December 14, 2024

Hampi times

Kannada News Portal from Vijayanagara

ವಿಜಯನಗರ ಜಿಲ್ಲೆಗೆ ಕೃಷಿ ಕಾಲೇಜ್, ಅಭಿವೃದ್ಧಿಗೆ ಕಮಲ ಅರಳಿಸಿ: ನರೇಂದ್ರ ಮೋದಿ

 

https://youtu.be/NHc6OMSu0K4?si=SI_K4goOPEgwo6h2

ಹೊಸಪೇಟೆಯಲ್ಲಿ ಬಿಜೆಪಿ ನವಸಂಕಲ್ಪ ಸಮಾವೇಶ

ಹಂಪಿ ಟೈಮ್ಸ್ ಹೊಸಪೇಟೆ:
ಒಂಬತ್ತು ವರ್ಷಗಳಿಂದ ಪ್ರಧಾನಿ ಮೋದಿಯನ್ನು ದೆಹಲಿಗೆ ಹೋಗಿ ನೋಡಲಾಗದೆ ಟಿವಿ ಮಾಧ್ಯಮದಲ್ಲೆ ನೋಡಿ ಸಂತೃಪ್ತಿಪಟ್ಟಿದ್ದ ಅಭಿಮಾನಿಗಳು ಇಂದು ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನೇರವಾಗಿ ನೋಡಿ ಕಣ್ತುಂಬಿಕೊಂಡು ಸಂತಸಪಟ್ಟರು. ಬೆಳಿಗ್ಗೆ 10ರಿಂದಲೇ ಮೈದಾನದಲ್ಲಿ ಪ್ರಧಾನಿಗಾಗಿ ಕಾದು ಕುಳಿತಿದ್ದ ಜನರು, ಆಗಸದಲ್ಲಿ ಉಕ್ಕಿನ ಹಕ್ಕಿಯ ಸದ್ದು ಕೇಳುತ್ತಿದ್ದಂತೆ ಕೇಕೆ ಸಿಳ್ಳೆಗಳು ಮುಗಿಲು ಮುಟ್ಟಿದವು. ಮೋದಿಜಿಯನ್ನು ಸ್ವಾಗತಿಸಲು ಕಾತುರದಿಂದ ಪ್ರವೇಶದ್ವಾರದಲ್ಲಿ ಕಾದಿದ್ದರು. ವೇದಿಕೆ ಹಿಂಭಾಗದಿಂದಲೇ ಆಗಮಿಸಿದ ಮೋದಿಜಿ ಜನರತ್ತ ಕೈಬೀಸಿ ನಗೆಬೀರಿದರು. ಸಾಗರದಂತೆ ಸೇರಿದದ್ದ ಅಭಿಮಾನಿಗಳು ಮೋದಿ ಮೋದಿ ಮೋದಿ ಎಂದು ಜಯಘೋಷದ ಅಲೆಯೊಂದಿಗೆ ಸ್ವಾಗತಿಸಿದರು.

ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು, ಹಂಪಿ ವಿರೂಪಾಕ್ಷೇಶ್ವರಸ್ವಾಮಿ, ಉಗ್ರನರಸಿಂಹಸ್ವಾಮಿ ಮತ್ತು ಹುಲಿಗೆಮ್ಮ ದೇವಿಗೆ ಸಹಸ್ರ ಪ್ರಣಾಮಾಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೆ ಮಾತುಗಳನ್ನು ಆರಂಭಿಸಿ,  ಆಂಜನೇಯನ ಪವಿತ್ರಭೂಮಿಗೆ ನಮಿಸುವುದು ನನ್ನ ಸೌಭಾಗ್ಯವಾಗಿದೆ ಎಂದರು.

