December 5, 2024

Hampi times

Kannada News Portal from Vijayanagara

ಪತ್ರಕರ್ತರ ವರದಿಗಳು ಸರ್ಕಾರದ ಕಣ್ಣು ತೆರೆಸುತ್ತವೆ : ಸಚಿವ ಜಮೀರ್ ಖಾನ್

 

https://youtu.be/NHc6OMSu0K4?si=SI_K4goOPEgwo6h2

ವಿಜಯನಗರ ಪತ್ರಕರ್ತರ ಕಲ್ಯಾಣಕ್ಕಾಗಿ 25 ಲಕ್ಷ ರೂ.ಅನುದಾನ
ಸಚಿವ ಜಮೀರ್ ಅಹಮದ್ ಖಾನ್ ಭರವಸೆ | ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ

ಹಂಪಿ ಟೈಮ್ಸ್ ಹೊಸಪೇಟೆ

ವಿಜಯನಗರ ಜಿಲ್ಲಾ ಪತ್ರಿಕಾ ಭವನಕ್ಕೆ ಸರ್ಕಾರಿ ನಿವೇಶನ ಒದಗಿಸುವ ಜತೆಗೆ ವೈಯಕ್ತಿಕವಾಗಿ ಐದು ಲಕ್ಷ ರು. ಶೀಘ್ರವೇ ನೀಡುವೆ ಅಲ್ಲದೇ, ಜಿಲ್ಲೆಯ ಪತ್ರಕರ್ತರ ಕಲ್ಯಾಣಕ್ಕಾಗಿ 25 ಲಕ್ಷ ರೂ. ಅನುದಾನ ನೀಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಭರವಸೆ ನೀಡಿದರು.

ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪತ್ರಕರ್ತರಿಗೆ ಅಗತ್ಯ ನಿವೇಶನಕ್ಕೆ ಜಾಗ ಮೀಸಲಿಡಲು ಪ್ರಯತ್ನಿಸುವ ಜೊತೆಗೆ ಜಿಲ್ಲಾ ಭವನಕ್ಕೆ ನಿವೇಶನ ಜೊತೆಗೆ ಅಗತ್ಯ ಅನುದಾನ ಕೂಡ ಒದಗಿಸುವೆ. ಈ ಕೂಡಲೇ ಜಿಲ್ಲಾಧಿಕಾರಿಯೊಂದಿಗೆ ಈ ಬಗ್ಗೆ ಚರ್ಚಿಸುವೆ. ಈ ತಿಂಗಳ 24ರಿಂದ ಒಂದು ವಾರದವರೆಗೆ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಈ ಸಂದರ್ಭ ಜಿಲ್ಲಾ ಭವನ ಸೇರಿದಂತೆ ಕಲ್ಯಾಣ ನಿಧಿಗೆ 25 ಲಕ್ಷ ರೂ. ಮಂಜೂರಾತಿ ಮಾಡುವೆ ಎಂದರು.

ಪತ್ರಕರ್ತರು ಸರ್ಕಾರದ ಕಣ್ಣು ತೆರೆಸುವ ವರದಿಗಳನ್ನು ಮಾಡುತ್ತಿದ್ದಾರೆ. ಪ್ರಕಟಗೊಳ್ಳುವ ಪತ್ರಿಕಾ ವರದಿಗಳಿಂದಲೇ ಹಲವು ವಿಷಯಗಳು ಗೊತ್ತಾಗಲಿವೆ. ಸರ್ಕಾರದ ಮಾಹಿತಿಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಪತ್ರಕರ್ತರ ಸಂಕಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಗೊತ್ತಿದೆ. ಪತ್ರಕರ್ತರ ಸಂಕಷ್ಟದ ಬಗ್ಗೆ ಸಿಎಂ ಗಮನಕ್ಕೆ ತಂದು, ರಾಜ್ಯದ ಎಲ್ಲಾ ಪತ್ರಕರ್ತರಿಗೂ ಬಸ್‌ಪಾಸ್ ವ್ಯವಸ್ಥೆ ಮಾಡಿಸುವೆ. ವಿಜಯನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳುವ ಅವಕಾಶ ಸಿಕ್ಕಿದ್ದು, ಪತ್ರಕರ್ತರು ಸಾಥ್ ನೀಡಬೇಕು. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಹತ್ತರ ಕೆಲಸಗಳು ನಡೆದಿಲ್ಲ ಎಂಬುದು ಕೆಡಿಪಿ ಸಭೆ ನಡೆಸಿದ ಬಳಿಕ ನನಗೂ ಗೊತ್ತಾಗಿದೆ. ಅದೇನೇ ಇರಲಿ, ನಾನು ಆಡಳಿತಕ್ಕೆ ವೇಗ ನೀಡುವೆ ಎಂದರು.

ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಾತನಾಡಿ, ನನ್ನ ತಂದೆ ಎಂ.ಪಿ. ಪ್ರಕಾಶ ಅವರು ಯಾವಾಗಲೂ ಪತ್ರಿಕೆಗಳನ್ನು ಓದುತ್ತಿದ್ದರು. ಜೊತೆಗೆ ಸದನದಲ್ಲೂ ಪತ್ರಿಕಾ ವರದಿಗಳ ಮೇಲೆ ಗಮನ ಸೆಳೆಯುತ್ತಿದ್ದರು. ಹಲವು ಪತ್ರಿಕೆಗಳಿಗೆ ಸ್ವತಃ ನನ್ನ ತಂದೆ ಅಂಕಣ ಬರೆಯುತ್ತಿದ್ದರು. ನಮಗೂ ಬಾಲ್ಯದಿಂದಲೂ ಪತ್ರಿಕೆಗಳ ಜೊತೆಗೆ ನಂಟಿದೆ. ಈಗಲೂ ನಿತ್ಯ ಪತ್ರಿಕೆಗಳನ್ನು ಓದಿಯೇ ದಿನಚರಿ ಆರಂಭಿಸುತ್ತಿರುವೆ. ಆದರೆ, ರಾಜಕಾರಣಿಗಳು ಮೊದಲು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿ, ನಾನು ಎಂದಿಗೂ ಪತ್ರಕರ್ತರನ್ನು ಕಡೆಗಣಿಸುವುದಿಲ್ಲ. ಕಾರಣ ಪತ್ರಿಕೆಗಳ ನೈಜ ವರದಿಯಿಂದಲೇ ನಾನು ಈಗ ಶಾಸಕನಾಗಿರುವೆ ಎಂದರು.
ಶಾಸಕ ಎಚ್.ಆರ್. ಗವಿಯಪ್ಪ, ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ರಾಜ್ಯ ಸಮಿತಿ ಸದಸ್ಯರಾದ ಪಿ. ವೆಂಕೋಬ ನಾಯಕ, ದೇವರಾಜ್ ಮಾತನಾಡಿದರು.

ಹಿರಿಯ ಪತ್ರಕರ್ತರಾದ ಎಸ್.ಎಂ. ಸೋಮಶೇಖರ್, ರಾಮಪ್ರಸಾದ್ ಗಾಂಧಿ, ಅನಂತ ಜೋಶಿ, ಶಿವಾನಂದ, ಪಿ. ವೀರಣ್ಣರನ್ನು ಸನ್ಮಾನಿಸಲಾಯಿತು. ಪಟೇಲ್ ಬೈರಹನುಮಯ್ಯ ಪ್ರಶಸ್ತಿ ಪುರಸ್ಕೃತ ಜಿ.ವಿ. ಸುಬ್ಬರಾವ್, ಸಚಿವ ಜಮೀರ್ ಅಹ್ಮದ್ ಖಾನ್‌ರ ಮಾಧ್ಯಮ ಸಲಹೆಗಾರ ಎಸ್. ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ  ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಬಿಡಿಸಿಸಿ ಬ್ಯಾಂಕ್‌ನ ಹಿರಿಯ ನಿರ್ದೇಶಕ ವೃಷಬೇಂದ್ರಯ್ಯ, ಬಿಡಿಸಿಸಿ ಬ್ಯಾಂಕ್‌ನ ಶಂಕರ್, ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾದಿಕಾರಿಗಳು, ಸದಸ್ಯರಿದ್ದರು. ಪತ್ರಕರ್ತರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡದ ನಾಯಕ ಕಿಚಿಡಿ ಕೊಟ್ರೇಶ್ ಹಾಗೂ ರನ್ನರ್‌ಅಪ್ ತಂಡದ ಉಪ ನಾಯಕ ಬಾಬುಕುಮಾರ ಪ್ರಶಸ್ತಿ ಸ್ವೀಕರಿಸಿದರು.

ಪತ್ರಕರ್ತರ ಕುಟುಂಬದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪತ್ರಕರ್ತರಾದ ಜಯಪ್ಪ ರಾಠೋಡ್, ರೇಖಾ ಪ್ರಕಾಶ್, ಕೃಷ್ಣ ಎನ್. ಲಮಾಣಿ, ಬಿಎಚ್‌ಎಸ್ ರಾಜು, ತಳವಾರ ಚಂದ್ರಪ್ಪ, ಉಮಾಪತಿ ಶೆಟ್ಟರ್, ಸೋಮಶೇಖರ್, ಸುರೇಶ್ ಚೌವ್ಹಾಣ್, ಎಚ್. ವೆಂಕಟೇಶ್, ಸಂಜೀವ್ ಕುಮಾರ, ಪೂರ್ಣಿಮಾ, ಇಂದಿರಾ ಕಲಾಲ್ ನಿರ್ವಹಿಸಿದರು.

ಹತ್ತು ವರ್ಷಗಳಿಂದ ನಾನು ಮಾಧ್ಯಮಗಳಿಂದ ದೂರವೇ ಉಳಿದಿದ್ದೆ. ಈಗ ನನ್ನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಪತ್ರಕರ್ತರ ಪ್ರತಿ ಸಂಕಷ್ಟಕ್ಕೂ ಸ್ಪಂದಿಸುವೆ.
 ಎಚ್.ಆರ್. ಗವಿಯಪ್ಪ ಶಾಸಕ ವಿಜಯನಗರ.

 

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪತ್ರಕರ್ತರ ಕಾಲನಿಗಳನ್ನು ನಿರ್ಮಿಸಲಾಗಿತ್ತು. ಈಗ ಜಮೀರ್ ಅಹ್ಮದ್ ಖಾನ್ ಅವರೇ ವಸತಿ ಸಚಿವರಾಗಿದ್ದು, ವಿಶೇಷ ಕಾಳಜಿ ವಹಿಸಿ ಎಲ್ಲಾ ಜಿಲ್ಲೆಗಳಲ್ಲಿ ಪತ್ರಕರ್ತರಿಗೆ ನಿವೇಶನ ಒದಗಿಸಿ, ಮನೆಗಳನ್ನು ನಿರ್ಮಿಸಿಕೊಟ್ಟು ಕಾಲನಿಗಳನ್ನು ಮಾಡಲಿ.
 ಜಿ.ಸಿ. ಲೋಕೇಶ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪತ್ರಕರ್ತರ ಸಂಘ

 

 

ಜಾಹೀರಾತು
error: Content is protected !!