https://youtu.be/NHc6OMSu0K4?si=SI_K4goOPEgwo6h2
ನಗರದ ಹೊರವಲಯದ ವ್ಯಾಸನಕೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸೋಮವಾರ ಎರಡು ಲಾರಿ ಮತ್ತು ಕ್ರೂಸರ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಾವಿಗೆ ಯಾರು ಹೊಣೆ? | ಬಹಳ ಮೋಸವಾಯ್ತು ಎಂದು ಶಾಸಕ ಗವಿಯಪ್ಪ
ಹಂಪಿ ಟೈಮ್ಸ್ ಹೊಸಪೇಟೆ:
ಬಾಳಿ ಬದುಕಬೇಕಿದ್ದವರನ್ನೆ ಕಿತ್ತುಕೊಂಡೆಯಲ್ಲೋ, ಮನೆಯ ನಂದಾದೀಪಗಳನ್ನೇ ಆರಿಸಿಬಿಟ್ಟಿಯಲ್ಲೋ, ಕುಟುಂಬದ ಬೆಳ್ಳಿ ಚುಕ್ಕಿಯಂತಿದ್ದ ಕಂದಮ್ಮಗಳನ್ನು ಉಳಿಸದೇ ಕಸಿದುಕೊಂಡಿಯಲ್ಲೋ ಎಂದು ಆಕಾಶದತ್ತ ಕೈ ಎತ್ತಿ ರೋಧಿಸುತ್ತಿದ್ದ ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟಿತ್ತು.
ದೇವರಿಗೆ ಹೋದವರು ಇನ್ನೇನು ಮನೆಗೆ ಬರುತ್ತಾರೆ ಎನ್ನುವಷ್ಟರಲ್ಲಿ ಭೀಕರ ರಸ್ತೆ ಅಪಘಾತವಾಗಿದೆ ಎಂಬ ಮಾಹಿತಿ ಕುಟುಂಬದ ಸದಸ್ಯರ ಕಿವಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಕೂಡಲೇ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕುಟುಂಬದ ಸದಸ್ಯರ ಮುಖ ನೋಡಲೆಂದು ಏಳುಕೇರಿಯ ಜನ ಓಡೋಡಿ ಬಂದರು. ಕುಟುಂಬದ ಸದಸ್ಯರನ್ನು ಸಂತೈಸಲು ಬಂದವರು ಕಣ್ಣೀರ್‍ಹಾಕಿದ ಘಟನೆ ಸೋಮವಾರ ಸಂಜೆ ನಡೆಯಿತು.
ಕುಟುಂಬದ ಕಂದನಿಗೆ ಜವಳ ಮಾಡಿಸಲೆಂದು ಹರಪನಹಳ್ಳಿ ತಾಲೂಕು ಬಾಗಳಿ ಸಮೀಪದ ಗೋಣಿಬಸವೇಶ್ವರ ದೇವರಿಗೆ ಸೋಮವಾರ ಬೆಳಿಗ್ಗೆ ಹೊಸಪೇಟೆಯಿಂದ ಒಂದು ವಾಹನ, ಸಂಡೂರಿನಿಂದ ಮತ್ತೊಂದು ವಾಹನದಲ್ಲಿ ಕುಟುಂಬದ ಸದಸ್ಯರು ತೆರಳಿದ್ದರು. ಪೂಜಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ಪೂರ್ಣಗೊಳಿಸಿಕೊಂಡು, ಸಂಜೆ ಕುಟುಂಬದ ಸದಸ್ಯರೊಂದಿಗೆ ಎರಡು ವಾಹನಗಳಲ್ಲಿ ಹೊಸಪೇಟೆ ಮಾರ್ಗವಾಗಿ ಮನೆಗೆ ಹಿಂತಿರುಗುತ್ತಿದ್ದರು. ಹೊಸಪೇಟೆ ಹೊರವಲಯದ ಸುರಂಗಮಾರ್ಗ(ಟನಲ್) ಬಂದಾಗ ಇನ್ನೇನು ಕೇವಲ ೧೦ ನಿಮಿಷದಲ್ಲಿ ಮನೆ ಸೇರುತ್ತೇವೆ ಅಂದುಕೊಂಡಿದ್ದ ಸದಸ್ಯರಿಗೆ ವಿದಿ, ಟಿಪ್ಪರ್ ಲಾರಿ ರೂಪದಲ್ಲಿ ಬಂದೆರಗಿ ಅಟ್ಟಹಾಸ ಮೆರೆದು ಕುಟುಂಬದ ಏಳು ಜನರನ್ನು ಕಿತ್ತುಕೊಂಡಿರುವ ದೃಶ್ಯವನ್ನು ಕಂಡ ಜನರು ಮಮ್ಮಲ ಮರುಗಿದರು. ಎಲ್ಲರ ಕಣ್ಣಾಲೆಗಳು ತುಂಬಿ ಬಂದವು. ಈ ಸಾವಿಗೆ ಹೊಣೆ ಯಾರು? ಎಂಬ ನೋವಿನ ನುಡಿಗಳಿಗೆ ಉತ್ತರವೇ ಇಲ್ಲದಂತಾಗಿತ್ತು.
