https://youtu.be/NHc6OMSu0K4?si=SI_K4goOPEgwo6h2
ಸ್ಥಳ ಪರಿಚಯ
ನಮ್ಮ ಕರುನಾಡಿನ ಪ್ರತಿಯೊಂದು ಊರು ವಿಶೇಷತೆಗಳಿಂದ ಕೂಡಿದೆ. ಹುಡುಕುತ್ತಾ ಹೋದರೆ, ಅದರದೇ ಆದ ಸ್ಥಳ ಇತಿಹಾಸ ಹೊಂದಿದೆ. ಅದರಲ್ಲೂ ವೈಭವದ ಇತಿಹಾಸ, ಹಂಪಿಯ ಸುವರ್ಣಯುಗವನ್ನೇ ತನ್ನ ಮಡಿಲಲ್ಲಿ ಕಾಪಿಟ್ಟುಕೊಂಡಿರುವ, ನಮ್ಮ ವಿಜಯನಗರ ಜಿಲ್ಲೆಯಲ್ಲಿಯೇ ಅನೇಕ ಐತಿಹಾಸಿಕ, ಪ್ರಾಕೃತಿಕ ಸ್ಥಳಗಳನ್ನು ನಾವು ಕಾಣುತ್ತೇವೆ.
ಅದೇ ರೀತಿ ನಾನು ಈಗ ಪರಿಚಯಿಸುತ್ತಿರುವುದು, ನಮ್ಮ ವಿಜಯನಗರ ಜಿಲ್ಲೆಯ ಹೆಮ್ಮೆಯ, ಏಕೈಕ ಪಕ್ಷಿಧಾಮದ ಬಗೆಗೆ. ನಮ್ಮ ಜಿಲ್ಲೆಯ ಹೆಗ್ಗುರುತು, ಜೊತೆಗೆ ನನ್ನ ಊರೇ ಆಗಿರುವ, ಹಗರಿಬೊಮ್ಮನಹಳ್ಳಿ ತಾಲೂಕಿನ, ತುಂಗಭದ್ರೆಯ ಹಿನ್ನೀರಿನ ದಂಡೆಯಲ್ಲಿರುವ, “ಅಂಕಸಮುದ್ರ ಪಕ್ಷಿಧಾಮ”. ನಮ್ಮೂರಿನ, ನಮ್ಮ ತಾಲೂಕಿನ, ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ.
ಜಿಲ್ಲಾ ಕೇಂದ್ರ ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿಗೆ ಹೋಗುವ ಹಾದಿಯಲ್ಲಿ, ೩೦ಕಿ.ಮಿ.ಗಳಷ್ಟು ದೂರ. ನಡುವೆ ಬರುವ ಉಪಿನಾಯಕನಹಳ್ಳಿಯಿಂದ ೩ಕಿ.ಮಿಗಳಷ್ಟು ಒಳ ಸಾಗಿದರೆ ಸಿಗುವುದೇ ನನ್ನೂರು ಅಂಕಸಮುದ್ರ. ಊರಿಗಿಂತ ಮೊದಲೇ, ಎಡಗಡೆಗೆ ಪಕ್ಷಿಧಾಮದ ಕೆರೆ ಸಿಗುವುದು.
