July 17, 2025

Hampi times

Kannada News Portal from Vijayanagara

10ರ ಫಲಿತಾಂಶದಲ್ಲಿ 10ಕ್ಕೇರಿದ ವಿಜಯನಗರ ಜಿಲ್ಲೆ

https://youtu.be/NHc6OMSu0K4?si=SI_K4goOPEgwo6h2

 

ಹೊಸಪೇಟೆ ತಾಲೂಕಿನ ಆಂಗ್ಲ ಮಾಧ್ಯಮದ ಐದು ಶಾಲೆಗಳು ಟಾಪ್ 5 
ಫಲಿತಾಂಶದಲ್ಲಿ ಬಾಲಕೀಯರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳೆ ಮೇಲುಗೈ

ಹಂಪಿ ಟೈಮ್ಸ್ ಹೊಸಪೇಟೆ:
ನೂತನವಾಗಿ ರಚನೆಗೊಂಡ ವಿಜಯನಗರ ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಟಾಪ್ 10 ಸ್ಥಾನಕ್ಕೇರುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಭಾರಿ ಶೇ.91.41 ರಷ್ಟು ಫಲಿತಾಂಶ ತನ್ನದಾಗಿಸಿಕೊಂಡು ಕಳೆದ ಬಾರಿಗಿಂತ ನಾಲ್ಕು ಸ್ಥಾನ ಮೇಲಕ್ಕೇರಿದ ಹಿರಿಮೆಯ ಗರಿ ತನ್ನದಾಗಿಸಿಕೊಂಡಿದೆ. ಮಾತೃ ಜಿಲ್ಲೆ ಬಳ್ಳಾರಿ 81.54 ರಷ್ಟು ಫಲಿತಾಂಶದೊಂದಿಗೆ 31ನೇ ಸ್ಥಾನಕ್ಕೆ ಕುಸಿದಿದ್ದರೆ, ದಶಕಗಳ ಹಿಂದೆಯೇ ರಚನೆಯಾಗಿದ್ದ ಜಿಲ್ಲೆಗಳನ್ನು ವಿಜಯನಗರ ಹಿಂದಿಕ್ಕಿರುವುದು ಗಮನಾರ್ಹ.

ಕರೋನಾ ನಂತರ ಎಸ್ಸೆಸ್ಸೆಲ್ಸಿ ಫಲಿತಾಂಶ ಹಾಗೂ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ, ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಈಗಿನ ಜಿಲ್ಲಾಧಿಕಾರಿ ಟಿ.ವೆಂಕಟೇಶ ಅವರು ಜಿಲ್ಲೆಗೆ ಅಂಟಿಕೊಂಡಿದ್ದ ಶೈಕ್ಷಣಿಕ ಹಿಂದುಳಿದ ಪಟ್ಟಿಯನ್ನು ಕಿತ್ತೊಗೆಯಲು ಅನೇಕ ಉಪಕ್ರಮಗಳನ್ನು ಜಾರಿಗೆ ತಂದು ಅನಷ್ಠಾನಗೊಳಿಸಿದರು. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಶಿಕ್ಷಣ ತಜ್ಞರಾದ ಗುರುರಾಜ ಕರ್ಜಗಿ, ನಂದೀಶ ಶೆಟ್ಟರ್ ಅವರ ಮೂಲಕ ಪ್ರೌಢ ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ವರ್ಷ ಆರಂಭದಿಂದಲೂ ವಿಶೇಷ ಕಾರ್ಯಾಗಾರ, ಇಲಾಖೆಯ ಉನ್ನತಾಧಿಕಾರಿಗಳಿಂದ ಪ್ರೌಢ ಶಾಲಾ ಮುಖ್ಯಶಿಕ್ಷಕರಿಗೆ ಅವಧಿಯುದ್ದಕ್ಕೂ ಮಾರ್ಗದರ್ಶನ ಒದಗಿಸಿ ಫಲಿತಾಂಶ ಹೆಚ್ಚಳಕ್ಕೆ ಜಿಲ್ಲಾಡಳಿತ ಮುನ್ನುಡಿ ಬರೆಯಿತು.

