https://youtu.be/NHc6OMSu0K4?si=SI_K4goOPEgwo6h2
ಮತ್ತಷ್ಟು ಜವಾಬ್ಧಾರಿ ಹೆಚ್ಚಿಸಿದ ಬಿವಿಕೆ ರಂಗಪ್ರಶಸ್ತಿ : ಪಿ.ಅಬ್ದುಲ್
ಹಂಪಿಟೈಮ್ಸ್ ಹೊಸಪೇಟೆ :
ಕಳೆದ 42 ವರ್ಷಗಳಿಂದ ರಂಗಕಲೆ ಉಳಿವಿಗೆ ಜೀವನವನ್ನೇ ಮುಡುಪಾಗಿಟ್ಟು, ನಿಸ್ವಾರ್ಥ ನಿರಂತರ ಸೇವೆಯಲ್ಲಿ ತೊಡಗಿರುವ ನಗರದ ಹಿರಿಯ ರಂಗಕರ್ಮಿ ಪಿ.ಅಬ್ದುಲ್ಲಾಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸಕ್ತ ಸಾಲಿನ ಬಿ.ವಿ.ಕಾರಂತ ರಂಗಪ್ರಶಸ್ತಿ ಘೋಷಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2020-21 ಹಾಗೂ 2021-22ನೇ ವಿವಿಧ ಪ್ರಶಸ್ತಿ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ರಂಗಭೂಮಿಯಲ್ಲಿ ಸಲ್ಲಿಸಿದ ಸುದೀರ್ಘ ಸೇವೆ ಪರಿಗಣಿಸಿ ನೀಡಲಾಗಿರುವ ಈ ಪ್ರಶಸ್ತಿಯೂ ಫಲಕ, ಪ್ರಮಾಣ ಪತ್ರ ಹಾಗೂ 5 ಲಕ್ಷ ರೂ. ನಗದು ಒಳಗೊಂಡಿದೆ.
ಸದಾ ಬಿಳಿ ಅಂಗಿ, ಬಿಳಿ ಪೈಜಾಮ್ ತೊಟ್ಟು, ಹೆಗಲಿಗೊಂದು ಖಾದಿಚೀಲ ಹಾಕ್ಕೊಂಡು ಕಾಲ್ನಡಿಗೆಯಲ್ಲೇ ನಡೆದಾಡುತ್ತಾ ಮಕ್ಕಳಲ್ಲಿ ರಂಗಕಲೆ ಕುರಿತು ಜಾಗೃತಿ ಮೂಡಿಸುತ್ತಾ, ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಪಿ.ಅಬ್ದುಲ್ಲಾ ಅವರು ಬೀದಿ ನಾಟಕದ ಅಬ್ದುಲ್‌ಸಾಬ್ ಎಂದೇ ಚಿರಪರಿಚಿತರು. 1981ರಲ್ಲಿ ರಂಗಭೂಮಿಯನ್ನು ಪ್ರವೇಶಿಸಿದ ಇವರನ್ನು ಜನ ಪ್ರೀತಿಯಿಂದ ಬೀದಿ ನಾಟಕ ಸಾರ್ವಭೌಮ ಎಂದೇ ಗುರುತಿಸುತ್ತಾರೆ. ಹೊಸಪೇಟೆಯ ಸಿದ್ಧಲಿಂಗಪ್ಪ ಚೌಕಿಯಲ್ಲಿ ಭಾವೈಕ್ಯತಾ ವೇದಿಕೆಯನ್ನು ಸ್ಥಾಪಿಸಿ ಈ ಭಾಗದ ಕೊಳಗೇರಿ ನಿವಾಸಿ ಮಕ್ಕಳಿಗೆ ರಂಗತರಬೇತಿ ಹಾಗೂ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ತಮ್ಮ ಸ್ವಸ್ಥಾನದಲ್ಲೇ ಸಂತ ಶಿಶುನಾಳ ಶರೀಫ ರಂಗಮಂದಿರ ಸ್ಥಾಪಿಸಿ ಮಕ್ಕಳಿಗೆ ಬೇಸಿಗೆ ಶಿಬಿರ, ನಾಟಕ, ಯುವಕರಿಗೆ ರಂಗ ತರಬೇತಿ ನೀಡುತ್ತಿದ್ದಾರೆ. ಭಾವೈಕ್ಯತಾ ವೇದಿಕೆ ಮುಖಾಂತರ ರಾಜ್ಯ, ನೆರೆ ರಾಜ್ಯಗಳಲ್ಲೂ ಬೀದಿ ನಾಟಕ ಪ್ರದರ್ಶಿಸಿದ ಕೀರ್ತಿ ಇವರದ್ದಾಗಿದೆ. ನಾಲ್ಕು ದಶಕಗಳ ರಂಗಭೂಮಿ ಸೇವೆ ಹಾಗೂ ರಂಗ ಚಟುವಟಿಕೆಗಳನ್ನು ಪರಿಗಣಿಸಿ ಹಲವು ಅಕಾಡೆಮಿ ಮತ್ತು ಸಂಘಸಂಸ್ಥೆಗಳು ಹಿರಿಯ ರಂಗಕರ್ಮಿ ಪಿ.ಅಬ್ದುಲ್ಲಾ ಅವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಿವೆ.