ಮೃತರು: ಹೊಸಪೇಟೆ ನಗರದ ಉಕ್ಕಡಕೇರಿಯ ೮೦ ವರ್ಷದ ಕೆಂಚಮ್ಮ, ಇವರ ತಮ್ಮ ಗೋಣಿಬಸಪ್ಪ (೬೫), ಗೋಣೀಬಸಪ್ಪನವರ ಮೊಮ್ಮಗ ಯುವರಾಜ(೩), ಭಾಗ್ಯ ರಾಘವೇಂದ್ರ (೩೨), ಮತ್ತು ಇವರ ಬಂಧುಗಳಾದ ಸಂಡೂರಿನ ಭೀಮಲಿಂಗಪ್ಪ(೬೦), ಇವರ ಪತ್ನಿ ಉಮಾ (೪೫), ಪುತ್ರ ಅನಿಲ್ (೩೦) ಅಪಘಾತ ಜರುಗಿದ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಎರಡು ವರ್ಷದ ಗಂಡು ಮಗು ಮಹಿರಾ ಮತ್ತು ೩೫ ವರ್ಷದ ರಾಜೇಶ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗೆ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಶ್ರೀಹರಿಬಾಬು ತಿಳಿಸಿದ್ದಾರೆ.
ಘಟನೆ: ಹೊಸಪೇಟೆ ಕಡೆಯಿಂದ ಮರಿಯಮ್ಮಹಳ್ಳಿಯತ್ತ ಸಾಗುತ್ತಿದ್ದ ಬೃಹತ್ ಗಣಿಲಾರಿಯೊಂದು ಸುರಂಗಮಾರ್ಗ (ಟನಲ್) ದಾಟುತ್ತಿದ್ದಂತೆ ಟೈಯರ್ ಬರ್ಸ್ಟ್ ಆಗಿ, ಆಕ್ಸಲ್ ಕಟ್ಟಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಡಿವೈಡರ್ ಏರಿ, ಮರಿಯಮ್ಮನಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಆಗಮಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು, ನಂತರ ಕ್ರೂಸರ್‌ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ ವಾಹನದಲ್ಲಿದ್ದ ಒಂದೇ ಕುಟುಂಬದ ಸಂಬಧಿಗಳಾಗಿದ್ದ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೂಡಲೇ ದುರ್ಘಟನಾ ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು, ಹಾಗೂ ಹೊಸಪೇಟೆ ವಿವಿಧ ಠಾಣೆಗಳ ಪೊಲೀಸರು ತೆರಳಿ ಅಗತ್ಯ ಕ್ರಮಕೈಗೊಂಡು ತನಿಖೆ ಕಾರ್ಯ ಮುಂದುವರೆಸಿದ್ದಾರೆ.
ಶಾಸಕ ಎಚ್.ಆರ್.ಗವಿಯಪ್ಪ ನೂರು ಹಾಸಿಗೆ ಆಸ್ಪತ್ರೆಗೆ ಆಗಮಿಸಿ ಮೃತ ವ್ಯಕ್ತಿಗಳನ್ನು ನೋಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು. ಕುಟುಂಬಕ್ಕೆ ಬಹಳ ಮೋಸವಾಯ್ತು ಎನ್ನುತ್ತಾ ಶಾಸಕರು ಭಾವುಕರಾದರು.ಅಗತ್ಯ ಕ್ರಮವಹಿಸಲು ಪೊಲೀಸ್ ಹಾಗು ವೈದ್ಯಸಿಬ್ಬಂದಿಗೆ ಸೂಚಿಸಿದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