December 5, 2024

Hampi times

Kannada News Portal from Vijayanagara

ನಮ್ಮನೆ ಯುಗಾದಿ ಬೇವಾ….? ಬೆಲ್ಲಾನಾ…???

 

https://youtu.be/NHc6OMSu0K4?si=SI_K4goOPEgwo6h2

ನಮ್ಮನೆ ಯುಗಾದಿ ಬೇವಾ….? ಬೆಲ್ಲಾನಾ…???

  • ಸುಜಾತ ಗಿಡ್ಡಪ್ಪಗೌಡ್ರು, ಹೊಸಪೇಟೆ. 
    (ಸ.ಶಿ., ಸ.ಹಿ.ಪ್ರಾ.ಶಾಲೆ ಹಂಪಿ)

“ತಪ್ಪು ಮಾಡದವ್ರು ಯಾರ್ ಅವ್ರೆ.? ತಪ್ಪೇ ಮಾಡದವ್ರು ಎಲ್ಲ್ ಅವ್ರೇ?? ” ಎಷ್ಟು ಚೆಂದದ ಹಾಡು.. ” ಮಠ” ಸಿನಿಮಾದ ಈ ಹಾಡು ಕೇಳ್ತಾ ಇದ್ರೇ. ನನಗೆ ನಾ ಮಾಡಿದ ತಪ್ಪುಗಳೆಲ್ಲ ತಪ್ಪೇ ಅಲ್ಲ ಅನ್ನಸ್ತಾ ಇದೆ. ಅರೇ… ಇವಳು ದಿನಕ್ಕೆ 108 ಬಾರಿ ಶಿವ ನಾಮ ಜಪಿಸದೇ ಇದ್ರೂ ಒಂದು ದಿನಕ್ಕೆ ನನ್ನ 108 ತಪ್ಪುಗಳನ್ನು ಹುಡುಕಿ ಹುಡುಕಿ ಹೇಳ್ತಾ ಇರ್ತಾಳೆ. ಇರಲಿ ಬಿಡಿ ನಮ್ಮ ಮನೆಯಲ್ಲಿ ನನ್ನ ಗುಣಗಾನದ ಅಷ್ಟೋತ್ತರ ನಡೀತಾನೆ ಇರುತ್ತೆ… ನಾನೇದ್ರೂ ಮಧ್ಯ ಬಾಯಿ ಹಾಕಿದ್ರೆ ಸಹಸ್ರನಾಮ ಪ್ರಾರಂಭ ಆಗುತ್ತೆ.
ಹಾ.. ನಾನು title ವಿಷಯಕ್ಕೆ ಬರ್ತೀನಿ. ನಮ್ಮಾಕೆ ಪ್ರತಿದಿನ ನನ್ನ ತಪ್ಪು ಹುಡುಕ್ತಾ ಇರ್ತಾಳೆ ನಿಜ. ಆದ್ರೆ ಭೀಮನ ಅಮವಾಸ್ಯೆ ದಿನ ಮಾತ್ರ ನನ್ನ ಮುಖಕ್ಕೆ ಮಂಗಳಾರತಿ ಎತ್ತೋ ಬದಲು ನನ್ನ ಪಾದ ಪೂಜೆ ಸೌಭಾಗ್ಯ ಹೇಗೆ ಸಿಗುತ್ತೋ ಹಾಗೆ ಈ ಯುಗಾದಿಗೂ ನಾನು ಮಹಾರಾಜ ಆಗಿ ಬಿಡ್ತಿನಿ.

