December 5, 2024

Hampi times

Kannada News Portal from Vijayanagara

ಬಿರುಗಾಳಿಗೆ ಧರೆಗುರುಳಿದ ಬಾಳೆ, ನಷ್ಟ ಪರಿಹಾರಕ್ಕೆ ರೈತರ ಒತ್ತಾಯ

 

https://youtu.be/NHc6OMSu0K4?si=SI_K4goOPEgwo6h2

ಬಾಳೆ ಬೆಳೆದ ರೈತರ ಕಣ್ಣಲ್ಲಿ ನೀರು ತರಿಸಿದ ಬಿರುಗಾಳಿ..

ಹಂಪಿ ಟೈಮ್ಸ್ ಹೊಸಪೇಟೆ:
ತಾಲೂಕಿನ ಹಂಪಿ, ಕಮಲಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ರೈತರು ಬೆಳೆದಿದ್ದ  ಬಾಳೆ ಬೆಳೆ ನೆಲಕಚ್ಚಿದೆ. ಬೆಳೆ ನಷ್ಟದಿಂದ ಸಾಲದ ಸುಳಿಗೆ ಸಿಲುಕಿರುವ ರೈತರು ಕಣ್ಣೀರಿಡುತ್ತಿದ್ದಾರೆ.

ಬಿರುಗಾಳಿ ಬೀಸುತ್ತಿದ್ದಂತೆ ಬಾಳೆ ಬೆಳೆದ ರೈತರು ತಮ್ಮ ಗದ್ದೆಯತ್ತ ತೆರಳಿ ನೋಡಿದಾಗ, ಬಾಳೆ ಗೊನೆ ಇದ್ದ ಗಿಡಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಯವ್ವನಾವಸ್ಥೆಯಲ್ಲಿರುವ ಗಿಡಗಳು ಬಾಗಿ ಧರೆಗುರುಳಿರುವುದನ್ನು ಕಂಡ ರೈತರು ನಷ್ಟದ ಭೀತಿಗೊಳಗಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದ್ದು, ಈ ಭಾಗದ ರೈತರು ಕೂಡಲೇ ರೈತ ಮುಖಂಡರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಹಂಪಿ ಟೈಮ್ಸ್ ನೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಬೀಸಿದ ಬಿರುಗಾಳಿಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ಬೆಳೆ ನೆಲಕ್ಕುರುಳಿದ್ದು, ರೈತರು ಅಪಾರ ನಷ್ಟಕ್ಕೀಡಾಗಿದ್ದಾರೆ. ಸಂಜೆ ಸುರಿದ ಮಳೆ ಮತ್ತು ಗಾಳಿಗೆ ಅಪಾರ ಬೆಳೆ ನಷ್ಟವಾಗಿದೆ. ಶನಿವಾರ ಪರಿಶೀಲನೆ ನಂತರ ಎಷ್ಟು ಎಕರೆಯಲ್ಲಿ ಎಂಬುದು ನಿಖರ ಮಾಹಿತಿ ತಿಳಿಯಲಿದೆ. ರೈತರು ಬಾಳೆ ಬೆಳೆ ಬೆಳೆಯಲು ಎಕರೆಯೊಂದಕ್ಕೆ ಸುಮಾರು 1.5 ಲಕ್ಷ ರೂ ಖರ್ಚು ಮಾಡಿರುತ್ತಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ರೈತರಿಗುಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹೊಸಪೇಟೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲ ನಿಮಿಷ ಮಳೆ ಸುರಿಯಿತು. ನಗರದ ಚರಂಡಿಗಳು ತುಂಬಿ ರಸ್ತೆಗೆ ನೀರು ಹರಿದಿದ್ದರಿಂದ ಪಾದಚಾರಿಗಳು ಓಡಾಟಕ್ಕೂ ತೊಂದರೆ ಅನುಭವಿಸಿದರು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ  ಅಧಿಕ ಸಮಯ ವಿದ್ಯುತ್ ವ್ಯತ್ಯಯದಿಂದಾಗಿ ಜನರು ತತ್ತರಿಸುತ್ತಿದ್ದಾರೆ.

 

 

ಜಾಹೀರಾತು
error: Content is protected !!