ಜಿಲ್ಲೆಯ ಟಾಪರ್ಸ್ :

ಜಿಲ್ಲೆಯ ಹೂವಿನಹಡಗಲಿಯ ಎಂ.ಎಂ.ಪಾಟೀಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮೇಘನಾ ಪಿ.ತೋಟಗೇರಿ 621 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ.
ಹೊಸಪೇಟೆ ತಾಲೂಕು ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ಶಾಲೆ ಮನೋಜ್ ಎಲ್., ಹೂವಿನಹಡಗಲಿಯ ಎಂ.ಎಂ.ಪಾಟೀಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಚಿನ್ಮಯಿ ಜಿ. ಮತ್ತು ಕೊಟ್ಟೂರಿನ ಮಹಾದೇವ ಆಂಗ್ಲ ಮಾಧ್ಯಮ ಶಾಲೆಯ ಅರುಣ್ ಕುಮಾರ್ ಗುತ್ತೂರು ಸಮಾನವಾಗಿ 620 ಅಂಕಗಳೊAದಿಗೆ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸೃಷ್ಟಿ ಕೆ. ಮತ್ತು ಸೃಷ್ಟಿ ಕೆ.ಎಸ್. 619 ಅಂಕ ಪಡೆದು, ತೃತೀಯ ಸ್ಥಾನ ಗಳಿಸಿದ್ದಾರೆ.

ಹೊಸಪೇಟೆ ತಾಲೂಕಿನ ಟಾಪರ್ಸ್ 
ಹೊಸಪೇಟೆ ತಾಲೂಕಿನಲ್ಲಿ ಬಾಲಕಿಯರೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ. ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳು ಉತ್ತಮ ಫಲಿತಾಂಶಕ್ಕೆ ಹೆಸರಾಗಿವೆ.
ತಾಲೂಕಿನ  ಆಂಗ್ಲ ಮಾಧ್ಯಮದ ಐದು ಶಾಲೆಗಳು ಟಾಪ್ 5 ಸ್ಥಾನಗಳನ್ನು ಗಳಿಸಿವೆ. ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮನೋಜ್ ಎಲ್ 620, ಎಲ್‌ಎಫ್‌ಎಸ್ ಆಂಗ್ಲ ಅನುದಾನಿತ ಪ್ರೌಢಶಾಲೆಯ ಸೈಯಿದಾ ಮಿಸ್ಪಾ ಎಫ್ 617, ಮಹಿಳಾ ಸಮಾಜ ಪ್ರೌಢಶಾಲೆಯ ಅಖಿಲೇಶ್ ಕೆ.ಎಂ. 616, ಎಫ್.ಫರೀನ್ ತಾಜ್ 614 ಮತ್ತು ದೀಪಾಯನ ಪ್ರೌಢಶಾಲೆಯ ಮೊಹಮ್ಮದ್ ಆದಿಲ್ ಬಿಸಿ ಕ್ರಮವಾಗಿ ತಾಲೂಕಿಗೆ ಟಾಪ್ 5 ಸ್ಥಾನ ಪಡೆದಿವೆ.
ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಶೇ.81.94 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳಲ್ಲಿ ಶೇ.90.58 ವಿದ್ಯಾರ್ಥಿಗಳು, ಅನದಾನ ರಹಿತ ಶಾಲೆಗಳಲ್ಲಿ ಶೇ.88.03 ಸೇರಿದಂತೆ ಒಟ್ಟು ಶೇ.85.66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲೂಕಿನ 79 ಪ್ರೌಢಶಾಲೆಗಳ ಪೈಕಿ 9 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. 29 ಶಾಲೆಗಳು ಶೇ.91-99, 19 ಶಾಲೆಗಳು ಶೇ.81-90, 18 ಶಾಲೆಗಳು ಶೇ.51-80, 3 ಶಾಲೆಗಳು ಶೇ.41-50, ಒಂದು ಶಾಲೆ ಶೇ.1-40 ರೊಳಗೆ ಫಲಿತಾಂಶ ಪಡೆದಿವೆ. ತಾಲೂಕಿನ ಉತ್ತಮ ಫಲಿತಾಂಶ ತಂದುಕೊಡುವಲ್ಲಿ ಶಿಕ್ಷಕರು ಪಾತ್ರ ಮಹತ್ವದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಧಿಕಾರಿ ಎಂ.ಚನ್ನಬಸಪ್ಪ ತಿಳಿಸಿದ್ದಾರೆ.

