March 15, 2025

Hampi times

Kannada News Portal from Vijayanagara

ಕಾಮಗಾರಿ ಅನುದಾನ ಮತ್ತೊಂದು ಕಾಮಗಾರಿಗೆ ಬಳಸಬಾರದು : ಸಚಿವ ಜಮೀರ್‌ ಖಾನ್

 

https://youtu.be/NHc6OMSu0K4?si=SI_K4goOPEgwo6h2

 

ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ  ಹರಪನಹಳ್ಳಿ ಪ್ರಗತಿ ಪರಿಶೀಲನಾ ಸಭೆ | ಕಾಮಗಾರಿ ವಿಳಂಬ, ಕಳಪೆಯಾದಲ್ಲಿ ಕ್ರಮಕ್ಕೆ ಸೂಚನೆ

ಹಂಪಿ ಟೈಮ್ಸ್‌ ಹರಪನಹಳ್ಳಿ :

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್) ವತಿಯಿಂದ ಕೈಗೊಂಡಿರುವ ಕೆಕೆಆರ್‌ಡಿಬಿ ಅನುದಾನ ಸೇರಿದಂತೆ ವಿವಿಧ ಅನುದಾನಗಳ ಕಾಮಗಾರಿಗಳನ್ನು ನಿಯಮಾನುಸಾರ ಅವಧಿಯೊಳಗೆ ಪೂರ್ಣಗೊಳಿಸಬೇಕು. ಯಾವುದೇ ರೀತಿಯಲ್ಲಿ ಕಾಮಗಾರಿ ಅನುದಾನ ಇನ್ನೊಂದು ಕಾಮಗಾರಿಗೆ ಬಳಸಬಾರದು ಎಂದು ವಸತಿ, ಹಜ್ ಹಾಗೂ ವಕ್ಫ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹರಪನಹಳ್ಳಿ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಯಮಾನುಸಾರ ಸಂದಾಯವಾಗುವ ಅನುದಾನಕ್ಕೆ ಅನುಗುಣವಾಗಿ, ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಕೆಲ ಕಾಮಗಾರಿಗಳು ಕಳಪೆಯಾಗಿದೆ ಎಂದು ಶಾಸಕರಾದ ಎಂ.ಪಿ‌.ಲತಾ ಮಲ್ಲಿಕಾರ್ಜುನ್ ಅವರು ಪ್ರಸ್ತಾಪಿಸಿದಾಗ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಜೊತೆಗೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ದಂಡ ಹಾಕಬೇಕು. ಯಾವುದೇ ಅಪೂರ್ಣ ಕಾಮಗಾರಿ ಇಲಾಖೆ ಒಪ್ಪಿಸಬಾರದು ಎಂದು ಕೆಆರ್‌ಐಡಿಎಲ್ ಎಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನರೇಗಾ ಯೋಜನೆ ಅಡಿಯಲ್ಲಿ ಶೌಚಾಲಯ ಅವಶ್ಯವಿರುವ ಎಲ್ಲಾ ಶಾಲೆಗಳಿಗೂ ಸ್ಟೀಲ್ ರೂಫ್ ಹಾಕಿ ಶೌಚಾಲಯ ನಿರ್ಮಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಶೌಚಾಲಯ ಹಾಗೂ ಇತರೆ ವ್ಯವಸ್ಥಿತ ಮೂಲ ಸೌಕರ್ಯ ಒದಗಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಹರಪನಹಳ್ಳಿ ತಾಲ್ಲೂಕಿನ ಶೃಂಗಾರತೋಟ ಗ್ರಾಮದ ಬಳಿಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಹಾಸ್ಟೆಲ್‌ ಕೆರೆ ಅಂಗಳದಲ್ಲಿ ನಿರ್ಮಿಸಲಾಗಿದೆ. ಎಂದು ಶಾಸಕರು ತಿಳಿಸಿದಾಗ ಇದರ ಬಗ್ಗೆ ಮಾಹಿತಿ ನೀಡಬೇಕು. ಸಂಪೂರ್ಣವಾಗಿ ಪರಿಶೀಲನೆ ಮಾಡಲು ಬೆಂಗಳೂರಿನಿಂದ ತಂಡವೊಂದನ್ನು ನಂತರ ಕಳಿಸಿಕೊಡಲಾಗುವುದು. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದರು.

ಬಸ್ ಮತ್ತು ಹಾಸ್ಟೆಲ್ ವ್ಯವಸ್ಥೆ:
ಜಿಲ್ಲೆಯಲ್ಲಿ ಶೈಕ್ಷಣಿಕ ಹಬ್ ಎಂದು ನಮ್ಮ ತಾಲ್ಲೂಕು ಹೆಸರು ಪಡೆದಿದೆ. ವಿವಿಧ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಕಲಿಯಲು ಇಲ್ಲಿಗೆ ಬರುತ್ತಾರೆ. ಅವರಿಗಾಗಿ ಹಾಸ್ಟೆಲ್ ಹಾಗೂ ಕೆಲ ಶಾಲೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮತ್ತು ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಸತಿ ಯೋಜನೆಗೆ ಸ್ಲಂಗಳಲ್ಲಿ ಸಮೀಕ್ಷೆ:
ಸ್ಲಂಗಳಲ್ಲಿ ವಸತಿ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿರುವ 18 ಸ್ಲಂಗಳಲ್ಲಿ ಒದಗಿಸಲಾಗುವ ವಸತಿ ಯೋಜನೆಗಾಗಿ ಸಮೀಕ್ಷೆ ಕೈಗೊಂಡು ಪ್ರಸ್ತುತ ಕೈಗೊಂಡ ಮೂಲಸೌಕರ್ಯಗಳ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ:
ತಾಲ್ಲೂಕಿನಲ್ಲಿ ಹಾಸ್ಟೆಲ್‌ಗಳಲ್ಲಿ ಪೌಷ್ಟಿಕ ಮತ್ತು ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಪೂರೈಸಬೇಕು. ಗುಣಮಟ್ಟದ ಆಹಾರಕ್ಕೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಕುರಿತು ಪ್ರಗತಿ ಪರಿಶೀಲನೆಯನ್ನು ಕೈಗೊಂಡರು. ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು, ಕಿಟ್‌ಗಳನ್ನು ವಿತರಿಸಿದರು.

 

ಡಾಬಾಗಳಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ:
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಕರ ಊಟದ ವ್ಯವಸ್ಥೆ ಬಗ್ಗೆ ನಿಗಾ ವಹಿಸಬೇಕು. ಜೊತೆಗೆ ಈ ಭಾಗದ ಕೆಲ ಡಾಬಾಗಳಲ್ಲಿ ಅವ್ಯವಸ್ಥೆ ಇರುವ ದೂರು ಬರುತ್ತಿದ್ದು, ಅದಕ್ಕೆ ಅವಕಾಶ ಕೊಡದೇ ನಿಗಾವಹಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.  ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ದಿವಾಕರ ಎಂ‌.ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ‌.ಎಲ್‌., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!