https://youtu.be/NHc6OMSu0K4?si=SI_K4goOPEgwo6h2
- ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ
ಪ್ರವೇಶಿಕೆ
ವೈಶಾಖ ಮಾಸ ಅಂದರೆ ಅದು ಬಿರು ಬೇಸಿಗೆಯ ಕಾಲ ಸಾಕಪ್ಪೋ ಸಾಕು ಈ ಬಿಸಿಲು ಎಂದು ಹಳಿದು ಬಿಡುತ್ತೇವೆ ಆದರೆ ಈ ಶಾಖವೇ ಮಳೆಯ ಸಿಂಚನಕ್ಕೆ ಇಳೆಯ ಹಸಿರಿಗೆ ಕಾರಣವಾಗುತ್ತದೆ,ಬೇಸಿಗೆಯಲ್ಲಿ ಭೂಮಿ ಕಾದಷ್ಟು ಫಲವತ್ತಾಗುತ್ತದೆ. ಇದೇನು ಬೇಸಿಗೆಯ ಈ ಶಾಖವನ್ನು ಇಷ್ಟು ವರ್ಣಿಸುತ್ತಿದ್ದೀರಲ್ಲಾ ! ಓಹೋ..ಇದು ಚುನಾವಣಾ ಪ್ರಚಾರ ಇರಬೇಕು ಅಂತ ತಪ್ಪು ತಿಳ್ಕೋಬೇಡಿ ಇದು ಯಾವ ಪ್ರಚಾರವೂ ಅಲ್ಲ ಒಂದು ವಿಚಾರ ಅಷ್ಟೇ…ಈ ವೈಶಾಖಮಾಸ ನನಗೆ ಬಹುವಾಗಿ ಕಾಡುತ್ತಿದೆ ಏಕೆಂದರೆ ಜಗದ ದಾರ್ಶನಿಕರಾದ ಬುದ್ಧ ಬಸವ ಅಂಬೇಡ್ಕರ್ ಖ್ಯಾತ ಕ್ರಿಕೆಟ್ ಆಟಗಾರ ತೆಂಡೂಲ್ಕರ್ ಸಿನಿಮಾರಂಗದ ವರನಟ ಡಾ.ರಾಜ್ ಇವರೆಲ್ಲರೂ ಜನಿಸಿದ ಮಾಸವೇ ವೈಶಾಖ ಮಾಸ ಇಂತಹ ಮಹನೀಯರು ಜನಿಸಿದ್ದರಿಂದ ಈ ಮಾಸ ಪ್ರಖರತೆ ಪಡೆಯಿತೋ ಅಥವಾ ಈ ಮಾಸದ ಪ್ರಖರತೆಯಿಂದಾಗಿಯೇ ಇಂತಹ ಪುಣ್ಯಾತ್ಮರು ಜನಿಸಿದರೋ ಇದನ್ನು ಓದುಗರಿಗೇ ಬಿಡುತ್ತೇನೆ.ಇಂದು ಅಗಿ ಹುಣ್ಣಿಮೆ ಇದನ್ನು ಬುದ್ದ ಪೂರ್ಣಿಮೆ ಎನ್ನುತ್ತಾರೆ ಏಕೆಂದರೆ ಇಂದು ಬುದ್ಧ ಜನಿಸಿದ ದಿನ ಹಾಗು ಆತನಿಗೆ ಜ್ಞಾನೋದಯ ದಿನವೂ ಹೌದು ಹಾಗಾದರೆ ಈ ಪೌರ್ಣಿಮೆಯ ಬೆಳಕಿನಲ್ಲಿ ಬುದ್ದನ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳೋಣ ಬನ್ನಿ..
