https://youtu.be/NHc6OMSu0K4?si=SI_K4goOPEgwo6h2
ಅಲೆಮಾರಿ ಸಮುದಾಯದ ಬೆಳ್ಳಿಚುಕ್ಕಿ
ಹಂಪಿ ಟೈಮ್ಸ್ ಹೊಸಪೇಟೆ:
ಅಲೆಮಾರಿ ಸಮುದಾಯದ ಬೆಳ್ಳಿಚುಕ್ಕಿ ನಾಡೋಜ ಬೆಳಗಲ್ಲು ವೀರಣ್ಣನವರು ಏ.2ರಂದು ಕಾರು ಲಾರಿ ನಡುವಿನ ಅಪಘಾತದಲ್ಲಿ ಸಾವಿಗೀಡಾಗಿರುವುದು ಕಲಾ ಬಳಗಕ್ಕೆ ತುಂಬಲಾರದ ನಷ್ಟ. ಕಿಳ್ಳೆಕ್ಯಾತ ಅಲೆಮಾರಿ ಸಮುದಾಯದಲ್ಲಿ ಜು.1, 1936ರಲ್ಲಿ ಜನಿಸಿದ ಅವರು, ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕಲೆಯನ್ನೆ ಮೈಗೂಡಿಸಿಕೊಂಡು ಬಯಲಾಟ ಕಲಾವಿದರಾಗಿ ಬೆಳೆದರು. ಶಾಲಾ ಶಿಕ್ಷಣ ಪಡೆಯದಿದ್ದರೂ ಬಯಲಾಟದ ಜ್ಞಾನವನ್ನೆ ಕರಗತ ಮಾಡಿಕೊಂಡು ನಟನೆಯ ಜೊತೆಗೆ ಹಾಡುಗಾರಿಕೆಯಲ್ಲಿ ಗಮನಸೆಳೆದಿದ್ದರು.
ಪುರಾಣ ಸಾಹಿತ್ಯದ ಜೊತೆಗೆ ಆಧುನಿಕ ಸಾಹಿತ್ಯವನ್ನೂ ಅರಿಯುವ ಶಕ್ತಿಯನ್ನು ಹೊಂದಿದ್ದರು. ವೀರಣ್ಣನವರು ಹಲವು ನಾಟಕ ಕಂಪೆನಿಗಳಲ್ಲಿ ನಟರಾಗಿ, ಗಾಯಕರಾಗಿ ದುಡಿದಿದ್ದಾರೆ. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಬಾಲ ನಟ, ಸ್ತ್ರೀ ಪಾತ್ರಧಾರಿ, ಖಳನಟ, ಹಾಸ್ಯನಟರಾಗಿ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದ ಶಕುನಿ, ‘ಅಣ್ಣತಂಗಿ’ಯ ಖಾಸಿಂ, ಟಿಪ್ಪು ಸುಲ್ತಾನ್ ನಾಟಕದ ಮೀರ್ ಸಾದಿಕ್ ಪಾತ್ರಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ.
ಶ್ರೀ ವೀರಣ್ಣನವರು ತಮ್ಮದೇ ಆದ ಸ್ವಂತ “ನಾಟಕ ಕಲಾ ಮಿತ್ರ ಮಂಡಳಿ” ಎಂಬ ಕಂಪೆನಿಯನ್ನು ಆರಂಭಿಸಿ ಎರಡು ದಶಕ ನಡೆಸಿದರು. ನಂತರದಲ್ಲಿ ತಮ್ಮ ಕುಲಕಸುಬಾದ ನೆರಳು-ಬೆಳಕಿನ ತೊಗಲುಗೊಂಬೆಯಾಟವನ್ನು ಆರಂಭಿಸಿದರು. ರಾಮಾಯಣದ ಪಂಚವಟಿ ಕಥಾ ಪ್ರಸಂಗದ ಮೂಲಕ ದಾಖಲೆ ನಿರ್ಮಿಸಿ ತೊಗಲುಗೊಂಬೆಯಾಟಕ್ಕೆ ಪುನರ್ಜೀವ ನೀಡಿದರು. ‘ಭಾರತ ಸ್ವಾತಂತ್ರ್ಯ ಸಂಗ್ರಾಮ’ವನ್ನು ತೊಗಲುಗೊಂಬೆ ಕಲಾಪ್ರಕಾರದಲ್ಲಿ ಅಳವಡಿಸಿ ವಿನೂತನ ಪ್ರಯೋಗ ಮಾಡಿದರು. ‘ಮಹಾತ್ಮಗಾಂಧೀಜಿ’ ಎಂಬ ತೊಗಲುಗೊಂಬೆ ರೂಪಕವು ಒಂದು ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿದೆ. ಇವರು ತಮ್ಮ ಸ್ವಂತ ಕಲ್ಪನೆಯಿಂದ ನಿರ್ಮಿಸಿದ ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಮಂಗಲಪಾಂಡೆ, ಗಾಂಧಿ, ಬಸವಣ್ಣ ಮುಂತಾದ ತೊಗಲುಗೊಂಬೆಗಳು ಅವರ ಕಲಾಪ್ರೌಢಿಮೆಗೂ, ಆಧುನಿಕ ಆಲೋಚನೆಗೂ ಸಾಕ್ಷಿಯಾಗಿವೆ.
ತೊಗಲುಗೊಂಬೆಯಾಟಕ್ಕಾಗಿ ತಮ್ಮ ಇಡೀ ಕುಟುಂಬವನ್ನೇ ಸಮರ್ಪಿಸಿದ ಶ್ರೀ ವೀರಣ್ಣನವರ ತೊಗಲುಗೊಂಬೆಯಾಟಗಳು ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಥಾಪ್ರಸಂಗಗಳನ್ನು ಒಳಗೊಂಡಿವೆ. ಸಾಕ್ಷರತೆ ಆಂದೋಲನ, ಕುಟುಂಬ ನಿಯಂತ್ರಣ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯ(ಆರ್.ಸಿ.ಎಚ್.), ಏಡ್ಸ್ ಜನಜಾಗೃತಿ, ಪಲ್ಸ್ ಪೋಲಿಯೋ, ಮಲೇರಿಯಾ, ಡೆಂಗು ಜ್ವರ, ಮದ್ಯವ್ಯಸನ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ.
ಶ್ರೀ ವೀರಣ್ಣನವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. 21ನೇ ನುಡಿಹಬ್ಬ(13.2.2013)ದಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸಿದೆ.
ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಸೇರಿದಂತೆ ಕಲಾಭಿಮಾನಿಗಳು, ಕಲಾ ಸಂಘಗಳು ನಾಡೋಜ ಬೆಳಗಲ್ಲು ವೀರಣ್ಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