https://youtu.be/NHc6OMSu0K4?si=SI_K4goOPEgwo6h2
ಸರ್ಕಾರದ 10 ಕೋಟಿ ರೂ. ವೆಚ್ಚದ ಶ್ರೀ ಏಳುಕೋಟಿ ವಸತಿ ಶಾಲೆ ಉದ್ಘಾಟನೆ
ಸಮುದಾಯ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಘೋಷಣೆ
ಹಂಪಿಟೈಮ್ಸ್ ಹೊಸಪೇಟೆ :
ಸರ್ಕಾರ ಮಠಮಾನ್ಯಗಳಿಗೆ ನೀಡುವ ಅನುದಾನಗಳಿಂದ ಸಮಾಜ, ಸಮುದಾಯಕ್ಕೆ ಒಳಿತಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠದಿಂದ ನೂತನವಾಗಿ ನಿರ್ಮಿಸಿದ ಶ್ರೀ ಏಳುಕೋಟಿ ವಸತಿ ಶಾಲೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಭಾಗದ 2 ಸಾವಿರ ಬಡಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಕೇವಲ ಒಂದುವರೆ ವರ್ಷದ ಅವಧಿಯಲ್ಲಿ ನಿರ್ಮಿಸಿರುವುದು ದಾಖಲೆಯಲ್ಲದೇ ಸಕಾಲದಲ್ಲಿ ಸರ್ಕಾರದ ಅನುದಾನದ ಸದುಪಯೋಗವನ್ನು ಕಾಗಿನೆಲೆ ಪೀಠ ಮಾಡಿದೆ ಎಂದರು.
ಕನಕದಾಸರ ಜನ್ಮಭೂಮಿಯಿಂದ ಬಂದಿದ್ದೇನೆ, ಕನಕರ ಜನ್ಮಸ್ಥಳ ಬಾಡ ಗ್ರಾಮದ ಅಭಿವೃದ್ಧಿಗೆ ಈ ಹಿಂದೆ 20 ಕೋಟಿ ಮತ್ತು ಕಾಗಿನೆಲೆ ಅಭಿವೃದ್ಧಿಗೆ 40 ಕೋಟಿ ನೀಡಿದ್ದು, ಕನಕ ಅರಮನೆ, ಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ವಾಲ್ಮೀಕಿ ಹಾಗೂ ಕನಕ ಜಯಂತಿ ಆಚರಣೆಗಳನ್ನು ಘೋಷಿಸಿದ್ದು ಯಡಿಯೂರಪ್ಪ ಅವರು ಎಂದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡುತ್ತದೆ. ಆದರೂ ಹಿಂದುಳಿದ ವರ್ಗಗಳಿಗೆ ಕೆಲವೊಮ್ಮೆ ತಲುಪುವುದಿಲ್ಲ. ಈ ನಿಟ್ಟಿನಲ್ಲಿ ಮಠಮಾನ್ಯಗಳು ಮುಂದಾಗಿ ತಮ್ಮ ಸೇವೆ ನೀಡುತ್ತಿವೆ. ಮಠಗಳಿಗೆ ನೀಡುವ ಅನುದಾನ ಕೇವಲ ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ವರ್ಗಕ್ಕೂ ತಲುಪುತ್ತದೆ. ಇಲ್ಲಿ ಎಲ್ಲರಿಗೂ ಶಿಕ್ಷಣ, ದಾಸೋಹ ನೀಡಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಠಮಾನ್ಯಗಳು ಶಿಕ್ಷಣ, ದಾಸೋಹಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು, ಇದರಿಂದ ರಾಜ್ಯಕ್ಕೆ ಒಳಿತಾಗಿದೆ ಎಂದರು.
ಕುರಿಗಾಹಿಗಳಿಗಾಗಿ 354 ಕೋಟಿ ರೂ. ಯೋಜನೆ:
ಮನೆ ಮಠ ಇಲ್ಲದ ಕುರಿಗಾರರಿಗೆ ಸಹಾಯ ಮಾಡಲು ಬೇಡಿಕೆ ಇಟ್ಟ ಸಂದರ್ಭದಲ್ಲಿ ಬಜೆಟ್‌ನಲ್ಲಿ ವಲಸೆ ಕುರಿಗಾರರಿಗೆ ಮನೆ, ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 354 ಕೋಟಿ ರೂ. ವೆಚ್ಚದಲ್ಲಿ ನೋಂದಾಯಿತ ಕುರಿಗಾಹಿಗಳ ಸಂಘದ ಮೂಲಕ 20 ಕುರಿ, ಒಂದು ಮೇಕೆ ಕೊಡುವ ವಿಶೇಷ ಕಾರ್ಯಕ್ರಮಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದೆ, ಅತೀ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು.
