https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ರಾಜ್ಯದ ಅತ್ಯಂತ ಪ್ರಬುದ್ಧ ಮತದಾರರ ಕ್ಷೇತ್ರಕ್ಕೆ ಹೆಸರಾದ ಹೂವಿನಹಡಗಲಿಯಲ್ಲಿ ಯಾರು ಗೆಲ್ಲುವರೋ, ಬಿಡುವರೋ. ಆದರೆ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಇವರನ್ನು ಸೋಲಿಸಲೇಬೇಕು ಎಂಬ ಕೆಲವರ ಆಸೆಗೆ ಜನ್ಮತಳೆದ ಕೂಸು ಕೃಷ್ಣನಾಯ್ಕ.
ಕ್ಷೇತ್ರದಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಕೃಷ್ಣನಾಯ್ಕ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪನವರ `ಕನಸಿನ’ ಶಾಸಕ. ಹಾಲಪ್ಪನವರ ಟಂಕಸಾಲೆಯಲ್ಲಿ, ಪಿಟಿಪಿ ವಿರುದ್ಧ ಬಹಿರಂಗವಾಗಿಯೆ ಗುಟುರು ಹಾಕಿ ಕೆಪಿಸಿಸಿಯಿಂದ ನೋಟಿಸು ಪಡೆದ ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ.ಕೊಂಡಯ್ಯನವರ ಗರಡಿಪಟು ಕೃಷ್ಣನಾಯ್ಕ. ಈಗೀರುವ ಕೃಷ್ಣ ನಾಯ್ಕನ ಕೊಳಲುನಾದವನ್ನು ಕ್ಷೇತ್ರದ ಮತದಾರರು ಅದೆಷ್ಟರ ಮಟ್ಟಿಗೆ ಆಲಿಸುವರು ಎಂಬುದೇ ಇದೀಗ ಯಕ್ಷ ಪ್ರಶ್ನೆ.
ಗೊಂದಲದ ಗೂಡು, ಒಮ್ಮೆ ತಿರುಗಿ ನೋಡು :
ಕೊಂಚ ಹಿಂದಿರುಗಿ ನೋಡಿದರೆ ಕೃಷ್ಣನ ಸಿದ್ಧಾಂತಗಳೇ ಗೊಂದಲಕಾರಿಯಾಗಿವೆ. ಈ ಮೊದಲು ಸೆಕ್ಯುಲರ್ ಪಾರ್ಟಿ ಕಾಂಗ್ರೆಸ್‌ನ ಯುವ ಘಟಕದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಪಿಟಿಪಿಗೆ ಕೈ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ಕೃಷ್ಣ ಬಿಜೆಪಿ ಸಖ್ಯಕ್ಕೆ ಹಾತೊರೆಯುತ್ತಿದ್ದಾರೆ. ಸಚಿವ ಶ್ರೀರಾಮಲುರನ್ನು ದಿಢೀರ್ ಸಂಧಿಸಿ ಹೊಸದೊಂದು ಸಂದೇಶ ರವಾನಿಸಿದ್ದಾರೆ. ಹಾಗಾದರೆ ಕೃಷ್ಣನ ಸಿದ್ಧಾಂತವೇನು ? ಇವರ ನಡೆ ಬಗ್ಗೆ ಮತದಾರರಲ್ಲಿ ಚರ್ಚೆ ಗರಿಗೆದರಿದೆ. ಏಕೆಂದರೆ ಕ್ಷೇತ್ರದಲ್ಲಿನ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳು ಇಂದಿಗೂ ಜಾತ್ಯಾತೀತ ನಿಲುವಿಗೆ ಒತ್ತು ನೀಡುತ್ತವೆ. ಪಿಟಿ ಪರಮೇಶ್ವರ ನಾಯ್ಕಗೆ ಈ ಮತಗಳೇ ಆಸರೆ. ಈ ಕಾರಣಕ್ಕಾಗಿಯೆ ಬಹುಸಂಖ್ಯಾತ ಲಿಂಗಾಯತ ಮತ್ತು ಇತರೆ ಸಮುದಾಯಗಳ ಮತಗಳೂ ನಿರ್ಣಾಯಕವಾಗಿದ್ದು, ಕೊಂಚಮಟ್ಟಿಗೆ ಬಿಜೆಪಿ ಬೆಂಬಲಿಸುತ್ತವೆ. ಈ ಮೊದಲು ಕಾಂಗ್ರೆಸ್, ನಂತರ ಬಿಜೆಪಿ, ಪುನಃ ಕಾಂಗ್ರೆಸ್ ಮತ್ತೆ ಬಿಜೆಪಿ ಪಾಲಾಗುತ್ತಿರುವ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹಾದಿಯಲ್ಲೆ ಅವರ ದತ್ತುಪುತ್ರನಂತಿರುವ ಕೃಷ್ಣನಾಯ್ಕ ಸಾಗುತ್ತಿದ್ದಾರೆ.
