December 5, 2024

Hampi times

Kannada News Portal from Vijayanagara

ಕಾವ್ಯಕ್ರಿಯೆ ಅನುಭವಗಳಿಂದ ಬರುತ್ತವೆ : ಡಾ. ಅಮರೇಶ ನುಗಡೋಣಿ

 

https://youtu.be/NHc6OMSu0K4?si=SI_K4goOPEgwo6h2

ಕಾವ್ಯಗಳು  ಲೋಕ ಪ್ರಜ್ಞೆಯಿಂದ ಮೂಡಿ ಬರಬೇಕು

ಹಂಪಿ ಟೈಮ್ಸ್ ಹೊಸಪೇಟೆ:

ಕಾವ್ಯ ರಚನೆ ಅನುಭವ ಮತ್ತು ಲೋಕ ಪ್ರಜ್ಞೆಯಿಂದ ಮೂಡಿ ಬರಬೇಕು. ನಮ್ಮ ಸುತ್ತಲಿನ ವಿದ್ಯಮಾನಗಳು ಸಾಹಿತ್ಯ ಬರಹಕ್ಕೆ ಪ್ರೇರಣೆಯಾಗಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಖ್ಯಾತ ಕಥೆಗಾರರಾದ ಡಾ. ಅಂಬರೀಶ್ ನುಗಡೋಣಿ ಅಭಿಪ್ರಾಯಪಟ್ಟರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಕನ್ನಳ್ಳಿ ರೇಣುಕಾ ಅವರ ಒಲವ ದಿಬ್ಬಣ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡ ಕಾವ್ಯ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ಆಧುನಿಕ ಕಾಲಘಟ್ಟದಲ್ಲಿ ಕಾವ್ಯರಚನೆ ಮಾಡಿದ ಕುವೆಂಪು ಬೇಂದ್ರೆ ಮುಂತಾದ ಕವಿಗಳಿಗೆ ತಮ್ಮ ಸುತ್ತಲಿನ ಪರಿಸರ ಕಾವ್ಯಕ್ರಿಯೆಗೆ ತೊಡಗಲು ಸಹಕಾರಿ ಆದುದ್ದನ್ನು ಇಲ್ಲಿ ಸ್ಮರಿಸಬೇಕು. ಹೀಗಿತ್ತು ವ್ಯಕ್ತಿಗತ ಚಿಂತನೆಗಳಿಗಿಂತ ಸಾರ್ವತ್ರಿಕ ಅಶೋತ್ತರಗಳನ್ನು ಅವರ ಕವಿತೆಗಳಲ್ಲಿ ಕಾಣಲು ಸಾಧ್ಯವಾಗುವುದು ಅವರಿಗಿರುವ ಸಾಮಾಜಿಕ ಪ್ರಜ್ಞೆಯಿಂದ, ಅದೇ ರೀತಿ ರೇಣುಕಾ ಅವರ ಕವನ ಸಂಕಲನದಲ್ಲಿ ಸ್ಥಳೀಯ ಕೊಟ್ಟೂರಿನ ಮತ್ತು ಅವರ ಕುಟುಂಬದ ಕವನಗಳು ಇದ್ದರೂ ಅವುಗಳ ಆಶಯದಲ್ಲಿ ವೈಚಾರಿಕತೆಯನ್ನು ನಿರೂಪಿಸುವ ಪ್ರಯತ್ನ ಅವರ ಮುಂದಿನ ಕವನ ಕೃಷಿಯಲ್ಲಿ ನಿರೀಕ್ಷಿಸಬಹುದಾಗಿದೆ. ಕವಿಯತ್ರಿಯ ಭಾವನೆಗಳ ಅಭಿವ್ಯಕ್ತಿಗೆ ಕವನ ಒಂದು ಮಾಧ್ಯಮವಾಗಿರುವುದು ಮೆಚ್ಚಬಹುದಾದ ಸಂಗತಿ ಎಂದು ತಿಳಿಸಿದರು

