https://youtu.be/NHc6OMSu0K4?si=SI_K4goOPEgwo6h2
ಮಾರ್ಗ ಬದಲು | ಇನ್ಮುಂದೆ ಹೊಸಪೇಟೆ-ಕಮಲಾಪುರ 23 ಕಿ.ಮೀ.! | ಪಿಕೆಹಳ್ಳಿ ಮಾರ್ಗವಾಗಿ ಕಮಲಾಪುರ-ಗಂಗಾವತಿಗೆ ಬಸ್ ಸಂಚಾರ
ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಕಮಲಾಪುರ ಮಾರ್ಗವಾಗಿ ಕಂಪ್ಲಿ, ಗಂಗಾವತಿ, ಹೈದ್ರಾಬಾದ್ ಸೇರಿದಂತೆ ಇತರೆಡೆ ತೆರಳುವ ಬಸ್‌ಗಳು ಮೇ 21ರಿಂದ ಪಾಪಿನಾಯಕನಹಳ್ಳಿ ಮಾರ್ಗವಾಗಿ ತೆರಳಲಿದ್ದು, ಈ ಮಾರ್ಗದಲ್ಲಿ ತೆರಳುವ ಪ್ರಯಾಣಿಕರು ತಮ್ಮದಲ್ಲದ ತಪ್ಪಿಗೆ ರೂ.15 ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ.
ನಗರದ ಅನಂತಶಯನಗುಡಿ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗಿದೆ. ಇದೇ ಮಾರ್ಗವಾಗಿ ನಿತ್ಯ ನೂರಾರು ಸಾರಿಗೆ ವಾಹನಗಳು ಕಮಲಾಪುರ ಮಾರ್ಗವಾಗಿ ಬೇರೆ ಊರುಗಳಿಗೆ ತೆರಳುತ್ತಿದ್ದವು. ಇದೀಗ ಈ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಹಂಪಿ ಮತ್ತು ಕಮಲಾಪುರಕ್ಕೆ ತೆರಳುವ ಮಿನಿ ಸಿಟಿಬಸ್ ಹೊರತುಪಡಿಸಿ, ವಿಜಯರಥ ಸೇರಿದಂತೆ ಬೃಹತ್ ಹಾಗೂ ಲಾಂಗ್‌ಚಾಸಿ, ಸ್ಲೀಪರ್ ಬಸ್‌ಗಳು ಕಾರಿಗನೂರು, ಪಾಪಿನಾಯಕನಹಳ್ಳಿ, ಕನ್ನಡ ವಿವಿ ಮಾರ್ಗದ ಮೂಲಕವೇ ಕಮಲಾಪುರ, ಕಂಪ್ಲಿ, ಗಂಗಾವತಿ ತಲುಪಲಿವೆ. ಈ ಮಾರ್ಗದಲ್ಲಿ 10 ಕಿ.ಮೀ ಸುತ್ತುವರೆದು ತೆರಳಬೇಕಾಗಿರುವುದರಿಂದ ಸಮಯದ ಕೊರತೆ ಎದುರಿಸುವ ಜತೆ ಅಧಿಕ ಹಣವನ್ನೂ ಪ್ರಯಾಣಕರು ತೆರಬೇಕಾಗಿದೆ.
ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಒಂದು ವರ್ಷದ ಅವಧಿ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಿನಿ ಸಿಟಿಬಸ್‌ಗಳು ಸಹ ಸುತ್ತುವರೆದು ತೆರಳಬೇಕಾಗಬಹುದು. ವರ್ಷದುದ್ದಕ್ಕೂ ಈ ಮಾರ್ಗದ ಬಸ್‌ಗಳಲ್ಲಿ ನಿರಂತರವಾಗಿ ಪ್ರಯಾಣಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಗ್ಯಾರಂಟಿ ಎನ್ನುವಂತಾಗಿದೆ. ಈ ಮಾರ್ಗವನ್ನೆ ಅವಲಂಬಿಸಿದ್ದ ಬೃಹತ್ ಲಾರಿಗಳ ಮಾಲೀಕರಿಗೂ ಬಿಸಿ ತಟ್ಟಲಿದೆ.
|| ಮಿನಿ ಸಿಟಿಬಸ್ ಹೊರತುಪಡಿಸಿ ವಿಜಯರಥ, ಬೃಹತ್ ಹಾಗೂ ಲಾಂಗ್‌ಚಾಸಿ ಬಸ್‌ಗಳು ಕಾರಿಗನೂರು, ಪಾಪಿನಾಯಕನಹಳ್ಳಿ ಮಾರ್ಗವಾಗಿ ಕಮಲಾಪುರಕ್ಕೆ ತೆರಳಲಿವೆ. 10 ಕಿ.ಮೀ ಸುತ್ತುವರೆದು ತೆರಳುತ್ತಿರುವುದರಿಂದ ಈ ಮಾರ್ಗದ ಪ್ರಯಾಣಿಕರು 15 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಮಿನಿ ಸಿಟಿಬಸ್ ಈಗಿರುವ ಮಾರ್ಗದಲ್ಲೆ ಸಂಚರಿಸಲಿವೆ.
– ಕೆ.ಬಸವರಾಜ, ಡಿ.ಟಿ.ಒ, ಹೊಸಪೇಟೆ.
|| ಅನಂತಶಯನಗುಡಿ ಬಳಿ ರೈಲ್ವೇ ಮೇಲ್ಸೇತುವೆ ಕಾರ್ಯ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ಮೇ 21ರಿಂದ ಬಳ್ಳಾರಿ ರಸ್ತೆ, ಕಾರಿಗನೂರು, ಪಾಪಿನಾಯಕನಹಳ್ಳಿ, ಕನ್ನಡ ವಿಶ್ವವಿದ್ಯಾಲಯದ ಮೂಲಕ ಕಮಲಾಪುರಕ್ಕೆ ಬಸ್‌ಗಳು ತೆರಳಲು ಸಾರಿಗೆ ಸಿಬ್ಬಂದಿಗೆ ಸೂಚಿಸಲಾಗಿದೆ. ಪ್ರಯಾಣಿಕರು ಸಹಕರಿಸಬೇಕು.
– ಡಿ.ಕೊಟ್ರಪ್ಪ , ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ಉಪವಿಭಾಗ.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