https://youtu.be/NHc6OMSu0K4?si=SI_K4goOPEgwo6h2
ಮುಗಿಲು ಮುಟ್ಟಿದ ಮತದಾರರ ಆನಂದೋತ್ಸವ | ನಗೆಬೀರಿದ ಗವಿಯಪ್ಪ, ಸಿದ್ಧಾರ್ಥಸಿಂಗ್‌ಗೆ ಭಾರಿ ಮುಖಭಂಗ
ಬಸಾಪುರ ಬಸವರಾಜ
ಹಂಪಿ ಟೈಮ್ಸ್ ಹೊಸಪೇಟೆ:
ತೀವ್ರ ಕುತೂಹಲ ಮೂಡಿಸಿದ್ದ ವಿಜಯನಗರ ಕ್ಷೇತ್ರದ ಪ್ರಜ್ಞಾವಂತ ಮತದಾರರ ಗುಟ್ಟು ಶನಿವಾರ ಬಯಲಾಗಿದೆ. ಕ್ಷೇತ್ರದ ಮತದಾರರು ಕೈಗೆ ಕೈಜೋಡಿಸಿದ್ದಾರೆ. ಭರವಸೆಯ ಬಿಜೆಪಿಯನ್ನು ಬದಿಗೊತ್ತಿ, ಗ್ಯಾರಂಟಿಯ ಕಾಂಗ್ರೆಸ್‌ನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರ ಆನಂದೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ.
ವಿಜಯನಗರ ಕ್ಷೇತ್ರದಲ್ಲಿ ಮೂರು ಅವಧಿಯಲ್ಲಿ ನಾಲ್ಕು ಬಾರಿ ಸಿಂಗ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದ ಮತದಾರರು ಈ ಭಾರಿಯ ಚುನಾವಣೆಯಲ್ಲಿ ದೂರ ಸರಿದು ಒಳಗಿದ್ದ ಆಕ್ರೋಶವನ್ನು ಹೊರಹಾಕಿದ್ದಾರೆ. ಒಂದು ಲಕ್ಷ ಮಿಷನ್ ಎಂದೇಳಿದ್ದ ಬಿಜೆಪಿಗೆ 70397+743(ಅಂಚೆಮತ) ಒಟ್ಟು 71140 (39.34%) ಮತಕ್ಕಿಳಿಸಿ, ಕಾಂಗ್ರೆಸ್ಸಿಗೆ 104393+470(ಅಂಚೆಮತ) ಒಟ್ಟು 104863 (57.99%) ಮತಗಳನ್ನು ಹಾಕಿ ನಿರೀಕ್ಷೆಗೂ ಮೀರಿದ 33723 ಮತಗಳ ಅಂತರದ ಗೆಲುವನ್ನು ತಂದುಕೊಟ್ಟು ಕ್ಷೇತ್ರದಲ್ಲಿ ಕೈ ಕಿಲಕಿಲವೆನ್ನುವಂತೆ ಮಾಡಿದ್ದಾರೆ.
ಎಣಿಕೆಯ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪಗೆ 463 ಮತಗಳ ಆರಂಭದ ಮುನ್ನಡೆಯಾಗಿ, ಕೊನೆಯ 18ನೇ ಸುತ್ತಿನವರೆಗೂ ಅಧಿಕ ಅಂತರ ಹೆಚ್ಚಿಸಿಕೊಂಡು 33723 ಮತಗಳ ಅಂತರದಿAದ ಗೆಲುವಿನ ನಗೆ ಬೀರಿದರು. ಬಿಜೆಪಿ ಗೆಲುವಿಗೆ ಅಭಿವೃದ್ಧಿಯೆ ಶ್ರೀರಕ್ಷೆ ಎಂದಿದ್ದ ಕಾರ್ಯಕರ್ತರೀಗ ಸೋಲಿಗೆ ಕಾರಣಗಳನ್ನು ಕಲೆಹಾಕುತ್ತಿದ್ದಾರೆ. ಬಿಜೆಪಿ ಪರಾಜಿತ ಅಭ್ಯರ್ಥಿ ಸಿದ್ಧಾರ್ಥಸಿಂಗ್ ಠಾಕೂರ್ ಮತದಾರರ ತೀರ್ಪಿಗೆ ತಲೆಬಾಗುತ್ತೇನೆ ಎಂದರೆ, ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಜನರು ಬದಲಾವಣೆ ಬಯಸಿದ್ದರು, ಜನ ಬಯಸಿದಂತಾಗಿದೆ, ಕಾಂಗ್ರೆಸ್ ಗೆಲುವು ಮತದಾರರ ಗೆಲುವಾಗಿದೆ ಎಂದರು.
ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ಫಲಿತಾಂಶದ ವಿವರ:
ವಿಜಯನಗರ: ಕಾಂಗ್ರೆಸ್ ಎಚ್.ಆರ್.ಗವಿಯಪ್ಪ 1,04,863 (57.99%), ಬಿಜೆಪಿ ಸಿದ್ಧಾರ್ಥಸಿಂಗ್ 71140 (39.34%) ಮತ ಗೆಲುವಿನ ಅಂತರ: 33723
ಕೂಡ್ಲಿಗಿ: ಕಾಂಗ್ರೆಸ್ ಶ್ರೀನಿವಾಸ ಎನ್.ಟಿ. 1,04,753 (63.95%) ಬಿಜೆಪಿ ಲೋಕೇಶ ವಿ.ನಾಯಕ 50403 (30.77%) ಮತ, ಗೆಲುವಿನ ಅಂತರ: 54350
ಹಗರಿಬೊಮ್ಮನಹಳ್ಳಿ: ಜೆಡಿಎಸ್ ನೇಮರಾಜನಾಯ್ಕ್.ಕೆ. 84023 (44.44%), ಕಾಂಗ್ರೆಸ್ ಎಲ್.ಪಿ.ಭೀಮಾನಾಯ್ಕ 72679(38.44%)ಮತ, ಗೆಲುವಿನ ಅಂತರ: 11344
ಹಡಗಲಿ: ಬಿಜೆಪಿ ಕೃಷ್ಣನಾಯಕ 73200(48.81%), ಕಾಂಗ್ರೆಸ್ ಪಿ.ಟಿ.ಪರಮೇಶ್ವರ ನಾಯ್ಕ 71756 (47.85%)ಮತ, ಗೆಲುವಿನ ಅಂತರ: 1444
ಹರಪನಹಳ್ಳಿ: ಪಕ್ಷೇತರ ಲತಾ ಮಲ್ಲಿಕಾರ್ಜುನ 70194 (39.56%), ಬಿಜೆಪಿ ಜಿ.ಕರುಣಾಕರ ರೆಡ್ಡಿ 56349 (31.76)ಮತ , ಗೆಲುವಿನ ಅಂತರ: 13845
|| ದ್ವೇಷದ ರಾಜಕಾರಣ ನನ್ನದಲ್ಲ. ಪರಾಜಿತ ಸಿದ್ಧಾರ್ಥಸಿಂಗ್ ನನ್ನ ಮಗನ ಸಮಾನ, ಎಲ್ಲರನ್ನೂ ಒಳಗೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ. ದ್ವೇಷದ ರಾಜಕಾರಣಕ್ಕೆ ಎಂದೂ ಯಾರೂ ಅವಕಾಶ ನೀಡಬಾರದು. ಮತದಾರರ ಗೆಲುವಾಗಿದ್ದು, ಜನರ ಆಶಯಗಳಿಗೆ ತಕ್ಕಂತೆ ಜನರ ನಡುವೆ ಇದ್ದು, ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವೆ. ನಾನು ಸಚಿವ ಸ್ಥಾನದ ಆಕಾಂಕ್ಷಿ.
– ಎಚ್.ಆರ್.ಗವಿಯಪ್ಪ. ಕಾಂಗ್ರೆಸ್ ವಿಜೇತ ಅಭ್ಯರ್ಥಿ
|| ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದರೆ ಮಾತು ಕೊಟ್ಟಂತೆ ಮತ್ತು ನನ್ನಿಚ್ಚೆಯ ಯೋಜನಗಳನ್ನು ಸಾಕಾರ ಮಾಡಲು ಶ್ರಮಿಸುತ್ತಿದ್ದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಕೀಲ ಸೇವೆಯಲ್ಲಿ ಮುಂದುವರೆಯುವ ಇಚ್ಚೆಯಿದೆ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕವಿದ್ದು, ಕ್ಷೇತ್ರದ ಅಭಿವೃದ್ಧಿಗೆ ವಿರೋಧಪಕ್ಷದವನಾಗಿ ಕೆಲಸ ಮಾಡುವೆ.
– ಸಿದ್ಧಾರ್ಥಸಿಂಗ್ ಎ.ಠಾಕೂರ್, ಬಿಜೆಪಿ ಪರಾಜಿತ ಅಭ್ಯರ್ಥಿ.
More Stories
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ
ಐವರು ಸಾಧಕರು ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ : ಸಿಎಂ ಸಿದ್ದರಾಮಯ್ಯ