ಲುಂಬಿನಿವನದದಲ್ಲಿ ಅರಳಿತು ಸಿದ್ಧಾರ್ಥ ಸುಮ
ಕಾಶ್ಯಪ ವಂಶದ ಶುದ್ದೋದನ ಕಪಿಲವಸ್ತು ಪ್ರಾಂತ್ಯದ ದೊರೆ ,(ಈಗ ಅದನ್ನು ಲಾರ್ ಕೋಟ್ ಎನ್ನುತ್ತಾರೆ ) ಮಹಾಮಾಯೆ( ಮಾಯಾದೇವಿ) ಇವನ ಮೊದಲ ಮಡದಿ ಯಾದರೆ ಮಹಾಮಾಯೆಯ ತಂಗಿಯಾದ ಪ್ರಜಾಪತಿ ಗೌತಮಿ ಎರಡನೇ ಮಡದಿ. ತುಂಬಾ ವರ್ಷಗಳ ನಂತರ ಮಹಾಮಾಯೆ ಗರ್ಭಧರಿಸಿದಾಗ ಶುದ್ಧೋದನನ ಆನಂದಕ್ಕೆ ಪಾರವೇ ಇರಲಿಲ್ಲ ಚೊಚ್ಚಲ ಹೆರಿಗೆಗೆಂದು ಮಾಯಾದೇವಿ ತನ್ನ ತವರಾದ ದೇವದಾಹಕ್ಕೆ ಹೋಗುವ ಅಪೇಕ್ಷೆಯನ್ನು ವ್ಯಕ್ತಪಡಿಸಿದಾಗ ಮಹಾರಾಜ ಮೇಣೆಯಲ್ಲಿ ಆಕೆಯನ್ನು ಕಳಿಸಿಕೊಡುವ ವ್ಯವಸ್ಥೆ ಮಾಡುತ್ತಾನೆ ಆದರೆ ಮಾರ್ಗ ಮಧ್ಯದಲ್ಲಿ ಲುಂಬಿನಿ ವನದ ಸೊಬಗು ಆಕೆಯ ಮನವನ್ನು ಸೆಳೆಯುತ್ತದೆ ತಕ್ಷಣವೇ ಮಾಯಾದೇವಿ ಮೇಣಿಯಿಂದ ಕೆಳಗಿಳಿದು ಲುಂಬಿನ ವನದ ರಮ್ಯ ಸೌಂದರ್ಯವನ್ನು ಆಸ್ವಾದಿಸುತ್ತಿರುವಾಗಲೇ ಹೆರಿಗೆ ನೋವು ಕಾಣಿಸಿಕೊಂಡು ಸೂರ್ಯನಂತ ತೇಜಸ್ಸು ಬನದ ಸೌಂದರ್ಯವೇ ಮೈವೆತ್ತಿ ಬಂದಂತೆ ಗಂಡು ಮಗುವೊಂದು ಜನನವಾಗುತ್ತದೆ.ಆ ಮಗುವೆ ಮುಂದೆ ಜಗ ಬೆಳಗುವ ಬುಧ್ಧನಾಗುತ್ತಾನೆ. ಯುವರಾಜನ ಜನನದ ಸುದ್ದಿ ತಿಳಿಯುತ್ತಿದ್ದಂತೆ ರಾಜಧಾನಿ ಕಪಿಲವಸ್ತುವಿನಲ್ಲಿ ಸಡಗರ ಸಂಭ್ರಮ.. ಸಿದ್ದಾರ್ಥ ಎಂದು ನಾಮಕರಣ ಆಗುತ್ತೆ ಆದರೆ ಈ ಸಂಭ್ರಮ ಬಹಳ ದಿನ ಉಳಿಯಲಿಲ್ಲ ಮಹಾರಾಣಿ ಮಾಯಾದೇವಿ ಕಾಯಿಲೆಗೆ ತುತ್ತಾಗಿ ಅಸುನೀಗುತ್ತಾಳೆ ಅಕ್ಕನ ಸಾವಿನ ನಂತರ ಗೌತಮಿಯೇ ತಾಯಿಯಾಗಿ ಸಿದ್ದಾರ್ಥನನ್ನು ಬೆಳೆಸುತ್ತಾಳೆ.ಹಾಗಾಗಿ ತಾಯಿಯಿಲ್ಲ ಎಂಬ ಕೊರಗು ಸಿದ್ದಾರ್ಥ ನಿಗೆ ಕಾಡಲೇ ಇಲ್ಲ ಶಸ್ತ್ರ ಹಾಗು ಶಾಸ್ತ್ರ ವಿದ್ಯ ಪಾರಂಗತನಾದ ಸಿದ್ದಾರ್ಥನಿಗೆ ದಂಡಪಾಣಿ ದೊರೆಯ ಮಗಳಾದ ಯಶೋಧರೆಯೊಂದಿಗೆ ವಿವಾಹವಾಗುತ್ತದೆ.ರಾಹುಲ ಎಂಬ ಗಂಡು ಮಗುವನ್ನು ಪಡೆಯುತ್ತಾನೆ.ಮಗನ ಈ ಸಾಂಸಾರಿಕ ಜೀವನ ಕಂಡು ಶುದ್ದೋದನ ಆನಂದ ತುಂದಿಲನಾಗುತ್ತಾನೆ.ಲುಂಬಿನಿಯಲ್ಲಿ ಜನಿಸಿದ ಸಿದ್ದಾರ್ಥ ಸುಮ ಕಪಿಲ ವಸ್ತುವಿನಲ್ಲಿ ಪರಿಮಳಿಸುತ್ತದೆ.
