https://youtu.be/NHc6OMSu0K4?si=SI_K4goOPEgwo6h2
294.04 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಸಚಿವ ಬಿ. ಶ್ರೀರಾಮುಲು
ಹಂಪಿಟೈಮ್ಸ್ ಹೊಸಪೇಟೆ: ನೂತನ ಜಿಲ್ಲಾ ಕೇಂದ್ರವಾಗಿರುವ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮೆಡಿಕಲ್, ನರ್ಸಿಂಗ್, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಸಣ್ಣ ಕೈಗಾರಿಕೆ ಕ್ಲಸ್ಟರ್ ಸ್ಥಾಪನೆಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರು ತಿಳಿಸಿದರು.
ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ 294.04 ಕೋಟಿ ರೂ. ಮೊತ್ತದ ಒಟ್ಟು 241 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮ್ಮಿಶ್ರ ಸರ್ಕಾರ, ಕೋವಿಡ್ ಸಂದರ್ಭ ಹೊರತುಪಡಿಸಿ ಉಳಿದ 18 ತಿಂಗಳ ಅವಧಿಯಲ್ಲಿಯೇ ವಿಜಯನಗರ ಜಿಲ್ಲೆ ಸ್ಥಾಪನೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಸಾವಿರ ಕೋಟಿ ರೂ. ವರೆಗೆ ಅನುದಾನವನ್ನು ಒದಗಿಸಿ ಜಿಲ್ಲೆಯ ಮತ್ತು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ .ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕ ಬಳಿಕ ನೂತನ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಕ್ಕಿತು. ಗ್ರಾಮೀಣ ಪ್ರದೇಶಗಳಲ್ಲಿ ಸಹ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ, ಕೃಷಿಗೆ ಏತನೀರಾವರಿ ಹಾಗೂ ವಿವಿಧ ಅಗತ್ಯ ಸೌಲಭ್ಯಗಳನ್ನು ಆಯಾ ಇಲಾಖೆಗಳ ವತಿಯಿಂದ ನೀಡಲಾಗುತ್ತಿದೆ. ದೇಶವನ್ನು ಸುಭದ್ರದೆಡೆಗೆ ಕೊಂಡೊಯ್ಯಲು ಕೈಜೋಡಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದ್ದು, ಸರ್ಕಾರದ ಜೊತೆಗೆ ಪ್ರಜೆಗಳು ಸಹ ಕರ್ತವ್ಯಪಾಲರಾಗಬೆಕು ಎಂದರು.
ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕಾಮಗಾರಿಗಳ ಶಂಕುಸ್ಥಾಪನಾ ಫಲಕ ಅನಾವರಣಗೊಳಿಸಿ ಮಾತನಾಡಿ, ಸಚಿವ ಆನಂದ್ ಸಿಂಗ್ ಹಾಗೂ ನೂತನ ಜಿಲ್ಲೆಯ ಅಧಿಕಾರಿಗಳು ಕ್ರಿಯಾಶೀಲರಾಗಿ ಸಮಗ್ರ ಅಭಿವೃದ್ಧಿ ಕೈಗೊಂಡ ಕಾರಣ ಕಾಮಗಾರಿಗಳು ಪ್ರಗತಿಯಲ್ಲಿವೆ, ಜಿಲ್ಲೆ ಘೋಷಣೆಯಾದ ನಂತರ ಅಭಿವೃದ್ಧಿಯನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಪ್ರಧಾನ ಮಂತ್ರಿಗಳು ಇಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಬೆಳಗಾವಿಯಲ್ಲಿ ರೈಲ್ವೆ ಕಾಮಗಾರಿಗಳ ಉದ್ಘಾಟನೆ ಕೈಗೊಂಡಿದ್ದಾರೆ, ಕಾಕತಾಳೀಯವಾಗಿ ವಿಜಯನಗರ ಕ್ಷೇತ್ರದಲ್ಲಿ ಸಹ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯುತ್ತಿದೆ ಎಂದರು.
ವಿಜಯನಗರ ವಿಧಾನಸಭಾ ಕ್ಷೇತ್ರದ 14 ಸಾವಿರ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಗ್ರಾಮೀಣ ಭಾಗದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ, ಅದೇ ರೀತಿ ಕೂಡ್ಲಿಗಿಯಲ್ಲಿ ಸಹ ಕೆರೆ ತುಂಬಿಸುವ ಯೋಜನೆ, ಸ್ವಾತಂತ್ರ‍್ಯ ನಂತರ ಮೊದಲಿಗೆ ಸಂಡೂರಿನಲ್ಲಿ ಸಮಗ್ರ ಕೆರೆ ತುಂಬಿಸುವ ಯೋಜನೆಗಳನ್ನು ಅಖಂಡ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ಅನುದಾನ ಮಂಜೂರು ಮಾಡುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.ಜನಸಾಮಾನ್ಯರ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವಕರ್ನಾಟಕವನ್ನು ನಿರ್ಮಿಸುವ ಉದ್ದೇಶದಿಂದ ಬಜೆಟ್ ಮೂಲಕ ವಿವಿಧ ಯೋಜನೆಗಳನ್ನು ಒದಗಿಸಿ, ಆರ್ಥಿಕತೆ ಸೋರಿಕೆಯಾಗದಂತೆ ಮತ್ತು ಹೊರೆಯಾಗದ ಜನಪರ ಬಜೆಟ್ ಮಂಡಿಸಿದ್ದಾರೆ.ನೂತನ ಜಿಲ್ಲೆಗೆ ಸಾವಿರ ಕೋಟಿ ರೂ. ಕಾಯ್ದಿರಿಸಿರುವ ಮುಖ್ಯಮಂತ್ರಿಗಳು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮಾಂತರ ಜಲಾಶಯ ಯೋಜನೆ ರೂಪಿಸಿದ್ದಾರೆ. ವಿಜಯನಗರ ಜಿಲ್ಲಾ ಭಾಗದ ಸ್ಮಾರಕಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕಾಮಗಾರಿ ಏಕಕಾಲದಲ್ಲಿ ಪ್ರಗತಿಯಲ್ಲಿವೆ. ನೂತನ ಜಿಲ್ಲೆಯಾಗಿ ಘೋಷಣೆಯಾದ ನಂತರ ಅತಿ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯನಗರ ಅಗ್ರಗಣ್ಯವಾಗಿದೆ . ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ 86 ಎಕರೆ ಜಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನ್ಯಾಯಾಲಯ ಸೇರಿದಂತೆ ಸಾರ್ವಜನಿಕರಿಗೆ ಕೈಗೆಟುಕುವ ದೂರದಲ್ಲಿ ವಿವಿಧ ಇಲಾಖೆಗಳ ಕಟ್ಟಡಗಳು ಕಾರ್ಯನಿರ್ವಹಿಸುತ್ತೇವೆ. ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಸಚಿವ ಆನಂದ್ ಸಿಂಗ್ ಅವರು ಖುದ್ದಾಗಿ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ಕೈಗೊಳ್ಳುತ್ತಿದ್ದಾರೆ. ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ವೇಗವಾಗಿ ಸ್ಪಂದಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ವೈ.ದೇವೇಂದ್ರಪ್ಪ, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ಕಮಲಾಪುರ ಪುರಸಭೆ ಅಧ್ಯಕ್ಷ ಸೈಯದ್ ಅಮಾನುಲ್ಲಾ ಸೇರಿದಂತೆ ಪುರಸಭೆ, ನಗರಸಭೆ ಸದಸ್ಯರು, ಹಂಪಿ, ಬುಕ್ಕಸಾಗರ ಹಾಗೂ ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