ದಾನಕ್ಕೆ ಹೆಸರಾದ ಆದರೆ ದುಷ್ಟ ರಾಕ್ಷಸನಾದ ಬಲಿಚಕ್ರವರ್ತಿಯನ್ನು ಮಹಾವಿಷ್ಣುವು ವಾಮನನ ಅವತಾರದಲ್ಲಿ ಬಂದು ಆತನಿಂದ ಮೂರು ಅಡಿ ಭೂಮಿಯನ್ನು ದಾನವಾಗಿ ಕೇಳಿದ. ಯಾರು ಕೇಳಿದರೂ, ಯಾವಾಗ ಕೇಳಿದರೂ ಇಲ್ಲ ಎಂದು ಹೇಳದ ಬಲಿಚಕ್ರವರ್ತಿಯು ಪುಟ್ಟ ವಾಮನ ರೂಪಿಗೆ ತನ್ನ ಕಾಲಳತೆಯಿಂದ ಮೂರು ಅಂಗುಲ ಭೂಮಿಯನ್ನು ಅಳೆದುಕೊಳ್ಳಲು ಹೇಳಿದ. ಅದರಂತೆ ತನ್ನ ಮೊದಲ ಹೆಜ್ಜೆಯನ್ನು ವಾಮನ ಭೂಮಿಯ ಮೇಲೆ ಇಟ್ಟಾಗ ಇಡೀ ಭೂಮಂಡಲವೇ ಆತನ ಪಾದದಡಿಯಲ್ಲಾಯಿತು. ವಾಮನ ಎರಡನೇ ಹೆಜ್ಜೆಯನ್ನು ಆಕಾಶದತ್ತ ಇಡಲು ಸೂಚಿಸಿದ ಬಲಿಚಕ್ರವರ್ತಿ, ವಾಮನರೂಪಿ ವಿಷ್ಣು ಆಕಾಶದೆಡೆಗೆ ಕಾಲು ಚಾಚಲು ಇಡಿ ಆಕಾಶವೇ ಆತನ ಪಾದದಡಿಯಲ್ಲಾಯಿತು. ಆಗ ವಾಮನನು ತನ್ನ ಮೂರನೇ ಪಾದವನ್ನು ಎಲ್ಲಿಡಲಿ ಎಂದು ಕೇಳಿದಾಗ ಮಾತಿಗೆ ತಪ್ಪದ ಬಲಿಚಕ್ರವರ್ತಿಯು ವಾಮನನಿಗೆ ನಿನ್ನ ಮೂರನೇ ಪಾದವನ್ನು ನನ್ನ ತಲೆಯ ಮೇಲೆ ಇಡು ಎಂದು ಹೇಳಿದ. ವಾಮನ ಅವತಾರಿಯು ತನ್ನ ಮೂರನೇ ಪಾದವನ್ನು ಬಲಿಚಕ್ರವರ್ತಿಯ ತಲೆಯ ಮೇಲೆ ಇಟ್ಟು ಜೋರಾಗಿ ತುಳಿಯಲು ಬಲಿಯು ಪಾತಾಳದಲ್ಲಿ ತಳ್ಳಲ್ಪಟ್ಟನು. ಎಷ್ಟೇ ದೊಡ್ಡ ದಾನಿಯಾದರೂ ತನ್ನ ದುಷ್ಕೃತ್ಯಗಳಿಂದ ಪಾಪಾತ್ಮನಾಗಿದ್ದ ಬಲಿ ಚಕ್ರವರ್ತಿಯ ದಮನವು ವಿಷ್ಣುವಿನ ಅವತಾರವಾದ ವಾಮನನಿಂದ ಆದ ಶುಭ ದಿನವನ್ನು, ಜೊತೆಗೆ ಬಲಿಯ ದಾನ ಗುಣವನ್ನು ನೆನೆಸುವ ಸಲುವಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದು ಆಚರಿಸುತ್ತಾರೆ.

