December 8, 2024

Hampi times

Kannada News Portal from Vijayanagara

ಗಾಣಿಗ ಸಮಾಜಕ್ಕೆ 2ಎ ಒದಗಿಸಲು ಬದ್ಧ : ಶಾಸಕ ಗವಿಯಪ್ಪ.

 

https://youtu.be/NHc6OMSu0K4?si=SI_K4goOPEgwo6h2

ಮಠಗಳೊಂದಿಗೆ ಸಂಪರ್ಕ ಶ್ರೀಗಳ ನುಡಿ ಕೇಳಿದವರು ಎಂದೂ ದಾರಿ ತಪ್ಪರು

ಹಂಪಿ ಟೈಮ್ಸ್ ಹೊಸಪೇಟೆ:
ಹಿಂದುಳಿದ ಗಾಣಿಗ ಸಮಾಜಕ್ಕೆ 2ಎ ಪ್ರಮಾಣಪತ್ರ ನೀಡಲು ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.

ನಗರದ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಗಾಣಿಗ ಸಂಘ ಹಮ್ಮಿಕೊಂಡಿದ್ದ ಗಾಣಿಗ ಸಮಾಜದ 4ನೇ ವಾರ್ಷಿಕ ಸಭೆ ಭಾನುವಾರ ಉದ್ಘಾಟಿಸಿ ಮಾತನಾಡಿದರು. ಗಾಣಿಗ ಸಮಾಜದ ಅಭಿವೃದ್ಧಿಗೆ ಸಂಪೂರ್ಣ ಸಹಕಾರವಿದೆ. ನಗರದ ಹುಡಾ ವ್ಯಾಪ್ತಿಯಲ್ಲಿ ಸಮುದಾಯ ಭವನಕ್ಕೆ ಸಿಎ ನೀವೇಶನ ಮತ್ತು ಅನುದಾನ ನೀಡಿ ಒಂದು ವರ್ಷದೊಳಗೆ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಭೂಮಿಪೂಜೆ ನೆರವೇರಿಸಲಾಗುವುದು. ಟೆಕ್ನೋಲಾಜಿ ಹಾವಳಿಗೆ ತುತ್ತಾಗಿರುವ ಯುವ ಪೀಳಿಗೆಯನ್ನು ಸಂಸ್ಕಾರಯುತ ಶಿಕ್ಷಣದತ್ತ ಕರೆದೊಯ್ಯುವುದು ಎಲ್ಲರ ಜವಾಬ್ಧಾರಿಯಾಗಿದೆ. ಮಕ್ಕಳಲ್ಲಿ ಉತ್ತಮ ನಡೆ ನುಡಿ ಕಾಣಬೇಕೆಂದರೆ ಗುರುಗಳ ಸಂಪರ್ಕ ಅವಶ್ಯವಿದೆ. ಮಠಮಾನ್ಯಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡವರು ಶ್ರೀಗಳ ಹಿತನುಡಿಗಳನ್ನು ಕೇಳಿ ಪಾಲಿಸಿದವರು ಎಂದಿಗೂ ದಾರಿತಪ್ಪುವುದಿಲ್ಲ. ಆರೋಗ್ಯಕ್ಕೆ ಹಾನಿಯಾಗುತ್ತಿರುವ ಆಮದು ರಿಫೈನ್ಡ್ ಎಣ್ಣೆ ತಗ್ಗಿಸಿ, ದೇಸಿ ಗಾಣದ ಎಣ್ಣೆ ಉದ್ಯಮಗಳನ್ನು ಬಲಪಡಿಸಲು ಸಿಎಂ ಸಿದ್ದಾರಾಮಯ್ಯನವರೊಂದಿಗೆ ಚರ್ಚಿಸುವೆ. ಗಾಣದ ಎಣ್ಣೆ ತಯಾರಿಕೆಯಿಂದ ಉತ್ತಮ ಆರೋಗ್ಯದ ಜೊತೆಗೆ ಅನೇಕ ಕೈಗಳಿಗೂ ಕೆಲಸ ಕೊಡುವ ಮೂಲಕ ನಿರುದ್ಯೋಗ ಸಮಸ್ಯೆ ತೊಲಗಿಸಬಹುದಾಗಿದೆ ಎಂದರು.