ಸಂಘದೊಂದಿಗೆ ಸಂಘರ್ಷ.
ಗೌತಮನು ನಗರ ಸಂಚಾರಕ್ಕೆಂದು ಚೆನ್ನನೊಂದಿಗೆ ಹೋದಾಗ ಅಲ್ಲಿ ಒಬ್ಬ ಬಿಕ್ಷುಕ, ರೋಗಿ ಹಾಗು ಶವ ಈ ಮೂರು ದೃಶ್ಯಗಳನ್ನು ಕಂಡ ಗೌತಮನಿಗೆ ಐಹಿಕ ಸುಖ ಬೋಗ ಕ್ಷಣಿಕ ಜ್ಞಾನವೊಂದೆ ಶಾಶ್ವತ ಏಂಬ ಸತ್ಯ ತಿಳಿದು ಅರಮನೆ ಮಡದಿ ಮಕ್ಕಳು ಇವರನ್ನೆಲ್ಲಾ ತ್ಯಜಿಸಿ ರಾತ್ರೋ ರಾತ್ರಿ ಕಾಡಿಗೆ ತೆರಳಿದ ಎಂಬ ಕಥೆಯನ್ನು ಓದಿದ್ದೇವೆ ನಾಟಕ ಸಿನಿಮಾಗಳಲ್ಲಿ ನೋಡಿದ್ದೇವೆ ಕೆಲವು ಕೃತಿಗಳಲ್ಲಿ ಓದಿದ್ದೇವೆ. ಈ ವಿಚಾರ ಒಂದು ಕಡೆಯಾದರೆ ಮತ್ತೊಂದೆಡೆ ಸಿದ್ದಾರ್ಥ ಅರಮನೆ ತ್ಯಜಿಸಲು ಬೇರೆಯೇ ಕಾರಣ ಹೇಳುತ್ತಾರೆ ಅದೇನು ಎನ್ನುವುದನ್ನು ನೋಡುವಾ..
