December 14, 2024

Hampi times

Kannada News Portal from Vijayanagara

ಆಯುಷ್ಮಾನ್ ಭವಃ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ

 

https://youtu.be/NHc6OMSu0K4?si=SI_K4goOPEgwo6h2

ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡಿದಾಗ ನಮ್ಮ ಆಸ್ಪತ್ರೆ ಎಂಬ ಭಾವನೆ ಇರಲಿ: ಡಿಹೆಚ್‍ಒ ಡಾ.ವೈ ರಮೇಶ ಬಾಬು

ಹಂಪಿ ಟೈಮ್ಸ ಬಳ್ಳಾರಿ:

ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದು ನಮ್ಮ ಆಸ್ಪತ್ರೆ ಎಂಬ ಭಾವನೆಯೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಮಾತ್ರ ಶುಚಿತ್ವಕ್ಕೆ ಮಹತ್ವ ನೀಡಿದಂತಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದರು.
ಆಯುಷ್ಮಾನ್ ಭವಃ ಅಭಿಯಾನದ ವಿವಿಧ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರದಾದ್ಯಂತ ಜರುಗುತ್ತಿರುವ ಎಲ್ಲ ಆಸ್ಪತ್ರೆಗಳ ಸ್ವಚ್ಛತಾ ಅಭಿಯಾನದ ಹಿನ್ನೆಲೆಯಲ್ಲಿ,  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ ಇವರ ಸಂಯುಕ್ತಾಶ್ರಯದಲ್ಲಿ “ಸ್ವಚ್ಛ ಆಸ್ಪತ್ರೆ-ನಮ್ಮ ಆದ್ಯತೆ” ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಅವರು ಹೇಳಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಪ್ರತಿದಿನ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಶುಚಿತ್ವದ ಮಹತ್ವ ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಬಳ್ಳಾರಿ ಜಿಲ್ಲಾ ಆಸ್ಪತ್ರೆಯು ಸ್ವಚ್ಛತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ರಾಷ್ಟ್ರಮಟ್ಟದ ಕಾಯಕಲ್ಪ ಪ್ರಶಸ್ತಿ ಪಡೆದಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ಆಗಮಿಸುವ ಸಂದರ್ಭದಲ್ಲಿ ಶುಚಿತ್ವವು ಸಹ ಒಂದು ಸವಾಲು ಆಗಿ ಪರಿಣಮಿಸುತ್ತದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಾವು ಸಹ ಕಿಟಕಿಯ ಹತ್ತಿರ ಉಗುಳುವುದಾಗಲಿ ಅಥವಾ ಹೊರ ಆವರಣದಲ್ಲಿ ಆಹಾರ ಪಾರ್ಸೆಲ್ ಕವರ್, ಚಹಾ ಕಫ್, ಎಳೆನೀರಿನ ಚಿಪ್ಪುಗಳನ್ನು ಅಲ್ಲಲ್ಲಿ ಬಿಸಾಡದೇ, ನಿಗದಿಪಡಿಸಿದ ಸ್ಥಳ ಅಥವಾ ಕಸದ ಡಬ್ಬಿಗಳಲ್ಲಿ ಹಾಕಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಡಾ.ಗುರುನಾಥ್ ಬಿ ಚೌವ್ಹಾಣ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಶುಶ್ರೂಷಣಾಧಿಕಾರಿ ಸೇಲೀನಾ, ಆಡಳಿತ ಅಧಿಕಾರಿಗಳಾದ ದೇಸಾಯಿ, ಮೆಹಬೂಬ್ ಖಾನ್ ಸೇರಿದಂತೆ ತಜ್ಞವೈದ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ನಂತರದಲ್ಲಿ ಜಿಲ್ಲಾ ಅಸ್ಪತ್ರೆ ಆವರಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣವನ್ನು ಸ್ವಚ್ಛಗೊಳಿಸಲಾಯಿತು.

 

 

ಜಾಹೀರಾತು
error: Content is protected !!