ಪ್ರಶಸ್ತಿ ಪುರಸ್ಕಾರ: ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ-2006, ರಂಗಚೇತನ ಸಂಸ್ಕೃತಿ ಕೇಂದ್ರದ ಸಿಜಿಕೆ ರಾಜ್ಯ ಪ್ರಶಸ್ತಿ, ರಂಗಾಯಣದ ನವರಾತ್ರಿ ರಂಗೋತ್ಸವ-2016ರಲ್ಲಿ ರಂಗ ಸಾಧಕರಿಗೆ ಸನ್ಮಾನ, 2015ರಲ್ಲಿ ರಂಗಜಂಗಮ ಪುರಸ್ಕಾರ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಲಭಿಸಿವೆ.
ರಂಗಸಂಘಟನೆ: ರಂಗ ಸಂಗೀತ ಹಾಗೂ ರಂಗಭೂಮಿಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ ಬಿ.ವಿ.ಕಾರಂತರು ರಂಗಭೂಮಿ ಬೆಳೆಸಿ ಅದರ ಜೊತೆಗೆ ಕಲಾವಿದರಿಗೂ ವೇದಿಕೆ ಒದಗಿಸಿದ್ದಾರೆ. ಅವರ ಹೆಸರಲ್ಲಿ ಸರ್ಕಾರ ನನಗೆ ಪ್ರಶಸ್ತಿ ಘೋಷಿಸಿರುವುದು ಸಂತಸ ತಂದಿದೆ. ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ, ಸೇವೆ ಹೆಚ್ಚಿಸುವಂತೆ ಮಾಡಿದೆ. ಭಾವೈಕ್ಯತಾ ವೇದಿಕೆ ಮೂಲಕ 42 ವರ್ಷಗಳಿಂದ ಬೀದಿ ನಾಟಕ, ಮಕ್ಕಳ ನಾಟಕ, ಯುವ ನಾಟಕ ಆಯೋಜಿಸುತ್ತಾ ಬಂದಿದ್ದೇನೆ. ರಂಗ ಭೂಮಿಯಲ್ಲಿ ರಂಗಸಂಘಟನೆ ಸಹ ಒಂದು ಕಲೆಯಾಗಿದೆ, ಹೊಸಪೇಟೆ ಭಾಗದ ಸಿದ್ಧಲಿಂಗಪ್ಪ ಚೌಕಿ ಸೇರಿದಂತೆ ವಿವಿಧೆಡೆಯ ಕೊಳಗೇರಿ ಮಕ್ಕಳನ್ನು ರಂಗ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದೆ ವಿಶೇಷ ಎಂದು ಅಭಿಪ್ರಾಯ ಹಂಚಿಕೊಂಡರು.
• ಅಲ್ಪ ಸ್ಥಳದಲ್ಲೇ ಸಣ್ಣ ರಂಗಮಂದಿರ ನಿರ್ಮಿಸಿ, ಭಾವೈಕ್ಯತಾ ವೇದಿಕೆ ಮೂಲಕ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ರಂಗಭೂಮಿ ತರಬೇತಿ ಉಚಿತವಾಗಿ ನೀಡುತ್ತಿದ್ದೇವೆ. ಸರ್ಕಾರದ ಪ್ರಶಸ್ತಿಯ ಹಣವು ರಂಗಮಂದಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ.
– ಪಿ. ಅಬ್ದುಲ್ಲಾ , ಹೊಸಪೇಟೆ.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