November 11, 2024

Hampi times

Kannada News Portal from Vijayanagara

ಕುಂತ್ರು ನಿಂತ್ರೂ ಅದೇ ಮಾತು, ಇವ್ರೆ ಗೆಲ್ಲೋದಾ?

 

https://youtu.be/NHc6OMSu0K4?si=SI_K4goOPEgwo6h2

 

ವಿಜಯನಗರ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ಣಾಯಕರು!

ಬಸಾಪುರ ಬಸವರಾಜ

ಹಂಪಿ ಟೈಮ್ಸ್ ಹೊಸಪೇಟೆ:

ಅಣ್ಣಾ ಚುನಾವಣೆ ಫಲಿತಾಂಶ ಏನಾಗಬಹುದು? ಯಾರು ಗೆಲ್ತಾರೆ, ಕಾಂಗ್ರೆಸ್ ಗೆಲ್ಲುತ್ತಾ, ಮತ್ತೆ ಬಿಜೆಪಿ ಬರುತ್ತಾ ಎಂಬ ಕುತೂಹಲ ಪ್ರಶ್ನೆಗಳು ರಸ್ತೆ ಅಕ್ಕಪಕ್ಕ ನಿಂತುಕೊಂಡ ಜನರಿಂದ, ವಾಕಿಂಗ್ ಮಾಡುವವರಿಂದ, ಓಣಿಗಳಲ್ಲಿ, ಕಟ್ಟೆಗಳ ಮೇಲೆ ಕೂತ ಜನರಿಂದ ಕೇಳಿಬರುತ್ತಿರುವ ಗುಸುಗುಸು ಮಾತುಗಳಿಗೆ ಕೊನೆಯಿಲ್ಲ…

ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ವಿಜಯನಗರ ಜಿಲ್ಲೆಯಲ್ಲಿ ಶಾಂತಿಯುತವಾಗಿ ಜರುಗಿದೆ. ಚುನಾವಣಾ ಸದ್ದು ಬಹಿರಂಗವಾಗಿ ತಣ್ಣಗಾಗಿದ್ದರೂ, ಅಂತರಿಕವಾಗಿ ಸೋಲು-ಗೆಲುವಿನ ಚರ್ಚೆಗಳು ಕಾರ್ಯಕರ್ತರನ್ನು ತಲೆ ಬಿಸಿಗೊಳಿಸಿವೆ. ತಮ್ಮ ಅಭ್ಯರ್ಥಿ ಸೋತರೆ ಯಾವ ಕಾರಣಗಳಿಂದ ಸೋಲುಂಟಾಯಿತು ಮತ್ತು ಗೆದ್ದರೆ ಆ ಗೆಲುವಿಗೆ ಏನೇಲ್ಲಾ ಸಹಕಾರಿಯಾದವು ಎಂಬ ಪಟ್ಟಿ ಈಗಾಗಲೇ ಸಿದ್ದಗೊಳಿಸಿಕೊಂಡಿದ್ದಾರೆ. ಮತದಾನ ಮಾಡಿದ ಮಹಾಪ್ರಭುಗಳು ಯಾರಿಗೂ ಗುಟ್ಟು ಬಿಟ್ಟುಕೊಡದೆ ಮೇ 13ರ ವರೆಗೆ ತಲೆ ಬಿಸಿಮಾಡಿಕೊಳ್ಳದೆ ಶಾಂತವಾಗಿ ಕಾಯಿರಿ ಎಂದೇಳುತ್ತಿದ್ದಾರೆ.


ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ 4 ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ ಸೈ ಎನಿಸಿಕೊಂಡಿದ್ದರೆ, ವಿಜಯನಗರ ಕ್ಷೇತ್ರದಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಿ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಗೆ ನಿರ್ಣಾಯಕರೆನಿಸಿಕೊಂಡಿರುವುದು ಗಮನ ಸೆಳೆದಿದೆ. ವಿಜಯನಗರ ಜಿಲ್ಲೆಯಲ್ಲಿ 5,46,255 ಒಟ್ಟು ಪುರುಷ ಮತದಾರರ ಪೈಕಿ 4,35,437 ಮತದಾನವಾಗಿದೆ. 5,45,610 ಒಟ್ಟು ಮಹಿಳೆಯರ ಪೈಕಿ 4,17,041 ಮತದಾನವಾದರೆ, 146 ಇತರರ ಪೈಕಿ 24 ಮತದಾರರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 10,92,011 ಪೈಕಿ 8,52,502 ಮತದಾನ(78.07%)ವಾಗಿದೆ.

ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ನಡುವೆ ತೀವ್ರ ಪೈಪೋಟಿಯ ಮತದಾನವಾಗಿದೆ. ಗೆಲುವಿನ ಅಂತರದ ಲೆಕ್ಕಚಾರಗಳು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಬಿರಿಸಿನಿಂದ ನಡೆದಿದ್ದು. ಈ ಮುಂಚೆ ಹೇಳಿಕೊಳ್ಳುತ್ತಿದ್ದ ಗೆಲುವಿನ ಅಂತರದ ಸಂಖ್ಯೆಗಳು ಈಗ ಮರೆಯಾಗಿವೆ. ಯಾರೇ ಗೆದ್ದರೂ ಅಲ್ಪ ಅಂತರದಲ್ಲಿ ಗೆಲ್ಲುತ್ತಾರೆಂಬ ಮಾತುಗಳು ದಟ್ಟವಾಗಿದ್ದು, ಇನ್ನೆರೆಡು ದಿನಗಳಲ್ಲಿ ಮತದಾರರ ತೀರ್ಮಾನ ಬಯಲಾಗಲಿದೆ.


ಎಲ್ಲೆಲ್ಲೆ ಎಷ್ಟೆಷ್ಟು ಮತದಾನ:
ಹಡಗಲಿ ಕ್ಷೇತ್ರದಲ್ಲಿ 76217 ಪುರುಷರು, 71618 ಮಹಿಳೆಯರು ಸೇರಿ ಒಟ್ಟು 1,47,835 (77.29%) ಮತದಾನವಾಗಿದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 96106 ಪುರುಷರು, 91447 ಮಹಿಳೆಯರು, 13 ಇತರರು ಸೇರಿ ಒಟ್ಟು 1,87,566 (81.56%) ಮತದಾನವಾಗಿದೆ. ವಿಜಯನಗರ ಕ್ಷೇತ್ರದಲ್ಲಿ 88970 ಪುರುಷರು, 90648 ಮಹಿಳೆಯರು, 9 ಇತರರು ಸೇರಿ ಒಟ್ಟು 1,79,627 (71.68) ಮತದಾನವಾಗಿದೆ. ಕೂಡ್ಲಿಗಿ ಕ್ಷೇತ್ರದಲ್ಲಿ 83997 ಪುರುಷರು, 78372 ಮಹಿಳೆಯರು, ಇಬ್ಬರು ಇತರರು ಸೇರಿ ಒಟ್ಟು 1,62,371 (79.69%) ಮತದಾನವಾಗಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ 90,147 ಪುರುಷರು, 84956 ಮಹಿಳೆಯರು ಸೇರಿ ಒಟ್ಟು 1,75,103 (80.68%) ಮತದಾರರು ಹಕ್ಕು ಚಲಾಯಿಸಿದ್ದಾರೆ. ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ವಿಜಯನಗರ ವಿಧಾನಸಭಾ ಕ್ಷೇತ್ರವು ಮತದಾರ ಸಂಖ್ಯೆಯಲ್ಲಿ ಅಗ್ರಸ್ಥಾನ ಹೊಂದಿದ್ದರೂ, ಶೇಕಡವಾರು ಮತದಾನದಲ್ಲಿ ಕೊನೆ ಸ್ಥಾನ ಪಡೆದಿದೆ. ಜಿಲ್ಲಾ ಕೇಂದ್ರದಲ್ಲೆ ಮತದಾನ ಕುಸಿತಗೊಂಡಿರುವುದು ಅನೇಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 

 

ಜಾಹೀರಾತು
error: Content is protected !!