ಪಕ್ಷಿಧಾಮವಿರುವ, ನನ್ನೂರಿನ ಹಾದಿಯೂ ಆನಂದಮಯವೇ. ಹೊಸಪೇಟೆ ದಾಟಿ, ಹರಿಹರ ರಸ್ತೆಯಲ್ಲಿ ಸಾಗಿದರೆ, ( ಹೆಬ್ಬಾಗಿಲು)ನಂತಿರುವ ಎರಡು ಸುರಂಗಗದ ನೋಟ. ಮೇಲಿರುವ ಕ್ಷೇತ್ರನಾಥನ ವೀರಭದ್ರೇಶ್ವರ ಕಾವಲು. ಹಸಿರು, ಬೆಟ್ಟಗುಡ್ಡದದಲ್ಲಿ ಸ್ಥಿತವಾಗಿರುವ, ತುಂಗಭದ್ರೆಯ ನೀರೊಡಲು, ನೋಡಲು ಸರೋವರದಂತಿರುವ ತುಂಗಭದ್ರೆಯ ಒಡಲನ್ನು ನೋಡಿ, ನೋಡುಗರು ವಾವ್ !! ಎನ್ನದಿರರು!! ಅದಕ್ಕಿರುವ ಹೆಸರೇ “ಲೇಕ್ ವೀವ್ ” ಎಂದು. ಸರೋವರ ಭಾವ ತಂದುಕೊಡುವುದು. ಅಲ್ಲಿರುವ ಪಾರ್ಕನಲ್ಲಿ ವಿರಮಿಸಿ, ನಿಂತು ಫೋಟೋ ತೆಗೆದುಕೊಂಡೇ ಮುಂದೆ ಸಾಗುವರು. ಮುಂದೆ ಮುಂದೆ ಸಾಗುತ್ತಾ, ಕಣ್ತಣಿಸುವ ಕಬ್ಬು, ಬಾಳೆ, ಭತ್ತದ ಗದ್ದೆಗಳ ಹಸಿರು. ನಂತರ ಒಳದಾರಿಗೆ ಬಂದರೆ, ನಮ್ಮೂರು ಹತ್ತಿರವಾಗುತ್ತಿದ್ದಂತೆ, ಹಸಿರನ್ನೇ ಹೊದ್ದುಕೊಂಡು, ಅನ್ನವನ್ನುಣಿಸಲು ಸಿದ್ಧವಾಗಿರುವ ಭೂರಮೆ. ಹಣ್ಣಿನ ತೋಟಗಳು, ನೀರಿನ ಜುಳುಜುಳು ಹರಿಯುವಿಕೆಯನ್ನು ಕಾಣುತ್ತಾ ಸಾಗುತ್ತೇವೆ.
ಊರ ಹತ್ತಿರ ಬಲಬದಿಗೆ ಭತ್ತದ ಗದ್ದೆಗಳಿಂದಾಚೆ ಶಾಂತವಾಗಿ ಹರಿವ ತುಂಗಭದ್ರೆ. ನಡುವೆ ನಮ್ಮೂರ ಮುಖ್ಯರಸ್ತೆ. ಎಡಬದಿಗೆ ಕೆರೆಯ ಏರಿ. ಅದೇ ಪಕ್ಷಿಧಾಮ. “ಪಕ್ಷಿಧಾಮ”ವು, ೨೦೦ ಕ್ಕೂ ಜಾಸ್ತಿ ಹೆಕ್ಟರ್ ಗಟ್ಟಲೇ ಮೈ ಚಾಚಿರುವ, “ಕರಿಜಾಲಿ”ಯಿಂದಾವೃತ ಕೆರೆ. ಮೊದಲು ನಮ್ಮೂರಿನ ನಾವೆಲ್ಲಾ, ಈಗಿರುವ ಪಕ್ಷಿಧಾಮದ ಸ್ಥಳಕ್ಕೆ,
“ಜಾಲಿ” ಎಂದೇ ಕರೆಯುತ್ತಿದ್ದೆವು.
ಬಹುತೇಕ ಕರಿಜಾಲಿಮರವನ್ನೊಳಗೊಂಡ, ಬೇವು, ವಿವಿಧ ಮರಗಳಿಂದ ಆವೃತ ದೊಡ್ಡ ಕೆರೆಯೇ , ಈಗ ದೇಶ-ವಿದೇಶಿಗಳ ವಲಸೆ, ಸಂತಾನಕ್ಕೆ, ಆಹಾರಕ್ಕೆ ಬರುವ “ಪಕ್ಷಿಧಾಮವೇ” ಆಗಿ ಮಾರ್ಪಟ್ಟಿದೆ.
ಇಲ್ಲಿ ಕೆರೆಯ ನೀರಿನ ಮುಂದೆ ಕುಳಿತು ,ಹಾಗೆಯೇ ಧ್ಯಾನಸ್ಥರಾಗಬಹುದು. ಸುಮ್ಮನೇ ನೀರನ್ನು ನಿರುಕಿಸುತ್ತಾ ಏಕಾಂತದಲ್ಲಿ ಕಳೆದುಹೋಗಬಹುದು. ಅಥವಾ ಹಕ್ಕಿಗಳ ನಾದಕ್ಕೆ ತಲೆದೂಗಬಹುದು.