ಸಿದ್ದಾರ್ಥ ಶಾಕ್ಯ ಸಂಘದ ಸದಸ್ಯನಾದ ಮೇಲೆ ಅಲ್ಲಿ ರೋಹಿಣಿ ನದಿ ನೀರಿನ ಹಂಚಿಕೆಗೆ ಸಂಬಂದಿಸಿದಂತೆ ವಿವಾದ ಹುಟ್ಟಿಕೊಳ್ಳುತ್ತದೆ ರೋಹಿಣಿ ನದಿ ನೀರನ್ನು ಶಾಕ್ಯ ಹಾಗು ಕೋಲಿ ರಾಜ ಮನೆತನದವರು ಬಳಸುತ್ತಿದ್ದರು ಆದರೆ ಮುಂದೆ ಆ ಎರಡು ಮನೆತನಗಳಲ್ಲಿ ಭಿನ್ನಾಭಿಪ್ರಾಯ ತೆಲೆದೋರಿ ಈ ನದಿ ನೀರನ್ನು ಮೊದಲು ಯಾರು ಬಳಸಬೇಕು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ಪ್ರಶ್ನೆ ವಿವಾದಕ್ಕೆ ಕಾರಣವಾಗಿ ಎರಡು ರಾಜ್ಯಗಳ ಮದ್ಯ ಭೀಕರ ಯುದ್ಧ ಜರುಗುವ ಮಟ್ಟ ತಲುಪುತ್ತದೆ. ಸಂಘದ ಸದಸ್ಯರು ಕೋಲಿ ರಾಜರ ಮೇಲೆ ಯುದ್ದ ಮಾಡಲು ತೀರ್ಮಾನಿಸುತ್ತಾರೆ ಸಂಘದ ಈ ತೀರ್ಮಾನವನ್ನು ವಿರೋದಿಸಿದ ಸಿದ್ದಾರ್ಥ ಹೀಗೆ ಹೇಳುತ್ತಾನೆ.” ಯುದ್ಧದಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ ಯುದ್ದ ಸಾರುವುದರಿಂದ ನಮ್ಮ ಉದ್ದೇಶ ಸಾರ್ಥಕವಾಗುವುದಿಲ್ಲ ಅದು ಮತ್ತೊಂದು ಯುದ್ಧಕ್ಕೆ ಬೀಜ ಬಿತ್ತುತ್ತದೆ.ಕೊಂದವನನ್ನು ಕೊಲ್ಲಲು ಮತ್ತೊಬ್ಬನು ಹುಟ್ಟಿಕೊಳ್ಳುತ್ತಾನೆ. ಆಕ್ರಮಿಸಿಕೊಂಡವನನ್ನು ಆಕ್ರಮಿಸಲು ಮತ್ತೊಬ್ಬನು ಬರುತ್ತಾನೆ ಖಂಡಿತ: ಲೂಟಿಕೋರನನ್ನು ಲೂಟಿ ಮಾಡಲು ಮತ್ತೊಬ್ಬನು ಸಿದ್ಧನಿರುತ್ತಾನೆ.” ಹೀಗೆ ಹೇಳಿದಾಗ ಸಂಘದ ಸದಸ್ಯರು ಈತನ ಮೇಲೆ ಅಪವಾದ ಹೊರಿಸುತ್ತಾರೆ ಸಂಘದ ಸದಸ್ಯನಾಗಿ ಸಂಘದ ನಿರ್ಧಾರವನ್ನು ಸೂಚನೆಯನ್ನು ವಿರೋಧಿಸಿದ್ದೀಯ ಹಾಗಾಗಿ ಸಂಘವು ನಿನ್ನನ್ನು ಯಾವ ರೀತಿಯಿಂದಲಾದರು ಶಿಕ್ಷಿಸಬಲ್ಲದು ಎಂದಾಗ ಸಿದ್ದಾರ್ಥ ತನ್ನ ಕುಟುಂಬಕ್ಕೆ ಶಿಕ್ಷಯಾಗಬಾರದು ಸಂಘಕ್ಕೂ ಕೆಟ್ಟ ಹೆಸರು ಬರಬಾರದೆಂದು ಆಲೋಚಿಸಿ ಕೊನೆಗೆ ತಾನೇ ಸ್ವಯಂ ಪ್ರೇರಣೆಯಿಂದ ಪಾರಿವ್ರಾಜಕ ವ್ತತ ಅಂಗೀರಿಸಿ ಅರಮನೆಯನ್ನು ತೊರೆದು ಸನ್ಯಾಸಿಯಾದ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ ಭಿನ್ನಾಭಿಪ್ರಾಯ ಏನೇ ಇರಲಿ ಒಟ್ಟಿನಲ್ಲಿ ಸಿದ್ಧಾರ್ಥ ಅರಮನೆ ತೊರೆದು ಸನ್ಯಾಸಿಯಾದದ್ದು ಮಾತ್ರ ಸತ್ಯ.
ಸಿದ್ದಾರ್ಥ ಬುದ್ಧನಾದ ಪ್ರಬುದ್ದನಾದ.
