https://youtu.be/NHc6OMSu0K4?si=SI_K4goOPEgwo6h2
ಸರ್ಕಾರಿ ನೌಕರಿ ಗ್ಯಾರಂಟಿ ಇಲ್ಲ! | ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಕ್ರೀಡೆಗೂ ಪ್ರೋತ್ಸಾಹಿಸಿ
ಹಂಪಿ ಟೈಮ್ಸ್ ಹಗರಿಬೊಮ್ಮನಹಳ್ಳಿ
ಶಿಕ್ಷಣ ಪೂರೈಸಿದ ನಂತರ ಉದ್ಯೋಗಗಳನ್ನು ಹುಡುಕುತ್ತಾ ಕೂಡದೇ, ಶಿಕ್ಷಣದಿಂದ ಸರ್ಕಾರಿ ನೌಕರಿ ಲಭಿಸದಿದ್ದರೂ ಹವ್ಯಾಸಗಳೇ ಅನ್ನ ಕೊಡುವಂತಿರಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಧ್ಯಕ್ಷ ಜಿ.ಪಿ.ಪಾಟೀಲ್ ಹೇಳಿದರು.
ನಗರದ ಹರ ದೇವಸ್ಥಾನದ ಆವರಣದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ರಾಜ್ಯ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸಬೇಡಿ ಹಾಗೆಯೇ ಪಂಜರದ ಗಿಳಿಗಳನ್ನಾಗಿಸಲೂಬೇಡಿ. ಮಕ್ಕಳು ಶಾರೀರಿಕವಾಗಿ ಸದೃಢವಾಗಬೇಕಾದರೆ ಆಟವಾಡಲು ಬಿಡಬೇಕು. ಆ ಆಟಗಳು ಜೀವನಕ್ಕೂ ಆಧಾರವಾಗಬಹುದು. ಗರಿಷ್ಠ ಅಂಕಗಳನ್ನು ಪಡೆದರೆ ಸಾಲದು, ಮಕ್ಕಳ ಕೈಗೆ ನೂರು ರೂಪಾಯಿ ಕೊಟ್ಟು ಮಾರುಕಟ್ಟೆಯಲ್ಲಿನ ವಸ್ತುಗಳನ್ನು ತರಲು ಹೇಳಬೇಕು. ಅಂಕಗಳ ಬೆನ್ನತ್ತುವ ಪೋಷಕರು ಮಕ್ಕಳಲ್ಲಿನ ಸಾಮಾನ್ಯ ಜ್ಞಾನಕ್ಕೂ ಒತ್ತು ನೀಡದಿರುವುದು ಕಳವಳಕಾರಿ ಸಂಗತಿ. ಬದುಕಿಗೆ ಆಧಾರವಾಗುವುದು ಸಾಮಾನ್ಯ ಜ್ಞಾನ ಎಂಬುದು ಮರೆಯಬಾರದು. ಮಕ್ಕಳಿಗೆ ಶಿಕ್ಷಣದ ಜೊತೆ ಮನೆಯ ಮೂಲ ಕಸುಬನ್ನು ಕಲಿಸಬೇಕು. ಶಿಕ್ಷಣ ಕೈಹಿಡಿಯದಿದ್ದರೆ ಮೂಲ ಕಸುಬು ಜೀವನಕ್ಕೆ ಆಧಾರವಾಗುತ್ತದೆ ಎಂದರು.
ಶಾಸಕ ಕೆ.ನೇಮಿರಾಜ್‌ನಾಯ್ಕ್ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ಪುರಸ್ಕಾರ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಪ್ರತಿಭಾ ಪುರಸ್ಕಾರಗಳು ಮಕ್ಕಳ ಓದಿಗೆ ಬೂಸ್ಟ್ ಕೊಟ್ಟಂತಾಗುತ್ತದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು. ಮಕ್ಕಳ ಭವಿಷ್ಯ ನಮ್ಮ ಜೀವನ ಶೈಲಿಯನ್ನೆ ಅವಲಂಬಿಸಿರುತ್ತದೆ. ಹಾಗಾಗಿ ನಾವು ಉತ್ತಮ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಪಂಚಮಸಾಲಿ ಸಮಾಜದ ಆಶೀರ್ವಾದ ನನ್ನ ಮೇಲಿದ್ದು, ಸಮಾಜದ ಸೇವೆಗೆ ನಾನು ಸದಾ ಬದ್ಧ ಎಂದರು.
