December 14, 2024

Hampi times

Kannada News Portal from Vijayanagara

ಆನ್ಲೈನ್ ನಾಮಪತ್ರ ಸಲ್ಲಿಕೆಗೂ ಅವಕಾಶ: ಚುನಾವಣಾಧಿಕಾರಿ ಸಿದ್ದರಾಮೇಶ್ವರ

 

https://youtu.be/NHc6OMSu0K4?si=SI_K4goOPEgwo6h2

ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ 2 ಸಾವಿರ ಸಿಬ್ಬಂದಿ ನಿಯೋಜನೆ
ಸುಳ್ಳು ದೂರು ಕೊಟ್ಟರೆ ನಿರ್ದಾಕ್ಷಿಣ್ಯ ಕ್ರಮ ಎಚ್ಚರಿಕೆ

ಹಂಪಿ ಟೈಮ್ಸ್ ಹೊಸಪೇಟೆ:

ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು ಸ್ವೀಕರಿಸಲು ವಿಧಾನಸಭಾ ಕ್ಷೇತ್ರದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಸುಖಾಸುಮ್ಮನೆ ತಪ್ಪು ದೂರುಗಳನ್ನು ನೀಡಿದ್ದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಧಿಕಾರಿ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿದ್ದರಾಮೇಶ್ವರ ಅವರು ಎಚ್ಚರಿಸಿದರು.
ಗುರುವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಚುನಾವಣಾ ಆಯೋಗ ಹೊರಡಿಸಿದ ಮಾರ್ಗಸೂಚಿಯನ್ವಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಯಾವುದೇ ರೀತಿಯಾದ ಗೊಂದಲಗಳಿಗೆ ಎಡೆಮಾಡಿಕೊಡದೇ ನ್ಯಾಯಬದ್ಧವಾಗಿ ಕಟ್ಟುನಿಟ್ಟಿನ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

247 ಮತಗಟ್ಟೆ, 2.4 ಲಕ್ಷ ಜನ ಮತದಾರರು:
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 247 ಮತಕೇಂದ್ರಗಳಿದ್ದು, ಕ್ಷೇತ್ರದಲ್ಲಿ 1,20,806 ಜನ ಪುರುಷರು, 1,27,368 ಜನ ಮಹಿಳೆಯರು ಹಾಗೂ 77 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,48,251 ಜನ ಮತದಾರರು ಇದ್ದಾರೆ. ನೂತನವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಮುಂದುವರೆದಿದೆ. ಅಂತಿಮ ಮತದಾರರ ಪಟ್ಟಿ ಏ.20ರ ನಂತರ ಪ್ರಕಟವಾಗಲಿದೆ.

ಮಹಿಳೆಯರಿಗಾಗಿ ವಿಶೇಷ ಮತಕೇಂದ್ರ:
ಕ್ಷೇತ್ರದಲ್ಲಿ ವಿಶೇಷವಾಗಿ ಮಹಿಳಾ ಮತದಾರರಿಗಾಗಿ 5 ಮತಕೇಂದ್ರ ನಿರ್ಮಿಸಲಾಗಿದೆ.  5 ಯುವಮತದಾರರಿಗೆ, 1 ಅಂಗವಿಕಲರಿಗಾಗಿ ಹಾಗೂ 5 ಮಾದರಿ ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶೇ.90ರಷ್ಟು ಮತಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸಲಾಗಿದೆ. ಉಳಿದ ಮತಕೇಂದ್ರಗಳಿಗೂ ಎಲ್ಲಾ ಸಿದ್ಧತೆ ಕೈಗೊಳ್ಳಲಾಗುತ್ತದೆ.
ಒಟ್ಟು ಮತಗಟ್ಟೆಗಳಲ್ಲಿ 38 ಸೂಕ್ಷ್ಮ ಮತಗಟ್ಟೆಗಳು, 2 ದುರ್ಬಲ(18 ಮತ್ತು 25) ಮತಗಟ್ಟೆಗಳೆಂದು ಗ್ರಹಿಸಿ ಹೆಚ್ಚಿನ ನಿಗಾವಹಿಸಲಾಗಿದೆ. ಕ್ಷೇತ್ರದಲ್ಲಿ 6 ಕಡೆ ಚೆಕ್‌ಪೊಸ್ಟ್ಗಳಲ್ಲಿ ನಿಯೋಜಿಸಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾದರಿ ನೀತಿ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಫ್ಲೈಯಿಂಗ್ ಸ್ಕ್ವಾಡ್ (ಎಫ್‌ಎಸ್), ಸ್ಟಾಟಿಕ್ ಸರ್ವೈವ್‌ಲೆನ್ಸ್ ಟೀಮ್(ಎಸ್‌ಎಸ್‌ಟಿ) ಸಹ ನಿಯಮಿತವಾಗಿ ತಪಾಸಣೆ ಕೈಗೊಳ್ಳುತ್ತಿದ್ದಾರೆ.