ಅರಮನೆ ತೊರೆದ ಸಿದ್ದಾರ್ಥ ಹಗಲು ರಾತ್ರಿ ಎನ್ನದೆ ಕಾಡನ್ನು ಅಲೆದ ದೇಹ ದಂಡಿಸಿದ ಭೃಗು ಮುನಿಯ ಸಲಹೆಯಂತೆ ಭೋದೀವೃಕ್ಷದ ಕೆಳಗೆ ಕುಳಿತು ಕಠಿಣ ತಪಸ್ಸು ಮಾಡಿದ ಮಳೆ ಚಳಿ ಬಿಸಲು ಯಾವುದನ್ನು ಲೆಕ್ಕಿಸದೆ ದೇಹ ದಂಡಿಸಿದ ಗೌತಮನ ಸತತ ಆರು ವರ್ಷಗಳ ಈ ಸಾದನೆಯ ಫಲವಾಗಿ ಸಿದ್ಧಾರ್ಥನ ಮನದಲ್ಲಿ ಬಹುದಿನದಿಂದ ಕಾಡುತ್ತಿದ್ದ :ಪ್ರತಿಯೊಬ್ಬ ಮನುಷ್ಯನೂ ಅನುಭವಿಸುತ್ತಿರುವ ನೋವು ಮತ್ತು ದುಃಖಕ್ಕೆ ಕಾರಣವೇನು? ಈ ನೋವನ್ನು ಪರಿಹರಿಸುವ ಮಾರ್ಗ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ದೊರೆಯಿತು. ಈ ಜ್ಞಾನ ದೊರೆತದ್ದು ಇದೇ ವೈಶಾಖ ಮಾಸದ ಪೂರ್ಣಿಮೆಯಂದು. ಅಂದಿನಿಂದ ಸಿದ್ದಾರ್ಥ ಪರಿಪೂರ್ಣನಾದ… ಈ ಜಗತ್ತಿಗೆ ಭೋದಿಸಿದ ಆರ್ಯ ಸತ್ಯಗಳಿಂದ ಬುದ್ದನಾದ ಅಷ್ಟಾಂಗ ಮಾರ್ಗಗಳ ತಿಳಿದು ತಿಳಿಸುವ ಮೂಲಕ ಪ್ರಬುದ್ದನಾದ..
ಬುದ್ದನ ಬೋಧನೆಗಳು
ಬುದ್ಧನು ‘ಬೌದ್ಧ ಧರ್ಮದ ಸ್ಥಾಪಕ’ ಎನ್ನುವುದು ಜನಜನಿತವಾಗಿರುವ ಸಂಗತಿಯಾದರೂ ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು ಪಾಲಿ ಭಾಷೆಯಲ್ಲಿ “ಧಮ್ಮ” ಎಂದು ಕರೆದನು. ತಾನು ಬೊಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದ. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನೂ ಬೇಕಾದರೂ ಬುದ್ಧನೆಂದು ಕರೆಯಬಹುದು. ಬುದ್ಧ ಎಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಬುದ್ಧ ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. “ಆಸೆಯೇ ದುಃಖಕ್ಕೆ ಮೂಲ” ಎಂಬುದು ಅವನ ಪ್ರಸಿದ್ಧ ತತ್ವ. ಬುಧ್ಧ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಃಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು. ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು.ಇವುಗಳನ್ನು ಪ್ರತಿಯೋಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರಬಹುದು. ಅವುಗಳೆಂದರೆ, ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೆನೆ.) ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೆನೆ.) ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೆನೆ.) ಗಚ್ಚಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೇನೆ ಎಂದು ಅರ್ಥೈಸುತ್ತದೆ. ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.: ಬುದ್ಧನು ದೇವರಲ್ಲ, ದೇವದೂತನೂ ಅಲ್ಲ, ಮತ್ತು ಇತನು ದೈವಸಂಭೂತನೂ ಅಲ್ಲ ಆದರೆ ತನ್ನ ಸ್ವಸಾಮಾರ್ಥ್ಯದಿಂದ , ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು. ಮದ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ,ದಯೆ , ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಙಾನದೊಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು. ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ಸಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು. ಬುದ್ಧರು ಧಮ್ಮವನ್ನು ಜೀವನ ಮಾರ್ಗವೆಂದು ಹೇಳಿದ್ದಾರೆ. ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ಇದರಿಂದ ದುಖ್ಖ ನಿವಾರಣೆ ಸಾದ್ಯ. ಧಮ್ಮ ಎಂದರೆ ಇತರೆ ಧರ್ಮಗಳಲ್ಲಿರುವಂತೆ ಅದು ತತ್ವಶಾಸ್ತ್ರವಲ್ಲ. ಇದು ಎಲ್ಲರಿಗೂ ಮುಕ್ತವಾದ ರೀತಿಯಲ್ಲಿ ತೋರುವ ಸತ್ಯದ ಬೆಳಕು ಈ ಬೆಳಕಿನಲ್ಲಿ ಜೀವನ ಸಾಕ್ಷಾತ್ಕಾರವನ್ನು ಪಡೆಯಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ( ನಿರ್ವಾಣ) ಹೊಂದಬಹುದು. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಧಮ್ಮ ಮಾರ್ಗವನ್ನು ಉಪಾಸಕರು ಮತ್ತು ಬೌದ್ಧ ಭಿಕ್ಕುಇಬ್ಬರು ಅನುಸರಿಸಲು ತಿಳಿಸಲಾಗಿದೆ.ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳ ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಭೋಧಿಸಿದ್ದಾರೆ.
