https://youtu.be/NHc6OMSu0K4?si=SI_K4goOPEgwo6h2
ಭಕ್ತರ ಚಿಂತೆ ಕಳೆಯಲು ಬರ‍್ತಾರೆ ಗುರುಗಳು ಹಣ, ಹಾರಕ್ಕಾಗಿ ಅಲ್ಲ | ಗುರುಗಳ ದರ್ಶನದಿಂದ ಚಿಂತೆ ದೂರಾಗುತ್ತದೆ, ಚಿಂತನೆ ಹೆಚ್ಚುತ್ತದೆ | ಸಂಕೋಚ ಬಿಡುವುದೆ ಸತ್ಸಂಗ
ಹಂಪಿ ಟೈಮ್ಸ್ ಹೊಸಪೇಟೆ:
ಮಾನಸಿಕ, ಶಾರೀರಿಕ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಪರಿಶ್ರಮಪಟ್ಟಲ್ಲಿ ಜೀವನದಲ್ಲಿ ಗೆಲುವು ನಿಶ್ಚಿತ. ಪ್ರತಿಯೊಂದು ಮನೆ ಮನ ಹಾಗೂ ಮುಖಗಳಲ್ಲಿ ಮುಗುಳ್ನಗೆ ಸಂತೋಷ ತುಂಬು ತುಳುಕಬೇಕು. ವ್ಯಕ್ತಿಯಲ್ಲಿ ಆನಂದ ಮನೆಯಲ್ಲಿ ಉತ್ಸಾಹ ತರುವುದೆ ಆನಂದ ವಿಜಯೋತ್ಸವವಾಗಿದ್ದು ಎಲ್ಲರೂ ಪರಿವರ್ತನೆಗಾಗಿ ಸಂಕಲ್ಪ ತೊಡಬೇಕು ಎಂದು ಮಹಾಮಾನವತಾವಾದಿ ಶ್ರೀ ಶ್ರೀ ರವಿಶಂಕರ ಗುರೂಜಿ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಿ ಹಾರ್ಟ್ ಆಫ್ ಲಿವಿಂಗ್ ಸಂಸ್ಥೆ ಹಮ್ಮಿಕೊಂಡಿದ್ದ ಆನಂದ ವಿಜಯೋತ್ಸವದ ಜ್ಞಾನ, ಧ್ಯಾನ, ಮಹಾಸತ್ಸಂಗದಲ್ಲಿ ಮಂಗಳವಾರ ಆಶೀರ್ವಚನ ನೀಡಿದರು. ಜೀವನವನ್ನು ಉತ್ಸವವನ್ನಾಗಿ ಮಾಡಿಕೊಳ್ಳಲು ಜ್ಞಾನ ಧ್ಯಾನದ ಅಗತ್ಯವಿದೆ. ಭಕ್ತರಲ್ಲಿನ ಕಷ್ಟ-ದುಃಖ ಚಿಂತೆಗಳನ್ನು ತೆಗೆದುಕೊಂಡು ಚಿಂತನೆ ನೀಡಿ ಜೀವನದಲ್ಲಿ ಹರ್ಷ ತುಂಬಲು ಗುರುಗಳು ಬರುತ್ತಾರೆ . ಭಕ್ತರು ಕೊಡುವ ಹಣ, ಹಣ್ಣು, ಹಾರ, ಆತೀಥ್ಯಕ್ಕಲ್ಲ.
ಚಿಂತೆಗಳನ್ನು ಬಿಟ್ಟು, ಜೀವನವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು, ಪ್ರತಿಯೊಬ್ಬರಲ್ಲೂ ಜ್ಞಾನದ ಪಿಪಾಸೆ ಇದೆ. ನಶ್ವರವಾದ ಜೀವನದಲ್ಲಿ ಶಾಶ್ವತವಾದ ತತ್ವಗಳನ್ನು ಅರಿತುಕೊಳ್ಳಬೇಕು. ಧ್ಯಾನ ಮಾಡುವ ಮೂಲಕ ಆನಂದ ಪಡೆದುಕೊಳ್ಳಬಹುದು. ರಸಾಯನಿಕಯುಕ್ತ ಆಹಾರ ಸೇವಿಸುತ್ತಿರುವುದರಿಂದ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬುದನ್ನು ಇನ್ನಾದರೂ ಅರಿತು, ಭೂಮಿಯ ಅಲ್ಪಭಾಗದಲ್ಲಾದರೂ ಆರೋಗ್ಯಕರ ಹಾಗೂ ಶಕ್ತಿಯುತವಾದ ಭತ್ತ ಹಾಗೂ ಆಹಾರ ಪದಾರ್ಥಗಳನ್ನು ಬೆಳೆಯಲು ರೈತರು ಮುಂದಾಗಬೇಕು.