ಈ ದಿನ ಪಾಂಡವರು ಇಂದ್ರಪ್ರಸ್ಥ ರಾಜ್ಯಕ್ಕೆ ಮರಳಿದ ದಿನ. ಈ ದಿನದಂದು ಮನೆ ಮನೆಗಳ ಮುಂದೆ ಸಗಣಿಯನ್ನು ಸಾರಿಸಿ ರಂಗವಲ್ಲಿಯನ್ನು ಇಟ್ಟು ರಂಗವಲ್ಲಿಯ ಮಧ್ಯಭಾಗದಲ್ಲಿ ಪಾಂಡವರನ್ನು ಕೂರಿಸುತ್ತಾರೆ. ಮನೆಮನೆಯ ದೇವರ ಜಗಲಿಗಳಲ್ಲಿ, ಒರಳು ಕಲ್ಲಿನ ಬಳಿ, ಬೀಸುವ ಕಲ್ಲಿನ ಬಳಿ, ಅಡುಗೆ ಒಲೆಯ ಬಳಿ, ಮನೆಯ ಹಿತ್ತಲ ಬಾಗಿಲ ಬಳಿ ಮನೆಯ ಮುಂಬಾಗಿಲ ಎರಡು ಬದಿಗಳಲ್ಲಿ ಸಗಣಿಯಿಂದ ತಯಾರಿಸಿದ ಪಾಂಡವರ ಮೂರ್ತಿಗಳು ಅವುಗಳನ್ನು ಉತ್ತರಾಣಿ ಕಡ್ಡಿ, ಕೊಲ್ಹಾಣಿಯಿಂದ, ಹಳದಿ ಹೊನ್ನಂಬರಿಕೆ ಹೂಗಳಿಂದ ಸಿಂಗರಿಸಿರುತ್ತಾರೆ.
ನಮ್ಮ ಗ್ರಾಮೀಣ ಭಾಗದಲ್ಲಿ ಇನ್ನೂ ಒಂದು ಪೂಜೆಯ ವಿಶೇಷತೆ ಇದೆ. ಮನೆಮನೆಗಳಲ್ಲಿ ದನದ ಹಕ್ಕಿ(ಗ್ರಾಮ್ಯ ಭಾಷೆಯಲ್ಲಿ ದಂದಕ್ಕಿ) ಇರುತ್ತದೆಯಲ್ಲವೇ… ಆ ಹಕ್ಕಿಯಲ್ಲಿನ ದನಗಳನ್ನು ಮೇಯಲು ಹೊರಗಟ್ಟಿ, ನಂತರ ದಂದಕ್ಕಿಯನ್ನು ಚೊಕ್ಕಟವಾಗಿ ಗುಡಿಸಿ ಸಾರಿಸಿ ಕಾಗದದ ಸುರುಳಿಗಳಿಂದ ಕೋಟೆಯನ್ನು ಕಟ್ಟಿ ಅಲ್ಲಿ ಹಟ್ಟೆವ್ವನನ್ನು ಸ್ಥಾಪಿಸುತ್ತಾರೆ. ಜೋಳದ ಗರಿಗಳ ಶೃಂಗಾರ ಮಂಟಪವನ್ನು ಮಾಡಿ, ಅದರಲ್ಲಿ ಬನ್ನಿಕಟ್ಟಿಗೆಯ ಕಂಬವನ್ನು ಮಧ್ಯದಲ್ಲಿ ಇಟ್ಟು ಹಾಲು ತುಪ್ಪವನ್ನು ಹಾಕಿ ಹಟ್ಟೆವ್ವನನ್ನು, ಪಾಂಡವರನ್ನು ಸ್ಥಾಪಿಸಿ, ಸೈನಿಕರನ್ನು ದ್ವಾರಪಾಲಕರನ್ನು ಪ್ರತಿಷ್ಠಾಪಿಸಿ ನಿತ್ಯಪೂಜ ವಿಧಿಗಳಂತೆ ಪೂಜಿಸಿ, ಚಂಡು ಹೂವು ಸೇವಂತಿಗೆ ವಿಶೇಷವಾಗಿ ಹೊನ್ನಂಬರಿಕೆ ಕೊಲ್ಹಾಣಿ ಗಳಿಂದ ಅಲಂಕರಿಸುತ್ತಾರೆ.,,,( ಈ ಹೊನ್ನಂಬರಿಕೆ ಹೂವಿನಲ್ಲಿಯೂ ಒಂದು ವಿಶೇಷತೆ ಇದೆ. ಹೊನಂಬರಿಕೆ ಹೂವಿನ ಒಳಭಾಗದಲ್ಲಿರುವ ಹೂವಿನ ಮೊಗ್ಗನ್ನು ಬಿಡಿಸಿದರೆ ಅದು ಐದು ದಳಗಳನ್ನು ಹೊಂದಿದ್ದು ಅದು ಪಂಚಪಾಂಡವರನ್ನು ಸೂಚಿಸುತ್ತದೆ.) ಸುತ್ತಲೂ ದೀಪಗಳನ್ನು ಹಚ್ಚಿಡುತ್ತಾರೆ. ಈ ಬನ್ನಿ ಕಂಬವನ್ನು ಮುಂದೆ ರಾಶಿ ಮಾಡುವಾಗ ಕಣದಲ್ಲಿ ಮರು ಪ್ರತಿಷ್ಠಾಪಿಸುತ್ತಾರೆ. ತುಸು ಕತ್ತಲಿರುವ ಈ ಭಾಗದಲ್ಲಿ ಹಗಲು ಹೊತ್ತಿನಲ್ಲಿಯೇ ರಂಗವಲ್ಲಿಯ ಮೇಲೆ ಹಚ್ಚಿಟ್ಟ ದೀಪಗಳು ಕಣ್ಣಿಗೆ ನೀಡುವ ಆನಂದವನ್ನು, ಮನಸ್ಸಿಗೆ ನೀಡುವ ಮುದವನ್ನು ವರ್ಣಿಸಲು ಅಸಾಧ್ಯ. ಅನುಭವಿಸಿಯೇ ತಿಳಿಯಬೇಕು. ಪಾಂಡವರನ್ನು ಮನೆಗೆ ಆಹ್ವಾನಿಸುವ ಕುರುಹಾಗಿ ಎರಡೂ ಕೈಗಳ ಮುಷ್ಟಿಯನ್ನು ಮಾಡಿ ಸುಣ್ಣ ಇಲ್ಲವೇ ಕೆಮ್ಮಣ್ಣಿನಲ್ಲಿ ಅದ್ದಿ ಮಾಡಿದ ಹೆಜ್ಜೆಗಳನ್ನು ಮನೆಯ ತಲಬಾಗಿಲಿನಿಂದ ದೇವರ ಮನೆಯವರಿಗೂ ಇಲ್ಲವೇ ದಂದಕ್ಕಿಯವರೆಗೂ ಬಿಡಿಸುತ್ತಾರೆ. ಹಲವಾರು ವಿಧದ ಭಕ್ಷ್ಯಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಈ ಹಟ್ಟೆವ್ವನನ್ನು ಪೂಜಾ ವಿಧಿಗಳ ಮೂಲಕ ವಿಸರ್ಜಿಸಿ ಮನೆಯ ಮೇಲೆ ಇಲ್ಲವೇ ಗೋಡೆಗಳ ಮೇಲೆ ಇಟ್ಟು ಬಿಡುತ್ತಾರೆ.