ಮೊದಲು ಬೇಸಿಗೆ ಸಮಯದಲ್ಲಿ ಬೆಳ್ಳಕ್ಕಿ, ಗಿಳಿಗಳ ಬೀಡಾಗುತ್ತಿತ್ತು ನನ್ನ ತವರೂರು. ಕಾರಣ ಬೇಸಿಗೆಯಲ್ಲಿ ಕಟಾವಿಗೆ ಮತ್ತು ನಾಟಿಗೆ ಸಿದ್ಧವಾಗಿರುತ್ತಿದ್ದ, ಭತ್ತದ ಗದ್ದೆಗಳಿಂದ. ೧೫ ವರ್ಷದಿಂದೀಚಿಗೆ ಊರ ಪಕ್ಷಿಗಳು ಅಂದರೆ, ಸ್ಥಳೀಯ ಹಕ್ಕಿ ಪಿಕ್ಕಿಗಳಾದ, ಗುಬ್ಬಿ, ಗೊರವಂಕ ಚಿಟಗುಬ್ಬಿ, ಗಿಳಿಗಳನ್ನೊಳಗೊಂಡಂತೆ, ಕಿಂಗ್ ಪಿಷರ್, ಕೊಕ್ಕರೆ, ಬುಲ್ ಬುಲ್ ಗಳೊಂದಿಗೆ, ಅನೇಕ ವಿದೇಶಿ ಹಕ್ಕಿಗಳಾದ ಹೆರ್ಜಾಲೆ, ಇತ್ಯಾದಿ ಹಕ್ಕಿಗಳು ಆಹಾರ, ಸಂತಾನಕ್ಕಾಗಿ ವಲಸೆ ಬರುವುದನ್ನು ಗಮನಿಸಿದ ಪಕ್ಷಿಪ್ರೇಮಿಗಳು , ಹಕ್ಕಿಗಳ ಚಿಲಿಪಿಲಿನಾದಕ್ಕಾಗಿ , ಹಕ್ಕಿಗಳ ವಾಸಕ್ಕೆ ಯೋಗ್ಯವಾಗಿರುವ, ಕರಿಜಾಲಿಮರಗಳಿಂದಾವೃತ ಕೆರೆಯನ್ನು ಅಭಿವೃದ್ಧಿ ಪಡಿಸಲು, ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ, “ಶ್ರೀಯುತ ಇಟಗಿ ವಿಜಯಣ್ಣ” ನ ನೇತೃತ್ವದಲ್ಲಿ, ಊರಿನ ಯುವಪಡೆ ಮುಂದಾಯಿತು. ಅನೇಕ ಕಾರ್ಯ ಕೈಗೊಂಡಿತು. “ಸಂರಕ್ಷಿತ ಪಕ್ಷಿಧಾಮ” ಮಾಡಲು ಅನೇಕ ಹೋರಾಟ ಮಾದರಿಯಲ್ಲಿ ಪರಿಶ್ರಮಿಸಿದರು. ಅದರ ಫಲವಾಗಿ,ನಮ್ಮೂರಿನ ಪಕ್ಷಿಧಾಮವು, “ಮೀಸಲು ಪಕ್ಷಿಧಾಮ”, “ಸಂರಕ್ಷಿತ ಪಕ್ಷಿಧಾಮ”ವಾಗಿ ನಿರ್ಮಾಣಗೊಂಡಿದೆ. ಜೊತೆಗೆ ವೀಕ್ಷಣಾ ಗೋಪುರ ನಿರ್ಮಾಣಗೊಂಡು, ತಾಲೂಕು ಆಡಳಿತದಿಂದ ಬೈನಾಕ್ಯೂಲರ್ ಬಂದು, ಈಗ ದೂರ ದೂರ ಕೆರೆಯಲ್ಲಿ ತೇಲುವ ಪಕ್ಷಗಳನ್ನು, ಸುಲಭವಾಗಿ ವೀಕ್ಷಿಸಬಹುದು. ಈಗ ಎಲ್ಲಾ ಕಡೆಯಿಂದ ತೆರೆದಿದ್ದ ಕೆರೆಗೆ ಸುತ್ತಲೂ ತಂತಿಬಿಗಿದು, ಪಕ್ಷಿಧಾಮದ ನಿಗಧಿತ ಪ್ರದೇಶ ಗುರುತಿಸಲಾಗಿದೆ. ಒಂದೆರಡು ವರ್ಷದ ಹಿಂದೆ, ಪ್ರವಾಸಿಗರಿಗಾಗಿ ಆರಾಮವಾಗಿ ಪ್ರಕೃತಿ ನಡುವೆ, ತೆರೆದ ವಿಶ್ರಾಂತಿ ಮಾದರಿ ಗೃಹವನ್ನು ನಿರ್ಮಿಸಲಾಗಿದೆ. ದಿನಾ ಸಾಯಂಕಾಲ,ಸೂರ್ಯೋದಯಕ್ಕೂ ಮುನ್ನಿನ ಮುಂಜ್ಮುಂಜಾನೆಯೇ, ನಮ್ಮೂರಿನ ಪಕ್ಷಿಧಾಮಕ್ಕೆ ಭೇಟಿ ಕೊಡುವವರು ತುಂಬಾ ಪ್ರವಾಸಿಗರು, ಅಕ್ಕಪಕ್ಕದ ಊರವರು ಅನೇಕ. ಸಂಜೆಯ ಸಮಯ ಮತ್ತು ಸೂರ್ಯೋದಯಕ್ಕೂ ಮೊದಲಿನ ಸಮಯದಲ್ಲಿ, ನೋಡಬೇಕು ಪಕ್ಷಿಗಳ ಸಂಭ್ರಮದ ಓಡಾಟ. ಕಣ್ಣಿಗೆ ಹಬ್ಬ, ಕಿವಿಗೆ ಇಂಪು.”ಕಲ್ಲೆಸೆದ ಜೇನುಗೂಡಿನಿಂದೆದ್ದ ಜೇನ್ನೊಣಗಳಂತೆ” ಕಣ್ಸನೀಹವೇ ಚಿಲಿಪಿಲಿ ಹಕ್ಕಿಗಳ ಹಾರಾಟವನ್ನೂ ಅನುಭವಿಸಿದ ಆನಂದವನ್ನು ಎಂದೂ ಮರೆಯಲಾಗದು. ನೀವೂ ಬನ್ನಿ ಹಕ್ಕಿಗಳ ಚಿಲಿಪಿಲಿ ನಾದಕ್ಕೆ ತಲೆದೂಗಲು.
ವರ್ಷದುದ್ದಕ್ಕೂ ಬಹು ಪಕ್ಷಿ ವೀಕ್ಷಣೆ ಲಭ್ಯವಿದ್ದರೂ, ಪಕ್ಷಿ ವೀಕ್ಷಣೆಗೆ ಸೂಕ್ತ ಸಮಯ ಎಂದರೆ, ನವಂಬರ್ , ಡಿಸೆಂಬರ್ ನಂತಹ ಚಳಿಗಾಲ ಅಥವಾ ಶರದೃತುವಾಗಿದೆ ಎಂಬುದು ನಮ್ಮೂರಿನ ಅನುಭವಿಗಳ, ತಿಳಿದವರ ಮಾತು. ಈ ಸಮಯದಲ್ಲಿಯೇ ನಾವು ಅಧಿಕ ಪ್ರಮಾಣದ ವಿದೇಶಿ ಪಕ್ಷಿಗಳನ್ನು ಕಾಣುತ್ತೇವೆ. ಇದೇ ಸಮಯದಲ್ಲಿಯೇ ಪಕ್ಷಿಗಳು ಅಧಿಕ ಪ್ರಮಾಣದಲ್ಲಿ ವಲಸೆ ಬರಲು ಹೀಗೂ ಕಾರಣ ಇರಬಹುದು. ಏನೆಂದರೆ ಇಲ್ಲಿ ಚಳಿಗಾಲವೆಂದರೆ, ವಿದೇಶಗಳಲ್ಲಿ, ಯುರೋಪ್ ರಾಷ್ಟ್ರಗಳಲ್ಲಿ ಅಧಿಕ ಚಳಿಯೇ ಇರುವುದು. ಆಗ ಸೂಕ್ಷ್ಮ ಪ್ರಕೃತಿಯ ಹಕ್ಕಿ- ಪಕ್ಷಿಗಳಿಗೆ ಬದುಕಲು ಅಸಾಧ್ಯ. ಜೊತೆಗೆ ವಿದೇಶಗಳಲ್ಲಿ ಸುರಿವ ಹಿಮ ಮಳೆಯಿಂದ, ಪಕ್ಷಿಗಳಿಗೆ ಸರಿಯಾದ ಆಹಾರ ಒದಗಲಾಗದು. ಹಾಗಾಗಿಯೆ ಪಕ್ಷಿಗಳು ತಮ್ಮ ಆಹಾರ, ಸಂತಾನಾಭಿವೃದ್ಧಿಗೆ ವಲಸೆ ಹೋಗುವುದು. ಉಷ್ಣ ವಲಯ ಅಥವಾ ಸಮಶೀತೋಷ್ಣ ವಲಯದ ಹಸಿರಿನಿಂದ ಸಮೃದ್ಧವಾದ, ಆಹಾರ ದೊರಕುವ ಪ್ರದೇಶಗಳೇ ಪಕ್ಷಿಗಳ ಬೀಡಾಗುತ್ತವೆ, ಎಂಬುದು ನನ್ನ ಅಭಿಪ್ರಾಯ. ನಂತರ ಪಕ್ಷಿಧಾಮವಾಗಿ, ನಮ್ಮೆಲ್ಲರ ಕಣ್ಮನ ಸೆಳೆಯುವುದು. ಪಕ್ಷಿಪ್ರೇಮಿಗಳನ್ನು ಆಕರ್ಷಿಸುವುದು.
