December 5, 2024

Hampi times

Kannada News Portal from Vijayanagara

ಕರ್ತವ್ಯ ಅರಿತು ನಡೆದರೆ ಉನ್ನತ ಸ್ಥಾನಕ್ಕೇರಲು ಸಾಧ್ಯ : ನಿವೃತ್ತ ಡಿಎಸ್ಪಿ ಕೆ. ಶಿವಾರೆಡ್ಡಿ

 

https://youtu.be/NHc6OMSu0K4?si=SI_K4goOPEgwo6h2

ಇಲಾಖೆ ಸೌಲಭ್ಯಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿ
ಹಂಪಿ ಟೈಮ್ಸ್  ಹೊಸಪೇಟೆ 
ಆಧುನೀಕತೆಗೆ ತಕ್ಕಂತೆ  ಸರ್ಕಾರ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಜೊತೆ ಪ್ರಾಮಾಣಿಕತೆ,  ತಾಳ್ಮೆ ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಿದರೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುವುದಲ್ಲದೇ  ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಬಳ್ಳಾರಿ ವಲಯ ಕಚೇರಿಯ ನಿವೃತ್ತ ಡಿಎಸ್ಪಿ ಕೆ. ಶಿವಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ತನಿಖೆ ಮತ್ತು ಪತ್ತೆಗಾಗಿ ಸೌಲಭ್ಯಗಳು ಹೆಚ್ಚುತ್ತಲೇ ಇವೆ. ಸೌಲಭ್ಯಗಳಿಗೆ ಅನುಗುಣವಾಗಿ ನಿಷ್ಠೆಯಿಂದ ನಾವು ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯಕ್ಕೆ ಸೇರಿದ ಆರಂಭದಲ್ಲಿ ಇರುವ ಸೌಲಭ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆವು. ಹಂತಹಂತವಾಗಿ ಪೊಲೀಸ್ ಸಿಬ್ಬಂದಿಗೂ ಪಡಿತರ, ವಾರದ ರಜೆ, ಹಬ್ಬಕ್ಕೆ ಮುಂಗಡ ಸಂಬಳ ಸೇರಿದಂತೆ ಮುಂಬಡ್ತಿ ಹೆಚ್ಚಾದವು. ಅದೆ ರೀತಿಯಾಗಿ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಆಧುನಿಕ ಸೌಲಭ್ಯಗಳು ಹೆಚ್ಚಾದವು. ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವ ನಾವು ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು.  ಕಾನ್ಸ್‌ಸ್ಟೇಬಲ್ ಆಗಿ ಸೇವೆ ಆರಂಭಿಸಿದ ನಾನು ಡಿಎಸ್ಪಿಯಾಗಿ ಆಗಿ ನಿವೃತ್ತಿ ಹೊಂದಿರುವುದೇ ಇಲಾಖೆ ಒದಗಿಸಿದ ಸೇವಾ ಸೌಲಭ್ಯಕ್ಕೆ ನಿದರ್ಶನವಾಗಿದೆ‌ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 1965 ಏ.2ರಂದು ರಾಜ್ಯ ಪೊಲೀಸ್ ಕಾಯ್ದೆ ಜಾರಿಯಾದ ಅಂಗವಾಗಿ ಅದೇ ದಿನ ಪೊಲೀಸ್ ಇಲಾಖೆಗೆ ಧ್ವಜವನ್ನು ನೀಡಲಾಗಿದೆ. ಹಾಗಾಗಿ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಕಲ್ಯಾಣ ದಿನ ಆಚರಿಸಲಾಗುತ್ತದೆ. ಈ ದಿನ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಬಂದ ಹಣದಿಂದ ನಿವೃತ್ತ ನೌಕರರಿಗೆ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಪೊಲೀಸ್ ತುಕಡಿಗಳಿಂದ ಪಥಸಂಚಲನ, ಧ್ವಜವಂದನೆ ನೆರವೇರಿಸಲಾಯಿತು. ಹೊಸಪೇಟೆ, ಕೂಡ್ಲಿಗಿ ಹಾಗೂ ಹರಪನಹಳ್ಳಿ ಉಪವಿಭಾಗ ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಗಾಂಭೀರ್ಯದಿಂದ ಪಥಸಂಚಲನಕ್ಕೆ ಹೆಜ್ಜೆ ಹಾಕಿದರು. ಕಂಪ್ಲಿ ಗೃಹರಕ್ಷಕ ದಳ ಪಥಸಂಚಲನದಲ್ಲಿ ಬ್ಯಾಂಡ್ ವಾದನ ನೀಡಿತು.
8.11 ಲಕ್ಷ ರೂ. ಧ್ವಜ ಮಾರಾಟ:
ಕಳೆದ ವರ್ಷ 2022ನೇ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ 8.11 ಲಕ್ಷ ರೂ. ಸಂಗ್ರಹವಾಗಿದೆ. ಅದರಲ್ಲಿ ಶೇ.50 ಭಾಗ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ, ಉಳಿದ ಭಾಗ ಕೇಂದ್ರ ಕಲ್ಯಾಣ ನಿಧಿಗೆ ತಲುಪಿಸಲಾಗಿದೆ ಎಂದು ವಾರ್ಷಿಕ ವರದಿ ನೀಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಪಾವತಿಗೆ ಮಂಜೂರಾತಿ ನೀಡಲಾಗಿದೆ. ನಿವೃತ್ತ ಅಧಿಕಾರಿಗಳ ಕ್ಷೇಮ ನಿಧಿಯ ಖಾತೆಗೆ ಹಣ ಜಮೆಯಾಗಿದೆ. ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ಸಿಬ್ಬಂದಿ ಆರೋಗ್ಯ ಯೋಜನೆಯಡಿ ಸದಸ್ಯತ್ವ ಹೊಂದಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಳೆದ ಸಾಲಿನಲ್ಲಿ ವಯೋನಿವೃತ್ತಿ ಹೊಂದಿದ 18 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ ನಡೆಯಿತು.

 

 

ಜಾಹೀರಾತು
error: Content is protected !!