ಆದ್ರೆ ಈ ವರ್ಷ ನನ್ನ ರಾಶಿ ಭವಿಷ್ಯ ನೋಡಲೇಬೇಕು ಅಂತ ಪಂಚಾಂಗ ಹಿಡಿದು ವರ್ಷದ ಮೊದಲ ದಿನ ದೇವರ ಮುಂದೆ ಕೂತ್ರೆ ಬರೀ ತೊಂದರೆಗಳೇ ಕಾಣೋದೇ… ಕೊನೆಯಲ್ಲಿ ಸಮಾಧಾನ ಆಗಲಿ ಅಂತ ಒಂದೋ ಎರಡೋ ಒಳ್ಳೇ ಮಾತಿತ್ತು ಅಷ್ಟೇ… ಮನೆಯ ಎಲ್ಲರ ಭವಿಷ್ಯ ಓದಿ ಇನ್ನೇನೂ ನನ್ನ ಹೆಂಡತಿ ಭವಿಷ್ಯ ಓದೋಣ ಅನ್ನೋವಷ್ಟರಲ್ಲಿ ಅವಳು ಅಯ್ಯೋ ಬಿಡಿ ಅದನ್ನೇನು ಸಪರೇಟಾಗಿ ಓದ್ತೀರಾ… ನಿಮ್ಮ ರಾಶಿಯಲ್ಲೇ ಇಷ್ಟು ವಿಘ್ನಗಳಿರೋವಾಗ ನನ್ನ ರಾಶಿ ಏನು ವಿಶೇಷವಾಗಿರುತ್ತೆ. ವರ್ಷವೆಲ್ಲಾ ನಿಮ್ಮ ವಿಘ್ನಗಳನ್ನ ಪರಿಹಾರ ಮಾಡ್ಸೋದ್ರಲ್ಲೇ ನನ್ನ ರಾಶಿ ಭವಿಷ್ಯ ನಿಂತಿದೆ ಅನ್ನೋದಾ… ಇದನ್ನೇನು ಅವಳು ನನ್ನ ಮೇಲಿನ ಪ್ರೀತಿಯಿಂದ ಹೇಳಿದಳೋ ಬೈದು ಹೇಳಿದಳೋ ಗೊತ್ತೇ ಆಗಲಿಲ್ಲ ನೋಡಿ..
ಗೊಣಗುತ್ತಲೇ ಎಲ್ಲರಿಗೂ ಬೇವು ಬೆಲ್ಲ ಹಂಚಿದ ಇವಳು ಪ್ರತಿ ಕೆಲಸದಲ್ಲೂ ನನ್ನ ರಾಶಿ ಭವಿಷ್ಯದ ಕುರಿತೇ ಚಿಂತಿಸುತ್ತಿದಳು. ಯಾವ ದೋಷಕ್ಕೆ ಯಾವ ಪೂಜೆ ಯಾವ ದಾನ ಮಾಡ್ಸೋದು ಅಂತ ಯೋಚಿಸುತ್ತಾ ಒಬ್ಬಟ್ಟಿಗೆ ಸಿಹಿ ಕಡಿಮೆ, ಸಾರಿಗೆ ಖಾರ ಜಾಸ್ತಿ, ಚಿತ್ರಾನ್ನಕ್ಕೆ ಶೇಂಗಾ ಬೀಜಾನೇ ಇಲ್ಲದ ಅಡುಗೆ ಮಾಡಿದಳು.

ಇದನ್ನೆಲ್ಲ ಊಟ ಮಾಡೋ ನಾವುಗಳು ಇವತ್ತಿನ ಯುಗಾದಿ ನಮ್ಮ ಪಾಲಿಗೆ ಬೇವು ಆಗಿ ಹೋಯ್ತು ಅಂತ ತಲೆ ಚಚ್ಚಿಕೊಳ್ತಾ ಊಟ ಮಾಡ್ತಾ ಕೂತಿದ್ವಿ. ಅಷ್ಟರಲ್ಲಿ ಡೋರ್ ಬೆಲ್ ಹೊಡೆದ ಶಬ್ಧ ಕೇಳಿ ನನ್ನಾಕೆ ಬಾಗಿಲ ಬಳಿ ಹೋದರೆ courier ಹುಡುಗ ನಿಂತಿದ್ದ . ಮೇಡಂ ಸರ್ ಹೆಸರಿಗೆ ಪಾರ್ಸಲ್ ಬಂದಿದೆ ಅಂತ ಹೇಳಿದ. ಅವನಿಂದ ಪಾರ್ಸಲ್ ಪಡೆದ ಅವಳು ಊಟ ಬಡಿಸೋದನ್ನೇ ಬಿಟ್ಟು ಅದನ್ನು open ಮಾಡೋಕೆ ಶುರು ಮಾಡಿದ್ಲು. ಯಾಕೆ ಅಂತೀರಾ ಅದು ಅಮೇರಿಕಾದಿಂದ ಅವಳ ಅಣ್ಣ ಕಳಿಸಿದ್ದ ಪಾರ್ಸಲ್. ಅರೇ ಇದೇನಿದು ನಮ್ಮ ಅಣ್ಣ ನನ್ನ ಹೆಸರಿಗೆ ಪಾರ್ಸಲ್ ಕಳಿಸೋದು ಬಿಟ್ಟು ಇವರಿಗೆ ಕಳಿಸಿದನಲ್ಲಾ ಅಂತ ಕುತೂಹಲದಿಂದ.. ಜೊತೆಗೆ ನಮ್ಮ ಅಣ್ಣ ಕಳಿಸಿದ್ದು ಅಲ್ವ, ಅದಕ್ಕೆ ನಾನೇ ಮೊದಲು ನೋಡಬೇಕು ಅಂತ ಅದನ್ನು open ಮಾಡಿದ್ಲು.

