https://youtu.be/NHc6OMSu0K4?si=SI_K4goOPEgwo6h2


ಹಂಪಿ ಟೈಮ್ಸ್ ಹೊಸಪೇಟೆ:
ಬರ ಪರಿಶೀಲಿಸಿದ ನಂತರ ಹಿಂದಿನ ಜಿಲ್ಲೆಗಿಂತ ಈ ಭಾಗದಲ್ಲಿ ಹೆಚ್ಚು ಹಾನಿಗೊಳಪಟ್ಟಿದೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಅಭಿಪ್ರಾಯಪಟ್ಟರು.
ವಿಜಯನಗರ ಜಿಲ್ಲೆಯಲ್ಲಿ ಬರಪೀಡಿತ ಎಂದು ಘೋಷಿಸಲಾದ ಎಲ್ಲಾ ತಾಲ್ಲೂಕುಗಳ ಪರಿಸ್ಥಿತಿ ಅಧ್ಯಯನಕ್ಕೆ, ಕೇಂದ್ರ ಬರ ಅಧ್ಯಯನದ ಎರಡನೇ ತಂಡವಾದ ಕೇಂದ್ರ ಕುಡಿಯುವ ನೀರು ಹಾಗು ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜೇಶ್ವರ ರಾವ್, ಪಶುಸಂಗೋಪನೆ ಇಲಾಖೆ ನಿರ್ದೇಶಕ ವಿಜಯ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾವ್ ಹಾಗೂ ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರ ನೇತೃತ್ವದ ತಂಡ ಶನಿವಾರ ಹೊಸಪೇಟೆಯ ನಂದಿಬಂಡಿ ಗ್ರಾಮಕ್ಕೆ ಮೊದಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂದಿಬಂಡಿ ಗ್ರಾಮದ ಹರಿಜನ ಮರಿಯವ್ವ ಅವರು 3.78 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದರು. ತಂಡದ ಅಧಿಕಾರಿಗಳು ಬೆಳೆ ನಷ್ಟ ಹೊಂದಿದ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಸುತ್ತಮುತ್ತಲಿನ ಭಾಗದಲ್ಲಿ ಇತರ ರೈತರು ಬಿತ್ತಿ ನಷ್ಟ ಅನುಭವಿಸಿದ್ದ ಬೆಳೆಗಳನ್ನು ಸಹ ಅಧಿಕಾರಿಗಳ ತಂಡಕ್ಕೆ ತೋರಿಸಲಾಯಿತು. ಈ ಭಾಗದಲ್ಲಿ ಉಂಟಾದ ಮಳೆ ಪ್ರಮಾಣ, ನಷ್ಟದ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಅವರು ಸಹ ಪೂರಕ ಮಾಹಿತಿ ನೀಡಿದರು.



ಈ ವೇಳೆ ಮಾತನಾಡಿದ ಕೇಂದ್ರ ತಂಡದ ಅಧಿಕಾರಿಗಳು ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಲಾಗುತ್ತದೆ. ಪೂರ್ವದಲ್ಲಿ ಭೇಟಿ ನೀಡಿದ 2 ಜಿಲ್ಲೆಗಿಂತಲೂ ಹೆಚ್ಚಿನ ಹಾನಿ ಈ ಭಾಗದಲ್ಲಿ ಉಂಟಾಗಿದೆ. ಅಧಿಕಾರಿಗಳಿಂದ, ರೈತರಿಂದ ಪಡೆದ ಮಾಹಿತಿ ಜೊತೆಗೆ ರಾಜ್ಯ ಸರ್ಕಾರದ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಶೇ.90ರಷ್ಟು ಮೆಕ್ಕೆಜೋಳ ಹಾನಿ: ಡಿಸಿ ಮಾಹಿತಿ
ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ 3.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.69 ಲಕ್ಷ ಹೆಕ್ಟೇರ್ ಕೃಷಿ ಮತ್ತು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇ.65ರಷ್ಟು ಭಾಗ ಬಿತ್ತನೆಯಾಗಿದ್ದ ಮೆಕ್ಕೆಜೋಳದ ಶೇ.95ರಷ್ಟು ಹಾನಿಯಾಗಿದೆ. ಈ ಭಾಗ ಖುಷ್ಕಿ ಬೇಸಾಯ ಇರುವ ಕಾರಣದಿಂದ ಶೇಂಗಾ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದೆ. ತಂಡದ ಅಧಿಕಾರಿಗಳ ಜೊತೆ ಇದ್ದು, ಇಲ್ಲಿನ ಪರಿಸ್ಥಿತಿಯ ಒಟ್ಟಾರೆ ವರದಿಯನ್ನು ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.
ಅಧಿಕಾರಿಗಳಿಗೆ ಸಂಕಷ್ಟ ತೋಡಿಕೊಂಡ ರೈತರು: ಬರದಿಂದ ನಷ್ಟವುಂಟಾದ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಅಧಿಕಾರಿಗಳಿಗೆ ರೈತರು ತಾವು ಅನುಭವಿಸಿದ ನಷ್ಟವನ್ನು ತೋಡಿಕೊಂಡರು. ನಾವು ಮಳೆಯನ್ನೇ ಆಶ್ರಯಿಸಿದ್ದೇವೆ, ಜಲಾಶಯವಿದ್ದರೂ ನೀರಿನ ಕೊರತೆ ಹೆಚ್ಚಿದೆ. ಕುಡಿಯುವ ನೀರಿನ ಕೊರತೆ ಸಹ ಹೆಚ್ಚಿದೆ ಎಂದು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹಂಚಿಕೊಂಡರು.
ನಂದಿಬಂಡಿ ನಂತರ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾರಾಯಣದೇವರ ಕೆರೆ, ಹಂಪಾಪಟ್ಟಣ, ಆನೆಕಲ್, ಮಾದೂರು, ತಿಮ್ಮಾಪುರ, ರಾಯರ ತಾಂಡ ಹಾಗೂ ಈಚಲುಬೊಮ್ಮನಹಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿ ಉಂಟಾದ ಬೆಳೆ ನಷ್ಟದ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಕೇಂದ್ರ ತಂಡದ ಅಧಿಕಾರಿಗಳ ಜೊತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.




More Stories
ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಫೈನಲ್ಗೆ ಭಾರತ ಮಹಿಳಾ ತಂಡದ ಪ್ರವೇಶ
ಪೊಲೀಸರ ಸೇವೆ ಅವಿಸ್ಮರಣೀಯ: ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ
ಹೊಸಪೇಟೆಯಲ್ಲಿ ಗುರುವಂದನಾ ಕಾರ್ಯಕ್ರಮ: ಹಳೇ ವಿದ್ಯಾರ್ಥಿಗಳ ಸಾಧನೆಗೆ ಗುರುಗಳ ಹರ್ಷ