November 7, 2024

Hampi times

Kannada News Portal from Vijayanagara

ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವ ಸದೃಢ: ಜಿಪಂ ಸಿಇಒ ಸದಾಶಿವ ಪ್ರಭು

 

https://youtu.be/NHc6OMSu0K4?si=SI_K4goOPEgwo6h2

 

 

ಗ್ರಾಮೀಣ ಭಾಗದಲ್ಲಿ ಸ್ವಚ್ಚತಾ ಮತ್ತು ಸ್ವೀಪ್ ಅಭಿಯಾನ

ಹಂಪಿ ಟೈಮ್ಸ್‌  ಹೊಸಪೇಟೆ :

ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಚಲಾಯಿಸಿದಾಗ ಮಾತ್ರ ಸದೃಢ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯ ಎಂದು  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ.ಸದಾಶಿವ ಪ್ರಭು ತಿಳಿಸಿದರು.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಲ್ಲಭಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ನಮ್ಮ ನಡಿಗೆ ತ್ಯಾಜ್ಯ ಮುಕ್ತದ ಕಡೆಗೆ’ ಅಭಿಯಾನ ಹಾಗೂ ಸ್ವೀಪ್ ಸಮಿತಿಯಿಂದ ಕೈಗೊಂಡ ಮತದಾನ ಜಾಗೃತಿ ಅಭಿಯಾನದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಈ ಹಿಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇ.70 ರಿಂದ ಶೇ.76ರಷ್ಟು ಮತದಾನ ಜಿಲ್ಲೆಯಲ್ಲಿ ಆಗಿರುವ ಕುರಿತು ಅಂಕಿಅಂಶಗಳ ಮಾಹಿತಿ ಇದೆ. ಮತದಾರರಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ಜಾಗೃತಿ ಬೇಕಿದೆ. ಮತದಾರರು ತಾವು ಚುನಾವಣೆಯಲ್ಲಿ ಮತದಾನ ಮಾಡುವ ಜೊತೆಗೆ ಇತರರಿಗೂ ಮತದಾನದ ಜಾಗೃತಿ ಮೂಡಿಸಬೇಕು. 18 ವರ್ಷ ಮೇಲ್ಪಟ್ಟ ಯುವಜನತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕೊಡುಗೆ ನೀಡಬೇಕು. ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕ ಅಗತ್ಯ ದಾಖಲೆ ಸಲ್ಲಿಸಿದರೆ ಒಂದು ತಿಂಗಳೊಳಗೆ ನಿಮ್ಮ ಕೈಗೆ ವೋಟರ್ ಐಡಿ ಸಿಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಪ್ರಸಕ್ತ ವರ್ಷ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಮತದಾರರ ನೋಂದಣಿ ಕಾರ್ಯ ಹಾಗೂ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾದ್ಯಂತ ಸ್ವೀಪ್ ಸಮಿತಿಯಿಂದ ಕಾರ್ಯಕ್ರಮಗಳು ನಡೆಯುತ್ತಿದೆ. ಗ್ರಾಮಸ್ಥರು ಸಹ ಜಾಗೃತರಾಗಿ ಮತದಾನದಲ್ಲಿ ಭಾಗಿಯಾಗಬೇಕು ಎಂದರು.

ಅಭಿಯಾನದ ಭಾಗವಾಗಿ ವಲ್ಲಭಪುರ ಗ್ರಾಮದ ಚರಂಡಿಯ ತ್ಯಾಜ್ಯವನ್ನು ಸ್ವಚ್ಚಗೊಳಿಸಿ ಅರಿವು ಮೂಡಿಸಿದರು. ಗ್ರಾಮದ ಅಂಗಡಿಗಳಿಗೆ ಭೇಟಿ ನೀಡಿ ಗುಟ್ಕಾ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಟ್ಟು ನಿಟ್ಟಾಗಿ ಸೂಚಿಸಿ ವಿವಿಧ ಭಾಗಗಳಲ್ಲಿ ಕಸ ಸಂಗ್ರಹಿಸಿ ಸ್ವಚ್ಚತಾ ಕಾರ್ಯ ಕೈಗೊಂಡರು. ಗ್ರಾಮದ ವಿವಿಧ ಭಾಗಗಳಲ್ಲಿ ಸ್ವೀಪ್ ಸಮಿತಿಯಿಂದ ಮತದಾನ ಮತ್ತು ಮತದಾರರ ನೋಂದಣಿ ಕುರಿತು ಜನಜಾಗೃತಿ ಜಾಥಾ ಕೈಗೊಳ್ಳಲಾಯಿತು.
ನಂತರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮತಗಟ್ಟೆ ಪರಿಶೀಲಿಸಿ ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪರಮೇಶ್ವರಪ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

 

 

ಜಾಹೀರಾತು
error: Content is protected !!