ಸಮುದಾಯದ ರಾಜ್ಯ ಘಟಕದ ಕಾರ್ಯಧ್ಯಕ್ಷ ಸೋಮನಗೌಡ ಮಾತನಾಡಿ, ಸಮುದಾಯಕ್ಕೆ 2ಎ ಮೀಸಲಾತಿ ದೊರೆಯುವತನಕ ಹೋರಾಟ ನಿಲ್ಲದು, ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಪಡೆದರೆ ಮಾತ್ರ ಮಕ್ಕಳ ಎಂಬಿಬಿಎಸ್, ಐಎಎಸ್, ಐಎಫ್‌ಸ್ ಇನ್ನಿತರ ಕನಸು ನನಸಾಗುತ್ತವೆ. ಸೌಲಭ್ಯ ಸಿಗುವವರೆಗೂ ನಾವು ಸುಮ್ಮನೆ ಕೂಡುವದಿಲ್ಲ, ನಮ್ಮೊಂದಿಗೆ ನೀವು ಕೈಜೋಡಿಸಿ ಎಂದು ಕರೆ ನೀಡಿದರು.
ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಸಮುದಾಯದ ಅತ್ಯಂತ ಕಡುಬಡವ ವಿದ್ಯಾರ್ಥಿಗಳಿಗೆ ಪೀಠದಲ್ಲಿ, 6ನೇ ತರಗತಿಯಿಂದ ಉಚಿತ ಶಿಕ್ಷಣ ಪಡೆಯಲು ಅವಕಾಶವಿದೆ. ಐಎಎಸ್, ಕೆಎಎಸ್ ಮಾಡಬೇಕೆನ್ನುವ ಹಂಬಲವನ್ನಿಟ್ಟುಕೊAಡಿರುವ ಅರ್ಹ ಬಡ ಮಕ್ಕಳಿಗೆ ಪೀಠದಿಂದಲೇ ಅಗತ್ಯ ಸಹಕಾರ ದೊರೆಯಲಿದೆ ಎಂದರು.
ಮಾಜಿ ರಾಜ್ಯಾಧ್ಯಕ್ಷ ಬಸವರಾಜ್ ದಿಂಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಹನಸಿ ಸಿದ್ದೇಶ, ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಗಳ ಬಸವರಾಜ್, ಕಾರ್ಯದರ್ಶಿ ವಾಣಿಗುರು, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ ಮಾತನಾಡಿದರು. ಅಕ್ಕಿ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ರಾಜ್ಯ ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ, ಹೊಸಪೇಟೆ ತಾಲೂಕು ಅಧ್ಯಕ್ಷ ಎಂ. ರಾಜಶೇಖರ್, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ರಾರಾಳ್ ಶೇಖರಪ್ಪ, ಬದಾಮಿ ಮೃತ್ಯುಂಜಯ ಇತರರಿದ್ದರು.
ಬಿಇಒ ಎಂ.ಸಿ.ಆನಂದ, ಶಿಕ್ಷಕ ಎಂ.ಕೊಟ್ರೇಶಪ್ಪ, ಪಿಎಲ್‌ಡಿ ಬ್ಯಾಂಕ್ ಕುಮಾರಸ್ವಾಮಿ ಸೇರಿದಂತೆ 48ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಳ್ಳಿಯ ಲಿಂಗದಕಾಯಿ, ಶಾಲು, ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು. ಟ್ರಸ್ಟ್ನ ಕಾರ್ಯದರ್ಶಿ ಶಿವಶಂಕರಗೌಡ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊನ್ನದ್ ಗುರುಬಸವರಾಜ್ ನಿರ್ವಹಿಸಿದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