ತ್ರಿಪಿಠಕಗಳು: ೧.ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾದ ಗ್ರಂಥವಾಗಿದೆ. ೨.ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ. ೩. ಅಭಿಧಮ್ಮ ಪಿಟಕ : ಸುತ್ತ ಪಿಟಕದಲ್ಲಿನ ಬೋಧನೆಗಳನ್ನು ಮೂಲ ತತ್ವಗಳನ್ನು ವಿಶದೀಕರಿಸಿದ ಗ್ರಂಥವಾಗಿದೆ. ಬೌದ್ಧ ಸಂಘಗಳು ಬುದ್ಧನ ಕಾಲದಿಂದಲು ಸ್ಥಾಪಿಸಲ್ಪಟ್ಟಿದ್ದರು ಅವುಗಳಿಗೆ ನಿಜವಾದ ಮಾರ್ಗ ಸೂಚಿ ಇರಲಿಲ್ಲ ಭಗವಾನ್ ಬುದ್ಧರು ತಮ್ಮ ಭೋಧನೆಯ ಮಾರ್ಗದಿಂದ ಸಂಘದ ಮಾರ್ಗ ಸೂಚಿ ತಿಳಿಸಿದರು. ಇಂತಹ ಭಿಕ್ಕು ಸಂಘಗಳು ಇಂದಿಗೂ ಬರ್ಮಾ, ಥೈಲ್ಯಾಂಡ್,ಶ್ರೀಲಂಕಾ, ಕ್ಯಾಂಬೋಡಿಯಾ, ಲಾವೋಸ್, ಚಿತ್ತಗಾಂಗ್, ಜಪಾನ್,ಚೀನಾ,ಟಿಬೆಟ್ ಹೀಗೆ ಪ್ರಫಂಚದ ನಾನಾ ಕಡೆ ಅಸ್ತಿತ್ವದಲ್ಲಿದ್ದು ಧರ್ಮ ಪ್ರಚಾರ ಮಾಡುತ್ತಿವೆ, . ಬೌದ್ಧ ಭಿಕ್ಕು ಮತ್ತು ಭಿಕ್ಕಿಣಿ ಸಂಘಗಳು ಅಮೆರಿಕಾ , ರಷ್ಯ, ಕೆನಡ, ಪ್ರಾನ್ಸ್ ,ಜರ್ಮನ್ ರಾಷ್ಟ್ರಗಳಲ್ಲಿ ಕೂಡ ಧಮ್ಮದ ಉನ್ನತಿಗಾಗಿ ಸೇವೆ ಮಾಡುತ್ತಿವೆ.