 

ಜನರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸಬೇಕು. ಡಬಲ್ ಇಂಜಿನ್ ಬಿಜೆಪಿ ಆಡಳಿತದಲ್ಲಿ ಕರ್ನಾಟಕವನ್ನು ದೇಶದಲ್ಲೆ ನಂಬರ್ ಒನ್ ರಾಜ್ಯ ಮಾಡುತ್ತೇವೆ. ಪ್ರಪಂಚದಲ್ಲಿ ಭಾರತವನ್ನು ಆರ್ಥಿಕವಾಗಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತರುವ ಕೆಲಸವನ್ನು ಕೇವಲ ಮೋದಿ ಮಾಡಲು ಆಗುವುದಿಲ್ಲ. ನೀವು ನಿಮ್ಮ ಮತ ಹಾಕುವ ಮೂಲಕ ಮಾಡಬೇಕಿದೆ. ಕಾಂಗ್ರೆಸ್‌ನವರು ಸುಳ್ಳುಗಳೇ ತುಂಬಿರುವ ಗ್ಯಾರಂಟಿ ಕಾರ್ಡ್ ಹಿಡಿದು ಬಂದಿದ್ದಾರೆ. ಕಾಂಗ್ರೆಸ್ ಗೆ ತನ್ನ ಅಸ್ತಿತ್ವದ ಬಗ್ಗೆಯೆ ಭರವಸೆ ಇಲ್ಲ. ಇಂತಹದರಲ್ಲಿ ಅವರು ನೀಡುವ ಗ್ಯಾರಂಟಿಗೆ ಅರ್ಥವೇ ಇಲ್ಲ. ತಾವು ಲೂಟಿ ಮಾಡುವ ಯೋಚನೆಯಲ್ಲಿ ಇಂತಹ ಯೋಜನೆ ತರುತ್ತಾರೆ. ರಾಮ ಜನ್ಮಭೂಮಿ ವಿಷಯದಲ್ಲೂ ಕಾಂಗ್ರೆಸ್ ತೊಂದರೆ ನೀಡಿತ್ತು. ಈಗ ಹನುಮಂತನ ವಿಷಯದಲ್ಲೂ ಅದೇ ರೀತಿ ನಡೆದುಕೊಳ್ಳಲು ಮುಂದಾಗಿದೆ. ಕಾಂಗ್ರೆಸ್ ಯಾಕೆ ಹೀಗೆ ನಡೆದುಕೊಳ್ಳುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ನುಡಿದರು.

 

ವಿಜಯನಗರ ಸಾಮ್ರಾಜ್ಯದ ಇತಿಹಾಸ ಭಾರತದ ಗೌರವವಾಗಿದೆ. ಶ್ರೀಕೃಷ್ಣದೇವರಾಯ ತನ್ನ ಆಡಳಿತದ ಮೂಲಕ ಕರ್ನಾಟಕದ ಸಂಸ್ಕೃತಿ, ನಾಗರಿಕತೆಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಜಗತ್ತಿಗೆ ವಿಜಯನಗರ ಸಾಮ್ರಾಜ್ಯ ಪ್ರೇರಣೆ ನೀಡಿದೆ. ಅಂದಿನ ಕಾಲದಲ್ಲೇ ಪ್ರಪಂಚದ ಬೇರೆ ಬೇರೆ ದೇಶಗಳೊಡನೆ ಸಂಬಂಧ ಹೊಂದಿದ್ದರು. ಅವರು ರಾಜ್ಯದ ಪ್ರತಿ ನಾಗರಿಕನ ಬಗ್ಗೆ ಚಿಂತನೆ ಮಾಡಿದ್ದರು, ಗಮನ ಕೊಟ್ಟಿದ್ದರು. ವಿಜಯನಗರ ನೂತನ ಜಿಲ್ಲೆ ಕರ್ನಾಟಕದ ಪುರಾಣ ಹೊಂದಿರುವ ಜಿಲ್ಲೆಯಾಗಿದೆ. ಪುರಾಣದಲ್ಲಿ ಈ ಕ್ಷೇತ್ರದ ಉಲ್ಲೇಖವಿದೆ. ವಿಜಯನಗರವನ್ನು ಬಿಜೆಪಿ ಸರ್ಕಾರ ಇದನ್ನು ನೂತನ ಜಿಲ್ಲೆಯನ್ನಾಗಿ ಮಾಡಿದೆ. ಈ ಭಾಗದಲ್ಲಿ ಬಹಳ ವೇಗವಾಗಿ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ. ಹೀಗಾಗಿ ವಿಜಯನಗರ ಜಿಲ್ಲೆ ಹೇಳುತ್ತಿದೆ. ಈ ಬಾರಿ ಬಿಜೆಪಿ ಸರ್ಕಾರ ಎಂದು ಹೇಳುತ್ತಿದೆ ಎಂದು ತಿಳಿಸಿದರು.