ಗಾಣಿಗ ಸಮಾಜದ ಅಧ್ಯಕ್ಷ ಮಲ್ಲಕಾರ್ಜುನ ಕುರಡಗಿ ಮಾತನಾಡಿ, ಜಿಲ್ಲೆಯಲ್ಲಿ ಜವಳಿ ಪಾರ್ಕ್ ಮತ್ತು ಗಾಣದ ಎಣ್ಣೆ ಪಾರ್ಕ್ ಮಾಡುವ ಉದ್ದೇಶವಿದೆ. ಕ್ಷೇತ್ರದ ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಸಹಕರಿಸಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಸಮಾಜದ ಯುವಕರು ಜಾಗೃತರಾಗಬೇಕು. ಗಳಿಸಿದ ಆದಾಯದ ಒಂದಂಶದಷ್ಟಾದರೂ ಸಮಾಜದ ಅಭಿವೃದ್ಧಿಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದರು.

ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸಮಾಜದ ಸಂಘಟನೆಗಾಗಿ ಶ್ರೀಗಳು ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಸಂಘಟನೆ ಚುರುಕುಗೊಂಡಿದೆ. ಒಳಪಂಗಡಗಳು ಒಂದಾಗಿ, ಶಕ್ತಿ ಪ್ರದರ್ಶನ ತೋರಬೇಕು. ಹೊಸಪೇಟೆ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿದ್ದರೂ ರಾಜ್ಯಾದ್ಯಾಂತ 50 ಲಕ್ಷ ಜನಸಂಖ್ಯೆ ಗಾಣಿಗ ಸಮಾಜ ಹೊಂದಿದೆ. ಸಂಘಟಿತರಾಗಿ ಹೋರಾಟ ಮಾಡಿದಲ್ಲಿ ಸೌಲಭ್ಯ ಪಡೆಯಲು ಸಾಧ್ಯ. ಹೊಸಪೇಟೆ ಹೊರತುಪಡಿಸಿ ರಾಜ್ಯದ ಬೇರೆ ಭಾಗದಲ್ಲಿ ಗಾಣಿಗ ಸಮಾಜಕ್ಕೆ 2ಎ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ವಿಜಯನಗರ ಜಿಲ್ಲೆಯಲ್ಲಿ ನೀಡುತ್ತಿಲ್ಲವೇಕೆ? ಗಾಣಿಗ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದರೂ, ಸಮರ್ಪಕ ಅನುದಾನ ನೀಡುತ್ತಿಲ್ಲ. ಓದುವ ಮಕ್ಕಳಿಗೆ ವಸತಿ ನಿಲಯಗಳಿಲ್ಲ. ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಅನುಷ್ಠಾನ ಮತ್ತು ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಹಿರೇಮಾಗಡಿ ಮುರುಘರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು, ಗರಗ ನಾಗಲಾಪುರದ ಒಪ್ಪತೇಶ್ವರ ಮಠದ ಶ್ರೀ ನಿರಂಜನಪ್ರಭುದೇವರು, ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಸ್ವಾಮಿಗಳು ಆರ್ಶಿರ್ವಚನ ನೀಡಿ ಸಂಘಟಿತರಾಗಲು ಕರೆನೀಡಿದರು.

ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್.ಉಮಾಪತಿ, ಅ.ಭಾ.ಗಾ.ಸಂಘದ ಮಾಜಿ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ, ಜಿಪಂ ಮಾಜಿ ಅಧ್ಯಕ್ಷ ಜಿ.ಉಮೇಶ, ನ್ಯಾಯವಾದಿ ತಿಪ್ಪೇಸ್ವಾಮಿ ಅಂಗಡಿ, ಚೌಧರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಜ್ಯೋತಿ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರ ಮಹಾಸಭೆ ನಡೆಯಿತು. ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

 

 

ಜಾಹೀರಾತು
error: Content is protected !!