December 5, 2024

Hampi times

Kannada News Portal from Vijayanagara

ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಎಸ್.ಆನಂದ್ ರಾಜೀನಾಮೆ

 

https://youtu.be/NHc6OMSu0K4?si=SI_K4goOPEgwo6h2

ಗರಿಗೆದರಿದ ಗದ್ದುಗೆಯ ಕಿತ್ತಾಟ | ಅಭಿವೃದ್ಧಿಗೋ ಅಧಿಕಾರಕ್ಕೋ ಬದಲಾವಣೆ?
ಹಂಪಿ ಟೈಮ್ಸ್ ಹೊಸಪೇಟೆ

ಸ್ಥಳೀಯ ನಗರಸಭೆ ಉಪಾಧ್ಯಕ್ಷರಾಗಿದ್ದ ಎಲ್.ಎಸ್.ಆನಂದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿಗೆ ಶನಿವಾರ ತಲುಪಿಸಿದ್ದು, ಇವರ ರಾಜೀನಾಮೆ ರಾಜಕೀಯ ವಲಯದ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಪ್ರಸ್ತುತ ಸುಂಕಮ್ಮ ಅಧ್ಯಕ್ಷರಾಗಿ, ಎಲ್.ಎಸ್.ಆನಂದ್ ಉಪಾಧ್ಯಕ್ಷರಾಗಿ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಆದರೆ, ಈ ಅನಿರೀಕ್ಷಿತ ನಿರ್ಧಾರ ಹಲವರಿಗೆ ಪ್ರಶ್ನೆಯಾಗಿದ್ದು, ಈ ಕಾರ್ಯದ ಹಿಂದೆ ಪ್ರತಿಷ್ಠಿತರ ಒತ್ತಡ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಎಲ್.ಎಸ್.ಆನಂದ್ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಇದು ತಮ್ಮ ವೈಯಕ್ತಿಕ ನಿಲುವು ಆಗಿದ್ದು, ಇದರ ಹಿಂದೆ ಯಾರ ಒತ್ತಡ, ಬಲವಂತಿಕೆ ಇಲ್ಲ ಎಂಬುದಾಗಿ ನಮೂದಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಬಳಿಕ ಹಾಗೂ ಅದರ ಹಾಸುಪಾಸಿನ ಬೆಳವಣಿಗೆಗಳಿಂದ ಇವರ ರಾಜೀನಾಮೆ ಒಂದು ಸಹಜ ಪ್ರಕ್ರಿಯೆ ಎನಿಸಿದರೂ ದಿಢೀರ್ ಈ ಪ್ರಕ್ರಿಯೆ ಅನೇಕ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ಅಲ್ಲಗಳೆಯುವಂತಿಲ್ಲ.

ಸದ್ಯ ನಗರಸಭೆ ಬಿಜೆಪಿಯ ತೆಕ್ಕೆಯಲ್ಲಿದ್ದು, ಪ್ರವಾಸೋದ್ಯಮ ಮಾಜಿ ಸಚಿವ ಆನಂದಸಿAಗ್ ಅಣತಿಯಂತೆ ನಡೆಯುತ್ತಿದೆ ಎಂಬುದು ಅನೇಕರ ಆರೋಪ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಲ್.ಎಸ್.ಆನಂದ್ ರಾಜೀನಾಮೆ ತೀವ್ರ ಚರ್ಚೆಗೆ ಕಾರಣವಾಗಿದೆ. ಉತ್ತಮ ಆಡಳಿತ ಸಂದರ್ಭ ಏಕಾಏಕಿ ರಾಜೀನಾಮೆ ಅನೇಕರಿಗೆ ಪ್ರಶ್ನೆಯಾಗಿದ್ದು, ಬಿಜೆಪಿ ಪಕ್ಷದ ಇತರೆ ಸದಸ್ಯರೇ ಈ ಸ್ಥಾನವನ್ನು ತುಂಬುವ ಸಾಧ್ಯತೆ ಕೇಳಿ ಬರುತ್ತಿದೆ.

ಇದೇ ಹಾದಿಯಲ್ಲಿ ಅಧ್ಯಕ್ಷರ ನಡೆ?
ನಗರಸಭೆ ಉಪಾಧ್ಯಕ್ಷರಾಗಿದ್ದ ಎಲ್.ಎಸ್.ಆನಂದ್ ರಾಜೀನಾಮೆ ನೀಡಿದ ಬೆನ್ನಲ್ಲೆ ಅಧ್ಯಕ್ಷರಾದ ಸುಂಕಮ್ಮ ಕೂಡ ಶೀಘ್ರ ರಾಜೀನಾಮೆ ಸಲ್ಲಿಸಿದರೂ ಅಚ್ಚರಿ ಇಲ್ಲ. ಬಿಜೆಪಿಗೆ ವಿರೋಧ ಪಕ್ಷವಾದ ಕಾಂಗ್ರೆಸ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವಷ್ಟು ಸಂಖ್ಯೆ ಬಲ ಸದ್ದಕ್ಕಿಲ್ಲ. ಹೀಗಾಗಿ ಬಿಜೆಪಿಯ ಉಳಿದ ಸದಸ್ಯರೇ ಮುಂದಿನ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುವುದಾಗಿ ಹೇಳಲಾಗುತ್ತಿದೆ.

