April 17, 2025

Hampi times

Kannada News Portal from Vijayanagara

ಪತ್ರಿಕೆಗಳು ಸಮನ್ವಯದ ಪ್ರತೀಕವಾಗಲಿ: ಜಗದ್ಗುರು ಶ್ರೀ ಬಸವಲಿಂಗ ಮಹಾಸ್ವಾಮೀಜಿ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ನ್ಯೂಸ್ ಹೊಸಪೇಟೆ
ಮಾಧ್ಯಮಗಳು ಎಡ ಮತ್ತು ಬಲ ಚಿಂತನೆಗಳಿಗೆ ಮನ್ನಣೆ ನೀಡದೇ, ಸಮಾಜದ ಹಿತದೃಷ್ಟಿಯಿಂದ ಚಿಂತನೆಗಳಲ್ಲಿ ಸಮನ್ವಯತೆ ಕಂಡುಕೊಳ್ಳಬೇಕು. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಗಟ್ಟಿಯಾಗಿ ಧ್ವನಿ ಎತ್ತಬೇಕು. ಈ ನಿಟ್ಟಿನಲ್ಲಿ ಹಂಪಿ ಟೈಮ್ಸ್ ಪತ್ರಿಕೆ ನೂತನ ವಿಜಯನಗರ ಜಿಲ್ಲೆಯ ಧ್ವನಿಯಾಗಲಿದೆ ಎಂದು ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ `ಹಂಪಿ ಟೈಮ್ಸ್’ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಆಶೀರ್ವಚನ ನೀಡಿದರು.

ಪತ್ರಿಕೆಗಳು ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇತ್ತೀಚೆಗೆ ಮಾಧ್ಯಮಗಳು ಒಂದಿಲ್ಲೊಂದು ವಾದಗಳಿಗೆ ಜೋತು ಬೀಳುತ್ತಿವೆ. ಕೆಲವರು ಎಡ, ಮತ್ತಿತರೆ ಬಲ ಎಂಬಂತೆ ಸ್ಪರ್ಧೆಗೆ ಬಿದ್ದು ಸುದ್ದಿ ಮಾಡುತ್ತಿರುವುದು ಸಮಾಜಕ್ಕೆ ಒಳ್ಳೆಯದಲ್ಲ. ಯಾವುದೇ ವಿಚಾರವನ್ನು ಅಳೆದೂ ತೂಗಿ, ಅಭಿಪ್ರಾಯದಲ್ಲಿ ಸಮಾನತೆಯನ್ನು ಪ್ರತಿಪಾದಿ ಸಬೇಕು ಎಂಬುದು ಜನಾಪೇಕ್ಷೆಯಾಗಿದೆ. ಆತ್ಮಸಾಕ್ಷಿಯಿಂದ ಸತ್ಯವನ್ನು ಪ್ರ‍್ರಸಾರ ಮಾಡಬೇಕು ಎಂದು ಅಭಿಮತ ವ್ಯಕ್ತಪಡಿಸಿದರು. `ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಸರ್ಕಾರಿ ಅಧಿಕಾರಿಗಳೇ ಭ್ರಷ್ಟಾಚಾರ, ಅಕ್ರಮ ದಲ್ಲಿ ತೊಡಗುವುದು, ಜನ ಹಿತಕ್ಕೆ ವಿರುದ್ಧವಾಗಿ ಸಂದೇಶಗಳನ್ನು ಪ್ರಸಾರ ಮಾಡುವುದು ದೇಶದ ಹಿತಕ್ಕೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದ ಅವರು, ಮಾಧ್ಯಮಗಳು ಆತ್ಮಸಾಕ್ಷಿಯಾಗಿ ಕೆಲಸ ಮಾಡಬೇಕು. ಮತ್ತೊಬ್ಬರಿಗೆ ಮಾದರಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಬಸವರಾಜ ಬಸಾಪುರ ನ್ಯಾಯನಿಷ್ಟುರರು, ಸಾತ್ವಿಕ ವ್ಯಕ್ತಿತ್ವವನ್ನು ಹೊಂದಿದ್ದು,  ಹಂಪಿ ಟೈಮ್ಸ್ ಪತ್ರಿಕೆಯಲ್ಲಿ ಜನಾಶಯಕ್ಕೆ ಮನ್ನಣೆ ದೊರೆಯಲಿದೆ. ಪತ್ರಿಕೆಗಳು ನಮ್ಮ ಜಿಲ್ಲೆಯ ಇತಿಹಾಸ, ಸಂಸ್ಕೃತಿಯನ್ನು ಬಿಂಬಿಸಲಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಹಂಪಿ ಟೈಮ್ಸ್ ಪತ್ರಿಕೆ ಹೊರ ಹೊಮ್ಮುತ್ತಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದರು.


ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪರಮಶಿವಮೂರ್ತಿ ಮಾತನಾಡಿ, ಇಂದು ಮಾಧ್ಯಮಗಳ ಸಂಖ್ಯೆ ಹೆಚ್ಚಿದೆ. ಸಾಮಾಜಿಕ ಜಾಲತಾಣಗಳ ಪೈಪೋಟಿ ಮಧ್ಯೆಯೂ ಪತ್ರಿಕೆಗಳನ್ನು ಮುನ್ನಡೆಸುವುದು ಕಷ್ಟಕರ. ಅಂತ ಸಂದಿಗ್ಧ ಸಂದರ್ಭದಲ್ಲೂ ಪತ್ರಿಕೆಯನ್ನು ಆರಂಭಿಸುವ ಸಾಹಸಕ್ಕೆ ಬಸಾಪುರ ಬಸವರಾಜ್ ಕೈ ಹಾಕಿರುವುದು ಅಭಿನಂದನೀಯ.  ಪತ್ರಿಕೆ ಎಂಬುದು ಧರ್ಮ. ಯಾವುದೇ ಸಂದರ್ಭದಲ್ಲಿ ರಾಜೀರಹಿತವಾಗಿ ಧರ್ಮ ಪಾಲನೆ ಮಾಡುವುದು ಕಷ್ಟ. ರಾಜಕೀಯ ಹೊಂದಾಣಿಕೆಗೆ ಪ್ರೇರೇಪಿಸುತ್ತದೆ. ಅನೇಕ ಆಮಿಷಗಳು ಬರುತ್ತವೆ. ಅದೆಲ್ಲವನ್ನೂ ಧಿಕ್ಕರಿಸಿ, ಪತ್ರಿಕಾ ಧರ್ಮ ಪಾಲನೆ ಮಾಡುವ ಮಾಧ್ಯಮಗಳಿಗೆ ಸದಾ ಜನ ಮನ್ನಣೆ, ಬೆಂಬಲವೂ ಬೇಕು. ಕನ್ನಡ ಪತ್ರಿಕೆ ಮಂಗಳೂರು ಸಮಾಚಾರ ಬಳ್ಳಾರಿಯಿಂದ ಆರಂಭಿಸಿತ್ತು. ಕನ್ನಡ ಪತ್ರಿಕೋದ್ಯಮದ ಇತಿಹಾಸ ಅವಲೋಕನದಲ್ಲಿ ಬಳ್ಳಾರಿಯನ್ನು ಕಡೆಗಣಿಸುವಂತಿಲ್ಲ ಎಂದರು.