ಅದರಲ್ಲಿ ಇರುವ 2 ಕವರ್ ನೋಡಿ ಅವಳು ಖುಷಿಯಿಂದ ಸಾಮ್ರಾಜ್ಯ ಗೆದ್ದ ಸಾಮ್ರಾಟಿಣಿಯಂತೆ ಕುಣಿದಾಡಿದಳು. ವಿಷಯ ಏನು ಅಂದ್ರೆ ಅದ್ರಲ್ಲಿ ಇದ್ದಿದ್ದು 2 flight tickets.. ನಾನು ಇದೇನೇ ಇಷ್ಟು ಖುಷಿ ಪಡ್ತಿಯಾ.. ? ನೀನೇನು ಯಾವತ್ತೂ flight ticket ನೋಡೇ ಇಲ್ಲ, flight ನಲ್ಲಿ ಹೋಗೇ ಇಲ್ಲ ಅನ್ನೋ ತರ . ಅವಳಂತೂ ಚಾಕಲೇಟ್ ತಿಂತಾ ಇರೋ ಮಗು ಎಷ್ಟು ಖುಷಿಯಿಂದ ಮುಖ ಅರಳಿಸಿರುತ್ತೋ ಅಷ್ಟೇ ಖುಷಿಯಿಂದ ನನ್ನ ಹಿಡಿದು ರೀ… ನಾವು ಅಮೇರಿಕಾ ಹೋಗ್ತಾ ಇದೀವಿ ಅಂದ್ಲು.

ಹೂ ಆಯ್ತು ಹೋಗೋಣ ಇದೇನೂ ಮೊದಲನೇ ಸಲ ಅಲ್ವಲ್ಲ ಹೋದ ವರ್ಷದ ಹೋಗಿದ್ವಲ್ಲ ಅಂದೆ.. ಅದಕ್ಜೆ ಅವಳು ಅಯ್ಯೋ ನಿಮಗಂತೂ ಸ್ವಲ್ಪಾನೂ ಬುದ್ದಿನೇ ಇಲ್ಲ. ಬೆಳಿಗ್ಗೆ ಅಷ್ಟೇ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿತ್ತು ಹೇಳಿ… ಅಂದಳು. ಅಯ್ಯೋ ಅದರಲ್ಲಿ ಏನು ವಿಶೇಷಾನೇ ಎಲ್ಲಾ ಕೆಟ್ಟ ಸಮಾಚಾರನೇ ಇತ್ತಲ್ಲ. ಇಷ್ಟೊತ್ತು ನೀನು ಅದನ್ನೇ ಪದೇ ಪದೇ ಗೊಣಗ್ತಾ ಇದ್ದೆ ಅಲ್ವಾ ಅಂದಿದ್ದಕ್ಕೆ, ನಿಮ್ಮ ಬುದ್ದಿಗಿಷ್ಟು… ಕೊನೇಲಿ ಓದಿದ್ರೆಲ್ಲಾ ನಿಮ್ಮ ರಾಶಿಯಲ್ಲಿ ವಿದೇಶ ಪ್ರಯಾಣ. ಸಕಲೈಶ್ವರ್ಯ ಪ್ರಾಪ್ತಿ ಅಂತ. ನೋಡ್ರಿ ನಾವೀಗ ವಿದೇಶ ಪ್ರಯಾಣ ಮಾಡ್ತೀವಿ.. ಅಂದ್ರೆ ನಿಮ್ಗೆ ಎಲ್ಲಾ ಒಳ್ಳೇದೇ ಆಗುತ್ತೇ ಅಲ್ವಾ… ಅಂತ ತಲೆಗೆ ಮೊಟಕಿದಳು. ಹೌದಲ್ಲಾ… ಅಂತ ಯೋಚಿಸ್ತಾನೇ ನನ್ನ ರಾಶಿಯ ಕೊನೆಯ ಸಾಲು ನೆನಪಾಯ್ತು. ಸುಖ-ದುಃಖ ಸಮ ಪ್ರಾಪ್ತಿ. ಬಂಧುಗಳ ಭೇಟಿ, ಖರ್ಚಿನ ಹೊರೆ…..

ಇವಾಗ ಹೇಳಿ ನಮ್ಮನೆ ಯುಗಾದಿ ಬೇವಾ…??? ಬೆಲ್ಲಾನಾ….. ????!!!!!

(ನಿಮ್ಮ ಅಭಿಪ್ರಾಯಗಳನ್ನು  ಕಮೆಂಟ್ ಮೂಲಕ ತಿಳಿಸಿರಿ)

 

 

ಜಾಹೀರಾತು
error: Content is protected !!