March 15, 2025

Hampi times

Kannada News Portal from Vijayanagara

ತಾಯಂದಿರು ಸಾಹಿತ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಡಾ.ಎಸ್.ಶಿವಾನಂದ

 

https://youtu.be/NHc6OMSu0K4?si=SI_K4goOPEgwo6h2

 

ಮಕ್ಕಳೊಂದಿಗೆ ಭಾವತನಾತ್ಮಕವಾಗಿ ಬೆರೆತು ಸೃಜನಶೀಲತೆಗೆ ಒತ್ತು ನೀಡಿ | ಮಕ್ಕಳ ಕೈಗೆ ಮೊಬೈಲ್ ಬದಲಿಗೆ ಜೋಗುಳ ಮರುಕಳಿಸಲಿ

ಹಂಪಿಟೈಮ್ಸ್ ಹೊಸಪೇಟೆ
ತಾಯಂದಿರು ಅನಕ್ಷರಸ್ತರಾಗಿದ್ದರೂ ತಮ್ಮ ಸುತ್ತಮುತ್ತಲಿನ ಘಟನೆಗಳನ್ನೆ ಹಾಡಿನ ರೂಪದಲ್ಲಿ ಸಾಹಿತ್ಯವನ್ನು ಕಟ್ಟಿ ಹಾಡುವ ಜೋಗುಳ ಪದಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಿದ್ದವು. ಇಂದು ಮಕ್ಕಳಿಗಾಗಾಗಿ ಜೋಗುಳ ಹಾಡುವ ತಾಯಂದಿರ ಸಂಖ್ಯೆಯೂ ಕ್ಷೀಣಿಸಿದೆ. ಮಕ್ಕಳನ್ನು ಸುಮ್ಮನಿರಿಸಲು ಅವರ ಕೈಗೆ ಮೊಬೈಲ್ ಕೊಡುವ ಸಂಪ್ರದಾಯ ಹೆಚ್ಚುತ್ತಿದೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸಲು ಸೃಜನಶೀಲ ಸಾಹಿತ್ಯದ ಅವಶ್ಯಕತೆ ಇದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಹೇಳಿದರು.

ನಗರದ ಗೃಹರಕ್ಷಕ ದಳದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹೊಸಪೇಟೆ ತಾಲೂಕ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಮನೆಗಳಲ್ಲಿ ಅಜ್ಜ, ಅಜ್ಜಿಯೊಂದಿಗೆ ಆಡುವ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ದೊರೆಯುತ್ತಿತ್ತು. ಇಂದಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರಯುತ ಹಾಗೂ ಮೌಲ್ಯಯುತ ಶಿಕ್ಷಣ ಅಗತ್ಯವಿದೆ. ಪಠ್ಯಪುಸ್ತಕಗಳಲ್ಲಿ ಮಕ್ಕಳ ಸಾಹಿತ್ಯ ಅಳವಡಿಸಬೇಕು. ಸಾಹಿತ್ಯ ಪ್ರಜ್ಞೆಯಿಂದ ಮಕ್ಕಳು ದೂರಾದರೆ ಜ್ಞಾನದ ದಾಹ ತೀರದು. ಜ್ಞಾನ ಬೆಳೆಸಿಕೊಂಡವರಿಗೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಅವಕಾಶಗಳು ಒಲಿದು ಬರುತ್ತವೆ. ತಾಯಂದಿರೂ ಸಾಹಿತ್ಯದಿಂದ ದೂರಾಗುತ್ತಿದ್ದಾರೆ. ಯಾಂತ್ರಿಕ ಜೀವನ ಅನಿವಾರ್ಯವಾಗಿದ್ದರೂ ಮಕ್ಕಳ ಕಡೆಗಣನೆ ಸಲ್ಲದು. ತಾಯಂದಿರು ಸಾಹಿತ್ಯ ಪ್ರಜ್ಞೆ ಬೆಳೆಸಿಕೊಂಡು, ಮಕ್ಕಳೊಂದಿಗೆ ಭಾವತನಾತ್ಮಕವಾಗಿ ಬೆರೆತು ಸೃಜನಶೀಲತೆಗೆ ಒತ್ತು ನೀಡಿದಾಗ ಮಾತ್ರ ಮಕ್ಕಳ ಮನಸ್ಸುಗಳು ಅರಳುತ್ತವೆ ಎಂದರು.


ಡಾ.ಅಕ್ಕಿ ಬಸವೇಶ್ ಅವರು ಮಕ್ಕಳ ಸಾಹಿತ್ಯ ಬೆಳೆದು ಬಂದ ದಾರಿ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಗ್ರಾಮೀಣ ಪ್ರದೇಶದ ಸಾಹಿತ್ಯದ ಸೊಗಡು ಇಂದು ಮರೆಯಾಗುತ್ತಿದೆ. ಅನಕ್ಷರಸ್ತರು ಅರಸರು, ಸಾಧಕರು, ಶರಣರ ಜೀವನಸ ಸಾಧನೆಗಳನ್ನು ಹಾಡುತ್ತಿದ್ದ ಸಾಹಿತ್ಯವೂ ಇಂದಿನ ಪಿಎಚ್‌ಡಿಗಳಿಗೆ ಮೀರಿದ್ದಾಗಿದೆ ಎಂದರು.


ಕ.ರಾ.ಮ.ಸಾ.ಪ.ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಬಡಿಗೇರ ಅಧ್ಯಕ್ಷತೆವಹಿಸಿದ್ದರು. ಭರತನಾಟ್ಯ, ಸಂಗೀತ, ಮಿಮಿಕ್ರಿ, ಚಿತ್ರಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಹೊಸಪೇಟೆ ತಾಲೂಕಿನ ಪ್ರತಿಭಾವಂತ ಮಕ್ಕಳಿಗೆ 2023ರ ವಿಜಯನಗರ ಚಿಣ್ಣರ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೃಹ ರಕ್ಷಕ ದಳದ ಘಟಕಾಧಿಕಾರಿ ಎಸ್.ಎಮ್.ಗಿರೀಶ್, ಉಪನ್ಯಾಸಕ ಡಾ.ದಯಾನಂದ ಕಿನ್ನಾಳ, ತಾಲೂಕು ಗೌರವಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ, ಕೂಡ್ಲಿಗಿ ತಾಲೂಕಧ್ಯಕ್ಷ ಶೇಖರಯ್ಯ, ಹ.ಬೊ.ಹಳ್ಳಿ ತಾಲೂಕಧ್ಯಕ್ಷ ನಾಗರಾಜ್ ತಂಬ್ರಳ್ಳಿ ಹಾಗೂ ತಾಲೂಕ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಸ್ವರ್ಣಮುಖಿ ಭರತನಾಟ್ಯ ಕಲಾ ಸಂಸ್ಥೆಯ ಕು.ಅನಘ.ಆರ್ ಮತ್ತು ಕು.ಭಕ್ತಿ ಎನ್. ಭರತನಾಟ್ಯ ಪ್ರದರ್ಶಿಸಿದರು. ತಾಲೂಕಿನ ಪ್ರತಿಭಾವಂತ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿಭೆ ಪ್ರದರ್ಶಿಸಿದರು. ಹೊಸಪೇಟೆ ತಾಲೂಕ ಘಟಕದ ಅಧ್ಯಕ್ಷ ಶಿವರಾಜ್ ವಿ. ನಿರ್ವಹಿಸಿದರು.

 

 

ಜಾಹೀರಾತು
error: Content is protected !!