 

ಸದಸ್ಯರಲ್ಲಿ ಸಂಚಲನ
ಎಲ್.ಎಸ್.ಆನಂದ್ ರಾಜೀನಾಮೆ ನಗರಸಭೆ ಉಳಿದ ಸದಸ್ಯರಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಯಾಸದ ಗೆಲುವಿನ ಮೂಲಕ ನಗರಸಭೆ ಪ್ರವೇಶಿಸಿದ ಪ್ರತಿ ಸದಸ್ಯರಿಗೂ ಅಧ್ಯಕ್ಷರಾಗುವ ಆಸೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಅನೇಕರು ಈ ರೇಸ್‌ನಲ್ಲಿದ್ದು, ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ.
ಅವಧಿಗೂ ಮುನ್ನ ರಾಜೀನಾಮೆ ಏಕೆ?
ನಗರಸಭೆ ಚುನಾವಣೆ ಫಲಿತಾಂಶ ಸಂದರ್ಭ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಿತ್ತು. ಐದು ವರ್ಷದ ಅವಧಿಯನ್ನು ಅಲಿಖಿತ ಎರಡೂವರೆ ವರ್ಷಕ್ಕೆ ವಿಭಾಗಿಸಿ ಸುಂಕಮ್ಮ ಹಾಗೂ ಎಲ್.ಎಸ್.ಆನಂದ್‌ರಿಗೆ ಮೊದಲ ಅವಧಿಗೆ ಆಯ್ಕೆ ಮಾಡಿ ಆಡಳಿತದ ಚುಕ್ಕಾಣಿಯನ್ನು ನೀಡಲಾಗಿತ್ತು. ಇವರ ಆಡಳಿತದ ಅವಧಿ ಈಗ್ಗೆ ಒಂದೂವರೆ ವರ್ಷ ಪೂರ್ಣಗೊಂಡಿದ್ದು, ಇನ್ನೂ ಒಂದು ವರ್ಷ ಅವಧಿ ಉಳಿದಿದೆ. ಆದರೆ, ಅವಧಿಗೂ ಮುನ್ನ ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಎಸ್.ಆನಂದ್ ರಾಜೀನಾಮೆ ನೀಡಿದ್ದು, ಏಕೆ ಎಂಬ ಪ್ರಶ್ನೆ ಅನೇಕರದ್ದಾಗಿದೆ. ಎಲ್.ಎಸ್.ಆನಂದ್ ಬಿಜೆಪಿಯವರೇ ಮಾತ್ರವಲ್ಲದೇ, ವೃತ್ತಿಯಿಂದ ವಕೀಲರಾಗಿದ್ದಾರೆ. ವೃತ್ತಿಯಿಂದಲೂ, ವೈಯಕ್ತಿಕವಾಗಿಯೂ ಉತ್ತಮ ಹೆಸರು ಪಡೆದಿರುವ ಇವರು, ರಾಜೀನಾಮೆ ನೀಡಿದ್ದು, ನಗರದ ಅಭಿವೃದ್ಧಿಗೆ ಹಿನ್ನಡೆಯಾಗುವ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.

 

ಅಭಿವೃದ್ಧಿ ಹಿನ್ನಡೆಗೆ ಈ ತಂತ್ರವೇ?
ಎಲ್.ಎಸ್.ಆನಂದ್‌ರ ಈ ರಾಜೀನಾಮೆ, ನಗರದ ಅಭಿವೃದ್ಧಿಯ ಹಿನ್ನಡೆಯ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ. ಬದಲಾದ ರಾಜಕಾರಣದಿಂದ ವಿಜಯನಗರ ಕ್ಷೇತ್ರ ಎಚ್.ಆರ್.ಗವಿಯಪ್ಪರ ಬಾಹು ಸೇರಿದ್ದು, ನಗರಸಭೆಯ ಅಭಿವೃದ್ಧಿ ಓಟ ಗವಿಯಪ್ಪರಿಗೇ ಪ್ಲಸ್ ಆಗಲಿದೆ. ಈ ನಿಟ್ಟಿನಲ್ಲಿ ಓಟವನ್ನು ನಿಯಂತ್ರಿಸಲು ಮುಂದಾಳತ್ವ ವಹಿಸಿದವರನ್ನು ಬದಲಾಯಿಸುವ ಮೂಲಕ ಪ್ಲಸ್‌ನ್ನು ಮೈನಸ್ ಮಾಡುವ ತಂತ್ರ ಇದು ಎನ್ನಲಾಗುತ್ತಿದೆ. ಆದರೆ, ಯಾರದೋ ಹಿತಕ್ಕಾಗಿ ಉತ್ತಮ ಆಡಳಿತ ನೀಡುತ್ತಿದ್ದವರನ್ನು ಬದಲಾಯಿಸುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದ್ದು, ಇನ್ನೆಷ್ಟು ಅಧ್ಯಕ್ಷ-ಉಪಾಧ್ಯಕ್ಷರನ್ನು ನಗರದ ಜನತೆ ಕಾಣಬೇಕಾಗಿದೆಯೋ ಕಾದು ನೋಡಬೇಕು.

|| ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರ ಹಿಂದೆ ಯಾರ ಒತ್ತಡವೂ ಇಲ್ಲ. ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವೆ. ಕೊಟ್ಟ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ.
– ಎಲ್.ಎಸ್.ಆನಂದ್, ನಗರಸಭೆ ಸದಸ್ಯ ಹೊಸಪೇಟೆ

 

 

ಜಾಹೀರಾತು
error: Content is protected !!