ಬುದ್ಧನ ಸಮಾಧಿಯದು ಮಾನವ ಹೃದಯ
ಸುಮಾರು ೮೦ ವರ್ಷಗಳ ಕಾಲ ಜೀವಿಸಿದ್ದ ಬುದ್ದ ತನ್ನ ಜೀವಿತಾವಧಿ ಪೂರ್ತಿ ಲೋಕ ಕಲ್ಯಾಣಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡಿದ ಮಹಾಸಂತ ಸತ್ಯ ಶಾಂತಿ ಹಾಗು ಅಹಿಂಸೆಗಳಿಂದ ಮಾತ್ರ ಮಾನವ ಪ್ರೀತಿ ಹಾಗು ನೆಮ್ಮದಿಯಿಂದ ಜೀವಿಸಲು ಸಾದ್ಯ ಎಂದು ಹೇಳಿದ ಆದರೆ ಇಂದು ಆದುನಿಕ ಪ್ರಪಂಚ ಎತ್ತ ಸಾಗುತ್ತಿದೆ ? ದಿನ ಬೆಳಗಾದರೆ ಹಿಂಸೆ ಕಳ್ಳತನ ವ್ಯಭಿಚಾರ ಕೋಮ ಗಲಭೆ ಈ ದಳ್ಳುರಿಯಲ್ಲಿ ಪ್ರಪಂಚ ಹೊತ್ತಿ ಉರಿಯುತ್ತಿದೆ. ಇಂತಹ ವಿಷಮ ಲೋಕಕ್ಕೆ ಬುದ್ಧ ಏಸು ಪೈಗಂಬರ್ ಬಸವ ಗಾಂಧಿ ಅಂಬೇಡ್ಕರ್ ಇವರ ಆದರ್ಶಗಳು ಅತಿ ಅಗತ್ಯ ಮತ್ತು ಅನಿವಾರ್ಯವಾಗಿವೆ ಜಗತ್ತಿನಲ್ಲಿ. ವಿಜ್ಞಾನ ಬೆಳದಿದೆಯೇ ಹೊರತು ಮನುಷ್ಯನ ಮನದಲ್ಲಿ ಪರಿಜ್ಞಾನ ಬೆಳೆದಿಲ್ಲ.ಅಂತರ್ಜಾಲ ಬೆಳೆದಷ್ಟು ಅಂತಃಕರುಣೆ ಬೆಳೆಯಲಿಲ್ಲ ಹಾಗಾಗಿಯೇ ಈ ಎಲ್ಲಾ ಅನಾಹುತಕ್ಕೆ ಕಾರಣವಾಗುತ್ತಿವೆ. ಜಗವೆಲ್ಲ ಮಲಗಿದಾಗ ಬುದ್ಧ ಎದ್ದಿದ್ದ ಆದರೆ ಇಂದು ಬುದ್ದನ ತತ್ವಗಳನ್ನು ಜನರು ತೊಟ್ಟಿಲಲ್ಲಿ ಮಲಗಿಸಿ ತಾವು ಎದ್ದಿದ್ದಾರೆ ಅವರಿವರೊಡನೆ ಗುದ್ದಾಡಲು ಜಾತಿ ಧರ್ಮ ಗಳ ಸಂಕೋಲೆಯಲ್ಲಿ ಬಿದ್ದು ಒದ್ದಾಡಲು. ವಿಶ್ವದ ಶಾಂತಿ ಕದಡುತ್ತಿರುವ ಈ ಕಾಲದಲ್ಲಿ ಬುದ್ಧನ ತತ್ವಗಳು ಸಕಲರಿಗೂ ಸಂಜೀವಿನಿಯಾಗಲಿ ಬುಧ್ದಪೌರ್ಣಿಮೆಯ ಬೆಳದಿಂಗಳು ಅಜ್ಞಾನದ ಕತ್ತಲೆಯನ್ನು ಓಡಿಸಲಿ ಬುಧ್ದನ ತತ್ವಗಳು ಮಾನವ ಹೃದಯದಲ್ಲಿ ಸಮಾಧಿಯಾಗದೆ ಸದಾ ಜಾಗೃತವಾಗಿರಲಿ.
( ಮಾಹಿತಿ: ಸಿದ್ದಾರ್ಥನಿಂದ ಬುದ್ಧ – ಬಿ ಆರ್ ಕೃಷ್ಣಯ್ಯ ಹಾಗು ಅಂತರಜಾಲದಿಂದ ಪಡೆದದ್ದು)
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