https://youtu.be/NHc6OMSu0K4?si=SI_K4goOPEgwo6h2
ಕೇಸರಿ ತೊಟ್ಟವರೆಲ್ಲ ಸನ್ಯಾಸಿಗಳೇ ? ನಿಜ ಸನ್ಯಾಸಿಗಳು ಯಾರು ?
ಶಿವಾನಂದ ಭಾರತೀ ಚಿಂತಾಮಣಿ ಶ್ರೀಗಳ ಅಭಿಮತ
ಹಂಪಿ ಟೈಮ್ಸ್ ಹೊಸಪೇಟೆ:
ಯಾರಿಗೆ ಪ್ರಪಂಚದ ಸುಖ ಇನ್ನೂ ಸಾಲದೋ ಅವರೆಲ್ಲ ಸಂಸಾರಿಗಳು. ಸುಖ ಸಾಕು ಎನ್ನುವವರೇ ನಿಜ ಸನ್ಯಾಸಿಗಳು. ಭಕ್ತರಿಗೆ ಮಠಗಳು ತವರು ಮನೆ ಇದ್ದಂತೆ, ಕಷ್ಟ, ಮಾನಸಿಕ ಒತ್ತಡ ಕಡಿಮೆ ಮಾಡಿ ಜೀವನದಲ್ಲಿ ಉತ್ಸುಕತೆ, ಚೈತನ್ಯ ತುಂಬುವ ಕೇಂದ್ರಗಳಾಗಿವೆ. ಭಕ್ತರು ಮಠಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಮಾರ್ಗದರ್ಶನ ಪಡೆದಾಗ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಅಮರಾವತಿಯ ಚಿಂತಾಮಣಿ ಮಠದ ನೂತನ ಪೀಠಾಧಿಪತಿ ಶಿವಾನಂದ ಭಾರತೀ ಚಿಂತಾಮಣಿ ಶ್ರೀಗಳು ಹೇಳಿದರು.
ನಗರದ ಅಮರಾವತಿ ಚಿಂತಾಮಣಿ ಮಠದಲ್ಲಿ ಗುರುವಾರ ಜರುಗಿದ ನೂತನ ಪೀಠಾಧಿಪತಿಗಳ ಪೀಠಾರೋಹಣ ಸಮಾರಂಭದಲ್ಲಿ ಸನ್ಯಾಸ ದೀಕ್ಷೆ ಪಡೆದು, 31ನೇ ಪೀಠಾಧಿಪತಿಯಾಗಿ ಪೀಠಾರೋಹಣ ಅಲಂಕರಿಸಿ ಮಾತನಾಡಿದರು. ಸುಖ ಕ್ಷಣಿಕ, ಕಷ್ಟಗಳು ಸದಾ ಎದುರಾಗುತ್ತವೆ. ಸುಖ ಬಯಸಿಯೇ ಪೂಜೆ ಪುನಸ್ಕಾರಗಳಿಗೆ ಮೊರೆಹೋಗುತ್ತಾರೆ. ಜೀವನದಲ್ಲಿ ಶಾಶ್ವತಾನಂದ ಪಡೆಯಲು ಗುರುವಿನ ಆಶೀರ್ವಾದ ಪಡೆದು ಅಧ್ವೈತ ಸಿದ್ಧಾಂತ ಅಧ್ಯಯನ ಮಾಡಬೇಕು. ಕಳ್ಳನಿಗೂ ಒಬ್ಬ ಗುರುವಿರುತ್ತಾನೆ. ಅಕ್ಷರ ಕಲಿಸಿದವರು ಮಾತ್ರ ಗುರುವೆಂದಲ್ಲ, ಅಜ್ಞಾನದ ಅಂಧಕಾರ ದೂರವಾಗಿಸಿದವರು, ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ಮಾಡಿದವರೆಲ್ಲರನ್ನೂ ಗುರುಗಳೆಂದು ಭಾವಿಸಬೇಕು. ಜೀವನದಲ್ಲಿ ಸದಾ ಆನಂದದಿಂದ ಇರಲು ಗುರುವಿನ ಮಾರ್ಗದರ್ಶನ ಅತ್ಯವಶ್ಯ ಎಂದರು.