೨೦೧೮ರಿಂದಲೂ “ಪಕ್ಷಿಹಬ್ಬ”/ “ಹಕ್ಕಿಹಬ್ಬ”ನಡೆಯುತ್ತಿದೆ. ೨೦೨೧ರಲ್ಲಿ ದೊಡ್ಡ ಮಟ್ಟದ ಪಕ್ಷಿಹಬ್ಬವೂ, ನಮ್ಮ ಪಕ್ಷಿಧಾಮದ ಮಡಿಲಲ್ಲೇ ನಡೆದು ಗಮನಸೆಳೆದಿತ್ತು. ಆಗ ನಾಡಿನ ವಿವಿಧೆಡೆಯ ಪಕ್ಷಿಪ್ರೇಮಿಗಳು ಭಾಗವಹಿಸಿದ್ದರು. ಹಕ್ಕಿಗಳ ಬಗ್ಗೆ ವಿಶ್ಲೇಷಣೆ, ಹಕ್ಕಿಗಳ ಗುರುತಿಸುವಿಕೆ, ಅವುಗಳ ಆಧ್ಯಯನ ಮಾಡುವುದು. ಅಲ್ಲಿ ಅನೇಕ ಸ್ಥಳಿಯ ಕಲಾವಿದರ ಕಲಾಪ್ರದರ್ಶನದ ನಡೆದಿತ್ತು. ಜೊತೆಗೆ, ಪಕ್ಕದೂರಿನ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಸ್ಥಳೀಯ ಹಂಪಾಪಟ್ಟಣದ ಕಲಾವಿದರಾದ “ಗೋಂದಲಿಗರ ರಾಮಣ್ಣ” ಅವರಿಂದ, “ಗೋಂದಲ” ಹಾಡುಗಾರಿಕೆಯೂ ಇತ್ತು. ನಾಡಿನೆಲ್ಲೆಡೆಯಿಂದ ಬಂದು ಭಾಗವಹಿಸಿದವರಿಗೆ, ೧೦೦ ಕ್ಕೂ ಅಧಿಕ ಟೆಂಟ್ ನ ವಾಸ್ತವ್ಯದ ವ್ಯವಸ್ಥೆಯೊಂದಿಗೆ, ಸ್ಥಳೀಯ ಊಟೋಪಚಾರದ ರುಚಿ ಸವಿಯುವಿಕೆಯೂ ಇತ್ತು.
ಈ ಪಕ್ಷಿಹಬ್ಬದ ಹಿಂದೆಯೇ ನನ್ನ ತವರೂರ ಹೆಸರು. ಇನ್ನು ಮುಂದೆ ವರ್ಷಂಪ್ರತಿ ನಡೆಯುವುದಾಗಿ ಹೇಳಿದ್ದಾರೆ. ನೋಡೋಣ, “ಪಕ್ಷಿಹಬ್ಬ” ನಡೆಯುವಾಗ ಹೇಳುತ್ತೇನೆ. ನೀವೂ ಖಂಡಿತಾ ಬನ್ನಿ ಆಗ.
ಊರೊಳಗೆ ಹೋದರೆ, ನಮ್ಮ ಊರಿನ ತಾತನ ಪ್ರತಿಮೆ ಕಾಣುತ್ತೇವೆ. ಇದಕ್ಕೂಒಂದು ಇತಿಹಾಸ. ಮುಂದೆ ಯಾವಾಗಲಾದರೂ ಹೇಳುವೆ.
ಇದು “ವಿಜಯನಗರ ಜಿಲ್ಲೆಯ ಏಕೈಕ ಪಕ್ಷಿಧಾಮ, ಅಂಕಸಮುದ್ರ ಪಕ್ಷಿಧಾಮ”ದ ಪರಿಚಯ.
ಇದು ನನ್ನ ತವರೂರಿನ ಹೆಮ್ಮೆಯ ಹೆಗ್ಗುರುತು.
ಲೀಲಾವತಿ ವಿಜಯಕುಮಾರ.
ಹಗರಿಬೊಮ್ಮನಹಳ್ಳಿ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