ಫಲಿತಾಂಶ ಹೆಚ್ಚಳಕ್ಕೆ ಕ್ರಮಗಳು:
ಸರ್ಕಾರಿ ಶಾಲೆಗಳಲ್ಲಿ ಮಾಸಿಕ ಕಿರು ಪರೀಕ್ಷೆ.
ವಿದ್ಯಾರ್ಥಿಗಳನ್ನು ಎ.ಬಿ.ಸಿ ಗುಂಪುಗಳಾಗಿ ವಿಂಗಡನೆ.
ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ.
ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಹೆಚ್ಚಿನ ಮಾರ್ಗದರ್ಶನ
ಹಲವು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ.
ಮಕ್ಕಳಲ್ಲಿ ಪರೀಕ್ಷಾ ಭಯ ತೊಲಗಿಸಿ, ಆತ್ಮವಿಶ್ವಾಸ ತುಂಬಿದರು.
ಹಿಂದುಳಿಗೆ ಮಕ್ಕಳ ಮನೆಗೆ ಶಿಕ್ಷಕರ ಭೇಟಿ
ನಿತ್ಯ ಬೆಳಿಗ್ಗೆ ವಿದ್ಯಾರ್ಥಿಗಳ ಫೋನ್‌ಗೆ ವಿಷಯ ಶಿಕ್ಷಕರ ಕರೆ.
————————————————————
ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಶಿಕ್ಷಣ ಇಲಾಖೆಯ ಸಮಸ್ತ ಸಿಬ್ಬಂದಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ. ಡಿಡಿಪಿಐ ಜಿ.ಕೊಟ್ರೇಶ ಹಾಗೂ ಜಿಲ್ಲೆಯ ಎಲ್ಲಾ ಬಿಇಒ, ಶಿಕ್ಷಕರ ಪರಿಶ್ರಮದಿಂದಾಗಿ ಜಿಲ್ಲೆಗೆ 10 ನೇ ಸ್ಥಾನ ಲಭಿಸಿರುವುದು ಸಂತಸ ತಂದಿದೆ. ಮುಂದಿನ ವರ್ಷ ಶೇ.100 ರಷ್ಟು ಫಲಿತಾಂಶ ಪಡೆಯಲು ಮತ್ತಷ್ಟು ವಿಧಾನಗಳನ್ನು ಅಳವಡಿಸಿಕೊಳ್ಳಲಾಗುವದು.
– ಟಿ.ವೆಂಕಟೇಶ, ಜಿಲ್ಲಾಧಿಕಾರಿ.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೊಸ ಜಿಲ್ಲೆಗೆ ಶೇ.91,41 ರಷ್ಟು ಫಲಿತಾಂಶ ಬಂದಿದ್ದು, ಟಾಪ್-10 ಸ್ಥಾನ ಲಭಿಸಿರುವುದು ಹೆಮ್ಮೆಯಾಗಿದೆ. ಜಿಲ್ಲೆಯ ಬಿಇಒ, ಶಿಕ್ಷಕರು ಸೇರಿದಂತೆ ಭೋಧಕೇತರ ಸಿಬ್ಬಂದಿಗಳ ಶ್ರಮವೂ ಅಡಗಿದೆ. ಈ ಸಾಧನೆ ಜಿಲ್ಲೆಯ ಶಿಕ್ಷಕರಿಗೆ ಸಲ್ಲುತ್ತದೆ.
ಜಿ.ಕೊಟ್ರೇಶ್, ಡಿಡಿಪಿಐ, ವಿಜಯನಗರ

 

 

ಜಾಹೀರಾತು
error: Content is protected !!