ಕವಿಯತ್ರಿ ಶೋಭಾ ಶಂಕರಾನಂದ ಕವನ ಸಂಕಲನ ಕುರಿತು ಮಾತನಾಡಿ, ಇಲ್ಲಿಯ ಕವನಗಳು ಕೊಟ್ಟೂರಿನ ಆರಾಧ್ಯ ದೈವ ಕೊಟ್ಟೂರೇಶನಿಂದ ಆರಂಭವಾಗಿ ಅವರ ತಂದೆ ತಾಯಿ ಹಾಗೂ ಕುಟುಂಬದ ಸದಸ್ಯರ ಬಗೆಗಿನ ಕವನಗಳಲ್ಲದೆ ಬದುಕಿನಲ್ಲಿ ಪ್ರೀತಿಯನ್ನು ಮೈಗೂಡಿಸಿಕೊಂಡು ಬದುಕುವ ಎಲ್ಲ ಸಚರಾಚರ ಜೀವಿಗಳಲ್ಲಿ ಒಲವಿನ ಮೆರವಣಿಗೆ ಹೊರಡಬೇಕು ಎನ್ನುವಂತೆ ಇಲ್ಲಿಯ ಒಲವ ದಿಬ್ಬಣ ಕೃತಿಯ ಕವನಗಳು ಸಾರಿ ಹೇಳುತ್ತವೆ. ತಂದೆ ಮಗಳ ಸಂಬಂಧ, ತಾಯಿ ಮಗಳ ಸಂಬಂಧ ಹೀಗೆ ಮನುಷ್ಯನ ಬದುಕಿನಲ್ಲಿ ಒಲವಿನ ಸಂಕೋಲೆಗಳು ಬೆಸೆದಿರುವುದನ್ನು ಇಲ್ಲಿಯ ಕವನದಲ್ಲಿ ಕಾಣುತ್ತೇವೆ ಎಂದರು.

ಪೂಜ್ಯ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಈ ಹೊತ್ತಿನ ದಿನಮಾನಗಳಲ್ಲಿ ಮಾನವನಿಗೆ ಎಲ್ಲ ಸೌಲಭ್ಯಗಳು ಇವೆ ಆದರೆ ಒಬ್ಬರನ್ನೊಬ್ಬರು ಪ್ರೀತಿಯಿಂದ ಮಾತನಾಡಿಸುವ ಕೂಡಿ ಕಾಲ ಕಳೆಯುವುದು ಸಾಧ್ಯವಾಗುತ್ತಿಲ್ಲ. ವೈಯಕ್ತಿಕವಾದ ಒತ್ತಡಗಳಲ್ಲಿ ಬದುಕುತ್ತಿರುವ ಇಂದಿನ ಜನಜೀವನ ಕಾವ್ಯಕ್ರಿಯೆ ಅಂತಹ ಮನಸ್ಸಿಗೆ ಮುದ ನೀಡುವ ಸಾಹಿತ್ಯ ರಚನೆಗೆ ತೊಡಗಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದರು.

ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕೆ. ರವೀಂದ್ರನಾಥ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಳ್ಳಿ ರೇಣುಕಾ ಅವರ ಒಲವ ದಿಬ್ಬಣ ಎಂಬ ಕವನ ಸಂಕಲನದ ಹೆಸರನ್ನು ಕೇಳಿದ ಕ್ಷಣ ನನಗೆ ಬೇಂದ್ರೆಯವರು ನೆನಪಾಗುತ್ತಾರೆ. ಬೇಂದ್ರೆಯವರಿಗೆ ಶ್ರಾವಣದ ಆಗಮಿಕೆಯೆ ಒಂದು ದಿಬ್ಬಣವಾಗಿತ್ತು. ಶ್ರಾವಣ ಮಾಸದ ಆಗಮಿಕೆಯ ಈ ದಿನದಲ್ಲಿ ಇಂತಹದೊಂದು ಕವನ ಸಂಕಲನವನ್ನು ಬರೆದು ಬಿಡುಗಡೆ ಮಾಡಿದ ರೇಣುಕಾ ಅವರನ್ನು ಅಭಿನಂದಿಸಲೇಬೇಕು. ನಮ್ಮ ಅಭಿವ್ಯಕ್ತಿಗೆ ಭಾಷೆ ಮಾಧ್ಯಮ. ಇಲ್ಲಿಯ ಕವನಗಳನ್ನು ಗಮನಿಸಿದರೆ ಜನಮಾನಸದಲ್ಲಿ ಮರೆಯಾದ ಸವಕಳಿಯಾದ ಶಬ್ದಗಳು ಮರುಜೀವ ಪಡೆದಿವೆ ಹೀಗಾಗಿ ಇಲ್ಲಿಯ ಕವನಗಳು ಓದಿಸಿಕೊಂಡು ಹೋಗುತ್ತವೆ ಎಂದು ತಿಳಿಸಿದರು.

ಪ್ರೊ. ನಾಗನಗೌಡ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಘಂಟಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರೇಣುಕಾ ಅವರ ತಾಯಿ ವಿಶಾಲಕ್ಷಮ್ಮನವರನ್ನು ಅವರ ಕುಟುಂಬ ವರ್ಗದವರು ಬಂಧುಗಳು ಸೇರಿ ಅವರ ೯೦ನೆಯ ಹುಟ್ಟು ಹಬ್ಬದ ಆಚರಣೆಯನ್ನು ಈ ಕೃತಿ ಬಿಡುಗಡೆ ಮಾಡುವುದರ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಕನ್ನಳ್ಳಿ ಬಂಧುಗಳು ಆತ್ಮೀಯರು ಸ್ನೇಹಿತರು ಪಾಲ್ಗೊಂಡಿದ್ದರು.

 

 

ಜಾಹೀರಾತು
error: Content is protected !!