ಪಾಡ್ಯದ ಈ ದಿನದಂದು ಮುಂಜಾನೆಯೇ ಮನೆಯ ಎಲ್ಲರೂ ಎಣ್ಣೆ(ಎಣ್ಣೆ ಮಜ್ಜನ)ಮತ್ತು ಬಿಸಿ ನೀರಿನ ಅಭ್ಯಂಗ ಸ್ನಾನ ಮಾಡುತ್ತಾರೆ. ಮನೆಯ ಎಲ್ಲಾ ಪುರುಷ ಸದಸ್ಯರಿಗೂ ಮನೆಯ ಪುಟ್ಟ ಹೆಣ್ಣುಮಕ್ಕಳಿಂದ ಹಿರಿಯ ಹೆಂಗಸರವರೆಗೂ ಸೇರಿ ತಿಲಕವಿಟ್ಟು ಕಂಕಣ ಕಟ್ಟಿ ಅಕ್ಷತೆ ಹಾಕಿ ಆರತಿ ಮಾಡಿ ಹಾರೈಸುತ್ತಾರೆ. ಹೀಗೆ ಹಾರೈಸುವ ಹೆಣ್ಣು ಮಕ್ಕಳಿಗೆ ಆರತಿಯ ತಟ್ಟೆಯಲ್ಲಿ ತಮ್ಮ ಶಕ್ತ್ಯಾನುಸಾರ ಹಣ, ಚಿನ್ನ, ಬಟ್ಟೆಗಳ ಉಡುಗೊರೆ ದೊರೆಯುತ್ತದೆ. ಶಾವಿಗೆ ಪಾಯಸ ಈ ದಿನದ ಮುಖ್ಯ ಆಹಾರ. ಶಾವಿಗೆ ಸಂಘಟನೆಯ ಪ್ರಾಮುಖ್ಯತೆಯನ್ನು ಸಾರುವ ಆಹಾರ. ಶಾವಿಗೆಯಂತೆ ನಾವೆಲ್ಲರೂ ಕೌಟುಂಬಿಕವಾಗಿ ತಳುಕು ಹಾಕಿಕೊಂಡಿರಬೇಕು ಎಂಬ ಸಂದೇಶವನ್ನು ಆಹಾರದ ಮೂಲಕ ನಾವು ಪಡೆಯುತ್ತೇವೆ.

