December 5, 2024

Hampi times

Kannada News Portal from Vijayanagara

ಸ್ವಚ್ಛತೆ ಕಾಯ್ದುಕೊಂಡರೆ ದುಡಿಮೆಯ ಹಣವೂ ಉಳಿತಾಯ : ಸಿಇಒ ಸದಾಶಿವ ಪ್ರಭು

 

https://youtu.be/NHc6OMSu0K4?si=SI_K4goOPEgwo6h2

ಅಶುಚಿತ್ವದಿಂದ ಅನಾರೋಗ್ಯ | ಮಕ್ಕಳಲ್ಲಿ ಸ್ವಚ್ಛತೆ ಅರಿವು ಹೆಚ್ಚಿಸಿ

ಹಂಪಿಟೈಮ್ಸ್ ಹೊಸಪೇಟೆ:
ಮಕ್ಕಳು ಸದಾ ಆರೋಗ್ಯವಂತರಾಗಿರಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು ಹೇಳಿದರು.

ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿಯ ನಾಗೇನಹಳ್ಳಿ ಗ್ರಾಮದಲ್ಲಿ ಸ್ವಚ್ಛ ಶನಿವಾರ, ನಮ್ಮ ನಡಿಗೆ – ತ್ಯಾಜ್ಯ ಮುಕ್ತ ಕಡೆಗೆ ಆಂದೋಲನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸ್ವಚ್ಛತೆ ಎಂದಾಕ್ಷಣ ಅಲಕ್ಷಿಸಿದರೆ ಅನಾರೋಗ್ಯಕ್ಕೀಡಾಗುವುದರ ಜೊತೆಗೆ ಶ್ರಮದ ದುಡಿಮೆಯ ಹಣವೂ ಆಸ್ಪತ್ರೆಯ ಪಾಲಾಗುತ್ತದೆ. ಪಾಲಕ, ಪೋಷಕರು ತಮ್ಮ ಮಕ್ಕಳಿಗೆ ಮನೆಯಿಂದಲೇ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು. ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ಕಸದ ವಾಹನಗಳಿಗೆ ನೀಡಬೇಕು. ನಾವು ಮನೆಯ ಸುತ್ತಮುತ್ತಲಿನ ಪರಿಸರ, ಸರಕಾರಿ ಕಚೇರಿ, ಶಾಲೆ, ಆಸ್ಪತ್ರೆ, ರಸ್ತೆ, ಮಾರುಕಟ್ಟೆ, ಬಸ್ ಹಾಗೂ ರೈಲ್ವೆ ನಿಲ್ದಾಣ, ಉದ್ಯಾನವನ, ಸ್ಮಾರಕಗಳು ಹೀಗೆ ಅನೇಕ ಸಾರ್ವಜನಿಕ ಸ್ವತ್ತುಗಳಲ್ಲಿ ಶುಚಿತ್ವ ಕಾಪಾಡಬೇಕು ಎಂದರು.


ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿ ತಾರನಗರ ಉದ್ಘಾಟಿಸಿ ಮಾತನಾಡಿ, ಗ್ರಾಮದ ಜನತೆ ಸ್ವಚ್ಛತೆಗೆ ಕೈಜೋಡಿಸಬೇಕು ಎಂದರು.

ಗ್ರಾಮದ ಹಳೆಯ ಬಾವಿಗಳ ಹತ್ತಿರ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಅಕ್ಕ ಪಕ್ಕ, ಅಂಗನವಾಡಿ ಮತ್ತು ಶಾಲಾ ಅವರಣ ಸ್ವಚ್ಛ ಗೊಳಿಸುತ್ತಾ, ಸರ್ಕಾರಿ ಶಾಲಾ ಮಕ್ಕಳಿಂದ ಸ್ವಚ್ಚತಾ ಜಾಥ ಮತ್ತು ಶಾಲಾ ಮಕ್ಕಳು ನೃತ್ಯದ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ನೃತ್ಯದ ಮೂಲಕ ಸ್ವಚ್ಛತಾ ಜಾಗೃತಿ ಮೂಡಿಸಿದ ಮಕ್ಕಳಿಗೆ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಅಂಗನವಾಡಿ ಮಕ್ಕಳೊಂದಿಗೆ ಲಘು ಉಪಾಹಾರ ಸವಿದರು.


ಅಭಿಯಾನ ಕಾರ್ಯಕ್ರಮದಲ್ಲಿ ವಿಜಯನಗರ ಜಿ.ಪಂ ಯೋಜನಾ ನಿರ್ದೇಶಕರಾದ ಅಶೋಕ ತೋಟದ್, ಸಹಾಯಕ ಯೋಜನಾ ಅಧಿಕಾರಿ ಉಮೇಶ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕೆ.ವಿ, ಸ್ವಚ್ಚ ಭಾರತ್ ಮಿಷನ್ ಸಂಯೋಜಕರುಗಳು, ಐಇಸಿ ಸಂಯೋಜಕರು, ಗ್ರಾಮ ಪಂಚಾಯತಿ ಪಂಚಾಯತಿ ಉಪಾಧ್ಯಕ್ಷೆ ಭಾರತಿ ಪಾಟೀಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಪ್ರಭುದೇವ್, ಕಾರ್ಯದರ್ಶಿ ಕನಕಪ್ಪ, ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು, ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತರು, ಗ್ರಾಮ ಕಾಯಕ ಮಿತ್ರ ಮಹಿಳಾ ಸಂಘದ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.

 

 

ಜಾಹೀರಾತು
error: Content is protected !!