ವರಿಷ್ಠರ ಮುಂದೆ ಪದ್ಮಾಸನ :
ಕೃಷ್ಣನ ಕೊಳಲಿನ ನಾದ ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದಂತೆ, ಇತ್ತ ಮಾಜಿ ಶಾಸಕ ಚಂದ್ರನಾಯ್ಕ, ಕಳೆದ ಚುನಾವಣೆಯಲ್ಲಿ 2ನೇ ಸ್ಥಾನ ಪಡೆದ ಪರಾಜಿತ ಓದೋ ಗಂಗಪ್ಪ ಇತರರು ಇದೀಗ ಬಿಜೆಪಿ ವರಿಷ್ಟರ ಮುಂದೆ ಟಿಕೇಟ್ ಗಾಗಿ ಪದ್ಮಾಸನ ಹಾಕಿದ್ದಾರೆ. ಶಾಸಕ ಪಿಟಿ ಪರಮೇಶ್ವರ ನಾಯ್ಕ ವಿರುದ್ಧ ಘೋಷಣೆ ಕೂಗುವವರನ್ನೆ ಬಲವಾಗಿ ನೆಚ್ಚಿಕೊಂಡಿರುವ ಕೃಷ್ಣ, ಉಡಿತುಂಬುವುದು, ಯುವಕರಿಗೆ ಕ್ರಿಕೆಟ್ ಕಿಟ್, ಮ್ಯುಸಿಕ್‌ಪಾರ್ಟಿ ಅವುಗಳ ಗುಂಗಿನಲ್ಲೆ ಇರುವಂತಿದೆ. ಆದರೆ, ಕ್ಷೇತ್ರದ ಪ್ರಬುದ್ಧ ಮತದಾರ ಬಯಸುವುದು ಹೂವಿನ ಪೊಡಂಗಲಿಯ ಅಭಿವೃದ್ಧಿ. ಈ ಪರಿಕಲ್ಪನೆಯನ್ನು ಬಿತ್ತರಿಸುವ ಮೂಲಕ ತಾವು ಇತರರಿಗಿಂತಲೂ ಹೇಗೆ ಭಿನ್ನ ಎಂಬುದನ್ನು ತೋರುವ ಕೃಷ್ಣನ ಚಿಂತನೆ ಎಲ್ಲೂ ಕಂಡುಬಾರದAತಾಗಿದೆ.
