https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ಜಿ-20 ಶೃಂಗಸಭೆಯ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದ್ದು, ಅತೀ ಮುಖ್ಯವಾದ ಜಿ-20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜು.9ರಿಂದ 16ರವರೆಗೆ ನಡೆಯಲಿದೆ ಎಂದು ಜಿ-20 ಶೆರ್ಪಾದ ಅಮಿತಾಭ್ ಕಾಂತ್ ಅವರು ತಿಳಿಸಿದರು.
ವಿಶ್ವವಿಖ್ಯಾತ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ನಡೆಯಲಿರುವ ಶೆರ್ಪಾ ಸಭೆಗೆ ಸಂಬಂಧಿಸಿದಂತೆ ಭಾನುವಾರ ಖಾಸಗಿ ಹೊಟೇಲಿನಲ್ಲಿ ಉನ್ನತಮಟ್ಟದ ಅಧಿಕಾರಿಗಳ ಜೊತೆಗೆ ಕೈಗೊಂಡ ಸಿದ್ಧತಾ ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಿದ್ದತಾ ಸಭೆಗೂ ಮುನ್ನ ಭಾರತದ ಜಿ-20 ಉನ್ನತ ಮಟ್ಟದ ಅಧಿಕಾರಿಗಳ ತಂಡ ಬೆಳಿಗ್ಗೆ ವಿಶ್ವವಿಖ್ಯಾತ ಹಂಪಿಗೆ ತೆರಳಿ ಜಿ-20 ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಭೇಟಿ ನೀಡಲಿರುವ ಸ್ಥಳಗಳ ಪರಿಶೀಲನೆ ಕೈಗೊಂಡು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈಗಾಗಲೇ ರಾಜಸ್ಥಾನದ ಉದಯಪುರ, ಅಸ್ಸಾಮಿನ ಕುಮಾರ್ಗಮ್‌ನಲ್ಲಿ ಶೆರ್ಪಾ ಸಭೆಗಳು ನಡೆದಿದೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಹಿರಿಮೆ ಮತ್ತು ಉತ್ಪನ್ನಗಳನ್ನು ಉನ್ನತೀಕರಿಸಲು 3ನೇ ಶೆರ್ಪಾ ಸಭೆ ವಿಶ್ವವಿಖ್ಯಾತ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ನಡೆಯಲಿದೆ.
ಈಗಾಗಲೇ ಹಂಪಿ ಪಾರಂಪರಿಕ ಪ್ರದೇಶದಲ್ಲಿ ಶೆರ್ಪಾ ಸಭೆಗಾಗಿ ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಶೆರ್ಪಾ ಸಭೆಯು ‘ವಸುದೈವ ಕುಟುಂಬಕಂ ಎಂಬ ಧ್ಯೇಯದಡಿ, ‘ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ’ ಎಂಬ ಘೋಷವಾಕ್ಯದಡಿ ಶೃಂಗಸಭೆ ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ 43 ದೇಶಗಳ ಉನ್ನತಮಟ್ಟದ ಅಧಿಕಾರ ಉಳ್ಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಂತರರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದ ಪ್ರವಾಸೋದ್ಯಮ ಉನ್ನತೀಕರಣ ಜೊತೆಗೆ ಇಲ್ಲಿನ ಕಲೆ, ಸಂಸಕೃತಿ ಐತಿಹಾಸಿಕ ಸ್ಮಾರಕಗಳ ಪ್ರಸ್ತುತಿ ಸೇರಿದಂತೆ ರಾಜ್ಯದ ಕರಕುಶಲತೆ, ಕೈಮಗ್ಗ, ಸಾಂಪ್ರದಾಯಕತೆ ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಅದರಲ್ಲೂ ವಿಶೇಷವಾಗಿ ಸಿರಿಧಾನ್ಯಗಳ ಮಹತ್ವ ಸಾರುವ ಜೊತೆಗೆ ಇವುಗಳ ಜಾಗತಿಕ ಪರಿಚಯ ಹಾಗೂ ಮಾರುಕಟ್ಟೆ ಕಂಡುಕೊಳ್ಳಲು ವಿಫುಲ ಅವಕಾಶ ಜಿ-20ಯಿಂದ ದೊರೆಯುತ್ತದೆ ಆದ್ದರಿಂದ ಜಿ-20 ಸಭೆಯನ್ನು ವ್ಯವಸ್ಥಿತವಾಗಿ ಆಯೋಜಿಸಿ ಇದರ ಲಾಭವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ಶೃಂಗಸಭೆಯ ವೇಳೆ ಹಂಪಿಯ ಐತಿಹಾಸಿಕ ಮಹತ್ವ ಸಾರಲಾಗುತ್ತದೆ. ಹಾಗೂ ಸಾಂಸ್ಖೃತಿ ಪ್ರದರ್ಶನದ ಮೂಲಕ ಗತವೈಭವ ಸಾರುವ ಸಿದ್ದತೆ ನಡೆಸಲಾಗುತ್ತದೆ. ಕೇರಳದಲ್ಲಿ ಇರುವ ಪ್ರವಾಸೋದ್ಯಮ, ನೈಸರ್ಗಿಕತೆಯಂತೆ ಕರ್ನಾಟಕ ರಾಜ್ಯದಲ್ಲಿ ಸಹ ಅತ್ಯಧಿಕ ಪ್ರವಾಸಿ ತಾಣಗಳು ಇದ್ದು, ಇವುಗಳು ಸಹ ರಾಜ್ಯದಲ್ಲಿ ಪ್ರವಾಸೋದ್ಯಮ ಒಗ್ಗೂಡಿಸಲು ಸಾಧ್ಯವಾಗುತ್ತಿದೆ. ಕಡಲತೀರ, ದಟ್ಟ ಅರಣ್ಯ ಪ್ರದೇಶ, ವನ್ಯಜೀವಿ, ನಿಸರ್ಗ ಧಾಮಗಳು, ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲೆ, ಸಾಂಸ್ಕೃತಿಕ ಹಿರಿಮೆಗಳ ಉನ್ನತೀಕರಣಕ್ಕೆ ವಿಫುಲ ಅವಕಾಶಗಳಿವೆ ಇವುಗಳನ್ನು ಜಿ-20 ಶೆರ್ಪಾ ಸಭೆಯ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಸಭೆಯ ಜೊತೆಗೆ ತೆರೆದ ವಸ್ತುಸಂಗ್ರಹಾಲಯವಾಗಿರುವ ಹಂಪಿಯ ಐತಿಹಾಸಿಕ ಮಹತ್ವವನ್ನು ಪ್ರತಿನಿಧಿಗಳಿಗೆ ಸಾರಲಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಕಲಾ ಪ್ರದರ್ಶನದ ಮೂಲಕ ಗತವೈಭವವನ್ನು ಪ್ರಸ್ತುತಪಡಿಸಲು ಸಿದ್ದತೆ ಸಹ ಕೈಗೊಳ್ಳಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಸಭೆ ಆಯೋಜನೆಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಹಂಪಿಯನ್ನು ಪ್ರಸ್ತುತ ಪಡಿಸಲು ಶೆರ್ಪಾಸಭೆಯು ಅಚ್ಚುಕಟ್ಟಾಗಿ ನೆರವೇರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರವಾಸೋದ್ಯಮ ಹಾಗೂ ಸಂಸ್ಕೃತಿಯ ಜಾಗತೀಕರಣಕ್ಕೆ ಶೆರ್ಪಾ ಸಭೆಯು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅವಕಾಶ ದೊರಕಿಸಿಕೊಡಲಿದ್ದು, ಕರ್ನಾಟಕ ರಾಜ್ಯ ಹಾಗೂ ಹಂಪಿ ವಿಶ್ವ ಭೂಪಟದಲ್ಲಿ ಕರ್ನಾಟಕದಲ್ಲಿ ಮೂಡಿಬರಲಿದೆ. ಮರೆಯಲಾಗದ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ಜಾಗತಿಕ ಮಟ್ಟದಲ್ಲಿ ಅನಾವರಣ ಶೆರ್ಪಾಸಭೆಯ ಮೂಲಕ ಹೆಚ್ಚಿನ ಅವಕಾಶ ಕಲ್ಪಿಸಲಿದೆ. ಆಯೋಜನೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಸಿದ್ದತೆ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿ ಆಶಿಶ್ ಸಿನ್ಹಾ, ಜಂಟಿ ಕಾರ್ಯದರ್ಶಿ (ಭದ್ರತೆ) ಭಾವನಾ ಸಕ್ಸೇನಾ, ಅಧೀನ ಕಾರ್ಯದರ್ಶಿ ಆಸಿಮ್ ಅನ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್ ಮನೋಹರ್ ವಿ., ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