 

ಕಾಂಗ್ರೆಸ್ ಹಳ್ಳಿ ಮತ್ತು ನಗರದ ಮಧ್ಯೆ ಬಹಳ ದೊಡ್ಡ ಕಂದಕ ನಿರ್ಮಾಣ ಮಾಡಿದೆ. ನಗರದ ಪ್ರದೇಶದ ಸೌಲಭ್ಯಗಳು ಗ್ರಾಮೀಣ ಭಾಗದಲ್ಲೂ ದೊರಕುವಂತೆ ಮಾಡುವುದು ಬಿಜೆಪಿ ಪ್ರಯತ್ನವಾಗಿದೆ. ಈ ಭಾಗದಲ್ಲಿ ರೈತರ ಬೇಡಿಕೆಯಂತೆ 70ಕ್ಕೂ ಹೆಚ್ಚು ಕೆರೆಗಳ ನವೀಕರಣ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಂಡಿದೆ. ನೂತನ ವಿಜಯನಗರ ಜಿಲ್ಲೆಗೆ ಕೃಷಿ ಕಾಲೇಜನ್ನು ಮಂಜೂರು ಮಾಡಿದ್ದೇವೆ. ಇದರಿಂದಾಗಿ ಈ ಭಾಗದ ಯುವಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ದೊರಕಲಿದೆ. ಆರೋಗ್ಯ, ಶಿಕ್ಷಣ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ನಗರದ ಮಧ್ಯದ ಅಂತರ ಕಡಿಮೆ ಮಾಡುತ್ತೇವೆ ಎಂದು ವಿವರಿಸಿದರು.

ಐತಿಹಾಸಿಕ ಸ್ಥಳ ಹಂಪಿ ಬಗ್ಗೆ ಕೇವಲ ಭಾರತವಲ್ಲ ಇಡೀ ಜಗತ್ತು ಅಭಿಮಾನ ಪಡುತ್ತದೆ. ಆದರೆ ಗುಲಾಮಿ ಮನಸ್ಸು ಹೊಂದಿರುವ ಕಾಂಗ್ರೆಸ್ ಈ ಪರಂಪರೆಯನ್ನು ಗೌರವಿಸಲಿಲ್ಲ. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ 50 ರುಪಾಯಿ ಮುಖಬೆಲೆಯ ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರ ಬಳಸಿದ್ದೇವೆ. ಪ್ರವಾಸಿ ತಾಣಗಳ ಯೋಜನೆ ಜಾರಿಗೆ ತಂದಿದ್ದೇವೆ. ಇದರಲ್ಲಿ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ ಸೇರಿಸಿ ಪ್ರವಾಸಿ ಸರ್ಕಿಟ್ ಮಾಡಿದ್ದೇವೆ. ಇದರಿಂದಾಗಿ ರಾಜ್ಯದ ಪ್ರವಾಸೋದ್ಯಮ ಬೆಳೆದು ಯುವಕರಿಗೆ ನೌಕರಿ ದೊರಕಲಿದೆ ಎಂಬ ವಿಶ್ವಾಸ ನಮ್ಮದು ಎಂದರು.  ಬೆಳಿಗ್ಗೆ ಮೈದಾನಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಮಧ್ಯಾಹ್ನ ಮೋದಿಜಿಯನ್ನು ನೇರವಾಗಿ ದರ್ಶನ ಪಡೆದರು. ಮಧ್ಯಾಹ್ನದ ಹಸಿವು ಹಾಗೂ ಬಿಸಿಲಿನ ಬೇಗೆಗೆ ಮೋದಿಜಿಯವರ ಪೂರ್ಣ ಭಾಷಣ ಕೇಳದೆ ಅನೇಕರು ಕುರ್ಚಿ ಖಾಲಿ ಮಾಡಿದರು.