ದುಡಿಯುವ ವರ್ಗಕ್ಕೆ ಸಹಕಾರ: ಕಾಯಕ ಸಮಾಜಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಕುರಿಗಾರರು, ಮೀನುಗಾರರು, ಚರ್ಮ, ಕೃಷಿ ಸಾಮಾಗ್ರಿ ತಯಾರಕರು ಸೇರಿದಂತೆ ಮೇದಾರರ ಕುಲಕಸುಬು ಗಳ ಉದ್ಯೋಗ ಉನ್ನತಿಗಾಗಿ ಕಾಯಕ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ ಎಂದರು.
ಮೀಸಲಾತಿ ಬೇಡಿಕೆಗೆ ನ್ಯಾಯ: ಸಮುದಾಯದ ಮೀಸಲಾತಿ ಬೇಡಿಕೆಗೆ ಅನುಗುಣವಾಗಿ ಕುಲಶಾಸ್ತ್ರೀಯ ಅಧ್ಯಯನದ ವರದಿ ಕೈಸೇರಿದ ನಂತರ ಕಾನೂನು ತಜ್ಞರ ಜೊತೆಗೆ ಕೂಲಂಕಷವಾಗಿ ಪರಿಶೀಲಿಸಿ, ಕಾಳಜಿ ವಹಿಸಿ ನಿಮ್ಮ ಬೇಡಿಕೆಗೆ ನ್ಯಾಯ ಒದಗಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ ಸರ್ಕಾರದ ಜೊತೆ ಕೈಜೋಡಿಸಿ ಮಠಮಾನ್ಯಗಳು ಸಹ ದಾಸೋಹ, ಶಿಕ್ಷಣದ ಮಹತ್ಕಾರ್ಯ ಮಾಡುತ್ತಿದೆ. ಸರ್ಕಾರದ ಅನುದಾನವನ್ನು ಸುಸಜ್ಜಿತವಾಗಿ ಬಳಸಿಕೊಂಡು ವಸತಿ ಶಾಲೆ ನಿರ್ಮಾಣವಾಗಿದ್ದು, ಬಡಮಕ್ಕಳಿಗೆ ಅನುಕೂಲವಾಗಲಿದೆ. ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಈ ಭಾಗದಲ್ಲಿ ಶಾಖಾ ಮಠದ ನಂತರ ಶಿಕ್ಷಣ ಸಂಸ್ಥೆ ನಿರ್ಮಿಸಬೇಕು ಎಂಬ ಉದ್ದೇಶದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು 10 ಕೋಟಿ ಅನುದಾನ ನೀಡಿದ್ದರು. ಅದನ್ನು ವಿವಿಧ ಇಲಾಖೆಗಳ ಮೂಲಕ ವಸತಿ ಶಾಲೆ ನಿರ್ಮಾಣವಾಗಲು ಸಹಕರಿಸಿದ್ದು ಬಸವರಾಜ ಬೊಮ್ಮಾಯಿ ಅವರು ಎಂದು ತಿಳಿಸಿದರು.
ಹೈದರಾಬಾದ್ ವ್ಯಾಧಿ ನಿವಾರಣಾಶ್ರಮ ಡಾ.ಸಾಯಿಕುಮಾರ ಬಾಬ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಸಂಸದ ದೇವೇಂದ್ರಪ್ಪ, ಶಾಸಕರಾದ ನೆಹರೂ ವಾಲಿಕರ್, ಅರುಣ್ ಕುಮಾರ್, ಎಂಎಲ್ಸಿ ಶಂಕರ್, ಮಾಜಿ ಶಾಸಕ ಚಂದ್ರನಾಯ್ಕ, ಮುಖಂಡರಾದ ಓದೋ ಗಂಗಪ್ಪ ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