`ವಿಜಯವಾಣಿ’ ಪತ್ರಿಕೆ ಸ್ಥಾನಿಕ ಸಂಪಾದಕ ಚಂದ್ರಶೇಖರ ಶೃಂಗೇರಿ ಮಾತನಾಡಿ, ಕಳೆದ 40 ವರ್ಷಗಳಿಂದ ಅನೇಕ ಏಳುಬೀಳುಗಳನ್ನು ಕಂಡಿದ್ದೇನೆ. ಪತ್ರಿಕೆ ಆರಂಭಿಸುವುದು ಒಂದು ರೀತಿಯಲ್ಲಿ ಹುಚ್ಚು ಸಾಹಸ. ಆದರೂ, ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲುವ ಹುಮ್ಮಸ್ಸಿನಲ್ಲಿ ಬಸಾಪುರ ಬಸವರಾಜ ಪತ್ರಿಕೆಯನ್ನು ಆರಂಭಿಸಿದ್ದಾರೆ.  ಬಸಾಪುರ ಬಸವರಾಜ ಅವರು ಕಳೆದ 10 ವರ್ಷಗಳ ಕಾಲ ವಿಜಯವಾಣಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಸ್ವಂತ ಪತ್ರಿಕೆಯನ್ನು ಆರಂಭಿಸಿತ್ತಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲರೂ ಸಹ ಪತ್ರಕರ್ತರೇ. ಇದು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಸವಾಲೇ ಸರಿ.  ಹೀಗಾಗಿ ಜನಮುಖಿಯಾಗಿ ಕಾರ್ಯನಿರ್ವಹಿಸುವ ಪತ್ರಿಕೆಗಳನ್ನು ಓದುಗರು ಅಪ್ಪಿಕೊಳ್ಳಬೇಕು. ಪತ್ರಿಕೆಗಳನ್ನು ರೂಪಿಸಲು ನೂರಾರು ಕಾರ್ಮಿಕರು ಶ್ರಮಿಸುತ್ತಾರೆ. ಹೀಗಾಗಿ ಓದುಗರು ಪತ್ರಿಕೆಗಳನ್ನು ಖರೀದಿಸಿದಾಗ ಮಾತ್ರ ಅವುಗಳು ಜೀವಂತವಾಗಿ ಉಳಿಯಲು ಸಾಧ್ಯ ಎಂಬುದನ್ನು ಮರೆಯಬಾರದು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಎಂ.ರಾಜಶೇಖರ, ಹಂಪಿ ಟೈಮ್ಸ್ ಕೇವಲ ಸುದ್ದಿ ಪತ್ರಿಕೆಯಾಗಿರದೇ, ದೊಡ್ಡ ಉದ್ಯಮಿಗಳಿಂದ ಹಿಡಿದು, ಜನ ಸಾಮಾನ್ಯರ ವರೆಗೆ ತಲುಪಲಿದೆ. ಈ ನಿಟ್ಟಿನಲ್ಲಿ ಪ್ರತಿ ನಿತ್ಯ ಒಂದೊಂದು ವಿಶೇಷ ತೆಯೊಂದಿಗೆ ಬರಲಿದೆ. ಅಗತ್ಯವುಳ್ಳವರಿಗೆ ಪ್ರಚಲಿತ ವಿದ್ಯಮಾನಗಳು, ಸಾಹಿತ್ಯ, ಚಿಣ್ಣರ ಅಂಕಣ, ಉದ್ಯೋಗದ ಮಾರ್ಗದರ್ಶಿಯಾಗಲಿದೆ. ಓದುಗರು ಪತ್ರಿಕೆಯನ್ನು ಕೊಂಡು ಓದಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಬಲ ಪಡಿಸಬೇಕು ಎಂದು ಮನವಿ ಮಾಡಿದರು. ವೇದಿಕೆ ಮೇಲೆ ಹಂಪಿ ಟೈಮ್ಸ್ ಸಂಪಾದಕ ಬಸವರಾಜ ಬಸಾಪುರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೂರ್ಣಿಮಾ ಪ್ರಾರ್ಥಿಸಿದರು, ಕಲ್ಲಂ ಭಟ್ ವಕೀಲರು ನಿರೂಪಿಸಿದರು. ಕೊಟ್ರೇಶ ಕಿಚಿಡಿ ವಂದಿಸಿದರು.

ಹಂಪಿ ಟೈಮ್ಸ್ ಉದ್ಘಾಟನೆ ವೇಳೆ ಪತ್ರಿಕೆ ಹಂಚುವ ಯುವಕ ಸುಹಾಸ್ ಸೈಕಲ್ ಮೇಲೆ ತರುವ ಮೂಲಕ ಸಭಿಕರನ್ನು ಚಕಿತಗೊಳಿಸಿದರು. ಪತ್ರಿಕೆಗಳ ಗುಚ್ಛವನ್ನು ಪಡೆದ ಪೂಜ್ಯ ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದ್ದು, ವಿಶೇಷವಾಗಿತ್ತು.

 

ಜಾಹೀರಾತು
error: Content is protected !!