ಹೊಸದಾಗಿ ಮದುವೆಯಾದ ನವ ದಂಪತಿಗಳಿಗೆ ಹೆಣ್ಣಿನ ತವರು ಮನೆಯಲ್ಲಿ ಮೊದಲ ದೀಪಾವಳಿಯ ಹಬ್ಬ ವಿಶೇಷವಾದದ್ದು. ಮೊದಲ ದೀಪಾವಳಿ ಹಬ್ಬಕ್ಕೆ ಬಂದ ಅಳಿಯ ಮನೆಯ ಎಲ್ಲರಿಗೂ ಉಡುಗೊರೆಗಳನ್ನು ತಂದುಕೊಟ್ಟರೆ ಮಗಳು,ಅಳಿಯನಿಗೆ ಚಿನ್ನದ ಒಡವೆ, ಬಟ್ಟೆ ನೀಡಿ ಸತ್ಕರಿಸಲಾಗುತ್ತದೆ. ಉಳ್ಳವರಿಗೇನೋ ಸರಿಯೇ ಆದರೆ ಆರ್ಥಿಕವಾಗಿ ತೊಂದರೆಯಲ್ಲಿರುವ ಬಹುತೇಕ ಜನರಿಗೆ ದೀಪಾವಳಿ ಹಬ್ಬ ದಿವಾಳಿಯನ್ನಾಗಿಸುವ ಹಬ್ಬವಾಗುತ್ತದೆ. ಮಕ್ಕಳ ಚೆಲ್ಲಾಟ, ಹೊಸ ಮದು ಮಕ್ಕಳ ಹುಡುಗಾಟ, ಮಾವನ ಮನೆಯ ಎಲ್ಲಾ ಹಿರಿಕಿರಿಯರ ಕಾಡಿಸುವಾಟ ಹೀಗೆ ದೀಪಾವಳಿ ಹಚ್ಚ ಹಸಿರಾಗಿ ಮನದಲ್ಲಿ ನಿಲ್ಲುತ್ತದೆ.
ಮುಖ್ಯವಾಗಿ ದೀಪಾವಳಿ ಹಬ್ಬದ ಉದ್ದೇಶ ಸತ್ಯಮೇವ ಜಯತೆ ಎಂಬ ಸಂದೇಶವನ್ನು ನೀಡುವುದು. ಸತ್ಯವು ಯಾವಾಗಲೂ ಗೆಲ್ಲುತ್ತದೆ ಎಂದು ಸಾರುವ ಎಲ್ಲ ಪೌರಾಣಿಕ, ಐತಿಹಾಸಿಕ ಘಟನೆಗಳನ್ನು ನೆನಪಿಸಿಕೊಂಡು, ಮನುಷ್ಯ ದೈಹಿಕವಾಗಿ ಸಾಮಾಜಿಕವಾಗಿ ಭಾವನಾತ್ಮಕವಾಗಿ ಎಷ್ಟೇ ಜರ್ಜರಿತನಾಗಿದ್ದರು ತನಗೂ ಒಂದು ಒಳ್ಳೆಯ ದಿನ ಬಂದೇ ಬರುತ್ತದೆ ಎಂದು ಆಶಿಸುವ, ಭರವಸೆ ಮತ್ತು ವಿಶ್ವಾಸ ಹುಟ್ಟಿಸುವ, ಸಂಬಂಧಗಳಲ್ಲಿ ಆತ್ಮೀಯತೆಯನ್ನು ಹೆಚ್ಚಿಸುವ ಹಬ್ಬ ದೀಪಾವಳಿ.

“ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನ ಸಂಪದಂ
ಶತ್ರುಬುದ್ಧಿ ವಿನಾಶಾಯಚ
ದೀಪ ಜ್ಯೋತಿ ನಮೋಸ್ತುತೆ”

| ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

 

 

ಜಾಹೀರಾತು
error: Content is protected !!