ಚಂದ್ರೋದಯವಾಗುವುದೆ ?, ಮತ್ತೊಬ್ಬ ಓದೋ ಆಗುವರೇ? :
ಶಾಸಕ ಪಿಟಿ ಪರಮೇಶ್ವರನಾಯ್ಕ ಮತ್ತು ಮಾಜಿ ಶಾಸಕ ಚಂದ್ರನಾಯ್ಕರನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಚುನಾವಣೆ ವೇಳೆಯಲ್ಲಿ ತಂತ್ರಗಾರಿಕೆಯಲ್ಲಿ ಪರಿಣಿತಿ ಹೊಂದಿರುವ ಶಾಸಕ ಪಿಟಿಪಿ ಯಾವುದೇ ಸವಾಲನ್ನೂ ಎದುರಿಸುವ ಬಲಶಾಲಿ. ಮತ್ತೊಂದೆಡೆ ಸಜ್ಜನಿಕೆ ಮೂಲಕವೇ ಜನಮನದಲ್ಲಿ ಉಳಿದಿರುವ ಮಾಜಿ ಶಾಸಕ ಚಂದ್ರನಾಯ್ಕ ಕಳೆದ ಚುನಾವಣೆಯಲ್ಲಿ ಕೇವಲ ಕಾಂಚಾಣ ಗದ್ದಲದಲ್ಲಿ ಸೋಲುಂಡರು. ಇದೀಗ ಚಂದ್ರನಾಯ್ಕ ಅವರ ಪುತ್ರ ಸೇತುರಾಮ ನಾಯ್ಕ, ಬಿಜೆಪಿ ಮಂಡಲ ಅಧ್ಕಕ್ಷ ಸಂಜೀವರೆಡ್ಡಿ, ಮಾಜಿ ಅಧ್ಯಕ್ಷ ಎಂ.ಬಸವರಾಜ ಸೇರಿ ಹಲವು ಮುಖಂಡರು ಪಕ್ಷವನ್ನು ಸಮರ್ಥವಾಗಿ ಸರಿದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ. ಆದರೆ, ಬಿಜೆಪಿಗೆ ಪಕ್ಷ ಮುಖ್ಯವೋ ಹೊರತು ವ್ಯಕ್ತಿ ಮುಖ್ಯವಲ್ಲ. ಈ ಬಾರಿ ಬಿಜೆಪಿಯಿಂದ ಯಾರೇ ಕಣಕ್ಕಿಳಿದರೂ ಗೆಲುವಿನ ಸಮೀಪ ಹೋಗಬಹುದು. ಆದರೆ, ಬಿಜೆಪಿ ಬಾಗಿಲು ತಟ್ಟುತ್ತಿರುವ ಕೃಷ್ಣನಿಗೆ ಆಕಾಂಕ್ಷಿಗಳೇ ಅಡ್ಡಿಯಾಗಿದ್ದು, ಒಂದು ವೇಳೆ ಟಿಕೇಟ್ ಕೈತಪ್ಪಿ ಪಕ್ಷೇತರರಾದರೆ ಮತ್ತೊಬ್ಬ ಓದೋ ಗಂಗಪ್ಪರಾಗಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂಬುದೇ ಹೂವಿನಹಡಗಲಿ ಚಿಂತಕರ ಚಾವಡಿಯ ಸ್ಪಷ್ಟ ಅಭಿಪ್ರಾಯವಾಗಿದೆ.
ಸದ್ಯದ ಮಟ್ಟಿಗೆ ಕಾಯಕ ಭವನ ಅತಿಯಾದ ಆತ್ಮವಿಶ್ವಾಸದಲ್ಲಿದೆ. ಡೊಳ್ಳಿನ ಸದ್ದು, ಹಲಗೆವಾದನ, ಹಲವರ ಜೈಕಾರದ ಖುಷಿಯಲ್ಲಿ, ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಒಂಚೂರು ಸದಾಶಯಗಳನ್ನು ಈವರೆಗೂ ವ್ಯಕ್ತಪಡಿಸದೆ ಇರುವ ಕೃಷ್ಣನಾಯ್ಕ ಬದಲಾಗದಿದ್ದರೆ ಮತದಾರ ಎಂದಿನAತೆ ಕೈ ಹಿಡಿವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
- ಕೃಷ್ಣನಾಯ್ಕ ನನ್ನ ದತ್ತುಪುತ್ರನಿದ್ದಂತೆ. ಕೃಷ್ಣನಾಯ್ಕ ಗೆಲ್ಲದೇ ಇದ್ದರೆ ನಾನು ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡು ಬರುತ್ತೇನೆ.
-ನಂದಿಹಳ್ಳಿ ಹಾಲಪ್ಪ. ಮಾಜಿ ಶಾಸಕ
More Stories
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ
ಐವರು ಸಾಧಕರು ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ : ಸಿಎಂ ಸಿದ್ದರಾಮಯ್ಯ