ಮಾಧವಾನಂದ ಶ್ರೀಗಳು ದೀಕ್ಷೆ ನೀಡಿ ಮಾತನಾಡಿದರು. ಸ್ವಾರ್ಥ ಹಿತಕ್ಕಾಗಿ, ಅಲ್ಪ ಸುಖಕ್ಕಾಗಿ ಮತ್ತೊಬ್ಬರಿಗೆ ನೋವುಂಟು ಮಾಡುವುದೇ ಅಧರ್ಮ, ತಮ್ಮ ಶ್ರಮ ನಂಬಿ, ಇತರರಿಗೂ ಒಳಿತಾಗುವ ಹಾದಿಯಲ್ಲಿ ನಡೆಯುವುದೇ ಧರ್ಮ, ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಪರಮಾತ್ಮನ ಕೃಪೆ ಸದಾ ಇರಲಿದೆ. ನೂತನ ಪೀಠಾಧಿಪತಿ ಶಿವಾನಂದ ಭಾರತೀ ಶ್ರೀಗಳು ಧರ್ಮ ಪ್ರಚಾರದಲ್ಲಿ ತೊಡಗಲಿದ್ದಾರೆ. ಭಕ್ತರ ಸಹಕಾರ ಸದಾ ಇರಲಿ ಎಂದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ, ವೇಣುಗೋಪಾಲ ವೈದ್ಯ, ಬ್ರಾಹ್ಮಣ ಮಹಾಸಭಾದ ಸದಸ್ಯ ಹೆಚ್.ಉಮೇಶ ಹಿರಿಯರಾದ ಡಾ.ಹನುಮಂತರಾವ್, ವಕೀಲರಾದ ವೆಂಕಟರಾವ್, ಸತ್ಯನಾರಾಯಣ ಶಾಸ್ತ್ರಿ, ಹೆಚ್.ಪಿ.ಕಲ್ಲಂಭಟ್, ಚಂದ್ರಕಾಂತ ಕಾಮತ್, ಅನಂತಪದ್ಮನಾಭ, ಅನಿಲ ಜೋಶಿ, ಹಿರಿಯ ಪುರೋಹಿತರಾದ ಮೋಹನ ಚಿಕ್ಕಭಟ್ ಜೋಶಿ, ತಹಶಿಲ್ದಾರ್ ವಿಶ್ವಜೀತ ಮೆಹತಾ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಕುರುಬ ಸಮಾಜ, ವಾಲ್ಮೀಕಿ ಸಮಾಜ, ದಲಿತ ಸಮಾಜದ, ಮುಸ್ಲಿಂ ಸಮಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು. ಪೀಠಾರೋಹಣ ಕಾರ್ಯಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದರು.
*****-
|| ಸದಾ ಪ್ರಶಾಂತಾತ್ಮ ಹಾಗೂ ಸದಾ ಅನುಷ್ಠಾನದಲ್ಲಿರುವ ಮಹಾಯತಿ ಶ್ರೀ ಮಾಧವಾನಂದ ಶ್ರೀಗಳಿಂದ ಸನ್ಯಾಸ ದೀಕ್ಷೆ ದೊರೆತಿರುವುದು ನನಗೆ ಬಹಳ ಸಂತೋಷ ತಂದಿದೆ. ಧರ್ಮಾಚರಣೆಯಿಂದಲೇ ಉನ್ನತಿ. ಭಕ್ತರು ಮಠದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ಪಡೆದುಕೊಳ್ಳಬೇಕು. ಧರ್ಮ ಜಾಗೃತಿ ಕಾರ್ಯಕೈಗೊಳ್ಳಲಾಗುವುದು.
– ಶಿವಾನಂದ ಭಾರತೀ ಚಿಂತಾಮಣಿ ಶ್ರೀಗಳು, ಚಿಂತಾಮಣಿ ಮಠ,ಅಮರಾವತಿ.
*****-
ಪೀಠಾರೋಹಣಕ್ಕೂ ಮುನ್ನ ಹಂಪಿಯ ತುಂಗಭದ್ರ ನದಿಯಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯಿತು. ಹೊಸಪೇಟೆ ಪುರಪ್ರವೇಶಮಾಡಿದ ಶ್ರೀಗಳನ್ನು ಸಂಗೀತ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಮಠಕ್ಕೆ ಸ್ವಾಗತಿಸಿದರು. ಆನೆಗುಂದಿ ಮೂಲ ಸಂಸ್ಥಾನದ ಹೊಸಪೇಟೆಯ ಚಿಂತಾಮಣಿ ಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ ಶಿವಾನಂದಭಾರತೀ ಚಿಂತಾಮಣಿ ಮಹಾಸ್ವಾಮಿಗಳು ಪೀಠಾರೋಹಣ ಅಲಂಕರಿಸಿದರು. ನೆಲಮಾವು ಮಠದ ಜಗದ್ಗುರು ಮಾಧವಾನಂದ ಶ್ರೀಗಳು ಪೀಠಾಧಿಕಾರ ರುದ್ರಾಕ್ಷಿ ಕೀರಿಟಧಾರಣೆ ಮಾಡಿ ಪದಗ್ರಹಣ ಹಸ್ತಾಂತರಿಸಲಾಯಿತು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