2000 ಸಿಬ್ಬಂದಿ ನಿಯೋಜನೆ:
ಚುನಾವಣೆ ಕರ್ತವ್ಯ ನಿರ್ವಹಿಸಲು ವಿವಿಧ ಇಲಾಖೆಗಳ 2 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಬ್ಬಂದಿಗೆ ಏ.16ಕ್ಕೆ ಮೊದಲ ಹಂತದ ತರಬೇತಿ ನೀಡಲಾಗುತ್ತದೆ. 21 ಸೆಕ್ಟರ್ ಅಧಿಕಾರಿಗಳು, 21 ಜನ ಅಧಿಕಾರಿಗಳು, ವಿಡಿಯೋಗ್ರಾಫರ್ ತಂಡ, ವಿಡಿಯೋ ಪರಿಶೀಲನಾ ತಂಡ ಕಾರ್ಯನಿರ್ವಹಿಸುತ್ತಿವೆ ಎಂದರು.

ವಿದ್ಯುನ್ಮಾನ ಮತಯಂತ್ರಗಳ ವರ್ಗೀಕರಣ:
ಮತಕ್ಷೇತ್ರಗಳಿಗೆ ನೀಡುವ ಮತಯಂತ್ರಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆನ್‌ಲೈನ್ ಮೂಲಕ ಅನಿಯಮಿತ ವರ್ಗೀಕರಣ ಮಾಡಲಾಗಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಒಟ್ಟು 247 ಮತಕೇಂದ್ರಗಳಿಗೆ 297 ಬ್ಯಾಲೆಟ್ ಯೂನಿಟ್, 297 ಕಂಟ್ರೋಲ್ ಯೂನಿಟ್ ಹಾಗೂ 322 ವಿವಿಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸುಳ್ಳು ದೂರು ದಾಖಲಿಸಿದರೂ ಕ್ರಮ:
ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಸಿವಿಸಿಲ್ ಆಪ್ ಹಾಗೂ ವಿಜಯನಗರ ಕ್ಷೇತ್ರದ ಸಹಾಯವಾಣಿ ಸಂಖ್ಯೆ 08394-232209 ಮೂಲಕ ದೂರುಗಳನ್ನು ಸಲ್ಲಿಸಬಹುದು. ಸುಳ್ಳು ದೂರುಗಳನ್ನು ಸಲ್ಲಿಸುವುದು ಕಂಡುಬAದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು  ತಿಳಿಸಿದ್ದಾರೆ.

ಅಂಚೆ ಮತ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ:
ಈ ಬಾರಿ ಚುನಾವಣೆಯಲ್ಲಿ ವಿಶೇಷವಾಗಿ ಆಯೋಗದ ನಿರ್ದೇಶನದಂತೆ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಅಂಚೆ ಮತದಾನ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಲು ಸಾಧ್ಯವಾಗದವರು ಇದರ ಸದುಪಯೋಗಪಡಿಸಿಕೊಳ್ಳಬಹುದು.  ಹಿಂದಿನ ಚುನಾವಣೆಗಳಲ್ಲಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಇಳಿಕೆಯಾಗಿದ್ದು, ಮತದಾರರು ತಮ್ಮ ಸ್ವಂತ ವಾಹನಗಳಲ್ಲಿ ಆಗಮಿಸಿ ಮತದಾನ ಮಾಡಲು ಅನುಕೂಲವಾಗುವಂತೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ:

ಗುರುವಾರದಿಂದ ನಾಮಪತ್ರ ಪ್ರಕ್ರಿಯೆ ಆರಂಭಗೊಂಡಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕವೂ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿ ಸೇರಿ 5 ಜನರಿಗೆ ಮಾತ್ರ ನೇರವಾಗಿ ನಾಮಪತ್ರ ಸಲ್ಲಿಸಬಹುದಾಗಿದೆ ಎಂದರು.

 

 

ಜಾಹೀರಾತು
error: Content is protected !!