ರೈತರ ವಿಚಾರ ಸಂಕಿರಣದಲ್ಲಿ ನೈಸರ್ಗಿಕ ಬೆಳೆ ಬೆಳೆಯುವುದಾಗಿ ರೈತರು ಸಂಕಲ್ಪ ಮಾಡಿರುವುದು ಪರಿವರ್ತನೆಗೆ ಸಾಕ್ಷಿಯಾಗಿದೆ. ನಾವು ಬೆಳೆಯುವ ಆಹಾರ ನಮ್ಮ ದೇಹಕ್ಕೆ ಸರಿ ಹೊಂದುತ್ತಿಲ್ಲವೆಂದರೆ ನಮ್ಮೆಲ್ಲೇನಾದರೂ ತಪ್ಪಾಗಿದೆ ಎಂದು ಭಾವಿಸಬೇಕು. ರಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಉತ್ಪಾದನೆಗಳು ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಆರೋಗ್ಯ ಕಾಪಾಡಿಕೊಳ್ಳಲು ಯೋಗದೊಂದಿಗೆ ಶರೀರವನ್ನು ಸ್ವಸ್ತವಾಗಿಟ್ಟುಕೊಳ್ಳಬೇಕು. ಸ್ವಲ್ಪ ದೂರದವರೆಗಾದರೂ ನಿತ್ಯ ನಡೆಯಬೇಕು. ಕೆಲ ಟೂತ್‌ಪೇಸ್ಟ್ಗಳು ಕ್ಯಾನ್ಸರ್‌ಗೆ ಕಾರಣವಾಗಿವೆ. ಆರೋಗ್ಯದ ಬಗ್ಗೆ ಕಾಳಜಿ ಇರಬೇಕು.
ಸಂಕೋಚವನ್ನು ಬಿಟ್ಟು ಆತ್ಮೀಯ ಭಾವದಿಂದ ಕೂಡುವುದೇ ಸತ್ಸಂಗವಾಗಿದೆ. ಮನಸ್ಸನ್ನು ಬಲಿಯಲ್ಲಿ ಸಿಲುಕಿದಂತೆ ಇಡಬೇಡಿ. ಮುಕ್ತ ಮನಸ್ಸಿನಿಂದ ಬೆರೆತಾಗ ಮಾತ್ರ ಆನಂದ ಪಡೆಯಲು ಸಾಧ್ಯ. ಭಾರತೀಯರು ಮಹಾಮೇಧಾವಿಗಳು, ಜಗತ್ತಿಗೆ ಮಹಾ ಕೊಡುಗೆ ಕೊಟ್ಟಿರುವುದನ್ನು ಇಡೀ ಜಗತ್ತೆ ಕೊಂಡಾಡುತ್ತದೆ. ಭಾರತೀಯ ಆಚರಣೆ, ಸಂಸ್ಕೃತಿಗಳನ್ನು ಕಣ್ಮರೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆಗಳು ಎದುರಾದಗ ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು. ಕರೊನಾ ನಂತರ ಮಾನಸಿಕ ಸಮಸ್ಯೆ ಹೆಚ್ಚಾಗಿದೆ. ಮಾನಸಿಕ ಒತ್ತಡದಿಂದ ಮುಕ್ತಿ ಹೊಂದಲು ಧ್ಯಾನ ಮಾಡಬೇಕು. ಪ್ರಾಣಯಾಮ ಬುದ್ದಿ ಚುರುಕುಗೊಳಿಸುತ್ತದೆ. ದುಶ್ಚಟ ಮತ್ತು ಮಾದಕ ದ್ರವ್ಯಗಳಿಂದ ಮಕ್ಕಳನ್ನು ದೂರವಿಡಲು ಮತ್ತು ಸಶಕ್ತ ಭಾರತ ನಿರ್ಮಿಸಲು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕು ಎಂದರು.
ಕೆಲ ನಿಮಿಷ ಭಕ್ತರಿಗೆ ಧ್ಯಾನ ಮಾಡಿಸಿ, ಭಜನೆ ಹಾಡಿಸಿ ಭಕ್ತರನ್ನು ಆಧ್ಯಾತ್ಮಿಕದತ್ತ ಕರೆದೊಯ್ದರು. ಭಕ್ತರ ಮಧ್ಯೆ ನಡೆದಾಡಿ, ಭಕ್ತರ ಮೇಲೆ ಪುಷ್ಪ ಹಾಕಿ ಆಶೀರ್ವದಿಸಿದರು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