ಬುಲೆಟ್ಸ್:

  • ಡಬಲ್ ಎಂಜಿನ್ ಸರ್ಕಾರದಿಂದ ಸಮಾಜಿಕ ನ್ಯಾಯ, ಸಾಮಾಜಿಕ ಸಶಕ್ತೀಕರಣ
  • ಬಡವರ, ರೈತರ, ದುರ್ಬಲರ ಕಲ್ಯಾಣ
  • ಪಿಎಂ ಕಿಸಾನ್ ಬೆಳೆವಿಮೆ ರೈತರಿಗೆ ಸಹಕಾರಿ
  • ದೇಶದಲ್ಲಿ 11 ಕೋಟಿ ರೈತರಿಗೆ ಕಿಸಾನ್ ಸಮ್ಮಾನ ನಿಧಿಯ ಲಾಭ
  • ದೇಶದಲ್ಲಿ ರೈತರ ಖಾತೆಗೆ 2.50 ಲಕ್ಷ ಕೋಟಿ ಹಣ
  • ಕರ್ನಾಟಕದಲ್ಲಿ 18 ಸಾವಿರ ಕೋಟಿ ಹಣ ರೈತರ ಖಾತೆಗೆ
  • ಈ ಬಾರಿಯ ಸರ್ಕಾರ ಬಹುಮತದ ಬಿಜೆಪಿ ಸರ್ಕಾರ
  • ಡಬಲ್ ಎಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೆ ಎಲ್ಲರಿಗೂ ಲಾಭ
  • ದುರಹಂಕಾರಿ ಕಾಂಗ್ರೆಸ್‌ಗೆ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರ

ಸಮಾವೇಶದಲ್ಲಿ ಸಂಸದ ದೇವೇಂದ್ರಪ್ಪ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಚಿವ ಹಾಲಪ್ಪ ಆಚಾರ್, ಸಚಿವ ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಳ್ಳಾರಿ ವಿಭಾಗ ಪ್ರಭಾರಿ ಸಿದ್ದೇಶ್ ಯಾದವ್, ಕೊಪ್ಪಳ ಕಾರ್ಯಾಧ್ಯಕ್ಷ ಗಿರೇಗೌಡ, ವಿಜಯನಗರ ಅಭ್ಯರ್ಥಿ ಸಿದ್ಧಾರ್ಥಸಿಂಗ್, ಎಚ್.ಬಿ. ಹಳ್ಳಿಯ ಬಲ್ಲಾಹುಣ್ಸಿ ರಾಮಣ್ಣ, ಹಡಗಲಿಯ ಕೃಷ್ಣನಾಯ್ಕ್, ಕೂಡ್ಲಿಗಿಯ ಲೋಕೇಶ್ ನಾಯಕ್, ಕೊಪ್ಪಳದ ಮಂಜುಳಾ ಕರಡಿ, ಗಂಗಾವತಿಯ ಪರಣ್ಣ ಮುನವಳ್ಳಿ, ವಿಜಯನಗರ ಪ್ರಬಾರಿ ಪ್ರಭು ಕಪ್ಪಗಲ್, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಇದ್ದರು.

 

 

ಜಾಹೀರಾತು
error: Content is protected !!