December 5, 2024

Hampi times

Kannada News Portal from Vijayanagara

ಶೃಂಗಸಭೆಗೆ ಅಗತ್ಯ ಸೌಕರ್ಯ, ಅತಿಥಿಗಳಿಗೆ ಸಂಸ್ಕೃತಿಯ ಅನಾವರಣ: ಡಿಸಿ ವೆಂಕಟೇಶ್

 

https://youtu.be/NHc6OMSu0K4?si=SI_K4goOPEgwo6h2

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಸಭೆ | ಜುಲೈನಲ್ಲಿ ಶೃಂಗಸಭೆ

ಹಂಪಿ ಟೈಮ್ಸ್ ಹೊಸಪೇಟೆ : 
ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ  ಪ್ರತಿನಿಧಿಗಳಿಗೆ ಸಭೆಗೆ ಅಗತ್ಯವುಳ್ಳ ಸಕಲ ಸೌಕರ್ಯ ಒದಗಿಸುವ ಜೊತೆ ಐತಿಹಾಸಿಕ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯ ಅನಾವರಣಗೊಳಿಸುವ ಕುರಿತು ಸಿದ್ಧತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ತಿಳಿಸಿದರು.
ವಿಶ್ವಪ್ರಸಿದ್ಧ ಹಂಪಿಯಲ್ಲಿ  ನಡೆಯಲಿರುವ ಮೂರನೇ ಶೆರ್ಪಾ ಜಿ20 ಶೃಂಗಸಭೆ ಕುರಿತು ಕೈಗೊಳ್ಳಬೇಕಾದ ಸೌಕರ್ಯ ಹಾಗೂ ಪ್ರವಾಸಿ ತಾಣಗಳ ಪರಿಚಯಕ್ಕೆ ಸಂಬಂಧಿಸಿದಂತೆ ಸಿದ್ಧತಾ ಕ್ರಮಗಳ ಕುರಿತು  ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಚರ್ಚಿಸಿದ ನಂತರ ಮಾತನಾಡಿದರು.
ಜುಲೈ ತಿಂಗಳಲ್ಲಿ ಸಭೆ ನಡೆಯಲಿದ್ದು, ಶೆರ್ಪಾ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕೈಗೊಳ್ಳುವ ಕುರಿತು ಕೇಂದ್ರ ಸಚಿವಾಲಯದ ತಂಡದೊಂದಿಗೆ ಸಭೆ ನಡೆಸಲಾಗಿದೆ. ಹಂಪಿಯಲ್ಲಿ ಸಭೆ ನಡೆಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಹಾಗೂ ಸಭೆಯ ಜೊತೆಗೆ ವಿಶ್ವವಿಖ್ಯಾತ, ಸಭೆಯಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ವಿಶ್ವ ಪಾರಂಪರಿಕ ತಾಣಗಳನ್ನು ಪರಿಚಯಿಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಪ್ರತಿನಿಧಿಗಳು ಸೇರಿ 200ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಭೇಟಿ ನೀಡಲಿದೆ. ಇವರಿಗೆ ಸೌಲಭ್ಯ ಒದಗಿಸಲು ಕೇಂದ್ರ ಸಚಿವಾಲಯದ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಿದ್ದು, ಅದಕ್ಕೆ ಪೂರಕವಾಗಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ವಿಶ್ವವಿಖ್ಯಾತ ಹಂಪಿಯಲ್ಲಿ ವಿಜಯವಿಠ್ಠಲ ದೇವಸ್ಥಾನ, ಪುರಂದರ ಮಂಟಪ ಹಾಗೂ ಎದುರು ಬಸವಣ್ಣ ವೇದಿಕೆಗಳ ಪರಿಶೀಲನೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿದ್ದು, ಅಂತಿಮವಾಗಿ ಎರಡು ಸ್ಥಳಗಳು ನಿಗದಿಯಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್ ಅವರು ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿ, ವಿಶ್ವಪಾರಂಪರಿಕ ಸ್ಥಳ ಹಂಪಿಯಲ್ಲಿ ಶೆರ್ಪಾ ಮಟ್ಟದ ಸಭೆ ನಡೆಯಲಿದ್ದು, ಸಭೆಯನ್ನು ಉನ್ನತ ಮಟ್ಟದಲ್ಲಿ ನಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಂಪಿಯನ್ನು ವಿಶ್ವಮಟ್ಟದಲ್ಲಿ ಪ್ರಸ್ತುತ ಪಡಿಸಲು ಉತ್ತಮ ಅವಕಾಶ ದೊರಕಿದೆ. ಸಭೆಗೆ ಅಗತ್ಯವುಳ್ಳ ಮೂಲಭೂತ ಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತಕ್ಕೆ ಪೂರ್ವಭಾವಿ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಶೃಂಗಸಭೆ ಅಂಗವಾಗಿ ಇಲ್ಲಿನ ವಿಶೇಷ ಆಚರಣೆ ತುಂಗಾರತಿಯನ್ನು ಸಹ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ ಭಾಗಿಯಾದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಆಶಿಶ್ ಸಿನ್ಹಾ ಹಾಗೂ ರಮೇಶ್ ಬಾಬು ಅವರು ಹಂಪಿಯಲ್ಲಿ ಒದಗಿಸಬೇಕಾದ ಅಗತ್ಯ ಸೌಕರ್ಯಗಳ ಸಿದ್ಧತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!